»   » ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಬೃಂದಾವನ' ವಿಮರ್ಶೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಬೃಂದಾವನ' ವಿಮರ್ಶೆ

By: ಜೀವನರಸಿಕ
Subscribe to Filmibeat Kannada

ಬೆಂಗಳೂರಿನ ನರ್ತಕಿ ಚಿತ್ರಮಂದಿರಕ್ಕೆ ಅಭಿಮಾನಿಗಳು ದೌಡಾಯಿಸಿ ಬಂದಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರ ಅಂದ ಮೇಲೆ ಮೊದಲ ದಿನ ಮೊದಲ ಶೋಗೆ ಟಿಕೆಟ್ ಪಡೆದವನೇ ಅದೃಷ್ಟವಂತ. ಸಾಕಷ್ಟು ಅಭಿಮಾನಿಗಳು ಸಾವಿರ ರುಪಾಯಿ ಕೊಡ್ತೀನಿ ಅಂದ್ರೂ ಬ್ಲ್ಯಾಕ್ ಟಿಕೆಟ್ ಮಾರುವವರು ಗತಿ ಇರಲಿಲ್ಲ.

ಒಂದು ಕಡೆ ಸರಪಟಾಕಿ ಸದ್ದು, ಇನ್ನೊಂದು ಕಡೆ ಅಭಿಮಾನಿಗಳ ಕೇಕೆ, ಶಿಳ್ಳೆ, ಕೂಗಾಟ, ಜೈಕಾರ ಕಿವಿಗಡಚಿಕ್ಕುತ್ತಿತ್ತು. ಸಾಮಾನ್ಯವಾಗಿ ರೀಮೇಕ್ ಚಿತ್ರ ಅಂದ್ರೆ ಏನೋ ಉಡಾಫೆ, ತಾತ್ಸಾರ, ಅಸಡ್ಡೆ, ಅನಾದರ ಇರುತ್ತದೆ. ಆದರೆ ಅಭಿಮಾನಿಗಳು ಇದ್ಯಾವುದನ್ನೂ ಕಿವಿಗೆ ಹಾಕಿಕೊಂಡಿರಲಿಲ್ಲ.

ಚಿತ್ರದ ಕಥೆ ಏನೆಂದರೆ...ಇದೊಂದು ಕೂಡು ಕುಟುಂಬವೊಂದರ ಸುತ್ತ ಸುತ್ತುವ ಕಥೆ. ಭರ್ಜರಿ ಪೈಟ್ ಮೂಲಕ ಚಿತ್ರ ಆರಂಭವಾಗುತ್ತದೆ. ಇಬ್ಬರು ಮಲತಾಯಿ ಮಕ್ಕಳ ನಡುವಿನ ವೈರತ್ವ, ಹಗೆತನಗಳ ನಡುವೆ ಕಥೆ ಸಾಗುತ್ತದೆ. ಅಣ್ಣನನ್ನು (ಸಂಪತ್) ಕಂಡರೆ ತಮ್ಮನಿಗಾಗಲ್ಲ, ತಮ್ಮನನ್ನು (ಸಾಯಿಕುಮಾರ್) ಕಂಡರೆ ಅಣ್ಣ ಲಾಂಗು ಮಚ್ಚು ಕೈಗೆತ್ತಿಕೊಳ್ಳುತ್ತಾನೆ.

Rating:
3.5/5

ಚಿತ್ರ : ಬೃಂದಾವನ
ನಿರ್ಮಾಪಕ : ಡಿ.ಸುರೇಶ್ ಗೌಡ, ಪಿ.ಎನ್.ಶ್ರೀನಿವಾಸ ಮೂರ್ತಿ
ಚಿತ್ರಕಥೆ, ನಿರ್ದೇಶನ : ಕೆ.ಮಾದೇಶ್
ಸಂಗೀತ : ವಿ ಹರಿಕೃಷ್ಣ
ಛಾಯಾಗ್ರಹಣ : ರಮೇಶ್ ಬಾಬು
ಸಂಕಲನ : ಕೆ.ಎಂ.ಪ್ರಕಾಶ್
ಸಾಹಸ: ಪಳನಿರಾಜ್
ಸಂಭಾಷಣೆ: ಕೆ.ವಿ.ರಾಜು
ತಾರಾಬಳಗ : ದರ್ಶನ್, ಕಾರ್ತಿಕಾ ನಾಯರ್, ಮಿಲನಾ, ಗೀತಾ, ಶರತ್ ಬಾಬು, ಸಾಯಿ ಕುಮಾರ್, ನಿರೋಷ, ಜೈಜಗದೀಶ್, ಸಂಗೀತಾ, ಸಾಧು ಕೋಕಿಲ, ಮೋಹನ್ ಜುನೇಜಾ, ದೊಡ್ಡಣ್ಣ, ಕಿಲ್ಲರ್ ವೆಂಕಟೇಶ್, ಶೋಭಾ, ಸಂಪತ್, ಅಜಯ್ (ಹೈದರಾಬಾದ್), ಪ್ರಕಾಶ್ ಹೆಗ್ಗೋಡು, ಕುರಿ ಪ್ರತಾಪ, ವೀಣಾ ಸುಂದರ್, ಕಿಲ್ಲರ್ ವೆಂಕಟೇಶ್ ಮುಂತಾದವರಿದ್ದಾರೆ.

ಆದರೆ ಭೂಮಿಗೆ ಆ ಮದುವೆ ಇಷ್ಟವಿರಲ್ಲ

ತಮ್ಮ ಮುದ್ದು ಮಗಳು ಭೂಮಿ (ಕಾರ್ತಿಕಾ ನಾಯರ್) ಎಲ್ಲಿ ದೂರವಾಗುತ್ತಾಳೋ ಎಂದುಕೊಂಡ ಅಪ್ಪ (ಸಂಪತ್) ಮಗಳನ್ನು ತನ್ನ ಅಕ್ಕನ ಮಗನಿಗೇ ಕೊಡಬೇಕೆಂದುಕೊಳ್ಳುತ್ತಾನೆ. ಆದರೆ ಭೂಮಿಗೆ ಆ ಮದುವೆ ಇಷ್ಟವಿರಲ್ಲ. ಈ ಮದುವೆಯಿಂದ ಹೇಗಾದರೂ ತನ್ನನ್ನು ಪಾರು ಮಾಡು ಎಂದು ತನ್ನ ಗೆಳತಿ ಮಧುಗೆ (ಮಿಲನಾ) ಹೇಳುತ್ತಾಳೆ.

ಭೂಮಿಗೆ ಡೂಪ್ಲಿಕೇಟ್ ಬಾಯ್ ಫ್ರೆಂಡ್ ಕ್ರಿಷ್

ತಾನು ಒಬ್ಬನನ್ನು ಪ್ರೀತಿಸುತ್ತಿರುವುದಾಗಿ ಭೂಮಿ ತನ್ನ ತಂದೆಗೆ ಸುಳ್ಳು ಹೇಳಿರುತ್ತಾಳೆ. ಸರಿ ಅವನನ್ನು ಕರೆದುಕೊಂಡು ಬಾ ಎಂದು ತಂದೆ ಹೇಳಿದಾಗ ಬಾಯ್ ಫ್ರೆಂಡ್ ತರಹ ನಟಿಸಲು ಮಧು ತನ್ನ ಪ್ರಿಯತಮ ಕ್ರಿಷ್ ಅಲಿಯಾಸ್ ಕೃಷ್ಣನನ್ನು (ದರ್ಶನ್) ಒಪ್ಪಿಸಿ ಕಳುಹಿಸುತ್ತಾಳೆ.

ಕೃಷ್ಣನ ಎಂಟ್ರಿ ಮೂಲಕ ಕಥೆಗೆ ಹೊಸ ತಿರುವು

ಕೃಷ್ಣನ ಎಂಟ್ರಿ ಮೂಲಕ ಕಥೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಅಣ್ಣ ತಮ್ಮಂದಿರನ್ನು ಒಂದು ಮಾಡುತ್ತಾನೆ. ಕುರುಕ್ಷೇತ್ರದಂತಿದ್ದ ಮನೆಯನ್ನು ಕೃಷ್ಣ ಬೃಂದಾವನ ಮಾಡುತ್ತಾನೆ. ಕಡೆಗೆ ಕೃಷ್ಣ ಯಾರ ಕೈಹಿಡಿಯುತ್ತಾನೆ ಎಂಬ ಆಸಕ್ತಿಕರ ತಿರುವಿನಲ್ಲಿ ಚಿತ್ರ ಸಾಗುತ್ತದೆ.

ಹಾಡುಗಳಲ್ಲಿ ಸ್ವಂತಿಕೆ ಮೆರೆದ ಮಾದೇಶ್

ಇದಿಷ್ಟನ್ನು ಒಂಚೂರು ಬದಲಾವಣೆ ಇಲ್ಲದಂತೆ ಕೆ.ಮಾದೇಶ್ ಅವರು ತೆಲುಗಿನಿಂದ ಕನ್ನಡಕ್ಕೆ ತಂದಿದ್ದಾರೆ. ಆದರೆ ಹಾಡುಗಳ ಮೇಕಿಂಗ್ ನಲ್ಲಿ ತಮ್ಮ ಸ್ವಂತಿಕೆಯನ್ನು ಮೆರೆದಿದ್ದಾರೆ. ಸಾಹಸ ಸನ್ನಿವೇಶಗಳಲ್ಲಿ ತೆಲುಗು ಚಿತ್ರದ ಛಾಯೆ ಎದ್ದು ಕಾಣುತ್ತದೆ. ಟಾಟಾ ಸುಮೋಗಳು ಚಿಂದಿ ಚಿತ್ರಾನ್ನವಾಗಿವೆ.

ಪ್ರೇಕ್ಷಕರ ಶಿಳ್ಳೆ ಗಿಟ್ಟಿಸುವ ಸಂಭಾಷಣೆ

ಕೆ.ವಿ.ರಾಜು ಅವರ ಸಂಭಾಷಣೆ ಪ್ರೇಕ್ಷಕರ ಶಿಳ್ಳೆ ಹೊಡೆಸಿಕೊಳ್ಳುತ್ತದೆ. ಕೌಟುಂಬಿಕ ಕಥಾಹಂದರ ಚಿತ್ರ ಎಂದ ಮೇಲೆ ಸಾಹಸ ಸನ್ನಿವೇಶಗಳಿಗೆ ಒಂಚೂರು ಕತ್ತರಿ ಹಾಕಬಹುದಿತ್ತು. ಆದರೆ ಮಾಸ್ ಪ್ರೇಕ್ಷಕರನ್ನು ರಂಜಿಸಲು ಮಾದೇಶ್ ಹಿಂದೆ ಮುಂದೆ ನೋಡಿಲ್ಲ. ಟಾಟಾ ಸುಮೋಗಳ ಸೊಂಟ ಮುರಿದಿದ್ದಾರೆ.

ರಮೇಶ್ ಬಾಬು ಛಾಯಾಗ್ರಹಣ ಹೇಗಿದೆ?

ಮೂಲ ಚಿತ್ರಕ್ಕೆ ಹೋಲಿಸಿದರೆ ಹಾಡುಗಳ ಮೇಕಿಂಗ್ ಚೆನ್ನಾಗಿದೆ. ನಯನಮನೋಹರ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ರಮೇಶ್ ಬಾಬು ಅವರ ಛಾಯಾಗ್ರಹಣ ಕಣ್ಣು ಅರಳಿಸುತ್ತದೆ. ವಿ ಹರಿಕೃಷ್ಣ ಅವರ ಸಂಗೀತ ಮಾಸ್ ಪ್ರೇಕ್ಷಕರಿಗೆ ಥಿಯೇಟರ್ ನಲ್ಲೇ ದೀಪಾವಳಿ, ಕ್ಲಾಸ್ ಪ್ರೇಕ್ಷಕರಿಗೆ ಏಕಾದಶಿ.

ಡೈಲಾಗ್ ಗಳಲ್ಲೆ ಮಕಾಡೆ ಮಲಗಿಸಿದ ದರ್ಶನ್

ದರ್ಶನ್ ಅವರು ಎಂದಿನಂತೆ ಡೈಲಾಗ್ ಗಳಲ್ಲಿ ಅಭಿಮಾನಿಗಳನ್ನು ಮಕಾಡೆ ಮಲಗಿಸಿದ್ದಾರೆ. ಕೆಲವೊಂದು ಆಕ್ಷನ್ ಸನ್ನಿವೇಶಗಳು ಅತಿ ಅನ್ನಿಸಿದರೂ ಸಿನಿಮಾ ಅಂದ ಮೇಲೆ ಎಲ್ಲವೂ ರಿಯಲಿಸ್ಟಿಕ್ ಆಗಿ ತೋರಿಸಲು ಸಾಧ್ಯವಿಲ್ಲವಲ್ಲ. ಹಾಗಂತ ಅಂದುಕೊಂಡು ಸುಮ್ಮನಾಗಬೇಕಷ್ಟೆ.

ಇಬ್ಬರೂ ನಾಯಕಿಯರೂ ಅಷ್ಟಕ್ಕಷ್ಟೆ

ಚಿತ್ರದ ಇಬ್ಬರು ನಾಯಕಿಯರಲ್ಲಿ ಇಬ್ಬರೂ ಪಾಸಿಂಗ್ ಮಾರ್ಕ್ಸ್ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಗ್ರೇಸಿಂಗ್ ಮಾರ್ಕ್ಸ್ ಕೊಟ್ಟರೂ ಇವರಿಬ್ಬರೂ ಪಾಸ್ ಆಗುವುದು ಕಷ್ಟ. ಮಧು ಪಾತ್ರವನ್ನು ಪೋಷಿಸುವಲ್ಲಿ ಮಿಲನಾ ವಿಲವಿಲ ಎಂದು ಒದ್ದಾಡಿದ್ದಾರೆ. ಇನ್ನು ಭೂಮಿ ಪಾತ್ರದಲ್ಲಿ ಕಾರ್ತಿಕಾ ನಾಯಕ್ ಅವರದು ಅಷ್ಟಕ್ಕಷ್ಟೆ.

ಯಾರ ಪಾತ್ರಗಳು ಹೇಗಿವೆ?

ಹಿರಿಯ ನಟಿ ಗೀತಾ ಹಾಗೂ ಶರತ್ ಬಾಬು, ಸಾಯಿಕುಮಾರ್, ಜೈ ಜಗದೀಶ್, ದೊಡ್ಡಣ್ಣ ಪಾತ್ರಗಳು ಗಮನಸೆಳೆಯುತ್ತವೆ. ಸಾಧು ಕೋಕಿಲ, ಕುರಿ ಪ್ರತಾಪ್ ಅವರ ಕಾಮಿಡಿ ಕಚಗುಳಿ ಇಡುತ್ತದೆ. ಖಳನಾಯಕನ ಪಾತ್ರದಲ್ಲಿ ತೆಲುಗು ನಟ ಅಜಯ್ ನೆನಪಿನಲ್ಲಿ ಉಳಿಯುತ್ತಾರೆ. ಒಟ್ಟಾರೆಯಾಗಿ ಬೃಂದಾವನ ಚಿತ್ರ ಮಾಸ್ ಗೆ ಮಸಾಲೆ ದೋಸೆ ಕ್ಲಾಸ್ ಗೆ ಖಾಲಿ ದೋಸೆ.

English summary
Kannada film Brindavana reveiw. After Sarathee, Bulbul, this is another action packed and family entertainer by challenging star. It is a must watch movie if you are a Darshan's fan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada