»   » ಬಚ್ಚನ್ ಚಿತ್ರ ವಿಮರ್ಶೆ: ಹಂಡ್ರಡ್ ಡೇಸ್ ಗ್ಯಾರಂಟಿ

ಬಚ್ಚನ್ ಚಿತ್ರ ವಿಮರ್ಶೆ: ಹಂಡ್ರಡ್ ಡೇಸ್ ಗ್ಯಾರಂಟಿ

Posted By:
Subscribe to Filmibeat Kannada
Rating:
4.0/5
ಸುದೀಪ್ ಅಭಿನಯದ ಬಚ್ಚನ್ ಚಿತ್ರದ ಬಗ್ಗೆ ಒಂದೇ ಸಾಲಿನಲ್ಲಿ ಹೇಳಬೇಕೆಂದರೆ. ಹಂಡ್ರೆಡ್ ಡೇಸ್ ಮಿನಿಮಮ್ ಗ್ಯಾರಂಟಿ ಚಿತ್ರ! ಯಾವುದೇ ಚಿತ್ರದ ಭವಿಷ್ಯವನ್ನು ಮುಂಚಿತವಾಗಿಯೇ ಹೇಳಲು ಸಾಧ್ಯವಿಲ್ಲದಿದ್ದರೂ. 'ಬಚ್ಚನ್' ಚಿತ್ರವನ್ನು ನೋಡಿದಾಗ ಮಾತ್ರ ಈ ಭರವಸೆ ಮೂಡುತ್ತದೆ. ನಿರ್ದೇಶಕರಾಗಿ ಶಶಾಂಕ್ ಗೆದ್ದಿದ್ದಾರೆ.

"ಖುಷಿಯಾಗಿದ್ದಾಗ ದೇವರು ಎಂತೆಂಥವರನ್ನೋ ಸೃಷ್ಟಿಸುತ್ತಾನೆ. ಆದರೆ ಕೋಪ ಬಂದಾಗ ಮಾತ್ರ ನನ್ನಂಥವನನ್ನು ಸೃಷ್ಟಿಸುತ್ತಾನೆ. ಸುಮ್ಮನ್ 'ಇರಾನ್' ಅಂದ್ರೆ 'ಇರಾಕ್' ಬಿಡಲ್ವೆ. ನಾನು ಕೂಲಾಗಿದ್ರೆ ಜಂಟಲ್ ಮ್ಯಾನ್, ಕೋಪ ಬಂದ್ರೆ ಬಗ್ಗಿಸಿ ಬಗ್ಗಿಸಿ ಹೊಡೆಯೋ ಬಚ್ಚನ್..." ಈ ರೀತಿಯ ಡೈಲಾಗ್ ಗಳಿಂದಲೇ ಸುದೀಪ್ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ.

ಬಚ್ಚನ್ ಚಿತ್ರದಲ್ಲಿ ಏನಿಲ್ಲ ಏನುಂಟು?

ಚಿತ್ರದಲ್ಲಿ ಅವರದು Angry young man ಪಾತ್ರ. ಅದಕ್ಕೆ ತಕ್ಕಂತೆ ಅವರು ಅಭಿನಯಿಸಿದ್ದಾರೆ. ಚಿತ್ರದಲ್ಲಿ ಇಂಥಹದ್ದು ಇಲ್ಲ ಎಂಬಂತಿಲ್ಲ. ಮನಕ್ಕೆ ಮುದ ನೀಡುವ ಐಟಂ ಹಾಡಿದೆ. ಚಿಂದಿ ಉಡಾಯಿಸುವ ಫೈಟ್ಸ್ ಇವೆ. ಒಬ್ಬರಲ್ಲ ಇಬ್ಬರಲ್ಲ ಮೂವರು ಬೆಡಗಿಯರಿದ್ದಾರೆ. ಇಂಪಾದ ಹಾಡುಗಳಿವೆ.

ಮೈನವಿರೇಳಿಸುವ ರವಿವರ್ಮಾ ಸ್ಟಂಟ್ಸ್

ಚಿತ್ರದಲ್ಲಿ ಗಮನಸೆಳೆದಿರುವ ಅಂಶ ಎಂ.ಎಲ್.ಪ್ರಸನ್ನ ಅವರ ಸಂಭಾಷಣೆ. ಇನ್ನೊಂದು ಗಮನಾರ್ಹ ಅಂಶ ಮೈನವಿರೇಳಿಸುವ ರವಿವರ್ಮ ಅವರ ಸ್ಟಂಟ್ಸ್. ಚಿತ್ರದಲ್ಲಿ ಹೆಚ್ಚಾಗಿ ಗ್ರಾಫಿಕ್ಸ್ ಬಳಕೆ ಇದ್ದರೂ ಎಲ್ಲೂ ಅತಿಶಯೋಕ್ತಿ ಅನ್ನಿಸುವುದಿಲ್ಲ.

ಬಳ್ಳಾರಿ ಗಣಿ ಮಾಫಿಯಾದ ಮೇಲೆ ಬೆಳಕು

ತಾನು ಪ್ರೀತಿಸುತ್ತಿರುವ ಹುಡುಗಿ (ಭಾವನಾ) ಬಳ್ಳಾರಿಯ ಗಣಿ ಮಾಫಿಯಾಗೆ ಬಲಿಯಾಗುತ್ತಾಳೆ. ಆಕೆಯನ್ನು ಜೀವಂತ ಮಣ್ಣು ಮಾಡಿಬಿಡುತ್ತಾರೆ ಮಾಫಿಕಾ ಡಾನ್ ಗಳು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅಲ್ಲಿ ಯಾವುದೇ ಕಾನೂನು ಇರಲ್ಲ. ಅವರದೇ ಸಾಮ್ರಾಜ್ಯ. ಆಡಿದ್ದೇ ಆಟ. ಅವರ ವಿರುದ್ಧ ಸಮರಸಾರಲು ಹೋದ ಹುಡುಗಿ ಮಣ್ಣಾಗುತ್ತಾಳೆ.

ಮೂರು ಶೇಡ್ ಗಳಲ್ಲಿ ಮಿಂಚಿರುವ ಕಿಚ್ಚ

ಇದಕ್ಕಾಗಿ ಬಚ್ಚನ್ ಏನು ಮಾಡುತ್ತಾನೆ. ಚಿತ್ರದ ಮೊದಲರ್ಧದಲ್ಲಿ ಸುದೀಪ್ ಒಂದು ಶೇಡ್ ನಲ್ಲಿ ಕಾಣಿಸುತ್ತಾರೆ. ಮಧ್ಯಂತರದ ಬಳಿಕ ಇನ್ನೊಂದು ಶೇಡ್. ಕಡೆಗೆ ಮೂರನೇ ಶೇಡ್ ನಲ್ಲಿ ಅಸಲಿ ಕಥೆ ಬಿಚ್ಚಿಕೊಳ್ಳುತ್ತದೆ. ಅದನ್ನು ತೆರೆಯ ಮೇಲೆ ನೋಡಿಯೇ ಆನಂದಿಸಬೇಕು. ಸಾಕಷ್ಟು ಆಕ್ಷನ್, ಸಸ್ಪೆನ್ಸ್, ನಾಟಕೀಯ ಬೆಳವಣಿಗೆಗಳ ನಡುವೆ ಚಿತ್ರ ಕುತೂಹಲಭರಿತವಾಗಿ ಸಾಗುತ್ತದೆ.

ಭಾವನಾ ಅವರದು ಗಮನಸೆಳೆಯುವ ಅಭಿನಯ

ಬಳ್ಳಾರಿ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಭಾವನಾ ಪಾತ್ರ ಗಮನಸೆಳೆಯುವ ಅಭಿನಯ. ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಪಾರುಲ್ ಯಾದವ್ ತಮ್ಮ ಪಾತ್ರವನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ. ಉಳಿದಂತೆ ತುಲಿಪ್ ಜೋಷಿ ಅವರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಸಿಕ್ಕಿದ ಅವಕಾಶವನ್ನು ಅವರು ಸಮರ್ಥವಾಗಿ ಬಳಸಿಕೊಂಡೂ ಇಲ್ಲ.

ಹರಿಕೃಷ್ಣ ಸಂಗೀತದಲ್ಲಿ ಸೆಳೆತವಿದೆ

ಚಿತ್ರದ ತಾಂತ್ರಿಕ ಅಂಶಗಳನ್ನು ಗಮನಿಸುವುದಾದರೆ. ಸುದೀಪ್ ಅಭಿನಯದ ಆಕ್ಷನ್ ಚಿತ್ರಗಳಿಗೆ ಹೋಲಿಸಿದರೆ ಬಚ್ಚನ್ ಅತ್ಯುತ್ತಮ ಅನ್ನಬಹುದು. ಛಾಯಾಗ್ರಹಣ, ಗ್ರಾಫಿಕ್ಸ್ ಚಿತ್ರದಲ್ಲಿ ಗಮನಸೆಳೆಯುವ ಅಂಶಗಳು. ಕೊರಿಯೋಗ್ರಾಫಿಯೂ ಅಷ್ಟೇ ಚೆನ್ನಾಗಿ ಬಂದಿದೆ. ಒಂದು ಹಾಡು ಅಗತ್ಯವಿರಲಿಲ್ಲ ಅನ್ನಿಸುತ್ತದೆ. ಆದರೂ ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಸೆಳೆತವಿದೆ.

ಚಿತ್ರದಲ್ಲಿ ಬೆಲ್ಲ ಜಾಸ್ತಿ, ಬೇವು ಕಮ್ಮಿ

ಸುದೀಪ್ ಅವರ ಅಭಿನಯ, ಆಕ್ಷನ್, ಅವರ ಡೈಲಾಗ್ ಡೆಲಿವರಿ ಅಭಿಮಾನಿಗಳಿಗೆ ಯುಗಾದಿ ಹೋಳಿಗೆ. ಚಿತ್ರದಲ್ಲಿ ಬೆಲ್ಲವೇ ಅಧಿಕವಾಗಿರುವ ಕಾರಣ ಬೇವಿನ ಕಹಿ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ತೆಲುಗಿನಲ್ಲಿ ಕೌಟುಂಬಿಕ ಚಿತ್ರಗಳಿಗೆ ಹೆಸರಾಗಿರುವ ನಟ ಜಗಪತಿ ಬಾಬು ಅವರ ಇಲ್ಲಿ ಕ್ರೈಂ ಬ್ರ್ಯಾಂಚ್ ಅಧಿಕಾರಿಯಾಗಿ ಮಿಂಚಿದ್ದಾರೆ.

ರವಿಶಂಕರ್ ಎಂದಿನ ಅಭಿನಯ

ಬುಲೆಟ್ ಪ್ರಕಾಶ್ ಕಾಮಿಡಿ ಮುಂದೆ ಸಾಧು ಕೋಕಿಲ ಸೊರಗಿದ್ದಾರೆ. ಅಚ್ಯುತ ರಾವ್, ಶ್ರುತಿ ಅವರ ಪಾತ್ರವೂ ಚೆನ್ನಾಗಿ ಮೂಡಿಬಂದಿದೆ. ಖಳನಟನಾಗಿ ರವಿಶಂಕರ್, ಪ್ರದೀಪ್ ರಾವತ್ ಎಂದಿನಂತೆ ಅಭಿನಯ ನೀಡಿದ್ದಾರೆ. ಆಶಿಶ್ ವಿದ್ಯಾರ್ಥಿ ಇಲ್ಲಿ ಪೋಲೀಸ್ ಅಧಿಕಾರಿಯಾದರೂ ಖಳನಟನೆ.

ಖಂಡಿತ ಬಚ್ಚನ್ ನಿರಾಸೆ ಮೂಡಿಸಲ್ಲ

ಇನ್ನು ನಾಜರ್, ಜೈಜಗದೀಶ್, ಸುಧಾ ಬೆಳವಾಡಿ, ಪದ್ಮಜಾರಾವ್, ರಾಮಕೃಷ್ಣ ಪೋಷಕ ಪಾತ್ರಗಳು ಸಂದರ್ಭೋಚಿತವಾಗಿವೆ. ಡೈಸಿ ಶಾ ಅವರ ಐಟಂ ಹಾಡು ಬೇಸಿಗೆ ಬಿಸಿಗೆ ತಣ್ಣನೆ ಅನುಭವ ನೀಡುತ್ತದೆ. ಸುದೀಪ್ ಅಭಿಮಾನಿಗಳಿಗೆ, ಆಕ್ಷನ್ ಪ್ರಿಯರಿಗೆ, ಮದುವೆಯಾದವರಿಗೆ, ಆಗದವರಿಗೆ 'ಬಚ್ಚನ್' ಚಿತ್ರ ಖಂಡಿತ ನಿರಾಸೆಪಡಿಸಲ್ಲ!


ಚಿತ್ರ: ಬಚ್ಚನ್ (Angry young man..is back)
ನಿರ್ಮಾಣ: ಉದಯ್ ಕೆ ಮೆಹ್ತಾ
ಕಥೆ, ಚಿತ್ರಕಥೆ, ನಿರ್ದೇಶನ: ಶಶಾಂಕ್
ಸಂಗೀತ: ವಿ.ಹರಿಕೃಷ್ಣ
ಛಾಯಾಗ್ರಹಣ: ಶೇಖರ್ ಚಂದ್ರ
ಸಂಭಾಷಣೆ: ಎಂ.ಎಲ್.ಪ್ರಸನ್ನ
ಪಾತ್ರವರ್ಗ: ಸುದೀಪ್, ಜಗಪತಿ ಬಾಬು, ಭಾವನಾ, ಪರುಲ್ ಯಾದವ್, ತುಲಿಪ್ ಜೋಷಿ, ರವಿಶಂಕರ್, ಆಶಿಶ್ ವಿದ್ಯಾರ್ಥಿ, ನಾಜರ್, ಪ್ರದೀಪ್ ರಾವತ್, ಜೈ ಜಗದೀಶ್, ಸುಧಾ ಬೆಳವಾಡಿ, ರಾಮಕೃಷ್ಣ, ಶ್ರೀಧರ್, ಅಚ್ಯುತ ಕುಮಾರ್, ಶ್ರುತಿ, ಡೈಸಿ ಶಾ, ಸಾಧು ಕೋಕಿಲ, ಬುಲೆಟ್ ಪ್ರಕಾಶ್ ಮುಂತಾದವರು.
ಸಾಹಸ: ರವಿವರ್ಮ
ಸಂಕಲನ: ಕ್ರೇಜಿ ಮೈಂಡ್ಸ್
ಸಾಹಿತ್ಯ: ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಶಶಾಂಕ್, ಕವಿರಾಜ್
ನೃತ್ಯ ಸಂಯೋಜನೆ: ಚಿನ್ನಿ ಪ್ರಕಾಶ್, ಎ.ಹರ್ಷಾ, ಇಮ್ರಾನ್ ಸರ್ದಾರಿಯಾ
ಪ್ರಸಾಧನ: ಗಣೇಶ್
ವಿಶುಯಲ್ ಗ್ರಾಫಿಕ್ಸ್: ಪ್ರೈಮ್ ಫೋಕಸ್ ಲಿ.ಹೈದರಾಬಾದ್
ಸ್ಪೆಷಲ್ ಎಫೆಕ್ಟ್ಸ್: ಮಂಜರಿ ಸ್ಟುಡಿಯೋಸ್, ರಾಜನ್
ರೆಕಾರ್ಡಿಂಗ್ & ರೀರೆಕಾರ್ಡಿಂಗ್: ಡಿ ಬೀಟ್ಸ್ ಸ್ಟುಡಿಯೋ, ಬೆಂಗಳೂರು
ಡಿ.ಟಿ.ಎಸ್ ಮಿಕ್ಸಿಂಗ್ & ಡಬ್ಬಿಂಗ್: ಬಾಲಾಜಿ ಡಿಜಿ ಸ್ಟುಡಿಯೋ, ಬೆಂಗಳೂರು
English summary
Kannada film Bachchan review. The best action film in Kannada in years. Director Shashank has proved it. A very good action film so far. Suspense and drama in good measure.
Please Wait while comments are loading...