For Quick Alerts
  ALLOW NOTIFICATIONS  
  For Daily Alerts

  ಡೈರೆಕ್ಟರ್ಸ್ ಸ್ಪೆಷಲ್ : ಒರಿಜಿನಲ್ ಕಿಕ್ ಕೊಡುವ ಚಿತ್ರ

  By Rajendra
  |

  ಬಲ್ಲವನಿಗೆ ಹಲ್ಲೇ ಆಯುಧ ಇವಳಿಗೆ...ಎಂದು ರಂಗಾಯಣ ರಘು ಹೇಳುತ್ತಿದ್ದಂತೆ ಪ್ರೇಕ್ಷಕರು ಮುಂದಿನ ಪದವನ್ನು ಊಹಿಸಿಕೊಂಡು ಥ್ರಿಲ್ ಆಗುತ್ತಾರೆ. ಅಷ್ಟರ ಮಟ್ಟಿಗೆ ಗುರುಪ್ರಸಾದ್ ಗೆದ್ದಿದಾರೆ. ತಮ್ಮ ಸಂಪೂರ್ಣ ಶಕ್ತಿ ಸಾಮರ್ಥ್ಯಗಳನ್ನು ಸಂಭಾಷಣೆ ಹೆಣೆಯುವುದಕ್ಕೇ ವಿನಿಯೋಗಿಸಿರುವುದು ಎದ್ದು ಕಾಣುವ ಅಂಶ. ಎಷ್ಟೇ ಆಗಲಿ ನಿರ್ದೇಶಕರ ಒರಿಜಿನಲ್ ಚಾಯ್ಸ್ ಅದೇ ಅಲ್ಲವೆ?

  ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡಿರುವ ಗುರುಪ್ರಸಾದ್, ಪ್ರೇಕ್ಷಕರ ನಾಡಿಮಿಡಿತವನ್ನು ಚೆನ್ನಾಗಿ ಅರಿತಂತಿದೆ. ಅವರ ನಿರೀಕ್ಷೆಗಳನ್ನು ಹುಸಿ ಮಾಡಿಲ್ಲ. ಇಲ್ಲಿ ಡೈಲಾಗ್ ಗಳೇ ಜೀವಾಳ. ಕಥೆ ಏನಿದ್ದರೂ ನೆಪ ಮಾತ್ರ ಅಷ್ಟೇ. ಅಣ್ಣ ತಂಗಿ, ತಂದೆ ತಾಯಿ ಸಂಬಂಧಗಳು ಹಳಸಬಾರದು. ನಕ್ಕು ನಲಿಸುತ್ತಾ ಸಂಬಂಧಗಳ ಸುತ್ತ ಸುತ್ತು ಹಾಕಿಸುತ್ತಾ ಸುಸ್ತು ಆಗದಂತೆ ನೋಡಿಕೊಂಡಿದ್ದಾರೆ.

  ಚಿತ್ರದ ನಾಯಕ ನಟ ಧನಂಜಯ್. ಚಿತ್ರದಲ್ಲೂ ಅವರದು ಅದೇ ಹೆಸರು. ತಂದೆ ತಾಯಿ, ಅಣ್ಣ ತಂಗಿ ಇಲ್ಲದ ಅನಾಥ. ತನಗೆ ಸಂಬಂಧವೇ ಇಲ್ಲದ ಇವನಂತೆಯೇ ಅನಾಥರಾದವರನ್ನು ಅಪ್ಪ ಅಮ್ಮ, ಅಣ್ಣ ತಂಗಿಯಾಗಿ ಮನೆಗೆ ಕರೆತರುತ್ತಾನೆ. ಅವರಲ್ಲಿ ನಿಜವಾದ ಅಪ್ಪ ಅಮ್ಮ, ಅಣ್ಣ ತಂಗಿಯನ್ನು ಕಾಣುತ್ತಾನೆ.

  ಆದರೆ ಇವರೆಲ್ಲರೂ ಹೆತ್ತವರಂತೆ, ಒಡಹುಟ್ಟಿದರಂತೆ ನಟಿಸುತ್ತಿರುತ್ತಾರಷ್ಟೇ. ಇದೇ ಸಮಯದಲ್ಲಿ ಧನಂಜಯನಿಗೆ ಯಾವುದೋ ಹಣ ಬರುತ್ತದೆ. ಅದು ಸುಮಾರು 50 ಲಕ್ಷದ ಮೊತ್ತ. ಆ ಹಣವನ್ನು ಬ್ಯಾಂಕಿನಲ್ಲಿ ಇಡದೆ ಮನೆಯಲ್ಲಿ ಇಡುತ್ತಾನೆ. ಅಪ್ಪ ಅಮ್ಮ, ಅಣ್ಣ ತಂಗಿ ಹಣ ಲಪಟಾಯಿಸಲು ಪ್ಲಾನ್ ಹಾಕುತ್ತಾರೆ. ಮುಂದೇನಾಗುತ್ತದೆ ಎಂಬ ಕುತೂಹಲದ ಜೊತೆಗೆ ಕಥೆ ಸಾಗುತ್ತದೆ.

  ಸಾಮಾನ್ಯವಾಗಿ ಮಂಡ್ಯ ಕಡೆಯದೋ ಅಥವಾ ಉತ್ತರಕನ್ನಡ ಭಾಷೆಯ ಡೈಲಾಗ್ ಗಳನ್ನು ಬಳಸಿಕೊಳ್ಳುತ್ತಾರೆ. ಆದರೆ ಇಲ್ಲಿ ಮುಳಬಾಗಿಲು ಕಡೆಯ ಭಾಷೆಯನ್ನು ಗುರು ತಮ್ಮ ಸಂಭಾಷಣೆಯಲ್ಲಿ ಬಳಸಿಕೊಂಡಿದ್ದಾರೆ. ತೆಲುಗು ಮಿಶ್ರಿತ ಸಂಭಾಷಣೆ ಹೊಟ್ಟೆ ಹುಣ್ಣಾಗುವಂತೆ ಮಾಡುತ್ತದೆ.

  Rating:
  3.5/5

  ಚಿತ್ರ: ಡೈರೆಕ್ಟರ್ಸ್ ಸ್ಪೆಷಲ್

  ನಿರ್ದೇಶನ: ಗುರುಪ್ರಸಾದ್

  ಛಾಯಾಗ್ರಹಣ: ಮಹೇಂದ್ರ ಸಿಂಹ

  ಸಂಕಲನ: ಬಿ.ಎಸ್.ಕೆಂಪರಾಜ್

  ನೃತ್ಯ ನಿರ್ದೇಶನ: ಇಮ್ರಾನ್ ಸರ್ದಾರಿಯಾ

  ಸಾಹಿತ್ಯ: ಬಿ.ಆರ್.ಲಕ್ಷ್ಮಣರಾವ್ ಹಾಗೂ ಶಾರದಾಸುತ

  ಸಾಹಸ: ಥ್ರಿಲ್ಲರ್ ಮಂಜು

  ಪಾತ್ರವರ್ಗ: ರಂಗಾಯಣ ರಘು, ಧನಂಜಯ್, ಡಾ.ವತ್ಸಲಾ ಮೋಹನ್, ಸುಮಿತ್ರಾ ದೇವಿ, ರಾಮ್ ಹಾಗೂ ಪೂಜಾಗಾಂಧಿ ಮುಂತಾದವರು.

   ಸಂಬಂಧಗಳ ಸುತ್ತ ಸುತ್ತುವ ಕಥೆ

  ಸಂಬಂಧಗಳ ಸುತ್ತ ಸುತ್ತುವ ಕಥೆ

  'ಎದ್ದೇಳು ಮಂಜುನಾಥ' ಚಿತ್ರದಂತೆ ಇಲ್ಲೂ ಒಂದು ಚಿಕ್ಕಮನೆಯಲ್ಲಿ ಕಥೆ ಸಾಗುತ್ತದೆ. ಕಥೆ ಸಾಗಿದಂತೆ ಸಂಬಂಧಗಳು ಒಂದಕ್ಕೊಂದು ಹತ್ತಿರವಾಗುತ್ತಾ ಸಾಗುತ್ತವೆ. ಪಂಚೆ ಶಾಸ್ತ್ರಿಯಾಗಿ ರಂಗಾಯಣ ರಘು ಅವರು ಪಾತ್ರದ ಆಳಕ್ಕೆ ಇಳಿದಿದ್ದಾರೆ. ಚಿತ್ರದ ಹೀರೋ ಅವರೇ ಏನೋ ಎಂಬಷ್ಟು ಗಾಢವಾದ ಪ್ರಭಾವ ಬೀರುತ್ತದೆ.

  ಯಾರ್‍ಯಾರ ಪಾತ್ರ ಹೇಗಿದೆ?

  ಯಾರ್‍ಯಾರ ಪಾತ್ರ ಹೇಗಿದೆ?

  ಡಾ.ವತ್ಸಲಾ ಮೋಹನ್ ಅವರು ಅಷ್ಟೇ ಅಮ್ಮನಾಗಿ ಬಹಳ ನಾಜೂಕಿನ ಅಭಿನಯ ನೀಡಿದ್ದಾರೆ. ಬುದ್ಧಿಮಾಂದ್ಯ ಅಣ್ಣನಾಗಿ 'ರಮ್ಯಚೈತ್ರ ಕಾಲ'ದ ರಾಮ್, ತಂಗಿಯಾಗಿ ಸುಮಿತ್ರಾ ದೇವಿ, ಸ್ವಾಮೀಜಿಯಾಗಿ 'ಪಡುವಾರಳ್ಳಿ ಪಾಂಡವರು' ಕೃಷ್ಣಪ್ಪ ಪಾತ್ರಗಳ ಪೋಷಣೆ ಮನಮುಟ್ಟುವಂತಿದೆ.

  ಮೊದಲ ಚಿತ್ರದಲ್ಲೇ ಧನಂಜಯ ಭರವಸೆ

  ಮೊದಲ ಚಿತ್ರದಲ್ಲೇ ಧನಂಜಯ ಭರವಸೆ

  ಧನಂಜಯ್ ಅವರು ತಮ್ಮ ಚೊಚ್ಚಲ ಅಭಿನಯದಲ್ಲೇ ಗಮನಸೆಳೆದಿದ್ದಾರೆ. ಅವರ ಹಾವ ಭಾವ, ಸಂಭಾಷಣೆ, ತೀಕ್ಷ್ಣ ನೋಟ, ಆಕರ್ಷಕ ಮೈಕಟ್ಟು ನಿಲುವಿನಿಂದ ಗಮನಸೆಳೆಯುತ್ತಾರೆ. ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಸಿಕ್ಸ್ ಪ್ಯಾಕ್ ನಟ ಸಿಕ್ಕಂತಾಗಿದೆ. ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ.

  ತಾಂತ್ರಿಕವಾಗಿಯೂ ಚಿತ್ರ ಪ್ರೌಢವಾಗಿದೆ

  ತಾಂತ್ರಿಕವಾಗಿಯೂ ಚಿತ್ರ ಪ್ರೌಢವಾಗಿದೆ

  ಚಿತ್ರದ ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಛಾಯಾಗ್ರಹಣ. ಸಣ್ಣ ಮನೆಯೊಂದರ ಹಿನ್ನೆಲೆಯಲ್ಲಿ ಸಾಗುವ ಕಥೆಯನ್ನು ಅದ್ಭುತವಾಗಿ ಸೆರೆಹಿಡಿದ್ದಾರೆ ಮಹೇಂದ್ರ ಸಿಂಹ. ಬಿ.ಎಸ್.ಕೆಂಪರಾಜ್ ಅವರ ಸಂಕಲನವೂ ಎಲ್ಲೂ ಲೆಕ್ಕಾಚಾರ ತಪ್ಪಿಲ್ಲ. ತಂತ್ರಜ್ಞರನ್ನು ಸಮರ್ಥವಾಗಿ ದುಡಿಸಿಕೊಂಡಿದ್ದಾರೆ ಗುರುಪ್ರಸಾದ್.

  ಪೂಜಾಗಾಂಧಿ ಲಯಬದ್ಧ ಐಟಂ ಹಾಡು

  ಪೂಜಾಗಾಂಧಿ ಲಯಬದ್ಧ ಐಟಂ ಹಾಡು

  ಚಿತ್ರದಲ್ಲಿ ಒಂದೇ ಒಂದು ಫೈಟ್ ಇದೆ. ಹಾಗೆಯೇ ಒಂದೇ ಒಂದು ಸ್ಪೆಷಲ್ ಸಾಂಗ್ ಸಹ ಇದೆ. ಇದನ್ನು ಬೇಕಾದರೆ ಐಟಂ ಸಾಂಗ್ ಎಂತಲೂ ಕರೆಯಬಹುದು. ಕಣ್ಣಲ್ಲೆ ಯಾಕೆ ನೆಕ್ತೀಯಾ ಎಂಬ ಹಾಡಿಗೆ ಪೂಜಾಗಾಂಧಿ ಲಯಬದ್ಧವಾಗಿ ಮೈಕೈ ಕುಣಿಸಿದ್ದಾರೆ. ಎಲ್ಲೂ ಅವರ ಕುಣಿತ ಮೇರೆ ಮೀರದಂತೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನೋಡಿಕೊಂಡಿದ್ದಾರೆ.

  ಅನೂಪ್ ಸೀಳಿನ ಇಂಪಾದ ಸಂಗೀತ

  ಅನೂಪ್ ಸೀಳಿನ ಇಂಪಾದ ಸಂಗೀತ

  ಇನ್ನೊಂದು ಗಮನಸೆಳೆಯುವ ಪ್ರಮುಖ ಅಂಶ ಎಂದರೆ ಸಂಗೀತ. ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನೂ ಪೋಷಿಸಿರುವ ಅನೂಪ್ ಸೀಳಿನ್ ಸಂಗೀತ ಹಾಗೂ ನಡುನಡುವೆ ಜುಳುಜುಳು ಹರಿಯುವ ನದಿಯಂತೆ ಕೇಳಿಬರುವ ಹಾಡುಗಳು ಇಂಪಾಗಿದ್ದು ಆಸ್ವಾದಿಸುವಂತಿವೆ. ಆರಂಭದಲ್ಲೇ ಮೂಡಿಬಂದಿರುವ "ದೇವರೆ ಅಗಾಧ ನಿನ್ನ ಊಹೆಯ ಕಡಲು..." ಎಂಬ ಹಾಡಿನ ಸಾಹಿತ್ಯ ಹಾಗೂ ಅದರ ಸಂಗೀತ ಆಕರ್ಷಕವಾಗಿದೆ.

  ಕೊನೆಯ ತನಕ ಬಿಗಿ ನಿರೂಪಣೆ

  ಕೊನೆಯ ತನಕ ಬಿಗಿ ನಿರೂಪಣೆ

  ಚಿತ್ರದ ಮೊದಲರ್ಧ ಒಂಚೂರು ವೇಗ ಕಳೆದುಕೊಂಡಂತೆ ಭಾಸವಾದರೂ ದ್ವಿತೀಯಾರ್ಧಕ್ಕೆ ಹೊರಳುತ್ತಿದ್ದಂತೆ ಕುತೂಹಲ ಉಳಿಸಿಕೊಂಡು ಸಾಗುತ್ತದೆ. ಕಡೆಯ ತನಕ ಏನಾಗುತ್ತದೆ ಎಂಬ ಕುತೂಹಲದಲ್ಲಿ ಪ್ರೇಕ್ಷಕರನ್ನು ಹಿಡಿದಿಡುತ್ತದೆ.

  ಗ್ಯಾಲಕ್ಸಿ ಅವರು ಅದೆಂಥದೋ ಥರ್ಡ್ ಅಂತ ಬಿಟ್ಟಿದ್ದಾರೆ

  ಗ್ಯಾಲಕ್ಸಿ ಅವರು ಅದೆಂಥದೋ ಥರ್ಡ್ ಅಂತ ಬಿಟ್ಟಿದ್ದಾರೆ

  ಚಿತ್ರದ ಕೆಲವು ಡೈಲಾಗ್ಸ್ ಹೀಗಿವೆ. ಗ್ಯಾಲಕ್ಸಿ ಅವರು ಥರ್ಡ್ ಅಂತ ಬಿಟ್ಟಿದ್ದಾರೆ ಅದರಲ್ಲೇ ಏನೇನೋ ಫೀಚರ್ಸ್ ಇದೆಯಂತೆ....ಮಧ್ಯಪ್ರದೇಶದ (ಹೊಟ್ಟೆ) ಉರಿ ಕಡಿಮೆ ಮಾಡುವುದು ಹೇಗೆ ಎಂದು ಉತ್ತರ ಪ್ರದೇಶ (ತಲೆ) ಸದಾ ತಲೆ ಕೆಡಿಸಿಕೊಳ್ಳುತ್ತಿರುತ್ತದೆ....

  ಚಿತ್ರದ ಇನ್ನೊಂದಿಷ್ಟು ಡೈಲಾಗ್ಸ್

  ಚಿತ್ರದ ಇನ್ನೊಂದಿಷ್ಟು ಡೈಲಾಗ್ಸ್

  ಇನ್ನೊಂದಷ್ಟು ಡೈಲಾಗ್ಸ್...ಈ ಪ್ರಪಂಚದಲ್ಲಿ ಏನೇ ಎಳೆದರೂ ಉದ್ದ ಆಗುತ್ತದೆ ಆದರೆ ಎಳೆದರೆ ಗಿಡ್ಡ ಆಗೋದು ಮಾತ್ರ ಸಿಗರೇಟ್ ಒಂದೇ. ಅಪ್ಪ ಆಗೋದು ಮೂರು ನಿಮಿಷದ ಕೆಲಸ, ತಾಯಿ ಆಗೋದು ಒಂಬತ್ತು ತಿಂಗಳ ಕೆಲಸ ಈ ತಾಪತ್ರಯವೇ ಇಲ್ಲದೆ ಅಪ್ಪನನ್ನಾಗಿಸಿ ಬಿಟ್ಟೆ...ನೀವು ಕಪ್ಪಾಗಿದ್ದೀರಲ್ಲಾ ಯಾಕೆ? ಶ್ರಮಜೀವಿಗಳು ದಿಗಂತ್ ತರಹ ಇರಕ್ಕಾಗುತ್ತದೆಯೇ?

  English summary
  Kannada film Directors Special review. It's completely a Guruprasad film. Let me make it clear by saying that it is a film for Guruprasad fans. His usual sarcasm, hilarious one-liners, and double entendres are all their to be enjoyed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X