»   » ವಿಮರ್ಶಕರು 'ದೊಡ್ಮನೆ ಬಿರಿಯಾನಿ' ತಿಂದು ತೇಗಿದ್ರಾ ಏನ್ಕತೆ?

ವಿಮರ್ಶಕರು 'ದೊಡ್ಮನೆ ಬಿರಿಯಾನಿ' ತಿಂದು ತೇಗಿದ್ರಾ ಏನ್ಕತೆ?

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 25ನೇ ಸಿನಿಮಾ 'ದೊಡ್ಮನೆ ಹುಡ್ಗ' ಇಡೀ ಕರ್ನಾಟಕದಾದ್ಯಂತ ನಿನ್ನೆ (ಸೆಪ್ಟೆಂಬರ್ 30) ಬಿಗ್ ಓಪನಿಂಗ್ ಪಡೆದುಕೊಂಡಿದೆ. ದುನಿಯಾ ಸೂರಿ ಮತ್ತು ಪುನೀತ್ ರಾಜ್ ಕುಮಾರ್ ಅವರ ಹ್ಯಾಟ್ರಿಕ್ ಕಾಂಬಿನೇಷನ್ ಮತ್ತೊಮ್ಮೆ ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ರುಚಿಸಿದೆ.

ದಾನಶೂರ ಕರ್ಣ ರಾಜೀವ ಅಲಿಯಾಸ್ ಅಂಬರೀಶ್, ಹಸಿದವರ ಬಂಧು ಸೂರ್ಯ ಅಲಿಯಾಸ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇವರಿಬ್ಬರ ಫ್ಲ್ಯಾಶ್ ಬ್ಯಾಕ್ ಸಂಬಂಧ.[ವಿಮರ್ಶೆ: 'ದೊಡ್ಮನೆ' ಬಿರಿಯಾನಿ ರುಚಿ ಓಕೆ, 'ಪೀಸ್'ಗಳು ಕಮ್ಮಿ]


ಅದ್ಧೂರಿಯಾಗಿರುವ 'ದೊಡ್ಮನೆ ದರ್ಬಾರ್', ಒಟ್ನಲ್ಲಿ ಇಡೀ ಫ್ಯಾಮಿಲಿ ಕುಳಿತು ನೋಡಬಹುದಾದ 'ದೊಡ್ಮನೆ ಹುಡ್ಗ' ಚಿತ್ರಕ್ಕೆ ಎಲ್ಲಾ ಕಡೆಯಿಂದ ಬಹಳ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ.


ಇದೀಗ ಅದ್ಧೂರಿ ಚಿತ್ರಕ್ಕೆ ಖ್ಯಾತ ಕನ್ನಡ ವಿಮರ್ಶಕರು ಕೂಡ ಅಷ್ಟೇ ಅದ್ಧೂರಿಯಾಗಿ ವಿಮರ್ಶೆ ವ್ಯಕ್ತಪಡಿಸಿದ್ದಾರೆ. ಇನ್ನು ಅಭಿಮಾನಿಗಳಂತೂ ಸೂಪರ್-ಡೂಪರ್ ಹಿಟ್, ಬಾಕ್ಸಾಫೀಸ್ ಚಿಂದಿ ಅಂತೆಲ್ಲಾ ಹೊಗಳಿದ್ದಾರೆ.


ನಟಿ ರಾಧಿಕಾ ಪಂಡಿತ್, ಪುನೀತ್ ರಾಜ್ ಕುಮಾರ್, ಭಾರತಿ ವಿಷ್ಣುವರ್ಧನ್, ಅಂಬರೀಶ್, ಸುಮಲತಾ ಅಂಬರೀಶ್ ಮುಂತಾದವರು ಪ್ರಮುಖವಾಗಿ ಕಾಣಿಸಿಕೊಂಡಿರುವ 'ದೊಡ್ಮನೆ ಹುಡ್ಗ' ಚಿತ್ರಕ್ಕೆ ವಿಮರ್ಶಕರು ನೀಡಿರುವ ವಿಮರ್ಶೆಗಳ ಕಲೆಕ್ಷನ್ಸ್ ಇಲ್ಲಿದೆ, ಮುಂದೆ ಓದಿ....


'ಪುನೀತ್-ಅಂಬಿ ಜುಗಲ್ ಬಂದಿ' -ವಿಜಯ ಕರ್ನಾಟಕ

ಪಕ್ಕಾ ಕಮರ್ಷಿಯಲ್ ಆಗಿ ಜನರನ್ನು ಸೆಳೆಯುವಂತೆ ಮಾಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಹಲವು ತಿರುವುಗಳಿರುವ ಕತೆಯಲ್ಲಿ ಸಣ್ಣ ಸಸ್ಪೆನ್ಸ್ ಇದೆ. ಸರಳವಾದ ಕತೆಯ ಚಿತ್ರದಲ್ಲಿ ರಾಜೀವರಿಗೂ ಸೂರ್ಯನಿಗೂ ನಂಟು ಏನು? ದೊಡ್ಮನೆ ಹುಡ್ಗ ತನ್ನ ಮನೆಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ? ಅನ್ನೋದೇ ಕತೆ. ಚಿತ್ರದಲ್ಲಿ ಪುನೀತ್ ಮತ್ತು ಅಂಬರೀಶ್ ಇಬ್ಬರೂ ಹೀರೊಗಳೇ. ರಾಜೀವ ಪಾತ್ರದಲ್ಲಿ ಅಂಬಿ ಅವರ ವ್ಯಕ್ತಿ ಚಿತ್ರಣ ಮಾಡಲಾಗಿದೆ. ಪುನೀತ್ ದೊಡ್ಮನೆ ಹುಡುಗನಾಗಿ ಪೋಟ್ರೇಟ್ ಮಾಡಲಾಗಿದೆ. ಡೈಲಾಗ್‌ಗಳು ಅವರ ಸಾಮಾಜಿಕ ಬದುಕನ್ನು ನೆನಪಿಸುವಂತಿವೆ. ಇವರಿಬ್ಬರ ಇಮೇಜನ್ನೂ ಒಂದು ಕತೆಯಲ್ಲಿ ಹಣೆದಿರುವುದು ನಿರ್ದೇಶಕರ ಜಾಣತನವನ್ನು ತೋರುತ್ತದೆ. ಅಪ್ಪ ಮಗನ ನಡುವಿನ ಹಠ, ಬಿಗುಮಾನಗಳನ್ನು ಚೆನ್ನಾಗಿ ತೋರಿಸಿದ್ದಾರೆ. ಚಿತ್ರದಲ್ಲಿ ಪುನೀತ್ ಐರನ್ ಮ್ಯಾನ್. ಆಕ್ಷನ್ ಪ್ರಿಯರಿಗೂ ಅಜೀರ್ಣವಾಗುವಷ್ಟು ಫೈಟ್ಸ್ ಗಳಿವೆ. ಖಡಕ್ ಡೈಲಾಗ್ ಹೊಡೀತಾ ನಟನೆಯಲ್ಲಿ ಅಂಬಿ ಮತ್ತೊಮ್ಮೆ ಹೀರೊ ಆಗಿ ಗೆಲ್ಲುತ್ತಾರೆ. ಸಾಮಾನ್ಯವಾಗಿ ಕಮರ್ಷಿಯಲ್ ಚಿತ್ರಗಳಲ್ಲಿ ಇರುವಂಥ ದೃಶ್ಯಗಳೇ ಇದ್ದರೂ, ಕೆಲವು ಕಡೆ ಲಾಜಿಕ್ ಇಲ್ಲ ಅನ್ನಿಸಿದರೂ ಸ್ಕ್ರೀನ್ ಪ್ಲೇ ಇದನ್ನು ಮರೆಸುತ್ತದೆ. ಕುಟುಂಬದ ಭಾವನಾತ್ಮಕ ಸನ್ನಿವೇಶಗಳ ಜತೆಯಲ್ಲೇ ಆಕ್ಷನ್ ದೃಶ್ಯಗಳನ್ನೂ ಚೆನ್ನಾಗಿ ಬ್ಲೆಂಡ್ ಮಾಡಿದ್ದಾರೆ ಸೂರಿ. ರೇಟಿಂಗ್:3.5/5.-ಪದ್ಮಾ ಶಿವಮೊಗ್ಗ.[ಪುನೀತ್ ಅಪ್ಪಟ ಅಭಿಮಾನಿಯಿಂದ 'ದೊಡ್ಮನೆ ಹುಡ್ಗ' ಮೊದಲ ವಿಮರ್ಶೆ]


'ಸೂತ್ರ ಸಾಕಾರ' -ಪ್ರಜಾವಾಣಿ

ಜನಪ್ರಿಯತೆಯ ಅಲೆಮೇಲೆ ಇರುವ ಪುನೀತ್‌ ಅದರಿಂದ ಇಳಿಯಲು ಸಿದ್ಧರಿಲ್ಲ. ಆ ಕಾರಣಕ್ಕೇ ಈ ಸಿನಿಮಾದಲ್ಲಿ ‘ಅಭಿಮಾನಿ ದೇವರು'ಗಳಿಗೆ ಕಣ್ಣುಬಿಟ್ಟುಕೊಂಡು ನೋಡುವಂಥ ಹೊಡೆದಾಟಗಳಿವೆ. ಕ್ಲೀಷೆ ಎನ್ನಬಹುದಾದರೂ ನೋಡಿಸಿಕೊಳ್ಳುವ ನೃತ್ಯವೂ ಅಲ್ಲಲ್ಲಿ ಕಾಣುತ್ತದೆ. ಬೆಂಗಳೂರಿನ ಕನ್ನಡ ರೋಸಿಹೋಗಿದ್ದರೆ ಸವಿಯಲು ಹುಬ್ಬಳ್ಳಿ ಕನ್ನಡದ ಒಗ್ಗರಣೆ. ಖಳನ ತಂತ್ರ, ನಾಯಕನ ಕೆಚ್ಚೆದೆಯ ಮಂತ್ರ, ಕಪ್ಪು-ಬಿಳುಪು ದೃಶ್ಯಾವತರಣಿಕೆಗಳ ದರ್ಶನ, ಅಪರೂಪಕ್ಕೆ ಮಾತಿನ ಕಚಗುಳಿ, ಸೂತ್ರಬದ್ಧವಾಗಿ ಒತ್ತಿರುವ ‘ಪರಾಕು ಪಂಪು', ಊಹಿಸಬಹುದಾದರೂ ಅಲ್ಲಲ್ಲಿ ತಿರುವುಗಳು... ಇವಿಷ್ಟೂ ‘ದೊಡ್ಮನೆ ಹುಡ್ಗ'ದ ಸಾರ.-ವಿಶಾಖ ಎನ್.['ದೊಡ್ಮನೆ ದರ್ಬಾರ್' ಮೊದಲ ಶೋ ನೋಡಿದವರ ಟ್ವೀಟ್ ವಿಮರ್ಶೆ]


'ಅಭಿಮಾನಿಗಳಿಗೆ ಮನರಂಜನೆಯ ಮೃಷ್ಟಾನ್ನಾ'- ವಿಜಯವಾಣಿ

ಈ ಮೊದಲೇ ನಿರ್ದೇಶಕ ಸೂರಿ ಸ್ಪಷ್ಟವಾಗಿ ಹೇಳಿದ್ದರು, ‘ಇದು ನನ್ನ ಶೈಲಿಯ ಸಿನಿಮಾವಲ್ಲ'. ಹಾಗಾಗಿ, ಪ್ರೇಕ್ಷಕ ಅವರ ಹಿಂದಿನ ಸಿನಿಮಾಗಳ ಯಾವ ಛಾಯೆಯನ್ನೂ ಇಲ್ಲಿ ಹುಡುಕಕೂಡದು. ‘ದೊಡ್ಮನೆ ಹುಡ್ಗ', ಅಭಿಮಾನಿಗಳಿಗಾಗಿಯೇ ಮಾಡಿದ ಚಿತ್ರ. ಡಾನ್ಸ್, ಫೈಟ್ಸ್, ಪಂಚಿಂಗ್ ಡೈಲಾಗ್ಸ್ ಮೂಲಕ ಭರಪೂರ ಮನರಂಜನೆ ಒದಗಿಸಲಾಗಿದೆ. ಹಳೇ ಮೈಸೂರು ಹಿನ್ನೆಲೆಯ ‘ದೊಡ್ಮನೆ' ರಾಜೀವಪ್ಪನಿಗೆ (ಅಂಬರೀಷ್) ಬಡವರನ್ನು ಕಂಡರೆ ಕಾಳಜಿ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಷ್ಟು ಉದಾರಿ. ಹುಬ್ಬಳ್ಳಿಯ ರಸ್ತೆಬದಿಯಲ್ಲಿ ಬಿರಿಯಾನಿ ಮಾಡುವ ಸೂರ್ಯನದು (ಪುನೀತ್) ಥೇಟ್ ಅದೇ ಗುಣ. ಅಪ್ಪ-ಮಗನಾಗಿದ್ದರೂ ಇವರಿಬ್ಬರು ದೂರ-ದೂರ ಇರುವುದಕ್ಕೆ ಕಾರಣವಿದೆ. ಕಲಿಯುಗ ಕರ್ಣ ಎನಿಸಿಕೊಂಡ ರಾಜೀವಪ್ಪ ಎದುರಾಳಿಗಳ ಕುತಂತ್ರದಿಂದ ಜೈಲುಪಾಲಾಗುತ್ತಾನೆ. ಆತನನ್ನು ಜೈಲಿನಲ್ಲೇ ಮುಗಿಸುವುದಕ್ಕೆ ಸುಪಾರಿಯನ್ನು ಸ್ವತಃ ಸೂರ್ಯನಿಗೆ ನೀಡಲಾಗುತ್ತದೆ! ವಿರಾಮದ ವೇಳೆಗೆ ಇಂಥದ್ದೊಂದು ಟ್ವಿಸ್ಟ್ ನೀಡುತ್ತಾರೆ ಸೂರಿ. ತಂದೆಯ ಕೊಲೆಗೆ ಸೂರ್ಯ ಸುಪಾರಿ ಪಡೆದದ್ದು ಯಾಕೆ? ಅಪ್ಪ-ಮಗ ಒಂದಾಗುತ್ತಾರಾ? ದೊಡ್ಮನೆಯ ಹಿನ್ನೆಲೆಯೇನು? ಇಂತಹ ಪ್ರಶ್ನೆಗಳನ್ನಿಟ್ಟುಕೊಂಡು ಚಿತ್ರ ಸಾಗುತ್ತದೆ.


'ಮಿಂಚಿನ ಓಟ, ಪವರ್ ಫುಲ್ ಆಟ, ಅಭಿಮಾನಿ ದೇವ್ರು ಎಂದ ಸೂರಿ' -ಕನ್ನಡ ಪ್ರಭ

ಚಿತ್ರದ ಕತೆಯನ್ನು ಒಂದೇ ಹಿಡಿಯಲ್ಲಿ ಹೇಳಿ ಬಿಡುವುದು ಅಸಾಧ್ಯ. ಎಲ್ಲೋ ಶುರುವಾಗುವ ಕತೆ, ದಿಕ್ಕು ದೆಸೆ ಇಲ್ಲದಂತೆ ಇನ್ನೆಲ್ಲೋ ಸುತ್ತು ಹಾಕಿ ಕೊನೆಗೆ ದೊಡ್ಮನೆಗೆ ಬಂದು ನಿಲ್ಲುತ್ತದೆ. ಅಭಿಮಾನಿಗಳನ್ನೇ ಟಾರ್ಗೆಟ್ ಮಾಡಿದ ಪರಿಣಾಮ, ಕತೆ ದಿಕ್ಕು ತಪ್ಪಿದ್ದೂ ನಿರ್ದೇಶಕರಿಗೆ ಗೊತ್ತಾಗಿಲ್ಲ. ಆ ಮಟ್ಟಿಗೆ ಸಣ್ಣದೊಂದು ಆಕ್ಷೇಪ ಕತೆಯ ಬಗೆಗಿದೆ. ಅಪ್ಪ ತನ್ನನ್ನು ಪ್ರೀತಿಸುತ್ತಿಲ್ಲ ಎನ್ನುವ ಕೊರಗಿನಿಂದ ಮನೆ ಬಿಟ್ಟು ಬಂದ ಹುಡುಗ, ದೊಡ್ಡವನಾದ ನಂತರ ತನ್ನ ತಂದೆಯ ರಕ್ಷಣೆಗೆ ಹೋಗುವ ನೆಪದಲ್ಲಿ ಮತ್ತೆ ಮನೆ ಸೇರುವುದು, ಅಲ್ಲಿ ತಮ್ಮ ಮನೆತನ ಮುಗಿಸಲು ಸಂಚು ರೂಪಿಸಿದ ದುಷ್ಟ ಶಕ್ತಿಯನ್ನು ಸಂಹಾರ ಮಾಡುವ ಕತೆಗಳು ಹೊಸದೇನಲ್ಲ. ಆದರೂ ಹಳೆಯದನ್ನೇ ರೋಚಕವಾದ ಶೈಲಿಯಲ್ಲಿ ಹೇಳಿರುವ ಸೂರಿ ಪ್ರಯತ್ನ ಫಲಿಸಿದೆ. ರೇಟಿಂಗ್: 4/5. -ದೇಶಾದ್ರಿ ಹೊಸ್ಮನೆ.


'ದೊಡ್ಮನೆಯೊಳಗೆ ಸೂರಿ ಮಿಸ್ಸಿಂಗ್, ಪುನೀತ್ ಮಿಂಚಿಂಗ್' - ಉದಯವಾಣಿ

'ದೊಡ್ಮನೆ ಹುಡ್ಗ' ಚಿತ್ರ ನೋಡುತ್ತಾ ಹೋದಂತೆ ಕ್ರಮೇಣ ಗೊತ್ತಾಗುತ್ತದೆ. ಬಹುಶಃ ಮೊದಲರ್ಧ ಮುಗಿಯುವಷ್ಟರಲ್ಲೇ ಚಿತ್ರದ ಕಥೆ ಸ್ಪಷ್ಟವಾಗಿ ಗೊತ್ತಾಗಿಬಿಡುತ್ತದೆ ಎಂದರೂ ತಪ್ಪಿಲ್ಲ, ನೀವಂದುಕೊಂಡಂತೆ ಚಿತ್ರಕಥೆ ಇಲ್ಲದಿರಬಹುದು, ಆದರೆ, ಕಥೆಯ ಅಂತ್ಯ ಅದೇ, ಹಾಗೆ ನೋಡಿದರೆ, ಈ ತರಹದ ಚಿತ್ರಗಳಿಗೆ ಕಥೆ ಮಾಡುವುದಕ್ಕೆ ಹೆಚ್ಚು ಕಷ್ಟಪಡಬೇಕಿಲ್ಲ. ಏಕೆಂದರೆ 'ದೊಡ್ಮನೆ ಹುಡ್ಗ' ಎಂಬ ಹೆಸರೇ ಸಾಕು, ಕಥೆ ತನ್ನಿಂತಾನೇ ಹುಟ್ಟುತ್ತಾ, ಮುಂದುವರೆಯುತ್ತಾ ಹೋಗುತ್ತದೆ. ಇಲ್ಲಿ ಎರಡು ವಿಷಯ ಮುಖ್ಯ. ಒಂದು ದೊಡ್ಮನೆ, ಇನ್ನೊಂದು ಆ ಮನೆಯ ವಾರಸುದಾರ. ಒಂದು ಕಡೆ ದೊಡ್ಮನೆಯ ಲೆಗಸಿ, ಇನ್ನೊಂದು ಕಡೆ ಹುಡುಗನ ಪರಾಕ್ರಮ, ಇವೆರಡೂ ವಿಷಯಗಳನ್ನು ಇಟ್ಟುಕೊಂಡು, ಸೂರಿ ಕಥೆ ಹೆಣೆಯುತ್ತಾ ಹೋಗುತ್ತಾರೆ. -ಚೇತನ್ ನಾಡಿಗೇರ್.
English summary
Kannada Movie 'Dodmane Huduga' Critics review. Kannada Actor Puneeth Rajkumar, Kannada Actress Radhika Pandith, Actor Ambareesh starrer 'Dodmane Huduga' has received mixed response from the critics. Here is the collection of reviews by Top News Papers of Karnataka. The movie is directed by Duniya Soori.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada