For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ 'ಕಲ್ಪನ' ಚಿತ್ರ ವಿಮರ್ಶೆ: ಸ್ವೀಟ್ ಅಂಡ್ ಸಾಲ್ಟ್

  |

  Rating:
  2.5/5
  ಸೂಪರ್ ಸ್ಟಾರ್ ಉಪೇಂದ್ರ ನಟನೆ ಹಾಗೂ ರಾಮ್ ನಾರಾಯಣ್ ನಿರ್ದೇಶನದ 125 ನೇ ಚಿತ್ರ 'ಕಲ್ಪನ' ಹಾರರ್, ಥ್ರಿಲ್ಲರ್, ಸಾಕಷ್ಟು ಸಸ್ಪೆನ್ಸ್ ಮಾತ್ರವಲ್ಲದೇ ಕಾಮಿಡಿ ಕೂಡ ಹೊಂದಿರುವ ಚಿತ್ರ. ಈ ಮೊದಲು ಕನ್ನಡದಲ್ಲಿ 'ಭೈರವಿ', 'ಶಾಂಭವಿ' ಮುಂತಾದ ಮಕ್ಕಳ ಜೊತೆ ಪ್ರಾಣಿಗಳನ್ನೂ ಸೇರಿಸಿಕೊಂಡು ಚಿತ್ರ ಮಾಡಿದ್ದ ರಾಮ್ ನಾರಾಯಣ್, ತಮಿಳಿನ 'ಕಾಂಚನ' ಚಿತ್ರವನ್ನು 'ಕಲ್ಪನ' ಹೆಸರಿನಲ್ಲಿ ರೀಮೇಕ್ ಮಾಡಿ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಮೂಲ ತಮಿಳು ಚಿತ್ರದ ಕಥೆ ರಾಘವ ಲಾರೆನ್ಸ್ ಅವರದು.

  ಮಂಗಳಮುಖಿ ಒಬ್ಬಳನ್ನು ಕಸಕ್ಕಿಂತ ಕಡೆಯಾಗಿ ಕಂಡಿದ್ದಲ್ಲದೇ ಬಾಲ್ಯದಲ್ಲಿಯೇ ಮನೆಯಿಂದ ಹೊರಹಾಕಲಾಗುತ್ತದೆ. ಆಕೆ ಮುಸ್ಲಿಂ ಹೃದಯವಂತನ ಆಸರೆ ಪಡೆದು 'ಕಲ್ಪನ' ಆಗಿ ಕಷ್ಟಪಟ್ಟು ಮಗಳನ್ನು ಸಾಕಿ ಆಕೆಯನ್ನು ಓದಿಸಿ ವೈದ್ಯೆಯಾಗಿ ಮಾಡಿ 'ಮಂಗಳಮುಖಿಯ ಮಹಾನ್ ಸಾಧನೆ' ಎಂಬಂತೆ ಬದುಕುತ್ತಿರುತ್ತಾಳೆ. ಮಗಳ ಓದಿನ ಖರ್ಚುನ್ನು ಕಾಲೇಜು ವಹಿಸಿಕೊಂಡ ಮೇಲೆ ಮಂಗಳಮುಖಿ 'ಕಲ್ಪನ', ತನ್ನ ಮಗಳ ಓದಿಗೆಂದು ಕೂಡಿಟ್ಟಿದ್ದ ಹಣದಲ್ಲಿ ಆಸ್ಪತ್ರೆ ಕಟ್ಟಿಸುವ ಕನಸು ಹೊತ್ತಿರುತ್ತಾಳೆ. ಆದರೆ 'ಕಲ್ಪನ' ಕನಸಿಗೆ ತೊಂದರೆಯಾಗಿ ಆಕೆ ಕೊಲೆಯಾಗುತ್ತಾಳೆ. ಕೊಲೆಯಾದ ಕಲ್ಪನ, ರಾಘವ ಎಂಬ ಕಥಾನಾಯಕನಲ್ಲಿ ಸೇರಿಕೊಂಡು ಹೇಗೆ ಸೇಡು ತೀರಿಸಿಕೊಳ್ಳತ್ತಾಳೆ ಎಂಬುದು ಚಿತ್ರದ ಕಥೆ. ಅದನ್ನೂ ಈ ವಿಮರ್ಶೆಯಲ್ಲಿ ಹೇಳಬಾರದು.., ಚಿತ್ರ ನೋಡಿದರೇ ಚೆನ್ನ..!

  ನಿರ್ದೇಶನದ ಬಗ್ಗೆ: 'ಕಲ್ಪನ' ಚಿತ್ರ ರೀಮೇಕ್ ಆಗಿರುವುದರಿಂದ ಹಾಗೂ ಅದು ಡಬ್ಬಿಂಗ್ ಆಗಿ ತೆಲುಗಿನಲ್ಲಿಯೂ ತೆರೆಗೆ ಈ ಮೊದಲೇ ಬಂದಿರುವುದರಿಂದ ಸಾಕಷ್ಟು ಪ್ರೇಕ್ಷಕಕರು ಮೂಲ ಚಿತ್ರವನ್ನು ನೋಡಿ ಕಥೆಯನ್ನು ಈಗಾಗಲೇ ತಿಳಿದಿದ್ದಾರೆ. ಆದರೆ, ಮೂಲ ಕಥೆಯನ್ನು ಇಲ್ಲಿನ ನೆಟಿವಿಟಿಗೆ ತಕ್ಕಂತೆ ಬದಲಾಯಿಸುವ 'ಸ್ವಾತಂತ್ರ' ಹಾಗೂ ಪ್ರೇಕ್ಷಕರನ್ನು ಮೆಚ್ಚಿಸುವ 'ರಿಸ್ಕ್' ಎರಡೂ ನಿರ್ದೇಶಕ ರಾಮ್ ನಾರಾಯಣ್ ಮೇಲಿತ್ತು. ಅದನ್ನವರು ಪಾತ್ರಗಳ ಆಯ್ಕೆಯಲ್ಲಿ ಜಾಣತನ ಮೆರೆಯುವ ಮೂಲಕ 'ಅರ್ಧ'ಕ್ಕಿಂತ ಹೆಚ್ಚು 'ಸಲೀಸು' ಮಾಡಿಕೊಂಡಿದ್ದಾರೆ. ಉಳಿದ ಭಾಗದಲ್ಲಿ ನಿರ್ದೇಶಕರು ಅಷ್ಟೇನೂ ಕೈಚಳಕ ತೋರಿಸಿಲ್ಲ. ಮಂಗಳಮುಖಿ ಜೀವನದ ಕಥೆಯಾದ್ದರಿಂದ ವಿಭಿನ್ನತೆಯಂತೂ ಇದ್ದೇ ಇದೆ.

  ಹೀಗಿರುವಾಗ ನಿರ್ದೇಶಕ ರಾಮ್ ನಾರಾಯಣ್ ಅವರಿಗೆ ಹೆಚ್ಚೇನೂ ಕೆಲಸವಿರಲಿಲ್ಲ. ಚಿತ್ರಕಥೆ, ನಿರ್ದೇಶನದ ಜೊತೆಗೆ 'ಕಲ್ಪನ' ಚಿತ್ರದ ನಿರ್ಮಾಪಕರೂ ಆಗಿರುವುದು ರಾಮ್ ನಾರಾಯಣ್ ವಿಶೇಷ. ಮೂಲ ಕಥೆಯನ್ನು ಕೆಡಿಸದೇ ರೀಮೇಕ್ ಮಾಡಿ ಕನ್ನಡದಲ್ಲಿ ತೆರೆಗೆ ತಂದಿರುವುದು ಅವರ ಹೆಚ್ಚಿಗಾರಿಕೆ ಎನ್ನಬೇಕು. ಕಥೆಗೆ ಸೂಕ್ತವಾದ ಚಿತ್ರಕಥೆ, ಹಾಸ್ಯ ಚಟಾಕಿಯಂತೆ ಸಿಡಿಯುವ ಸಂಭಾಷಣೆ ಹಾಗೂ ಮೆಚ್ಚತಕ್ಕ ಹಾಡುಗಳನ್ನು ಸೇರಿಸಿ 'ಕಲ್ಪನ' ಮಾಡಿದ್ದಾರೆ ರಾಮ್ ನಾರಾಯಣ್. ದ್ವಾರ್ಕಿ(ರಾಘವ) ಸಂಭಾಷಣೆ 'ಕಲ್ಪನ' ಚಿತ್ರದ ಹೈಲೈಟ್ಸ್. ಹಾರರ್ ಜೊತೆ ಹಾಸ್ಯವನ್ನು ಮಿಕ್ಸ್ ಮಾಡುವುದು ಕಷ್ಟದ ಸಂಗತಿ ಹಾಗೂ ಮಾಡಿರುವುದು ಮೆಚ್ಚತಕ್ಕ ಅಂಶವಾದರೂ ಚಿತ್ರದಿಂದ ಅದು ಪ್ರತ್ಯೇಕತೆ ಪಡೆದುಕೊಂಡಿದೆ. ಬಿಡಿಬಿಡಿಯಾಗಿ ದೃಶ್ಯಗಳನ್ನು ನೋಡಲು ಸೂಪರ್. ಆದರೆ ಚಿತ್ರವನ್ನು ಇಡಿಯಾಗಿ ನೋಡಿದಾಗ ಮೇಕಿಂಗ್ ನಲ್ಲಿ ಏನೋ 'ಮೈನಸ್' ಇದೆ ಅನ್ನಿಸಿಬಿಡುತ್ತದೆ.

  ಯಾರ ನಟನೆ ಹೇಗೆ: ಮೂಲ ತಮಿಳು ಚಿತ್ರ 'ಕಾಂಚನ'ದಲ್ಲಿ ಲಾರೆನ್ಸ್ ಮಾಡಿದ್ದ ಪಾತ್ರವನ್ನು ಇಲ್ಲಿ 'ರಾಘವ' ಹೆಸರಿನಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಮಾಡಿದ್ದಾರೆ. ಅಲ್ಲಿ ಶರತ್ ಕುಮಾರ್ ಮಾಡಿದ್ದ 'ಕಾಂಚನ' ಪಾತ್ರಕ್ಕೆ ಕನ್ನಡದ 'ಕಲ್ಪನ'ದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಜೀವ ತುಂಬಿದ್ದಾರೆ. ಚಿತ್ರದ ಕೊನೆಯಲ್ಲಿ 'ಕಲ್ಪನ' ಪಾತ್ರಕ್ಕೂ ಜೀವ ತುಂಬಿರುವ ಹೆಚ್ಚುಗಾರಿಕೆ ಉಪೇಂದ್ರರದು. ಚಿತ್ರದ ನಾಯಕ 'ರಾಘವ' ಪಾತ್ರ ಹಾಗೂ ಮಂಗಳ ಮುಖಿ 'ಕಲ್ಪನ' ಎರಡೂ ಪಾತ್ರಗಳಲ್ಲಿ ಉಪೇಂದ್ರ ಅಭಿನಯ 'ಸೂಪರ್ ಸ್ಟಾರ್' ಹೆಸರಿಗೆ ತಕ್ಕಂತೆ 'ಸೂಪರ್...', ಜೊತೆಗೆ ಉಪೇಂದ್ರರ ಉದ್ದುದ್ದ ನಿರರ್ಗಳ ಸಂಭಾಷಣೆ ಬೋನಸ್.

  ಡೈಲಾಗ್ ಕಿಂಗ್ ಸಾಯಿಕುಮಾರ್ ಮಂಗಳಮುಖಿ 'ಕಲ್ಪನ' ಪಾತ್ರ ಹಾಗೂ ಸಂಭಾಷಣೆ ಮೂಲಕ ಅಕ್ಷರಶಃ ಮಿಂಚಿದ್ದಾರೆ. ಮೂಲ ತಮಿಳಿನ 'ಕಾಂಚನ'ದಲ್ಲೂ ನಾಯಕಿಯಾಗಿದ್ದ ಲಕ್ಷ್ಮೀ ರೈ 'ಕಲ್ಪನ' ಮೂಲಕ ಕನ್ನಡಕ್ಕೂ ಬಂದಿದ್ದಾರೆ. ಆದರೆ ಲಕ್ಷ್ಮೀ ರೈ ಪಾತ್ರ ಹಾಗೂ ಅಭಿನಯಕ್ಕಿಂತ 'ಗ್ಲಾಮರ್ ಗೊಂಬೆ'ಯಾಗಿ ಹೆಚ್ಚು ಮಿಂಚಿದ್ದಾರೆ. ವಿಶೇಷವೆನಿಸುವ ಪೋಷಕ ಪಾತ್ರಗಳಲ್ಲಿ ನಟಿಸಿರುವ ಹಿರಿಯ ನಟಿ ಉಮಾಶ್ರೀ ಹಾಗೂ ಶ್ರುತಿ ಅಭಿನಯ ಚಿತ್ರದ ಜೀವಾಳ. ಈ ಇಬ್ಬರೂ ಪೈಪೋಟಿಗೆ ಬಿದ್ದವರಂತೆ ನಟಿಸಿ ಗೆದ್ದಿದ್ದಾರೆ. ಅಚ್ಯುತ್ ಕುಮಾರ್, ಶೋಭರಾಜ್, ಓಂ ಪ್ರಕಾಶ್ ರಾವ್ ಹಾಗೂ ಬುಲೆಟ್ ಪ್ರಕಾಶ್ ಅವರದು ಪಾತ್ರಕ್ಕೆ ತಕ್ಕ ಅಭಿನಯ.

  ವಿ ನಾಗೇಂದ್ರ ಪ್ರಸಾದ್ ಬರೆದಿರುವ ಚೆನ್ನಾಗಿರುವ ಹಾಡುಗಳಿಗೆ ಸೂಕ್ತವಾದ ಹಾಗೂ ಇಷ್ಟವಾಗುವಂತಹ ಸಂಗೀತ ನೀಡಿದ್ದಾರೆ ಖ್ಯಾತ ಸಂಗೀತ ನಿರ್ದೇಶಕ ವಿ ಹರಿಕೃಷ್ಣ. ಎಲ್ಲಾ ಹಾಡುಗಳು ಮಾಸ್ ಪ್ರೇಕ್ಷಕರನ್ನು ಮೆಚ್ಚಿಸಿ ಸೀಟಿನ ಅಂಚಿಗೆ ತಂದು ಕೂಡ್ರಿಸುವಂತಿದೆ. ಹರಿಕೃಷ್ಣ ಅವರ ಹಿನ್ನಲೆ ಸಂಗೀತವೂ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಕೆ ಎಸ್ ಸೆಲ್ವರಾಜ್ ಛಾಯಾಗ್ರಹಣ, ಥಾಮಸ್ ಸಂಕಲನ ಚೆನ್ನಾಗಿದೆ. ಚಿತ್ರದ ನೋಡಿ ಹೊರಬಂದರೆ ಉಪೇಂದ್ರ, ಸಾಯಿಕುಮಾರ್, ಉಮಾಶ್ರೀ, ಶ್ರುತಿ ಅವರುಗಳ ಅಭಿನಯ ಹಾಗೂ ದ್ವಾರ್ಕಿ(ರಾಘವ) ಸಂಭಾಷಣೆಯೇ ನೆನಪಾಗುತ್ತದೆ ಎಂದರೆ ಅತಿಶಯೋಕ್ತಿಯಲ್ಲ.

  ಒಟ್ಟಿನಲ್ಲಿ, ಉಪೇಂದ್ರರ ಮತ್ತೊಂದು ರೀಮೇಕ್ ಚಿತ್ರ 'ಕಲ್ಪನ' ಪ್ರೇಕ್ಷಕರ ಮುಂದಿದೆ. ಮೊದಲ ಶೋನಲ್ಲಿ, ಉಪೇಂದ್ರರ ಪ್ರತಿ ಸಂಭಾಷಣೆಗೂ ಬೋಲ್ಡ್ ಆಗುವ ಪ್ರೇಕ್ಷಕರಿಂದ ಮಿತಿಮೀರಿದ ಶಿಳ್ಳೆ, ಚಪ್ಪಾಳೆ ಕೇಳಿಬಂದಿದೆ. ಸಾಯಿಕುಮಾರ್ ತೆರೆಯ ಮೇಲಿದ್ದಷ್ಟೂ ಹೊತ್ತು ಪ್ರೇಕ್ಷಕರು ಉಸಿರಾಟವನ್ನೇ ಮರೆಯುತ್ತಾರೆ. ಉಮಾಶ್ರೀ, ಶ್ರುತಿ ತೆರೆಯಲ್ಲಿ ಬಂದಾಗ ಎಲ್ಲರ ಮುಖದಲ್ಲಿ ಮಂದಹಾಸ. ಲಕ್ಷ್ಮೀ ರೈ ಬಂದರೆ ಪಡ್ಡೆಗಳ ಸರಾಗ ಉಸಿರಾಟಕ್ಕೆ ತೊಂದರೆ. ಹಾರರ್, ಸಸ್ಪೆನ್ಸ್ ಹಾಗೂ ಕಾಮಿಡಿ ಇಷ್ಟಪಡುವವರಿಗೆ ಚಿತ್ರ ಸೂಪರ್.., ಮಿಕ್ಕಂತೆ 'ಕಲ್ಪನ' ಚಿತ್ರವನ್ನು ಉಪೇಂದ್ರ ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು!

  English summary
  Super Star Upendra and Dialogue King Saikumar 'Kalpana' Review. Ramnarayana's 125th movie, this Kalpana is Remake of Tamil movie Kanchana. Lakshmi Rai acted as Herione for Upnedra in this movie. V. Harikrishna Music. Read this Movie Review for the more..
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X