»   » 'ವೀರ' ವಿಮರ್ಶೆ: ಮಾಲಾಶ್ರೀ ಡಿಶುಂ ಡಿಶುಂ ಢಮಾರ್

'ವೀರ' ವಿಮರ್ಶೆ: ಮಾಲಾಶ್ರೀ ಡಿಶುಂ ಡಿಶುಂ ಢಮಾರ್

By: ಉದಯರವಿ
Subscribe to Filmibeat Kannada
Rating:
2.5/5
ಕನಸಿನ ರಾಣಿಯಾಗಿ ಮೆರೆದ ಮಾಲಾಶ್ರೀ ಇಲ್ಲಿ ಅಡಿಯಿಂದ ಮುಡಿಯವರೆಗೂ ಆಕ್ಷನ್ ಕ್ವೀನ್. 'ವೀರ'ಲಕ್ಷ್ಮಿಯಾಗಿ ರುದ್ರತಾಂಡವಾಡುತ್ತಾರೆ. ಅಲ್ಲಲ್ಲಿ ಕಬಡಿ ಆಡುತ್ತಾರೆ. ಕಾರುಗಳು ಗಾಳಿಯಲ್ಲೇ ಹಾರಾಡುತ್ತವೆ. ಬುಲೆಟ್ ಗಳು ಪಟಾಕಿಯಂತೆ ಸಿಡಿಯುತ್ತವೆ. ಮಾಲಾಶ್ರೀ ಡಿಶುಂ ಡಿಶುಂ ಸದ್ದಿಗೆ ಪ್ರೇಕ್ಷಕರ ಕಿವಿ ಢಮಾರ್ ಆದರೂ ಅಚ್ಚರಿಯಿಲ್ಲ.

ಹಂಸಲೇಖ ಅವರ ಸೌಂಡ್ ಎಫೆಕ್ಟ್ ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ರಾಮು ಯಾವುದಕ್ಕೂ ಹಿಂದೆ ಮುಂದೆ ನೋಡಿಲ್ಲ. ನೀರಿನಂತೆ ಹಣ ಖರ್ಚು ಮಾಡಿದ್ದಾರೆ. ಕಾರು, ಬೈಕು, ಜೀಪುಗಳನ್ನು ಗಾಳಿಯಲ್ಲಿ ಉಡಾಯಿಸುತ್ತಿದ್ದ ಅವರು ಈ ಬಾರಿ ಏಕ್ ದಂ ಹೆಲಿಕಾಪ್ಟರನ್ನೇ ಚಿಂದಿ ಉಡಾಯಿಸಿದ್ದಾರೆ.

ಕಥೆ, ಚಿತ್ರಕಥೆ, ಸಂಭಾಷಣೆ ಬಗ್ಗೆ ತಲೆಕೆಡಿಸಿಕೊಳ್ಳುವಂತೆಯೇ ಇಲ್ಲ. ಇಲ್ಲಿ ಸರ್ವಂ ಆಕ್ಷನ್ ಮಯಂ. ಮಾಲಾಶ್ರೀ ಅವರು ಒಮ್ಮೆ ಹೀಮ್ಯಾನ್, ಇನ್ನೊಮ್ಮೆ ಸ್ಲೈಡರ್ ಮ್ಯಾನ್ ಮಗದೊಮ್ಮೆ ಬ್ಯಾಟ್ ಮ್ಯಾನ್. ಪ್ರೇಕ್ಷಕರಿಗೆ ಒಟ್ಟಿಗೆ ಮೂರು ಹಾಲಿವುಡ್ ಸಿನಿಮಾಗಳನ್ನು ನೋಡಿದ ಅನುಭವ.


ಚಿತ್ರ: ವೀರ
ನಿರ್ಮಾಪಕ: ರಾಮು (ರಾಮು ಎಂಟರ್ ಪ್ರೈಸಸ್)
ನಿರ್ದೇಶನ: ಅಯ್ಯಪ್ಪ.ಪಿ.ಶರ್ಮಾ
ಸಂಗೀತ: ಹಂಸಲೇಖ
ಛಾಯಾಗ್ರಹಣ: ರಾಜೇಶ್ ಕಟ್ಟ
ಸಂಭಾಷಣೆ: ಅನಿಲ್ ಕುಮಾರ್
ಸಾಹಸ: ರವಿವರ್ಮ
ತಾರಾಗಣ: ಮಾಲಾಶ್ರೀ, ಕೋಮಲ್, ರಾಜು ತಾಳಿಕೋಟೆ, ಸಿ.ಆರ್.ಸಿಂಹ, ಆಶಿಶ್ ವಿದ್ಯಾರ್ಥಿ, ರಾಹುಲ್ ದೇವ್

ಆಕ್ಷನ್ ಎಂಬ ಪಂಚಭಕ್ಷ್ಯ ಪರಮಾನ್ನ

ಒಂದಷ್ಟು ರಾಜಕೀಯ ಅನ್ನ, ಅದರ ಮೇಲೆ ಮಾಫಿಯಾ ಸಾಂಬಾರು, ಐಟಂ ಹಾಡಿನ ಉಪ್ಪಿನಕಾಯಿ, ಕಾಮಿಡಿ ಎಂಬ ಉಪ್ಪು, ಆಕ್ಷನ್ ಎಂಬ ಪಂಚಭಕ್ಷ್ಯ ಪರಮಾನ್ನಗಳನ್ನು ಪ್ರೇಕ್ಷಕರಿಗೆ ಬಡಿಸಿದ್ದಾರೆ ನಿರ್ದೇಶಕ ಅಯ್ಯಪ್ಪ ಶರ್ಮ. ಅವರು ಈ ಹಿಂದಿನ 'ವರದನಾಯಕ' ಚಿತ್ರದ ಫಾರ್ಮುಲಾವನ್ನು ಇಲ್ಲೂ ರಿಪೀಟ್ ಮಾಡಿದ್ದಾರೆ.

ಅನಿಲ್ ಸಂಭಾಷಣೆ ಕೊನೆಕೊನೆಗೆ ಕೈಕೊಟ್ಟಿದೆ

ಗೃಹ ಸಚಿವರಾಗಿ ಸಿ.ಆರ್.ಸಿಂಹ, ಪೊಲೀಷ್ ಕಮೀಷನರ್ ಆಗಿ ಆಶಿಶ್ ವಿದ್ಯಾರ್ಥಿ, ಡಾನ್ ಆಗಿ ರಾಹುಲ್ ದೇವ್ ಅಭಿನಯ ಮಾಲಾಶ್ರೀ ಅಬ್ಬರದ ನಟನೆ ಮುಂದೆ ನೀರಸವಾಗಿ ಕಾಣುತ್ತವೆ. ಅನಿಲ್ ಕುಮಾರ್ ಅವರ ಸಂಭಾಷಣೆ ಕೊನೆಕೊನೆಗೆ ಕೈಕೊಟ್ಟಿದೆ.

ಕೋಮಲ್ ಹಾಸ್ಯ ಊಟಕ್ಕಿಲ್ಲದ ಉಪ್ಪಿನಕಾಯಿ

ಕೋಮಲ್ ಇಲ್ಲಿ ನೆಪಮಾತ್ರಕ್ಕೆ ಹಾಸ್ಯನಟ. ಉಳಿದೆದ್ದವೂ ಗೌಣ. ವಿಲನ್ ರೋಲ್ ಗಳಲ್ಲಿ ಮಿಂಚುತ್ತಿದ್ದ ಆಶಿಶ್ ವಿದ್ಯಾರ್ಥಿ ಇಲ್ಲಿ ಪಾಸಿಟೀವ್ ಕ್ಯಾರೆಕ್ಟರ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಸೀರೆಯಲ್ಲಿ ಒಂದಷ್ಟು ಮಿಂಚಿದ ಮಾಲಾಶ್ರೀ

ಆರಂಭದಲ್ಲಿ ಮಲಾಶ್ರೀ ಸೀರೆಯಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಎಂಬತ್ತರ ದಶಕವನ್ನು ಕರೆದೊಯ್ಯುತ್ತಾರೆ. ಅಷ್ಟೇ ಸ್ಪೀಡಾಗಿ ಹೀಮ್ಯಾನ್ ಪಾತ್ರಕ್ಕೆ ಮರಳಿ ನಿರಾಸೆ ಮೂಡಿಸುತ್ತಾರೆ.

ಮುಕ್ಕಾಲು ಪಾಲು ವಿದೇಶದಲ್ಲೇ ಶೂಟಿಂಗ್

ಚಿತ್ರದ ಮುಕ್ಕಾಲು ಪಾಲು ವಿದೇಶದಲ್ಲೇ ಚಿತ್ರೀಕರಣ. ಉಳಿದದ್ದು ನೀರು ಪಾಲು. ಮಾಲಾಶ್ರೀ ಅವರ ಆಕ್ಷನ್ ನನ್ನು ಮತ್ತೊಮ್ಮೆ ನೋಡಬೇಕೆನ್ನುವವರು ತಪ್ಪದೇ ನೋಡಬಹುದಾದ ಚಿತ್ರ. ಸಿನಿಮಾ ನೋಡಿದ ಬಳಿಕ ಇದು ಹಾಲುವುಡ್ ಚಿತ್ರವೋ ಅಥವಾ ಗಾಂಧಿನಗರದ ಚಿತ್ರವೋ ಎಂಬ ಗುಮಾನಿ ಕಾಡಿದರೆ ಅದಕ್ಕೆ ನಾವು ಜವಾಬ್ದಾರರಲ್ಲ!

English summary
Kannada film Veera review. The film directed by Ayyappa P. Sharma and starring Malashri, Komal Kumar and Ashish Vidyarthi in the lead roles. Produced by Ramu Enterprises, the film's soundtrack and lyrics are written by Hamsalekha. Worth watch for action-drama lovers.
Please Wait while comments are loading...