twitter
    For Quick Alerts
    ALLOW NOTIFICATIONS  
    For Daily Alerts

    'ಗೂಳಿಹಟ್ಟಿ' ಮೇಲೆ ಗುಟುರು ಹಾಕಿರುವ ವಿಮರ್ಶಕರು

    By Harshitha
    |

    ಶಶಾಂಕ್ ರಾಜ್ ನಿರ್ದೇಶನದ 'ಗೂಳಿಹಟ್ಟಿ' ಚಿತ್ರ ಈ ವಾರ ತೆರೆಕಂಡಿದೆ. ಟೈಟಲ್ ಕೇಳಿದ ಕೂಡಲೆ ಮಾಸ್ ಫೀಲ್ ಬರುವ ಈ ಚಿತ್ರ ಮಾಸ್ ಪ್ರೇಕ್ಷಕರಿಗೆ ಹೇಳಿಮಾಡಿಸಿದಂತಿದೆ.

    ಹಳ್ಳಿಯಿಂದ ಪಟ್ಟಣಕ್ಕೆ ಬರುವ ಹುಡುಗರ ಕಥೆ ಇರುವ ಚಿತ್ರ ಇದು. ವರ್ಷದ ಹಿಂದೆ ಸೆಟ್ಟೇರಿದ್ದ 'ಗೂಳಿಹಟ್ಟಿ' ಚಿತ್ರದಲ್ಲಿ ಪವನ್ ಸೂರ್ಯ, ತೇಜಸ್ವಿನಿ ಮುಖ್ಯಭೂಮಿಕೆಯಲ್ಲಿದ್ದಾರೆ.

    ಹೊಸಬರ ಹೊಸ ಪ್ರಯತ್ನವಾಗಿರುವ 'ಗೂಳಿಹಟ್ಟಿ' ಚಿತ್ರದ ಬಗ್ಗೆ ವಿಮರ್ಶಕರು ಹೊಗಳಿರುವುದಕ್ಕಿಂತ ತೆಗಳಿರುವುದೇ ಹೆಚ್ಚು. 'ಗೂಳಿಹಟ್ಟಿ' ಬಗ್ಗೆ ಗುಟುರು ಹಾಕಿರುವ ವಿಮರ್ಶೆಗಳ ಗುಚ್ಛ ಇಲ್ಲಿದೆ ನೋಡಿ....

    ಮರಣ ಮೃದಂಗ - ಪ್ರಜಾವಾಣಿ

    ಮರಣ ಮೃದಂಗ - ಪ್ರಜಾವಾಣಿ

    ಸಿನಿಮಾದಲ್ಲಿ ಇರುವ ಪಾತ್ರಗಳೆಲ್ಲ ಸಾಲುಸಾಲಾಗಿ ಕೊನೆಯುಸಿರು ಎಳೆಯುತ್ತವೆ. ಒಂದೊಂದು ಸಾವು ಒಂದೊಂದು ಬಗೆಯಲ್ಲಿ! ದ್ವಿತೀಯಾರ್ಧದಿಂದ ಆರಂಭವಾಗುವ ಈ ‘ಮರಣ ಮೃದಂಗ' ಕೊನೆಯ ನಿಮಿಷದವರೆಗೂ ಸದ್ದು ಮಾಡುತ್ತಲೇ ಇರುತ್ತದೆ. ಒಬ್ಬೊಬ್ಬರ ಸಾವನ್ನೂ ಅಸಹಾಯಕತೆಯಿಂದ ನೋಡಬೇಕಾದ ಅನಿವಾರ್ಯತೆ ಪ್ರೇಕ್ಷಕನದು. ‘ಕೆಟ್ಟು ಪಟ್ಟಣ ಸೇರು' ಗಾದೆ ಮಾತನ್ನು ಉಲ್ಟಾ ಮಾಡಿದರೆ, ಅದು ‘ಗೂಳಿಹಟ್ಟಿ' ಸಿನಿಮಾಕ್ಕೆ ಸರಿಯಾಗಿ ಹೊಂದುತ್ತದೆ. ಗೂಳಿಯಂತೆ ಮೆರೆದಾಡುವ ಹೈಕ್ಳಗಳೆಲ್ಲ ಒಬ್ಬೊಬ್ಬರಾಗಿ ನೆಲ ಕಚ್ಚುತ್ತಾರೆ. ಆ ಕಥೆಗೊಂದಷ್ಟು ರಿಯಲ್‌ ಎಸ್ಟೇಟ್‌ ಮಾಫಿಯಾ, ರೌಡಿಸಂ, ಪ್ರೇಮ- ಪ್ರೀತಿಯಂಥ ಮತ್ತದೇ ಸವಕಲು ಅಂಶಗಳನ್ನು ಸೇರಿಸಿದ್ದಾರೆ. ರೌಡಿಸಂ ಒಳ್ಳೆಯದಲ್ಲ ಎಂಬುದನ್ನು ಹೇಳಲು ನಿರ್ದೇಶಕ ಶಶಾಂಕ್ ರಾಜ್ ಆಯ್ದುಕೊಂಡ ದಾರಿ ‘ಭೀಕರ' ಪರಿಣಾಮ ಬೀರುವಂತಿದೆ! - ಆನಂದತೀರ್ಥ ಪ್ಯಾಟಿ

    ಟೈಟಲ್ಲೇ ಶ್ರೀರಕ್ಷೆ, ಮಿಕ್ಕಿದ್ದೆಲ್ಲ ದುಷ್ಟರಿಗೆ ಶಿಕ್ಷೆ - ಉದಯವಾಣಿ

    ಟೈಟಲ್ಲೇ ಶ್ರೀರಕ್ಷೆ, ಮಿಕ್ಕಿದ್ದೆಲ್ಲ ದುಷ್ಟರಿಗೆ ಶಿಕ್ಷೆ - ಉದಯವಾಣಿ

    "ನಮ್ಮದು ರಾಜವಂಶನೂ ಅಲ್ಲ, ಅಂಥಾ ಇತಿಹಾಸನೂ ಇಲ್ಲ...' -"ಗೂಳಿಹಟ್ಟಿ' ಚಿತ್ರದಲ್ಲಿ ಐವರು ಹುಡುಗರು, ತಮ್ಮ ಬಗ್ಗೆ ತಾವೇ ಹೇಳಿಕೊಳ್ಳುವ ಡೈಲಾಗ್‌ ಇದು. ಅವರ ಈ ಡೈಲಾಗ್‌ ಕೇವಲ ಆ ಪಾತ್ರಗಳಿಗಷ್ಟೇ ಅಲ್ಲ, ಅದು ಚಿತ್ರಕ್ಕೂ ಅನ್ವಯಿಸುತ್ತೆ! ಗೂಳಿಹಟ್ಟಿ ಎಂಬ ಊರಿನಿಂದ ದುಡಿಮೆಗಾಗಿ ಬೆಂಗಳೂರಿಗೆ ಬರುವ ಪಚ್ಚಿ (ಪವನ್‌) ನಾಲ್ವರು ಗೆಳೆಯರ ಜತೆ ಸೇರಿ ಗೊತ್ತಿದ್ದೂ, ಭೂಗತ ಜಗತ್ತಿಗೆ ಎಂಟ್ರಿ ಕೊಡುತ್ತಾನೆ. ಐವರು ಮುಗ್ಧರ ಜತೆ ಭೂಗತ ದೊರೆಗಳು ಚೆಲ್ಲಾಟವಾಡುತ್ತಾರೆ. ಕೊನೆಗೆ ತಮ್ಮ ತಪ್ಪಿನ ಅರಿವಾಗಿ ಅದರಿಂದ ಹೊರ ಬಂದು ಸುಂದರ ಬದುಕು ಕಟ್ಟಿಕೊಳ್ಳಲು ಮುಂದಾಗುವ ಆ ಹುಡುಗರನ್ನು ರೌಡಿ ನಾಯಕರು ವಿನಾಕಾರಣ ಕೆಣಕುತ್ತಾರೆ. ಆಮೇಲೆ ಏನಾಗುತ್ತೆ ಅನ್ನೋದೇ ಒನ್ ಲೈನ್‌ - ವಿಜಯ್ ಭರಮಸಾಗರ

    ಮುರುಕಲು ಹಟ್ಟಿಯಲ್ಲಿ ಸೊರಗಿದ ಗೂಳಿ - ವಿಜಯ ಕರ್ನಾಟಕ

    ಮುರುಕಲು ಹಟ್ಟಿಯಲ್ಲಿ ಸೊರಗಿದ ಗೂಳಿ - ವಿಜಯ ಕರ್ನಾಟಕ

    ಸಿನಿಮಾವೊಂದು ಪ್ರೇಕ್ಷಕನಿಗೆ ಹತ್ತಿರ ಆಗಲು ಹಲವು ಸಂಗತಿಗಳು ಇರಬೇಕು. ಅವುಗಳು ನೋಡುಗನಿಗೆ ಸೆಳೆಯಬೇಕು. ಪ್ರೇಕ್ಷಕ ಮತ್ತು ನಿರ್ದೇಶಕ ಒಟ್ಟಾದಾಗ ಮಾತ್ರ ರಸಿಕ ತಣಿಯುತ್ತಾನೆ. ಒಳ್ಳೆಯ ಸಿನಿಮಾ ನೋಡಿ ಕುಣಿಯುತ್ತಾನೆ. ಇವೆರಡಕ್ಕೂ ಆಸ್ಪದವಿಲ್ಲದಂತೆ 'ಗೂಳಿಹಟ್ಟಿ' ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಶಶಾಂಕ್ ರಾಜ್. ಹೇಳಿಕೊಳ್ಳುವಂಥ ಕತೆ ಇಲ್ಲ. ಕ್ಲೈಮ್ಯಾಕ್ಸ್ ನಲ್ಲಿ ಕಾಣುವ ಜಾತ್ರೆಯ ಸನ್ನಿವೇಶ ಬಿಟ್ಟರೆ, ಅಚ್ಚರಿ ಮೂಡಿಸುವಂಥ ದೃಶ್ಯಗಳು ವಿರಳ. ಈ ಕಡೆ ಗ್ರಾಮೀಣ ಸೊಗಡನ್ನು ಸೆರೆ ಹಿಡಿಯದೇ, ಆ ಕಡೆ ಪಟ್ಟಣದ ಬದುಕನ್ನೂ ಕಟ್ಟಿಕೊಡದೇ, ದನ ಕರುಗಳು 'ಹಟ್ಟಿ'ಯಲ್ಲಿ ಅರ್ಧತಿಂದಿಟ್ಟ ದಂಟಿನಂತೆ ಭಾಸವಾಗುತ್ತದೆ ಈ ಚಿತ್ರ. ಎಳಸಲು ಕತೆ. ಕುತೂಹಲ ಮೂಡಿಸದ ಚಿತ್ರಕತೆ. ಅದಕ್ಕೆ ಒಪ್ಪದ ಪಾತ್ರಗಳಿಂದಾಗಿ 'ಗೂಳಿ' ಸುಖಾಸುಮ್ಮನೆ ಗುರುಗುಟ್ಟುತ್ತದೆ - ಶರಣು ಹುಲ್ಲೂರು

    ಹಳೇ ಹಟ್ಟಿಯಲ್ಲಿ ಹೊಸ ಗೂಳಿ - ವಿಜಯವಾಣಿ

    ಹಳೇ ಹಟ್ಟಿಯಲ್ಲಿ ಹೊಸ ಗೂಳಿ - ವಿಜಯವಾಣಿ

    ಮಕ್ಕಳು ಒಳ್ಳೆಯ ಉದ್ಯೋಗ ಪಡೆದು, ಕೈತುಂಬ ಸಂಬಳ ತರಬೇಕು ಎಂಬುದು ಎಲ್ಲ ತಂದೆ ತಾಯಂದಿರ ಆಸೆ. ಇದನ್ನು ಈಡೇರಿಸಲು ಮಕ್ಕಳು ಸಾಕಷ್ಟು ಬೆವರು ಹರಿಸಬೇಕು. ಅದರಲ್ಲೂ ಕರುಣಾಜನಕ ಹಿನ್ನೋಟವಿರುವ ಕುಟುಂಬದಿಂದ ಬಂದವರಾಗಿದ್ದರೆ, ದುಪ್ಪಟ್ಟು ಶ್ರಮ ಹಾಕಲೇಬೇಕು. ಅದನ್ನೆಲ್ಲ ಬಿಟ್ಟು, ಅವರು ಅಡ್ಡದಾರಿ ಹಿಡಿದರೆ ಅದಕ್ಕೆ ಪ್ರಜ್ಞಾಪೂರ್ವಕ ಸಮಾಜದಲ್ಲಿ ಸಮ್ಮತಿ ಸಿಗುವುದಿಲ್ಲ. ‘ಗೂಳಿಹಟ್ಟಿ'ಯಲ್ಲಿ ಇಂಥದ್ದಕ್ಕೆಲ್ಲ ಸಮ್ಮತಿ ಇದೆ. ಹಾಗಾಗಿ, ಲಾಜಿಕ್ ಬದಿಗಿಟ್ಟು ನೋಡಿದರೆ ಮಾತ್ರ ‘ಗೂಳಿ..' ಆಟ ಆಪ್ತ. ಸ್ನೇಹ, ಪ್ರೀತಿ, ದ್ವೇಷ, ಹೊಡೆದಾಟ, ಹಾಸ್ಯ, ಭಾವನೆಗಳ ಮಿಳಿತ.. ಹೀಗೆ ಎಲ್ಲವನ್ನೂ ಒಟ್ಟೊಟ್ಟಿಗೆ ಉಣಬಡಿಸಿ ‘ತಿನ್ನು ತಿನ್ನು' ಅಂತ ಪ್ರೇಕ್ಷಕನಿಗೆ ಪೀಡಿಸುತ್ತಾರೆ ನಿರ್ದೇಶಕರು. ಆದರೆ, ‘..ಹಟ್ಟಿ' ಊಟದಲ್ಲಿ ಹೊಸ ಸ್ವಾದವಿಲ್ಲ!- ಮದನ್​ಕುಮಾರ್ ಸಾಗರ

    English summary
    Pawan Surya and Tejaswini starrer 'Goolihatti' has received mixed response from the critics. Here is the collection of reviews by Top News Papers of Karnataka.
    Saturday, June 27, 2015, 16:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X