»   » ವಿಮರ್ಶೆ: ಒಂದು ಬಾರಿ ನೋಡಲಡ್ಡಿಯಿಲ್ಲ ಮಾರಾಯ್ರೆ 'ಬೆತ್ತನಗೆರೆ'

ವಿಮರ್ಶೆ: ಒಂದು ಬಾರಿ ನೋಡಲಡ್ಡಿಯಿಲ್ಲ ಮಾರಾಯ್ರೆ 'ಬೆತ್ತನಗೆರೆ'

Posted By:
Subscribe to Filmibeat Kannada

ನೆಲಮಂಗಲದ ರೌಡಿಶೀಟರ್ 'ಬೆತ್ತನಗೆರೆ' ಸೀನನಿಗೆ ಸಂಬಂಧಿಸಿದ ನಿಜ ಕಥೆಯಾಧರಿತ 'ಬೆತ್ತನಗೆರೆ' 'ಎ ರಾ ಸ್ಟೋರಿ' ನೋಡಲು ಕುತೂಹಲದಿಂದ ಥಿಯೇಟರ್ ಗೆ ಕಾಲಿಡುವ ಪ್ರೇಕ್ಷಕರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ.

ತಪ್ಪಿಸಿಕೊಂಡಿರುವ ಆರೋಪಿಯ, ಹುಡುಕಾಟದಲ್ಲಿರುವ ಪೊಲೀಸರಿಂದ ಕಥೆ ಆರಂಭ ಪಡೆದುಕೊಳ್ಳುತ್ತದೆ. ಸಿನಿಮಾವನ್ನು ಸರಿಯಾಗಿ ನೋಡಿ ಹೇಳಬೇಕೆಂದರೆ, ಹಾಗೂ ಇದುವರೆಗೆ ಬಂದಿರುವ ಎಲ್ಲಾ ರೌಡಿಸಂ ಕಥೆಗಳಿಗೆ ಹೋಲಿಕೆ ಮಾಡಿದರೆ 'ಬೆತ್ತನಗೆರೆ' ಹತ್ತರಲ್ಲಿ, ಹನ್ನೊಂದು ಅಂತಾನೇ ಹೇಳಬಹದು.

ಅಂತಹ ವಿಶೇಷತೆ ಏನು ಇಲ್ಲದ ನಿಜ ಜೀವನಚರಿತ್ರೆಯಾಧರಿತ ಕಥೆಯಲ್ಲಿ ಬರೀ ಮಚ್ಚು, ಲಾಂಗು ಪಿಸ್ತೂಲ್ ಗಳ ರಾಜ್ಯಭಾರ ನಡೆದಿದೆ. ಒಟ್ನಲ್ಲಿ ಹಾಯಾಗಿ ರೋಮ್ಯಾಂಟಿಕ್ ಸೀನ್ ಗಳಲ್ಲಿ ಡ್ಯುಯೆಟ್ ಸಾಂಗ್ ಹಾಡಬೇಕಿದ್ದ ಹುಡುಗರ ಕೈಯಲ್ಲಿ ಲಾಂಗು-ಮಚ್ಚು ಕೊಡಿಸಿದ್ದಾರೆ ಚೊಚ್ಚಲ ನಿರ್ದೇಶಕರು.[ಅಕ್ಟೋಬರ್ 30ಕ್ಕೆ ರಕ್ತಸಿಕ್ತ 'ಬೆತ್ತನಗೆರೆ' ತೆರೆ ಮೇಲೆ]

'ಬೆತ್ತನಗೆರೆ' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸುತ್ತಾ ಹೋಗಿ......

Rating:
3.0/5

ಚಿತ್ರ - 'ಬೆತ್ತನಗೆರೆ'
ನಿರ್ಮಾಣ - ಬಿ.ಎನ್ ಸ್ವಾಮಿ
ಕಥೆ-ಚಿತ್ರಕಥೆ-ನಿರ್ದೇಶನ - ಮೋಹನ್ ಗೌಡ ಬೆತ್ತನಗೆರೆ
ಸಂಗೀತ ನಿರ್ದೇಶನ - ರಾಜೇಶ್ ರಾಮನಾಥ್
ಛಾಯಾಗ್ರಹಣ - ಹೆಚ್.ಸಿ ವೇಣು
ಸಂಕಲನ - ಜೋ.ನಿ.ಹರ್ಷ
ತಾರಾಗಣ - ಸುಮಂತ್ ಶೈಲೇಂದ್ರ, ಅಕ್ಷಯ್, ನೈನಾ, ಶಶಿಕುಮಾರ್, ಅವಿನಾಶ್, ಶೋಭರಾಜ್, ಅಚ್ಯುತ್ ಕುಮಾರ್, ವಿನೋದ್ ಕಾಂಬ್ಳಿ, ಜೈ ಜಗದೀಶ್, ವೀಣಾ ಸುಂದರ್ ಮುನಿ, ಮತ್ತು ಇತರರು.
ಬಿಡುಗಡೆ - ಅಕ್ಟೋಬರ್ 30, 2015

'ಬೆತ್ತನಗೆರೆ' ಶಿವ (ಸುಮಂತ್ ಶೈಲೇಂದ್ರ) ನಿಂದ ಕಥೆ ಆರಂಭ

ಎಮ್ ಎಲ್ ಎ ರಾಜಪ್ಪ (ಶೋಭರಾಜ್) ನನ್ನು ಕೊಲೆ ಮಾಡಿ ತಲೆಮರೆಸಿಕೊಂಡು ಭೂಗತವಾಗಿರುವ ಶಿವನನ್ನು ಪೊಲೀಸರು ಹುಡುಕಾಡುತ್ತಿರುವ ಸಂದರ್ಭದಲ್ಲಿ ತಪ್ಪಿಸಿಕೊಂಡಿರುವ ಶಿವ ಪೊಲೀಸರ ಕೈಗೆ ಸಿಕ್ಕಿ ತನ್ನ ಇಂಟ್ರೆಸ್ಟಿಂಗ್ ಕಹಾನಿಯನ್ನು ಹೇಳುತ್ತಾ ಫ್ಲ್ಯಾಶ್ ಬ್ಯಾಕ್ ಗೆ ಹೋಗುತ್ತಾನೆ.

ರಾಜಕೀಯ ನಾಯಕರಿಂದ ರೌಡಿಸಂ ಪಟ್ಟ ಹೊರುವ ಶಿವ

ತನ್ನ ಪ್ರೀತಿಯ ತಮ್ಮ ಶೇಕ್ರ (ಅಕ್ಷಯ್) ನ ಜೊತೆ ಇಟ್ಟಿಗೆ ಮಾಡುತ್ತ ತಮ್ಮ ಅಪ್ಪ (ಜೈಜಗದೀಶ್) ಅಮ್ಮ (ವೀಣಾ ಸುಂದರ್) ನ ಜೊತೆ ಸಂತೋಷದಿಂದ ಜೀವನ ನಡೆಸುತ್ತಿರುವ ಶಿವ-ಶಂಕ್ರರಿಗೆ ರಾಜಕೀಯ ನಾಯಕ ರಾಜಪ್ಪನೊಂದಿಗೆ ಒಳ್ಳೆಯ ಗೆಳೆತನ ಇರುತ್ತದೆ.

ಚೇರ್ ಮನ್ ಪಾತ್ರದಲ್ಲಿ ಅವಿನಾಶ್

ಊರಿನ ಚೇರ್ ಮನ್ ಆಗಿರುವ ಅವಿನಾಶ್ 'ಬೆತ್ತನಗೆರೆ' ಎಂಬ ಸಣ್ಣ ಹಳ್ಳಿಯ ಜನರಿಗೆ ಯಾವುದೇ ಸೌಲಭ್ಯ ನೀಡದೇ ಸರ್ಕಾರದ ಎಲ್ಲಾ ಹಣವನ್ನು ನುಂಗಿ ನೀರು ಕುಡಿದಿರ್ತಾನೆ. ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಜನ ನಾವು ಶಿವನನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುತ್ತೇವೆ ಎಂದು ಶಪಥ ತೊಡುತ್ತಾರೆ.

ಶಿವ v/s ಚೇರ್ ಮನ್ ಅವಿನಾಶ್

ಓಪನ್ ಚಾಲೆಂಜ್ ಹಾಕುವ ಶಿವ ಚುನಾವಣೆಯಲ್ಲಿ ಅವಿನಾಶ್ ನನ್ನು ಸೋಲಿಸಿ ತಾನು ಚೇರ್ ಮನ್ ಪಟ್ಟಕ್ಕೆ ಏರುತ್ತಾನೆ. ಈ ಸಂದರ್ಭದಲ್ಲಿ ವರ್ಷಗಳಿಂದ ನಿಂತು ಹೋಗಿದ್ದ ಊರಿನ ಜಾತ್ರೆಯನ್ನು ಶಿವ ಮತ್ತೆ ನಡೆಸಿ ಚೇರ್ ಮನ್ ಕೆಂಗಣ್ಣಿಗೆ ಗುರಿಯಾಗುತ್ತಾನೆ.

ರಾಜಕೀಯ ನಾಯಕರ ನಡುವೆ ನಲುಗುವ ಶಿವ

ಇತ್ತ ಶಿವ ಚೇರ್ ಮನ್ ಪಟ್ಟ ಗಳಿಸಿಕೊಂಡ ಸಂದರ್ಭ ವನ್ನು ಸಹಿಸಿಕೊಳ್ಳದ ರಾಜಪ್ಪ ಶಿವನಿಗೆ ಎದುರಾಗಿ ನಿಲ್ಲುತ್ತಾನೆ. ಈ ನಡುವೆ ಸಣ್ಣ ಜಗಳದಿಂದ, ಶಂಕ್ರನ ಕೈಯಲ್ಲಿ ಅವಿನಾಶ್ ಕಡೆಯವನೊಬ್ಬ ಕೊಲೆಯಾಗುತ್ತಾನೆ. ಇದೇ ಸಂದರ್ಭಕ್ಕೆ ಕಾಯುತ್ತಿದ್ದ ಅವಿನಾಶ್ ಅಣ್ಣ-ತಮ್ಮ ಇಬ್ಬರನ್ನು ಕೊಲೆ ಕೇಸ್ ನಲ್ಲಿ ಫಿಟ್ ಮಾಡ್ತಾನೆ.

ಶಂಕ್ರ ಸರೆಂಡರ್-ಶಿವ ತಲೆಮರೆಸಿಕೊಳ್ಳುತ್ತಾನೆ

ಅಣ್ಣ-ತಮ್ಮಂದಿರಿಬ್ಬರ ಆತ್ಮೀಯ ಗೆಳೆಯ ಮೋಹಿತ್ (ಮುನಿ) ಮಾತು ಕೇಳಿ ಶಂಕ್ರ ಸರೆಂಡರ್ ಆದರೆ, ಶಿವ ತಲೆಮರೆಸಿಕೊಂಡು ಲ್ಯಾಂಡ್ ಡೀಲ್ ಅನ್ನೋ ಹೊಸ ಪ್ರಪಂಚಕ್ಕೆ ಎಂಟ್ರಿ ಪಡೆದುಕೊಂಡು ಹಣದ ಹಿಂದೆ ಹುಚ್ಚುಕುದುರೆಯಂತೆ ಓಡುತ್ತಾನೆ.

ದೊಡ್ಡ ಲ್ಯಾಂಡ್ ಡೀಲರ್ ಆಗುವ ಶಿವ

ಗೆಳೆಯ ಮೋಹಿತ್ ಹಾಗೂ ಇನ್ನೊಬ್ಬ ರಾಜಕೀಯ ನಾಯಕ ರೆಡ್ಡಿ (ಅಚ್ಯುತ್ ಕುಮಾರ್) ಅವರೊಂದಿಗೆ ಸೇರಿಕೊಂಡು ಶಿವ ದೊಡ್ಡ ಲ್ಯಾಂಡ್ ಡೀಲರ್ ಆಗಿ ಹಣದ ಹೊಳೆಯಲ್ಲಿ ಹರಿದಾಡುತ್ತಿರುತ್ತಾನೆ. ಇದನ್ನು ಸಹಿಸಿಕೊಳ್ಳದ ಚೇರ್ ಮನ್ ಮತ್ತೆ ಪ್ಲಾನ್ ಮಾಡಿ ಪ್ರೀತಿಯ ತಮ್ಮ ಶಂಕ್ರನಿಗೆ ಬೇಲ್ ಸಿಗದಂತೆ ಮಾಡಿ ಶಿವನ ತಂದೆ-ತಾಯಂದಿರಿಗೂ ಹಿಂಸೆ ಮಾಡುತ್ತಾನೆ. ಇದನ್ನು ನೋಡಿ ಬೇಸತ್ತ ಶಿವ ಸರೆಂಡರ್ ಆಗ್ತಾನೆ, ಶಂಕ್ರ ಹೊರಬರುತ್ತಾನೆ.

ಜೈಲ್ ನಲ್ಲಿ ಶಿವನಿಗೆ ಸಿಗುವ ಜಂಗ್ಲಿ (ವಿನೋದ್ ಕಾಂಬ್ಳಿ)

ಖ್ಯಾತ ಕ್ರಿಕೆಟಿಗ ವಿನೋದ್ ಕಾಂಬ್ಳಿ, (ಜಂಗ್ಲಿ) (ಅಂದರೆ ಪಾರಿವಾಳ) ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಅತ್ತ ಸಹಾಯನೂ ಮಾಡುತ್ತಾ ಇತ್ತ ಶಿವನನ್ನು ಕೊಲ್ಲಲು ಸಂಚು ಹೂಡುತ್ತ, ಊಸರವಳ್ಳಿಯಂತೆ ಆಡುವ ಜಂಗ್ಲಿ, ಶಿವನಿಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಾನೆ.

ಶಂಕ್ರ ಹೊರಗೆ-ಶಿವ ಒಳಗೆ

ಶಂಕ್ರ ಹೊರಬಂದ ತಕ್ಷಣ ಅಣ್ಣನ ಧಂದೆಯನ್ನು ಮೋಹಿತ್ ಜೊತೆ ಸೇರಿ ಮುಂದುವರಿಸುತ್ತಾನೆ. ತದನಂತರ ಶಿವನಿಗೂ, ಶಂಕ್ರನಿಗೂ ಅದ್ಹೇಗೆ ಜಗಳ ಬರುತ್ತೆ, ರಾಜಪ್ಪ ಹಾಗೂ ಚೇರ್ ಮನ್ ಏನಾದ್ರೂ, ಮೋಹಿತ್, ರೆಡ್ಡಿ ಗತಿ ಏನು, ಶಿವನ ಎನ್ ಕೌಂಟರ್ ಯಾಕಾಯಿತು, ಅಂತ ತಿಳಿಯಲು ನೀವು ಖುದ್ದು ಒಮ್ಮೆ ಥಿಯೇಟರ್ ಗೆ ಭೇಟಿ ಕೊಡಿ.

ಶಿವ (ಸುಮಂತ್) ನಟನೆ ಹೇಗಿದೆ?

ಸದಾ ಲವರ್ ಬಾಯ್ ಆಗಿದ್ದ ಸುಮಂತ್ ಕೊಂಚ ಡಿಫರೆಂಟ್ ಆಗಿ ಕಾಣಿಸಿಕೊಂಡರು, ಕೂಡ ಖಡಕ್ ಡೈಲಾಗ್ ಡೆಲಿವರಿ ಮಾಡಲು ತಡಕಾಡುತ್ತಿದ್ದರು. ಅಷ್ಟರಮಟ್ಟಿಗೆ ಕಷ್ಟ ಪಟ್ಟಿರುವುದು ನೋಡಿದರೆ ಪ್ರೇಕ್ಷಕರಿಗೆ ಅನಿಸುವುದೇನೆಂದರೆ, ಇವರಿಗೆ ಈ ರೋಲ್ ಬೇಕಿತ್ತಾ?.

ಶಂಕ್ರ (ಅಕ್ಷಯ್) ನಟನೆ

ಸಿಲ್ಕ್ ನಲ್ಲಿ ತಮ್ಮ ಬಾಡಿ ಪ್ರದರ್ಶನ ಮಾಡಿದ ನಟ ಅಕ್ಷಯ್ ಅವರು ಫೈಟ್ ಏನೋ ಸಖತ್ ಆಗಿ ಮಾಡಿದ್ರೂ ಕೂಡ ನಟನೆಯಲ್ಲಿ ಸೋತಿದ್ದಾರೆ. ದುಃಖ ಪಡುವ ಸಂದರ್ಭವಂತೂ ನಾಟಕೀಯವಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಮುಖದಲ್ಲಿ ಸಣ್ಣಗೆ ನಗು ತರಿಸುತ್ತದೆ.

ನಾಯಕಿ ನೈನಾ ಕಥೆ ಏನು?

ಚಿತ್ರದ ನಾಯಕಿ ನೈನಾ ಇದ್ದು ಇಲ್ಲದಂತಿದ್ದದ್ದು, ಮಾತ್ರ ವಿಪರ್ಯಾಸ. ಹೇಳಲೇಬೇಕೆಂದರೆ ಈ ಚಿತ್ರಕ್ಕೆ ನಾಯಕಿಯ ಅಗತ್ಯ ಇರಲಿಲ್ಲ. ಕೇವಲ ಒಂದು ಹಾಡಿನಲ್ಲಿ ಹಾಗೂ ಸಿನಿಮಾದ ಫಸ್ಟ್ ಹಾಫ್ ನಲ್ಲಿ ಬಿಟ್ಟರೆ ಸೆಕೆಂಡ್ ಹಾಫ್ ನಲ್ಲಿ ನಾಯಕಿಯ ಪತ್ತೇಯೇ ಇಲ್ಲ.

ಇನ್ನುಳಿದವರ ಕಥೆ?

ಇನ್ನುಳಿದ ಅವಿನಾಶ್, ಅಚ್ಯುತ್ ಕುಮಾರ್, ಎನ್ ಕೌಂಟರ್ ಸ್ಪೆಷಲಿಸ್ಟ್ ಶಶಿಕುಮಾರ್, ಶೋಭರಾಜ್, ಜೈಜಗದೀಶ್, ವೀಣಾ ಸುಂದರ್, ಮುನಿ, ಮುಂತಾದವರು ತಮ್ಮ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ. ಒಟ್ನಲ್ಲಿ ಕೊನೆ ತನಕ ಸ್ಕ್ರೀನ್ ಫುಲ್ ಉಳಿದುಬಿಡುವುದು ಶಿವ-ಶಂಕ್ರ ಇಬ್ಬರೇ. ಐಟಂ ಸಾಂಗ್ ನಲ್ಲಿ ರಮಣೀತು ಚೌಧರಿ ಸಖತ್ ಆಗಿ ಮಿಂಚಿದ್ದಾರೆ.

ಅದೇ ಹಳೇ ಕಥೆ-ಸೆಂಟಿಮೆಂಟ್ ಗೆ ಸ್ವಲ್ಪ ಜಾಗ

ಪೂರ್ತಿ ಚಿತ್ರ ನೋಡಿ ಹೊರಬಂದಾಗ ನಿಮಗನ್ನಿಸುವುದು ಅಯ್ಯೋ ಅದೇ ಹಳೇ ಕಥೆ ಬಿಡಿ. ಅಣ್ಣ-ತಮ್ಮ ಅನ್ನೋ ಸೆಂಟಿಮೆಂಟ್ ಸ್ವಲ್ಪ ಬಿಟ್ಟರೆ ಲವ್ ರೊಮ್ಯಾನ್ಸ್ ಗೆ ಸ್ವಲ್ಪಾನೂ ಜಾಗ ಇಲ್ಲ. ಶಿವ ಸರೆಂಡರ್ ಆಗೋದು ಇಂಟರ್ ವಲ್, ಆನಂತರ ಕಥೆ ಸ್ವಲ್ಪ ಟ್ವಿಸ್ಟ್ ಪಡೆದುಕೊಳ್ಳುತ್ತದೆ. ಆದರೆ ಕೊನೆ ತನಕ ನೆನಪಲ್ಲಿ ಉಳಿಯುವ ಪಾತ್ರ ಎಡಬಿಡಂಗಿ 'ಜಂಗ್ಲಿ'ದು.

ಸಂಗೀತ

ಚಿತ್ರದಲ್ಲಿ ಕೇವಲ ಮೂರೇ ಸಾಂಗ್ ಗಳು ಇದ್ದರೂ ಕೂಡ ನಿರ್ದೇಶಕರು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ಎಲ್ಲೂ ತುರುಕಿದಂತೆ ಕಂಡು ಬಂದಿಲ್ಲ. ಕವಿರಾಜ್ ಅವರ ಸಾಹಿತ್ಯ ಹಾಗೂ ರಾಜೇಶ್ ರಾಮನಾಥ್ ಮ್ಯೂಸಿಕ್ ಕಂಪೋಸಿಷನ್ ಒಳ್ಳೆ ಕಾಂಬಿನೇಷನ್ ಆಗಿದ್ದು, ಮ್ಯೂಸಿಕ್ ಸೂಪರ್ ಹಿಟ್, ಅನ್ನಲು ಅಡ್ಡಿ ಇಲ್ಲ.

ಒಟ್ಟಾರೆ 'ಬೆತ್ತನಗೆರೆ'

ಒಟ್ಟಾರೆ ಸಿನಿಮಾದಲ್ಲಿ ವೇಣು ಅವರ ಕ್ಯಾಮರ ವರ್ಕ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಮೇಕಿಂಗ್ ಕೂಡ ಇಷ್ಟವಾಗುತ್ತದೆ. ಸುಖಾ-ಸುಮ್ಮನೆ ಸೀನ್ ಗಳನ್ನು ಅಲ್ಲಲ್ಲಿ ತುರುಕದೇ ನಿರ್ದೇಶಕರು ತಮ್ಮ ಜಾಣ್ಮೆ ಮೆರೆದರೂ ಕೂಡ ಸ್ವಲ್ಪ ಮಟ್ಟಿಗೆ ಕನ್ ಫ್ಯೂಶನ್ ಆಗಿದ್ದಾರೆ ಅನ್ನೋದು ಸ್ಪಷ್ಟವಾಗುತ್ತದೆ. ಆದ್ರೂ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ನೀಟಾಗಿ ಸಿನಿಮಾ ಮಾಡಿರುವ ನಿರ್ದೇಶಕ ಮೋಹನ್ ಗೌಡ ಬೆತ್ತನಗೆರೆ ಅವರನ್ನು ಮೆಚ್ಚಬಹುದು.

ಕೊನೆಯ ಮಾತು!

ರೌಡಿ ಶೀಟರ್ ಸೀನನ ರಿಯಲ್ ಸ್ಟೋರಿಯನ್ನು ರೀಲ್ ಗೆ ಇಳಿಸಿದ್ದು, ಉತ್ತಮ ಪ್ರಯತ್ನ. ಕ್ಷಣ-ಕ್ಷಣಕ್ಕೂ ಏನಾಗಬಹುದು ಅನ್ನೋ ಕ್ಯೂರಿಯಾಸಿಟಿ ಹುಟ್ಟಿಸಿಲ್ಲ ಅಂದ್ರೂ, ಪ್ರೇಕ್ಷಕರಿಗೆ ನಿದ್ದೆ ತರಿಸುವ ಸ್ಟೇಜ್ ನಲ್ಲಂತೂ ಇಲ್ಲ. ಟೈಮಿದ್ರೆ ಈ ವೀಕೆಂಡ್ ನಲ್ಲಿ ಒಮ್ಮೆ ಥಿಯೇಟರ್ ಗೆ ಭೇಟಿ ನೀಡಿ. ಒಂದು ಬಾರಿ ನೋಡಬಹುದು.

English summary
Mohan Gowda Bettanagere directorial kannada movie 'Bettanagere' has it the screens today (October 30th). Read the movie review here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada