»   » 'ಅಧ್ಯಕ್ಷ' ವಿಮರ್ಶೆ: ಕಡ್ಡಾಯವಾಗಿ ನಗುವವರಿಗೆ ಮಾತ್ರ

'ಅಧ್ಯಕ್ಷ' ವಿಮರ್ಶೆ: ಕಡ್ಡಾಯವಾಗಿ ನಗುವವರಿಗೆ ಮಾತ್ರ

By: ಉದಯರವಿ
Subscribe to Filmibeat Kannada

ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಹಾಸ್ಯಪ್ರಧಾನ ಚಿತ್ರಗಳಿಗೆ ಭೀಕರ ಬರಗಾಲ ಬಂದಿತ್ತು. ಡಬಲ್ ಮೀನಿಂಗ್ ಡೈಲಾಗ್ ಗಳನ್ನೇ ಕಾಮಿಡಿ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಶರಣ್ ಅಭಿನಯದ 'ಅಧ್ಯಕ್ಷ' ಚಿತ್ರ ಹಾಸ್ಯದ ಸುನಾಮಿಯನ್ನೇ ಹರಿಸಿದೆ. ಹೊಟ್ಟೆ ತುಂಬ ನಗಲು, ಮನಸ್ಸು ಹಗುರ ಮಾಡಿಕೊಳ್ಳಲು ವೈದ್ಯರು ಬೇಕಿದ್ದರೆ ಈ ನಗೆಗುಳಿಗೆಯನ್ನು ಧಾರಾಳವಾಗಿ ಬರೆದುಕೊಡಬಹುದು!

'ವಿಕ್ಟರಿ' ಚಿತ್ರವನ್ನು ನಿರ್ದೇಶಿಸಿದ್ದ ನಂದಕಿಶೋರ್ ಅವರು ಇದು ರೀಮೇಕ್ ಚಿತ್ರವಾದರೂ ತಮ್ಮದೇ ಶೈಲಿಯಲ್ಲಿ ಚಿತ್ರವನ್ನು ತೆರೆಗೆ ತಂದಿದ್ದಾರೆ. 'ಅಧ್ಯಕ್ಷ'ರ ಸ್ಥಾನಕ್ಕೆ ಶರಣ್ ಅವರು ತಮ್ಮ ಸಂಪೂರ್ಣ ಶಕ್ತಿ ಸಾಮರ್ಥ್ಯಗಳನ್ನು ವ್ಯಯಿಸಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಶರಣ್ ಕಾಮಿಡಿ ಜೊತೆಗೆ ರವಿಶಂಕರ್, ಚಿಕ್ಕಣ್ಣ ಅವರ ಕಾಮಿಡಿಗೆ ಪ್ರೇಕ್ಷಕರು ಬಿದ್ದು ಬಿದ್ದು ನಗುತ್ತಾರೆ. ಒಟ್ಟಾರೆಯಾಗಿ ಇದೊಂದು ಅಪ್ಪಟ ಮನರಂಜನಾತ್ಮಕ ಸರಕು ಎಂಬುದರಲ್ಲಿ ಎರಡನೇ ಮಾತಿಲ್ಲ. ಮನರಂಜನೆ ನಿರೀಕ್ಷಿಸಿ ಹೋಗುವ ಪ್ರೇಕ್ಷಕರಿಗೆ ಖಂಡಿತ ನಿರಾಸೆಯಾಗಲ್ಲ.

Rating:
4.0/5

ಚಿತ್ರ: ಅಧ್ಯಕ್ಷ
ನಿರ್ಮಾಪಕರು: ಬಿ.ಕೆ ಗಂಗಾಧರ್ ಮತ್ತು ಬಿ.ಬಸವರಾಜು
ನಿರ್ದೇಶನ: ನಂದಕಿಶೋರ್
ಸಂಗೀತ: ಅರ್ಜುನ್ ಜನ್ಯ
ಛಾಯಾಗ್ರಹಣ: ಸುಧಾಕರ್ ಎಸ್ ರಾಜ್
ಸಂಕಲನ: ಕೆ.ಎಂ.ಪ್ರಕಾಶ್
ಸಂಭಾಷಣೆ: ಪ್ರಶಾಂತ್ ರಾಜಪ್ಪ
ಪಾತ್ರವರ್ಗ: ಶರಣ್, ಹೇಬಾ ಪಾಟೀಲ್, ಅಸ್ಮಿತಾ ಸೂದ್, ರವಿಶಂಕರ್, ಚಿಕ್ಕಣ್ಣ, ರಮೇಶ್ ಭಟ್, ವೀಣಾ ಸುಂದರ್, ಸತ್ಯಜಿತ್, ಮಿತ್ರ ಮುಂತಾದವರು.

ಚಿಂತೆ ಇಲ್ಲದ ತುಂಡ್ ಹೈಕ್ಳು ಸಂಘದ ಅಧ್ಯಕ್ಷರು

ಆರಂಭದಿಂದ ಅಂತ್ಯದವರೆಗೂ ಒಂದೇ ಸಮ ಮಾತು ಮಾತು ಮಾತು. ಈ ಮಾತಿನ ಸಿಂಚನದಲ್ಲಿ ನಗೆ ಬುಗ್ಗೆಗಳು ಉಕ್ಕಿ ಪ್ರೇಕ್ಷಕರನ್ನು ಪಕಪಕ ನಗಿಸುತ್ತವೆ. ಊರಿನ ಮುಖಂಡ ಶಿವರುದ್ರೇಗೌಡ (ರವಿಶಂಕರ್) ಹೆಸರು ಕೇಳಿದರೆ ಗೆಜ್ಜೆಪುರದ ಜನಕ್ಕೆ ಭಯ ಭಕ್ತಿ. ಇಂತಹ ಊರಿನಲ್ಲಿ ಕೆಲವು ಯುವಕರು ಚಿ.ತು (ಚಿಂತೆ ಇಲ್ಲದ ತುಂಡ್ ಹೈಕ್ಳು) ಎಂಬ ಸಂಘ ಕಟ್ಟಿರುತ್ತಾರೆ.

ಕಲ್ಯಾಣಿ ಟೀಚರ್ ಹಿಂದೆ ಬೀಳುವ ಅಧ್ಯಕ್ಷ

ಆ ಚಿ.ತು ಸಂಘಕ್ಕೆ ಅಧ್ಯಕ್ಷ ಚಂದ್ರಶೇಖರ ಗೌಡ (ಶರಣ್) ಆದರೆ ಉಪಾಧ್ಯಕ್ಷ ನಾರಾಯಣ ಗೌಡ (ಚಿಕ್ಕಣ್ಣ). ಆ ಊರಿನ ಟೀಚರ್ ಕಲ್ಯಾಣಿಯನ್ನು (ಅಸ್ಮಿತಾ ಸೂದ್) ಪ್ರೀತಿಸುವ ಅಧ್ಯಕ್ಷ ಲವ್ ಲೆಟರ್ ಕೊಡೋಕೆ ಮಾತ್ರ ಗೌಡರ ಮಗಳು ಐಶ್ವರ್ಯಾಳನ್ನು (ಹೇಬಾ ಪಾಟೀಲ್) ಬಳಸಿಕೊಳ್ಳುತ್ತಾನೆ.

ಯೂ ಟರ್ನ್ ತೆಗೆದುಕೊಳ್ಳುವ ಅಧ್ಯಕ್ಷರ ಲವ್

ಆದರೆ ಕಲ್ಯಾಣಿ ಮೇಡಂ ನಾಪತ್ತೆಯಾಗಿ ಬಿಡುತ್ತಾರೆ. ಇತ್ತ ಅಧ್ಯಕ್ಷರ ಪ್ರೇಮವೂ ಯೂಟರ್ನ್ ತೆಗೆದುಕೊಂಡು ಗೌಡರ ಮಗಳು ಐಶ್ವರ್ಯಾ ಮೇಲೆ ಬೀಳುತ್ತದೆ. ಐಶ್ವರ್ಯಾಗೂ ಅಷ್ಟೇ ಅಧ್ಯಕ್ಷರ ಮೇಲೆ ಲವ್ ಆಗುತ್ತದೆ. ಇವರಿಬ್ಬರ ಪ್ರೇಮಾಯಣ ಗೌಡರ ಕಿವಿಗೂ ಬಿದ್ದು ಹಾವು ತುಳಿದಂತಾಗುತ್ತಾನೆ ಶಿವರುದ್ರೇಗೌಡ.

ಹಳೆ ಕಥೆಯಾದರೂ ನಿರೂಪಣೆಯಲ್ಲಿ ಹೊಸತನ

ಕಡೆಗೆ ಅಧ್ಯಕ್ಷರಿಗೆ ಐಶ್ವರ್ಯಾ ಸಿಗುತ್ತಾಳಾ? ಶಿವರುದ್ರೇಗೌಡ ಕೋಪ ತಣ್ಣಗಾಗುತ್ತದಾ? ಕಲ್ಯಾಣಿ ಮೇಡಂ ಏನಾದರು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನೀವು ಚಿತ್ರವನ್ನು ನೋಡಲೇಬೇಕು. ಹಳೆ ಕಥೆಯಾದರೂ ನಿರೂಪಣೆಯಲ್ಲಿ ಹೊಸತನ ಇರುವ ಕಾರಣ ಪ್ರೇಕ್ಷಕರಿಗೆ ಎಲ್ಲೂ ಬೋರಾಗುವುದಿಲ್ಲ.

ಸ್ಲಿಮ್ ಅಂಡ್ ಹ್ಯಾಂಡ್ ಸಮ್ ಶರಣ್

ತಮ್ಮ ಪಾತ್ರಕ್ಕೆ ತಕ್ಕಂತೆ ಶರಣ್ ಅವರ ಗೆಟಪ್ ಸಹ ಬದಲಾಗಿದೆ. ಅವರು ದೇಹದ ತೂಕವನ್ನು ಇಳಿಸಿಕೊಂಡು ಸ್ಲಿಮ್ ಅಂಡ್ ಹ್ಯಾಂಡ್ ಸಮ್ ಆಗಿ ಕಾಣುತ್ತಾರೆ. ಚಿಕ್ಕಣ್ಣ ಅವರು ಶರಣ್ ಅವರಿಗೆ ಸಾಥ್ ನೀಡಿದ್ದು ಪ್ರೇಕ್ಷರಿಗೆ ಡಬಲ್ ಧಮಾಕಾ.

ಚಿತ್ರದ ಪ್ರಮುಖ ಆಕರ್ಷಣೆ ರವಿಶಂಕರ್

ರವಿಶಂಕರ್ ಅವರು ಶಿವರುದ್ರೇಗೌಡನಾಗಿ ಪ್ರಮುಖ ಆಕರ್ಷಣೆಯಾಗಿ ನಿಲ್ಲುತ್ತಾರೆ. ಇಲ್ಲಿ ಡೈಲಾಗ್ ಜೊತೆಗೆ ಡಾನ್ಸೂ ಮಾಡಿರುವ ಅವರು ಎಲ್ಲರ ಹುಬ್ಬೇರಿಸುತ್ತಾರೆ. ಗೌಡರ ಮಗಳಾಗಿ ಹೇಬಾ ಪಾಟೀಲ್ ಅವರ ಪಾತ್ರ ಶರಣ್ ಕಾಮಿಡಿ ಭರಾಟೆಯಲ್ಲಿ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ಪ್ರಶಾಂತ್ ರಾಜಪ್ಪ ಅವರ ಸಂಭಾಷಣೆಗೆ ತಲೆದೂಗಲೇಬೇಕು.

ಪಕ್ಕಾ ಮನರಂಜನಾತ್ಮಕ ಚಿತ್ರ

ಅರ್ಜುನ್ ಜನ್ಯ ಸಂಗೀತ ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್. ಸುಧಾಕರ್ ಅವರ ಕ್ಯಾಮೆರಾ ವರ್ಕ್ ಸಹ ಸೊಗಸಾಗಿದೆ. ಮಿತ್ರ, ಸತ್ಯಜಿತ್, ರವಿವರ್ಮ, ವೀಣಾ ಸುಂದರ್ ಅವರ ಪಾತ್ರಗಳು ಗಮನಾರ್ಹವಾಗಿವೆ. ಒಟ್ಟಾರೆಯಾಗಿ ಪಕ್ಕಾ ಮನರಂಜನಾತ್ಮಕ ಚಿತ್ರ ಇದಾಗಿದ್ದು ತಪ್ಪದೇ ನೋಡಿ ಆನಂದಿಸಿ.

English summary
Kannada movie Adyaksha (Also called Adhyaksha) review. Sharan is brilliant with his comic timing and sense of humour. Sure, he lacks a bit of charm in the romantic scene, but he makes it up with his talents as a comedian. Overall Enjoyable fun ride.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada