For Quick Alerts
  ALLOW NOTIFICATIONS  
  For Daily Alerts

  ಚಿತ್ರವಿಮರ್ಶೆ: ಫೀನಿಕ್ಸ್ ನಂತೆ ಎದ್ದುಬಂದ ಕ್ರೇಜಿಸ್ಟಾರ್

  By Rajendra
  |

  ಕ್ರೇಜಿಸ್ಟಾರ್ ರವಿಚಂದ್ರನ್ ಈ ಬಾರಿ ಮಲಯಾಳಂನ ಸೂಪರ್ ಹಿಟ್ ಚಿತ್ರ 'ಟ್ರಾಫಿಕ್' ರಿಮೇಕ್ ಮಾಡಿದರೂ ಕಥೆಯನ್ನು ತಮ್ಮದೇ ಆದಂತಹ ಚೌಕಟ್ಟಿನಲ್ಲಿ ಮನಮಿಡಿಯುವಂತೆ ಕಟ್ಟಿಕೊಟ್ಟಿದ್ದಾರೆ. ಪ್ರೇಕ್ಷಕರ ಹೃದಯ ಸ್ಪರ್ಶಿಸಿದ್ದಾರೆ. ಅವರ ಹೊಸ ಸ್ಪರ್ಶಕ್ಕೆ ಪ್ರೇಕ್ಷಕರು ಥಿಯೇಟರ್ ನಲ್ಲೇ ಕಳೆದುಹೋಗುತ್ತಾರೆ. ಕ್ರೇಜಿಸ್ಟಾರ್ ಚಿತ್ರದ ಮೂಲಕ ರವಿಚಂದ್ರನ್ ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದಿದ್ದಾರೆ.

  ತಮ್ಮದೇ ಕಥೆ ಹೇಳುತ್ತಿದ್ದಾರಾ ಕ್ರೇಜಿಸ್ಟಾರ್? ಇದು ಕೇವಲ ಕಾಲ್ಪನಿಕವೇ ಅಥವಾ ರಿಯಲ್ ಸ್ಟೋರಿಯೇ ಎಂದು ಪ್ರೇಕ್ಷಕರು ಪದೇಪದೇ ಆಲೋಚಿಸುವಂತೆ ಮಾಡುತ್ತದೆ 'ಕ್ರೇಜಿಸ್ಟಾರ್' ಚಿತ್ರ. ಏಕೆಂದರೆ ರವಿಚಂದ್ರನ್ ಅವರ ಪಾತ್ರದ ಹೆಸರೇ ಕ್ರೇಜಿಸ್ಟಾರ್. ಇಲ್ಲಿ ರವಿಚಂದ್ರನ್ ತನ್ನ 'ಏಕಾಂಗಿ' ಚಿತ್ರದ ಬಗ್ಗೆ ಮಾತನಾಡುತ್ತಾರೆ. ಕೊನೆಯ ತನಕವೂ 'ಮಂಜಿನ ಹನಿ'ಯನ್ನು ಧ್ಯಾನಿಸುತ್ತಲೇ ಕಥೆ ಸಾಗುತ್ತದೆ.

  ಕ್ಯಾಮೆರಾ, ಲೈಟ್ಸ್, ಆಕ್ಷನ್ ಕಟ್ ನಲ್ಲೇ ಕಳೆದುಹೋಗುವ ಒಬ್ಬ ಕಲಾವಿದನ ಪರ್ಸನಲ್ ಲೈಫ್ ಹೇಗಿರುತ್ತದೆ. ಹೆಂಡತಿ, ಮಗಳ ಕಡೆಗೆ ಗಮನಕೊಡಲಾಗದೆ ಹೇಗೆಲ್ಲಾ ಹಪಿಹಪಿಸುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ. ಕಡೆಗೆ ಸಾವು ಬದುಕಿನ ನಡುವೆ ಹೋರಾಡುವ ತನ್ನ ಮಗಳ ಮುಂದೆ ಕ್ರೇಜಿಸ್ಟಾರ್ ಅಸಲಿ ಬಣ್ಣ ಕಳಚಿಕೊಳ್ಳುತ್ತಾನೆ. [ಕ್ರೇಜಿಸ್ಟಾರ್ ಚಿತ್ರದ ಸ್ಟಿಲ್ಸ್]

  Rating:
  4.0/5

  ಚಿತ್ರ: ಕ್ರೇಜಿಸ್ಟಾರ್

  ನಿರ್ಮಾಣ: ಈಶ್ವರಿ ಡ್ರೀಮ್ಸ್ (ಎಂ.ಗೋವಿಂದು, ಆರ್.ಮನೋರಂಜನ್ ಹಾಗೂ ಎನ್.ಎಸ್.ರಾಜ್ ಕುಮಾರ್)

  ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಸಂಕಲನ ಹಾಗೂ ನಿರ್ದೇಶನ: ವಿ ರವಿಚಂದ್ರನ್

  ಛಾಯಾಗ್ರಹಣ: ಜಿ.ಎಸ್.ವಿ.ಸೀತಾರಾಂ

  ಪಾತ್ರವರ್ಗ: ರವಿಚಂದ್ರನ್, ಪ್ರಿಯಾಂಕಾ ಉಪೇಂದ್ರ, ಪ್ರಕಾಶ್ ರೈ, ರಂಗಾಯಣರಘು, ಅವಿನಾಶ್, ಶೋಭಾ ರಾಜ್, ವಿಕ್ರಂ ರವಿಚಂದ್ರನ್, ನವೀನ್ ಕೃಷ್ಣ, ದಿಲೀಪ್ ರಾಜ್, ಅಕುಲ್ ಬಾಲಾಜಿ, ಭಾವನಾ, ಸೌಂದರ್ಯಾ, ಧರ್ಮ, ರವಿಶಂಕರ್, ಯತಿರಾಜ್, ಮಿಮಿಕ್ರಿ ದಯಾನಂದ್, ರಾಂಪ್ರಸಾದ್ ಮುಂತಾದವರು.

  ಕ್ರೇಜಿಸ್ಟಾರ್ ಹೃದಯಸ್ಪರ್ಶಿ ಚಿತ್ರ

  ಕ್ರೇಜಿಸ್ಟಾರ್ ಹೃದಯಸ್ಪರ್ಶಿ ಚಿತ್ರ

  ಎಲ್ಲರೂ ತನ್ನನ್ನು ಕ್ರೇಜಿಸ್ಟಾರ್ ಎಂಬ ಭಾವದಲ್ಲೇ ನೋಡಿದರು. ಆದರೆ ಸುದೀಪ್ ನನ್ನಲ್ಲೊಬ್ಬ ತಂದೆಯನ್ನು ನೋಡಿ 'ಮಾಣಿಕ್ಯ' ಚಿತ್ರದಲ್ಲಿ ಅಪ್ಪನ ಪಾತ್ರ ಕೊಟ್ಟಿದ್ದಾರೆ ಎಂದು ರವಿಚಂದ್ರನ್ ಚಿತ್ರದಲ್ಲಿ ಹೇಳುತ್ತಾರೆ. ರಿಯಲ್ ಕಥೆಯ ಜೊತೆಗೆ ಕಾಲ್ಪನಿಕ ಅಂಶಗಳನ್ನು ಜೋಡಿಸುತ್ತಾ ಕ್ರೇಜಿಸ್ಟಾರ್ ಪ್ರೇಕ್ಷಕರ ಭಾವನೆಗಳ ಜೊತೆ ಆಟವಾಡುತ್ತಾರೆ.

  ಪ್ರೇಕ್ಷಕರ ಹೃದಯಕ್ಕೆ ಕೈಹಾಕುವ ಕ್ರೇಜಿಸ್ಟಾರ್

  ಪ್ರೇಕ್ಷಕರ ಹೃದಯಕ್ಕೆ ಕೈಹಾಕುವ ಕ್ರೇಜಿಸ್ಟಾರ್

  ಕಥೆ ದ್ವಿತೀರ್ಯಾರ್ಧಕ್ಕೆ ಹೊರಳುತ್ತಿದ್ದಂತೆ ಪ್ರೇಕ್ಷಕರನ್ನು ಸೀಟಿನ ಅಂಚಿಗೆ ಕೂರುವಂತೆ ಮಾಡುತ್ತದೆ. ನಾನು 'ಏಕಾಂಗಿ'ಯಾಗಿ ಚಿತ್ರ ಮಾಡಿದೆ. ಕಡೆಗೆ ಪ್ರೇಕ್ಷಕರು ತನ್ನನ್ನು ಚಿತ್ರಮಂದಿರದಲ್ಲಿ ಏಕಾಂಗಿಯಾಗಿ ಬಿಟ್ಟರು ಎನ್ನುತ್ತಾರೆ. ಈ ರೀತಿಯ ಸಾಕಷ್ಟು ಡೈಲಾಗ್ ಗಳು ಹಾಗೂ ಸನ್ನಿವೇಶಗಳ ಮೂಲಕ ತನ್ನನ್ನು ತಾನೇ ಸಂತೈಸಿಕೊಳ್ಳುತ್ತಾ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುತ್ತಾ ಸಾಗುತ್ತಾರೆ ಕ್ರೇಜಿಸ್ಟಾರ್.

  ವಿಕ್ರಂ ರವಿಚಂದ್ರನ್ ಭರ್ಜರಿ ಓಪನಿಂಗ್

  ವಿಕ್ರಂ ರವಿಚಂದ್ರನ್ ಭರ್ಜರಿ ಓಪನಿಂಗ್

  ಕ್ರೇಜಿಸ್ಟಾರ್ ಅಭಿಮಾನಿಯಾಗಿ ಯುವ ಪಾತ್ರದಲ್ಲಿ ಅವರ ಪುತ್ರ ವಿಕ್ರಂ ರವಿಚಂದ್ರನ್ ಭರ್ಜರಿ ಓಪನಿಂಗ್ ಪಡೆದಿದ್ದಾರೆ. ತಲೆಕೂದಲು ಒಂಚೂರು ಅತಿಯಾಯಿತು ಅನ್ನಿಸುವಂತಿದ್ದರೂ ಕೊನೆಕೊನೆಗೆ ಇಷ್ಟವಾಗುತ್ತಾರೆ. ಮೈಸೂರಿನಿಂದ ಬೆಂಗಳೂರಿಗೆ ಕೇವಲ ಎರಡು ಗಂಟೆಗಳಲ್ಲಿ ಕಾರು ಓಡಿಸುತ್ತಾ ವೇಗವಾಗಿ ಬರುವ ಸನ್ನಿವೇಶಗಳು ಚಿತ್ರದ ಹೈಲೈಟ್.

  ಅಭಿಮಾನಿಗಳನ್ನು ಹುಚ್ಚೆಬ್ಬಿಸುವ ಸನ್ನಿವೇಶಗಳು

  ಅಭಿಮಾನಿಗಳನ್ನು ಹುಚ್ಚೆಬ್ಬಿಸುವ ಸನ್ನಿವೇಶಗಳು

  ಚಿಕ್ಕಂದಿನಿಂದಲೂ ಹೃದಯ ಕಾಯಿಲೆಯಿಂದ ಬಳಲುತ್ತಿರುವ ಕ್ರೇಜಿಸ್ಟಾರ್ ಮಗಳಿಗೆ ಹೃದಯ ಜೋಡಣೆ ಮಾಡಬೇಕಾಗಿರುತ್ತದೆ. ಮೈಸೂರಿನಿಂದ ಬೆಂಗಳೂರಿಗೆ ಅದನ್ನು ಇಂತಿಷ್ಟೇ ಗಂಟೆಗಳಲ್ಲಿ ತರಬೇಕಾಗಿರುತ್ತದೆ. ಆ ಜವಾಬ್ದಾರಿಯನ್ನು ಕ್ರೇಜಿಸ್ಟಾರ್ ಅಭಿಮಾನಿ ಯುವ ನಿಭಾಯಿಸುತ್ತಾನೆ. ಈ ಸನ್ನಿವೇಶಗಳಂತೂ ಚಿತ್ರದಲ್ಲಿ ಕ್ರೇಜಿಸ್ಟಾರ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡುತ್ತವೆ.

  ನವೀನ್ ಕೃಷ್ಣ ಭಾವಪೂರ್ಣ ಅಭಿನಯ

  ನವೀನ್ ಕೃಷ್ಣ ಭಾವಪೂರ್ಣ ಅಭಿನಯ

  ನವೀನ್ ಕೃಷ್ಣ ಅವರದು ಆಗಷ್ಟೇ ಹೊಸದಾಗಿ ಕೆಲಸಕ್ಕೆ ಸೇರಿದ ಟಿವಿ ನಿರೂಪಕನ ಪಾತ್ರ. ಮೊದಲ ಸಂದರ್ಶನವೇ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗಿನ ತನ್ನ ಸಂದರ್ಶನ ಟಿವಿಯಲ್ಲಿ ಬರುತ್ತದೆ ನೋಡಿ ಎಂದು ಎಲ್ಲರಿಗೂ ಹೇಳಿ ಹೋಗಿ ಅಪಘಾತಕ್ಕೀಡಾಗುತ್ತಾನೆ.

  ಕನಲಿ ಹೋಗುವ ಹೃದ್ರೋಗ ತಜ್ಞ

  ಕನಲಿ ಹೋಗುವ ಹೃದ್ರೋಗ ತಜ್ಞ

  ಇನ್ನೊಂದು ಕಡೆಗೆ ಹೃದಯ ಜೋಡಣೆ ಮಾಡಬೇಕಾದ ಹೃದ್ರೋಗ ತಜ್ಞ ಮನಕಲಕುವ ಘಟನೆ ಎದುರಿಸಬೇಕಾಗುತ್ತದೆ. ಗೆಳೆಯನೊಬ್ಬ (ಅಕುಲ್ ಬಾಲಾಜಿ) ತನ್ನ ಜೊತೆಗೇ ಇದ್ದು ತನ್ನ ಪತ್ನಿಯ ಜೊತೆಗೆ ಜೂಟಾಟ ಆಡುತ್ತಿರುವುದು ಗೊತ್ತಾಗಿ ಹೃದ್ರೋಗ ತಜ್ಞ ಕನಲಿ ಹೋಗುತ್ತಾನೆ.

  'ಸೆಪ್ಟೆಂಬರ್ 16'ರಂದೇ ನಡೆಯುವ ಘಟನೆಗಳು

  'ಸೆಪ್ಟೆಂಬರ್ 16'ರಂದೇ ನಡೆಯುವ ಘಟನೆಗಳು

  ಕ್ರೇಜಿಸ್ಟಾರ್ ಮಗಳಿಗೆ ಹೃದಯಾಘಾತ, ನವೀನ್ ಕೃಷ್ಣಗೆ ಅಪಘಾತ, ಹೃದ್ರೋಗ ತಜ್ಞನ ಕಹಿ ಘಟನೆ ಇವೆಲ್ಲವೂ ಒಂದೇ ದಿನ ಅಂದರೆ ಸೆಪ್ಟೆಂಬರ್ 16ರಂದೇ ನಡೆಯುತ್ತವೆ. ಈ ಎಲ್ಲಾ ಘಟನೆಗಳು ಒಂದಕ್ಕೊಂದು ಹೇಗೆ ಬೆಸೆದುಕೊಳ್ಳುತ್ತವೆ ಎಂಬುದನ್ನು ಬಹಳ ನೀಟಾಗಿ ಪೋಣಿಸಿದ್ದಾರೆ ರವಿಚಂದ್ರನ್.

  ಬುದ್ಧಿವಂತಿಗೆ ಎಂಬುದು ಅಂಡರ್ ವೇರ್ ಇದ್ದಂತೆ

  ಬುದ್ಧಿವಂತಿಗೆ ಎಂಬುದು ಅಂಡರ್ ವೇರ್ ಇದ್ದಂತೆ

  ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಸಂಕಲನ ಹಾಗೂ ನಿರ್ದೇಶನ ಎಲ್ಲವನ್ನೂ ರವಿಚಂದ್ರನ್ ಅವರೇ ನಿಭಾಯಿಸುವುದರ ಜೊತೆಗೆ ಗೆದ್ದಿದ್ದಾರೆ. ಎಲ್ಲ ವಿಭಾಗಗಳನ್ನೂ ಹಿಡಿತ ಇರುವುದೇ ಇದಕ್ಕೆ ಕಾರಣ ಎನ್ನಬಹುದು. ಸಂಭಾಷಣೆಯ ಒಂದು ಸ್ಯಾಂಪಲ್ ಹೀಗಿದೆ..."ಬುದ್ಧಿವಂತಿಕೆ ಎನ್ನುವುದು ಅಂಡರ್ ವೇರ್ ಇದ್ದಂಗೆ. ಹಾಕ್ಕೋಬಹುದು ಆದರೆ ತೋರಿಸಿಕೊಳ್ಳಬಾರದು."

  ಸಮತೂಕದ ಪೋಷಕ ಪಾತ್ರಗಳು

  ಸಮತೂಕದ ಪೋಷಕ ಪಾತ್ರಗಳು

  ಇನ್ನು ಛಾಯಾಗ್ರಹಣದ ಜವಾಬ್ದಾರಿಯನ್ನು ಜಿ.ಎಸ್.ವಿ.ಸೀತಾರಾಂ ಹೊತ್ತಿದ್ದು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ಪ್ರಕಾಶ್ ರೈ, ಅವಿನಾಶ್, ಶೋಭಾ ರಾಜ್, ದಿಲೀಪ್ ರಾಜ್, ಅಕುಲ್ ಬಾಲಾಜಿ, ಭಾವನಾ, ಸೌಂದರ್ಯಾ, ಧರ್ಮ, ರವಿಶಂಕರ್, ಯತಿರಾಜ್, ಮಿಮಿಕ್ರಿ ದಯಾನಂದ್, ರಾಂಪ್ರಸಾದ್ ಎಲ್ಲ ಪಾತ್ರಗಳೂ ಸಮತೂಕದಿಂದ ಕೂಡಿವೆ.

  'ಮಲ್ಲ' ಚಿತ್ರವನ್ನು ಮೈಮರೆಸುವ ಪ್ರಿಯಾಂಕಾ

  'ಮಲ್ಲ' ಚಿತ್ರವನ್ನು ಮೈಮರೆಸುವ ಪ್ರಿಯಾಂಕಾ

  ಕ್ರೇಜಿಸ್ಟಾರ್ ಪತ್ನಿಯಾಗಿ ಪ್ರಿಯಾಂಕಾ ಉಪೇಂದ್ರ ಅವರದು ಮನಮಿಡಿಯುವ ಪಾತ್ರ. ಇಲ್ಲಿ 'ಮಲ್ಲ' ಸನ್ನಿವೇಶಗಳನ್ನು ನಿರೀಕ್ಷಿಸಿ ಹೋಗುವ ಪ್ರೇಕ್ಷಕರನ್ನು ಇನ್ನೊಂದು ಹೊಸ ಲೋಕಕ್ಕೆ ಕರೆದೊಯ್ಯುತ್ತಾರೆ. ಅದೇನು ಎಂಬುದನ್ನು ತೆರೆಯ ಮೇಲೆ ನೋಡಿ ಆನಂದಿಸಿ. ರಮೇಶ್ ಅರವಿಂದ್ ಅವರು ಅತಿಥಿ ಪಾತ್ರದಲ್ಲಿ ಸರ್ಪ್ರೆಸ್ ಕೊಡುತ್ತಾರೆ.

  ಎಲ್ಲರೂ ನೋಡಲೇಬೇಕಾದ ಚಿತ್ರ

  ಎಲ್ಲರೂ ನೋಡಲೇಬೇಕಾದ ಚಿತ್ರ

  ಒಟ್ಟಾರೆಯಾಗಿ ಕ್ರೇಜಿಸ್ಟಾರ್ ಚಿತ್ರ ರವಿಚಂದ್ರನ್ ಅಭಿಮಾನಿಗಳ ನಿರೀಕ್ಷೆಯನ್ನು ಮೀರಿಸುವಂತೆ ಮೂಡಿಬಂದಿದೆ. ಮೈಸೂರಿನಿಂದ ಬೆಂಗಳೂರಿಗೆ ಹೃದಯವನ್ನು ತರುವ ಸನ್ನಿವೇಶಗಳಂತೂ ಪ್ರೇಕ್ಷಕರ ಹೃದಯಕ್ಕೇ ಕೈಹಾಕುತ್ತವೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಗೆದ್ದಿದ್ದಾರೆ. ಅಭಿಮಾನಿಗಳಷ್ಟೇ ಅಲ್ಲ ಎಲ್ಲರೂ ನೋಡಲೇಬೇಕಾದ ಚಿತ್ರ.

  English summary
  Kannada movie Krazy Star (Crazy Star) review. It's a truly fantastic film. Two big thumbs up for Krazy Star, don’t miss this one! This is a fascinating movie which will totally shake you up. Cast: V Ravichandran, Priyanka Upendra, Vikram Ravichandran etc. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X