Don't Miss!
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿತ್ರ ವಿಮರ್ಶೆ: 'ಅಂಬರೀಶ' ಅಭಿಮಾನಿಗಳಿಗೆ ವಿಶೇಷ
ಬರೋಬ್ಬರಿ ಒಂದು ವರ್ಷದ ಬಳಿಕ ಅಭಿಮಾನಿಗಳ ಮುಂದೆ ದರ್ಶನ್ ಬಂದಿದ್ದಾರೆ. ಇಲ್ಲಿ ಚಿತ್ರದ ಶೀರ್ಷಿಕೆಯೇ ಪ್ರಮುಖ ಆಕರ್ಷಣೆ. 'ಅಂಬರೀಶ' ಎಂದರೆ ಯಾರು? ರೆಬಲ್ ಸ್ಟಾರ್ ಇರಬಹುದೇ? ಚಿತ್ರದಲ್ಲಿ ಅಂಬರೀಶ್ ಅವರೂ ಇರುವ ಕಾರಣ ಅವರ ಪಾತ್ರ ಏನಿರಬಹುದು ಎಂಬ ಕುತೂಹಲ ಸಹಜ.
ಈ ಕುತೂಹಲವನ್ನು ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕರಾದ ಕೆ ಮಹೇಶ್ ಸುಖಧರೆ ಅವರು ಬಹಳ ಹೊತ್ತು ಹಿಡಿದಿಡುವಲ್ಲಿ ಸಂಪೂರ್ಣ ಯಶಸ್ಸು ಸಾಧಿಸಿದ್ದಾರೆ. ಆದರೆ ಚಿತ್ರದಲ್ಲಿ ಅನಾವಶ್ಯಕ ಸಾಹಸ ದೃಶ್ಯಗಳನ್ನು ತುರುಕುವ ಮೂಲಕ ಕಥೆ ಚೂಯಿಂಗ್ ಗಮ್ ನಂತೆ ಭಾಸವಾಗುತ್ತದೆ.
ಚಿತ್ರದ ಮೊದಲರ್ಧ ಪ್ಯಾಸೆಂಜರ್ ರೈಲಿನಂತೆ ಓಡಿದರೆ, ದ್ವಿತೀಯಾರ್ಧ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಂತೆ ಸಾಗುತ್ತದೆ. ನಡುನಡುವೆ ಬರುವ ಹೊಡಿಬಡಿ ದೃಶ್ಯಗಳು ಚಿತ್ರದ ವೇಗಕ್ಕೆ ಬ್ರೇಕ್ ಹಾಕುತ್ತವೆ. ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಸಂಭಾಷಣೆ (ಚಿಂತನ್) ಹಾಗೂ ಅಂಬರೀಶ್ ಅವರ ಕೆಂಪೇಗೌಡ ಪಾತ್ರ.

ಅಂಬರೀಶ್ ಅವರು ನಾಡಪ್ರಭು ಕೆಂಪೇಗೌಡರಾಗಿ ಕಣ್ಮನ ಸೆಳೆಯುತ್ತಾರೆ. ಕೆಂಪೇಗೌಡರೇ ಸ್ವತಃ ಅಂಬಿಗೆ (ದರ್ಶನ್) ತಮ್ಮ ಕತ್ತಿಯನ್ನು ಕೊಡುವುದು, ಅದರಿಂದ ಅವರು ದುಷ್ಟರನ್ನು ಸಂಹರಿಸುವುದು ಎಲ್ಲವೂ ಅತಿಶಯೋಕ್ತಿ ಅನ್ನಿಸಿದರೂ ಅದಕ್ಕೆ ಒಂದು ತಾರ್ಕಿಕ ಆಯಾಮವನ್ನು ನೀಡುವಲ್ಲಿ ನಿರ್ದೇಶಕರು ಎಡವುತ್ತಾರೆ.
ಅಂಬರೀಶ್ ಅವರ ಪಾತ್ರ, ದರ್ಶನ್ ಅವರ ಹಿನ್ನೆಲೆ ಗೊತ್ತಾಗುತ್ತಿದ್ದಂತೆ ಮುಂದಿನ ಕಥೆ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಉಳಿಯುವುದಿಲ್ಲ. ಚಿತ್ರದ ಮೇಕಿಂಗ್ ನಲ್ಲಿ ನಿರ್ಮಾಪಕರು ರಾಜಿಯಾಗಿಲ್ಲದಿರುವುದು ಇನ್ನೊಂದು ಗಮನಾರ್ಹ ಸಂಗತಿ. ಸಾಹಸ ಸನ್ನಿವೇಶಗಳು ಸಾಕಷ್ಟು ಸಮಯವನ್ನು ಕಬಳಿಸುತ್ತವೆ. ರವಿವರ್ಮಾ ಅವರ ಸಾಹಸ ಸಂಯೋಜನೆಯಲ್ಲಿ ಯಾವುದೇ ವಿಶೇಷತೆ ಇಲ್ಲ.
ಅಂಬಿಯಾಗಿ, ಕೆಂಪೇಗೌಡನಾಗಿ ದರ್ಶನ್ ಅವರದು ಎರಡು ಶೇಡ್ ಗಳುಳ್ಳ ಪಾತ್ರ. ಅಂಬಿ ಸೌಮ್ಯ ಸ್ವಭಾವದ ಕೂಲಿಯಾಗಿ ಕಾಣಿಸಿದರೆ, ಕೆಂಪೇಗೌಡನಾಗಿ ಕತ್ತಿ ಹಿಡಿದು ದುಷ್ಟರನ್ನು ಸದೆಬಡಿಯುತ್ತಾನೆ. "ನಾನು ಕರಣಿ ಹಿಡಿದರೆ ಬುನಾದಿ, ಕತ್ತಿ ಹಿಡಿದರೆ ಸಮಾಧಿ" ಎಂಬ ಡೈಲಾಗ್ ಕೊನೆಯತನಕ ರಿಪೀಟ್ ಆಗುತ್ತಿರುತ್ತದೆ.
"ಈ ಕ್ಲಾಶ್ ಹತ್ರ ಇಟ್ಟುಕೊಂಡ್ರೆ ಸ್ಮಾಶ್" ಎನ್ನುತ್ತಾರೆ ಪ್ರಿಯಾಮಣಿ. "ಭೂಮಿ ಮನುಷ್ಯನ ಸ್ವತ್ತು ಅಲ್ಲ, ಮನುಷ್ಯ ಭೂಮಿಯ ಸ್ವತ್ತು", "ಮನುಷ್ಯ ದುಡ್ಡನ್ನು ಸಂಪಾದನೆ ಮಾಡಬೇಕೆ ಹೊರತು, ದುಡ್ಡಿಂದ ಮನುಷ್ಯನನ್ನು ಸಂಪಾದಿಸಬಾರದು", ಹಿಸ್ಟರಿ ಕ್ರಿಯೇಟ್ ಮಾಡೋದಲ್ಲ ರಿಪೀಟ್ ಆಗೋದು". ಈ ರೀತಿಯ ಸಾಕಷ್ಟು ಡೈಲಾಗ್ ಗಳು ಗಮನಸೆಳೆಯುತ್ತವೆ.
ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಹೆಚ್ಚಾಗಿ ಮಿಂಚಿರುವುದು ಮಾತ್ರ ಪ್ರಿಯಾಮಣಿ. ಸ್ಮಿತಾ ಪಾತ್ರದಲ್ಲಿ ಪ್ರಿಯಾಮಣಿ ಅವರು ದರ್ಪದ ಹೆಣ್ಣಾಗಿ ಗಮನಾರ್ಹ ಅಭಿನಯ ನೀಡಿದ್ದಾರೆ. ಪ್ರಿಯಾಮಣಿ ಪಾತ್ರದ ಮುಂದೆ ರಚಿತಾ ರಾಮ್ ಅವರ ಹಳ್ಳಿ ಹುಡುಗಿ ಪಾತ್ರ (ಕರುಣಾ) ಸೊರಗಿದೆ ಎಂದೇ ಹೇಳಬೇಕು.
ಇನ್ನು ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಹೇಳಿಕೊಳ್ಳುವಂತಹ ವಿಶೇಷವೇನು ಇಲ್ಲ. ಸತ್ಯ ಅವರ ಛಾಯಾಗ್ರಹಣ ಓಕೆ. ಸಾಧು ಕೋಕಿಲ, ಬುಲೆಟ್ ಪ್ರಕಾಶ್ ಅವರ ಕಾಮಿಡಿ ಹೊಟ್ಟೆ ಹುಣ್ಣಾಗುವಷ್ಟು ಅಲ್ಲದಿದ್ದರೂ ಲೈಟಾಗಿ ಕಚಗುಳಿಯನ್ನಂತೂ ಇಡುತ್ತದೆ.
ಸುಖಧರೆ ಅವರು ಒಂದಷ್ಟು ಧಾರ್ಮಿಕ, ಇನ್ನೊಂದಿಷ್ಟು ಐತಿಹಾಸಿಕ ಜೊತೆಗೆ ಸಾಮಾಜಿಕ ಹಾಗೂ ರಾಜಕೀಯ ಅಂಶಗಳನ್ನಿಟ್ಟುಕೊಂಡು ಸಿಹಿಕಹಿ ಚಿತ್ರವನ್ನು ಕೊಟ್ಟಿದ್ದಾರೆ. ಅಭಿಮಾನಿಗಳು ಕಹಿ ಮರೆತರೆ ಸಿಹಿಯನ್ನು ಸವಿಯಬಹುದು.