»   » ಅಜಯ್ ರಾವ್ ನಟನೆಯ 'ಅದ್ವೈತ' ಚಿತ್ರ ವಿಮರ್ಶೆ

ಅಜಯ್ ರಾವ್ ನಟನೆಯ 'ಅದ್ವೈತ' ಚಿತ್ರ ವಿಮರ್ಶೆ

By: ಉದಯರವಿ
Subscribe to Filmibeat Kannada

ತಮ್ಮ ವಿಭಿನ್ನ ಚಿತ್ರಗಳ ಮೂಲಕ ನಿರ್ದೇಶಕ ಬಿ.ಎಂ.ಗಿರಿರಾಜ್ ಕನ್ನಡ ಸಿನಿಮಾಸಕ್ತರಲ್ಲಿ ಸಾಕಷ್ಟು ಕುತೂಹಲ, ನಿರೀಕ್ಷೆ, ಭರವಸೆಗಳನ್ನು ಮೂಡಿಸಿದ್ದಾರೆ. ಅವರ ಇತ್ತೀಚಿನ 'ಜಟ್ಟ' ಹಾಗೂ ಅದಕ್ಕೂ ಮುಂಚಿನ 'ನವಿಲಾದವರು' ಚಿತ್ರಗಳೇ ಇದಕ್ಕೆ ನಿದರ್ಶನ. 'ಅದ್ವೈತ' ಚಿತ್ರದ ಕಥೆಯೂ ವಿಶಿಷ್ಟವಾಗಿದೆ. ಆದರೆ ನಿರೂಪಣೆ ಹಾಗೂ ನಿಧಾನಗತಿಯ ಓಟದಿಂದಾಗಿ ದುರ್ಬಲವಾಗಿ ಕಾಣುತ್ತದೆ.

"Every writer is a Fighter" ಎಂಬುದು ಚಿತ್ರದ ಅಡಿಬರಹ. ಅದಕ್ಕೆ ಸಂಪೂರ್ಣ ನ್ಯಾಯಸಲ್ಲಿಸಲು ನಿರ್ದೇಶಕರು ಶ್ರಮಿಸಿದ್ದಾರೆ. ಆದರೆ ಅವರ ಶ್ರಮ ಅನಗತ್ಯ ಹಾಡುಗಳು, ಬಿಗಿ ಇಲ್ಲದ ನಿರೂಪಣೆ, ಸುದೀರ್ಘ ಕಥೆಯಿಂದಾಗಿ ದಿಕ್ಕು ತಪ್ಪಿದಂತಾಗಿದೆ. 'ಅದ್ವೈತ' ಚಿತ್ರ ಅಲ್ಲಲ್ಲಿ ಪ್ರೇಕ್ಷಕರ ತಾಳ್ಮೆಯನ್ನೂ ಪರೀಕ್ಷಿಸುತ್ತದೆ.

ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶ ಎಂದರೆ ಚಿತ್ರದಲ್ಲಿ ಸಾಕಷ್ಟು ನುರಿತ ಕಲಾವಿದರಿರುವುದು. ಆದರೆ ಅವರನ್ನು ಸಂಪೂರ್ಣವಾಗಿ ದುಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಗಿರಿರಾಜ್ ನಿರ್ದೇಶನದ ಮೊದಲ ಚಿತ್ರ ಇದಾದರೂ ಬಿಡುಗಡೆಯಾಗಿದ್ದು ಮಾತ್ರ ತಡವಾಗಿ. ಇದು ಅವರ ಮೊದಲ ‌ಚಿತ್ರವಾದ ಕಾರಣಕ್ಕೋ ಏನೋ ಅವರ ಹಿಂದಿನ ಎರಡು ಚಿತ್ರಗಳಲ್ಲಿನ ತಾಂತ್ರಿಕ ಅಂಶಗಳು ಇಲ್ಲಿ ಕಾಣೆಯಾಗಿವೆ.

ಚಿತ್ರ: ಅದ್ವೈತ
ನಿರ್ಮಾಪಕರು: ಶಾರದ ಸುರೇಶ್
ನಿರ್ದೇಶನ: ಬಿ.ಎಂ.ಗಿರಿರಾಜ್
ಸಂಗೀತ: ವೀರ್ ಸಮರ್ಥ್
ಛಾಯಾಗ್ರಹಣ: ಕಿರಣ್ ಹಂಪಾಪುರ
ಸಂಕಲನ: ಕೆ.ಎಂ.ಪ್ರಕಾಶ್
ಸಾಹಸ: ಅಲ್ಟಿಮೇಟ್ ಶಿವು ಹಾಗೂ ಡಿಫರೆಂಟ್ ಡ್ಯಾನಿ
ಪಾತ್ರವರ್ಗ: ಅಜಯ್ ರಾವ್, ಹರ್ಷಿಕಾ ಪೂಣಚ್ಚ, ಅಚ್ಯುತ್ ಕುಮಾರ್, ನೀನಾಸಮ್ ಅಶ್ವಥ್ ಮುಂತಾದವರು.

Rating:
2.0/5

ಇಷ್ಟಕ್ಕೂ ಚಿತ್ರದ ಕಥೆ ಏನೆಂದರೆ...

ಇಷ್ಟಕ್ಕೂ ಚಿತ್ರದ ಕಥೆ ಏನೆಂದರೆ...ಸಿನಿಮಾ ಕಥೆಗಾರನೊಬ್ಬನ ಸುತ್ತ ಸುತ್ತುವ ಕಥೆ ಇದು. ಒಂದು ವಿಭಿನ್ನ ಸಿನಿಮಾ ಮಾಡುವಂತೆ ನಿರ್ಮಾಪಕರೊಬ್ಬರು (ಸ್ವತಃ ಎನ್.ಎಂ.ಸುರೇಶ್ ಅಭಿನಯಿಸಿದ್ದಾರೆ) ಕಥೆಗಾರ ವಿವೇಕ್ ಗೆ (ಅಜಯ್ ರಾವ್) ಹೇಳುತ್ತಾರೆ. ಈಗ ಬರುತ್ತಿರುವ ಮಚ್ಚು, ಲಾಂಗು ಚಿತ್ರಗಳಿಗಿಂತ ಭಿನ್ನವಾದ ಚಿತ್ರ ಮಾಡುವಂತೆ ಹೇಳುತ್ತಾರೆ.

ಕಥೆಗಾರನಾಗಿ ಅಜಯ್ ರಾವ್

ತನ್ನ ಕಥೆಗಾಗಿ ವಿವೇಕ್ ಹೊಸ ದಾರಿಯೊಂದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಭೂಗತಜಗತ್ತಿನ ದೊಡ್ಡ ಡಾನ್ ಹರ್ಷವರ್ಧನ್ (ಅಚ್ಯುತಕುಮಾರ್) ಜೊತೆಯಲ್ಲೇ ಇದ್ದು ಅವನ ಚಲನವಲನಗಳನ್ನು ಹತ್ತಿರದಿಂದ ನೋಡಿ ಕಥೆ ಬರೆಯಲು ಹೋಗುತ್ತಾನೆ.

ಡಾನ್ ಗಳಾಗಿ ಅಚ್ಯುತ ಕುಮಾರ್, ನೀನಾಸಂ ಅಶ್ವತ್ಥ್

ಅಲ್ಲಿಂದ ಕಥೆ ನಾನಾ ಮಗ್ಗುಲುಗಳನ್ನು ಬದಲಾಯಿಸುತ್ತಾ ಸಾಗುತ್ತದೆ. ಹರ್ಷವರ್ಧನ್ ತನ್ನ ಎದುರಾಳಿಯಾಗಿದ್ದ ಸುದರ್ಶನ್ (ನೀನಾಸಂ ಅಶ್ವತ್ಥ್) ಜೊತೆ ಕೈಜೋಡಿಸಿ ಇಬ್ಬರೂ ಒಂದಾಗಿರುತ್ತಾರೆ. ಸುದರ್ಶನ್ ತಮ್ಮನಿಗೆ ಹರ್ಷವರ್ಧನ್ ತನ್ನ ಮಗಳು ಅಂಬಿಕಾಳನ್ನು (ಹರ್ಷಿಕಾ ಪೂಣಚ್ಚ) ಕೊಟ್ಟು ಮದುವೆ ಮಾಡಿಕೊಡುವ ಒಪ್ಪಂದವಾಗಿರುತ್ತದೆ.

ಏರಿಳಿತಗಳ ಜಾಡಿನಲ್ಲಿ ಸಾಗುವ ಕಥೆ

ಆದರೆ ಆ ಮದುವೆ ಅಂಬಿಕಾಗೆ ಇಷ್ಟವಿರಲ್ಲ. ಆಕೆ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ವಿವೇಕ್ ಆಕೆಯನ್ನು ಈ ಮದುವೆಯಿಂದ ಪಾರು ಮಾಡುವ ಭರವಸೆ ನೀಡಿ ಕಾಪಾಡುತ್ತಾನೆ. ಮುಂದಿನ ಕಥೆ ನಾನಾ ದಿಕ್ಕುಗಳಲ್ಲಿ ಪ್ರವಹಿಸುತ್ತದೆ. ಅಂಬಿಕಾಳನ್ನು ಬಚಾವ್ ಮಾಡಲು ವಿವೇಕ್ ಏನೆಲ್ಲಾ ಮಾಡುತ್ತಾನೆ. ಮುಂದೇನಾಗುತ್ತದೆ ಎಂಬ ಏರಿಳಿತಗಳ ಜಾಡಿನಲ್ಲಿ ಕಥೆ ಸಾಗುತ್ತದೆ.

ಧ್ವನಿವ್ಯವಸ್ಥೆಯಲ್ಲಿ ಲೋಪ

ನಾನು ನೋಡಿದ ಚಿತ್ರಮಂದಿರದ (ಮೇನಕಾ) ಧ್ವನಿ ವ್ಯವಸ್ಥೆ ಸರಿಯಿರಲಿಲ್ಲವೋ ಅಥವಾ ಧ್ವನಿಗ್ರಹಣದಲ್ಲೇ ಲೋಪವಿದೆಯೋ ಗೊತ್ತಾಗಲಿಲ್ಲ (ಆದರೆ ನಮಗೆ ಯಾವುದೇ ಕಿವುಡು ಸಮಸ್ಯೆ ಇಲ್ಲ ಎಂಬುದು ನಿಮ್ಮ ಗಮನಕ್ಕಿರಲಿ). ಒಟ್ಟಾರೆಯಾಗಿ ಪ್ರೇಕ್ಷಕರ ಕಿವಿಗೆ ಸಂಭಾಷಣೆ ಸ್ಪಷ್ಟವಾಗಿ ಕೇಳಿಸುವುದಿಲ್ಲ.

ಮೂರು ಹಾಡುಗಳು ಅಗತ್ಯವಿರಲಿಲ್ಲ

ನಾನಾ ದಿಕ್ಕುಗಳಲ್ಲಿ ಹರಿಯುವ ಕಥೆಗೆ ದಿಢೀರ್ ಎಂದು ಬರುವ ರಸ್ತೆ ಉಬ್ಬುಗಳಂತೆ ಹಾಡುಗಳು ತಡೆಯೊಡ್ಡುತ್ತವೆ. ಚಿತ್ರದಲ್ಲಿನ ಮೂರು ಹಾಡುಗಳು ಅನಾವಶ್ಯಕ ಅನ್ನಿಸುತ್ತದೆ. ಈ ಹಾಡುಗಳಿಗೆ ಕತ್ತರಿ ಹಾಕಿದ್ದರೆ ಕಥೆ ವೇಗವಾಗಿ ಸಾಗುತ್ತಿತ್ತು.

ಯಾವ ಪಾತ್ರವೂ ನೆನಪಿನಲ್ಲಿ ಉಳಿಯಲ್ಲ

ಇನ್ನು ಡಾನ್ ಗಳಾಗಿ ನೀನಾಸಂ ಅಶ್ವತ್ಥ್ ಹಾಗೂ ಅಚ್ಯುತ ಕುಮಾರ್ ಪಾತ್ರಗಳಲ್ಲಿ ತನ್ಮಯತೆ ಇದ್ದರೂ ನೆನಪಿನಲ್ಲಿ ಉಳಿಯುವಂತೇನು ಇಲ್ಲ. ಇನ್ನು ಅಜಯ್ ರಾವ್ ಅವರ ಕಥೆಗಾರನ ಪಾತ್ರ ಸಾಧಾರಣವಾಗಿದೆ. ಹರ್ಷಿಕಾ ಪೂಣಚ್ಚ ಅವರ ಪಾತ್ರಕ್ಕೂ ಅಷ್ಟೇನು ತೂಕವಿಲ್ಲ.

ವೀರ್ ಸಮರ್ಥ್ ಸಂಗೀತದ ಝಲಕ್ ಮಿಸ್

ಚಿತ್ರದ ಹೈಲೈಟ್ ಗಳಲ್ಲಿ ಅಲ್ಟಿಮೇಟ್ ಶಿವು ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ ಸಂಯೋಜನೆ ಗಮನಸೆಳೆಯುತ್ತದೆ. ಹೊಸಬರಾದ ಕಿರಣ್ ಹಂಪಾಪುರ ಅವರ ಛಾಯಾಗ್ರಹಣ ಸಾಧಾರಣ. ಚಿತ್ರದಲ್ಲಿನ ಹೊಸ ಪ್ರತಿಭೆಗಳ ಆಟ ಲೆಕ್ಕಕ್ಕೆ ಸಿಗುವುದಿಲ್ಲ. ವೀರ್ ಸಮರ್ಥ್ ಅವರ ಸಂಗೀತದ ಝಲಕ್ ಇಲ್ಲಿ ಮಿಸ್ ಆಗಿದೆ.

ಸಾಧ್ಯವಾದರೆ ಒಮ್ಮೆ ನೋಡಿ

ಒಟ್ಟಾರೆಯಾಗಿ 'ಅದ್ವೈತ' ಕಥೆ ಕುತೂಹಲಭರಿತವಾಗಿದ್ದರೂ ನಿಧಾನಗತಿಯ ಓಟ, ಸಡಿಲ ನಿರೂಪಣೆ, ಅಗತ್ಯಕ್ಕಿಂತ ಹೆಚ್ಚಿನ ತಿರುವುಗಳು, ದಿಢೀರ್ ಎಂದು ನುಗ್ಗುವ ಹಾಡುಗಳಿಂದಾಗಿ ಪ್ರೇಕ್ಷಕರ ತಾಳ್ಮೆಯನ್ನು ಕೆದಕುತ್ತದೆ. ಉತ್ತಮ ಧ್ವನಿವ್ಯವಸ್ಥೆಯುಳ್ಳ ಯಾವುದಾದರೂ ಚಿತ್ರಮಂದಿರದಲ್ಲಿ ಸಾಧ್ಯವಾದರೆ ಒಮ್ಮೆ ನೋಡಿ.

English summary
Kannada movie Adwaitha review. The lack of a strong conflict is also quite damning. This film is certainly cute but nowhere close to memorable! Ajai Rao, Harshika Ponnaccha, Achyuth Kumar, Ninasam Ashwath, Kailash, Pavana, Vinod Kumbar are in cast.
Please Wait while comments are loading...