»   » ಚಿತ್ರ ವಿಮರ್ಶೆ: ಮನ ಗೆದ್ದ ಸುದೀಪ್ 'ಮಾಣಿಕ್ಯ'

ಚಿತ್ರ ವಿಮರ್ಶೆ: ಮನ ಗೆದ್ದ ಸುದೀಪ್ 'ಮಾಣಿಕ್ಯ'

Posted By:
Subscribe to Filmibeat Kannada

ಎರಡು ಬಿಗ್ ಸ್ಟಾರ್ಸ್. ಒಂದು ಕಡೆ ಕನಸುಗಾರ, ಮಲ್ಲ ರವಿಚಂದ್ರನ್. ಇನ್ನೊಂದು ಕಡೆ ನಲ್ಲ, ಕಿಚ್ಚ ಸುದೀಪ್. ಇವರಿಬ್ಬರು ಸ್ಟಾರ್ ನಟರ ಜೊತೆಗೆ ಸಾಕಷ್ಟು ಹೆಸರು ಮಾಡಿರುವ ತಾರೆಗಳ ತೋಟವೇ ಚಿತ್ರದಲ್ಲಿದೆ. ಈ ತಾರೆಗಳ ತೋಟದಲ್ಲಿ ಅರಳಿದ ಎರಡು ಕುಸುಮಗಳ ಕಲರವೂ ಇದೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಇದೊಂದು ಮಲ್ಟಿಸ್ಟಾರರ್ ಸಿನಿಮಾ.

ಅಷ್ಟೂ ತಾರೆಗಳಿಗೆ ಒಪ್ಪುವಂತಹ ಪಾತ್ರ, ಅವರವರ ಪಾತ್ರಕ್ಕೆ ತಕ್ಕಷ್ಟು ಸ್ಕ್ರೀನ್ ಸ್ಪೇಸ್ ಹೊಂದಿಸಿ ಎರಡೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ಕೂರಿಸುವುದು ನಿಜಕ್ಕೂ ಸವಾಲಿನ ಕೆಲಸ. ಈ ಸವಾಲಿನಲ್ಲಿ ಕಿಚ್ಚ ಸುದೀಪ್ ಗೆದ್ದಿದ್ದಾರೆ. ಒಂದು ಒಳ್ಳೆಯ ಮಾಸ್ ಎಂಟರ್ ಟೈನರ್ ಚಿತ್ರವನ್ನು ಕನ್ನಡ ಪ್ರೇಕ್ಷಕರಿಗೆ ಕೊಡುವಲ್ಲಿ ಅವರು 'ಜಯ್'ಸಿದ್ದಾರೆ.

ಚಿತ್ರದಲ್ಲಿ ಸುದೀಪ್ ಹೆಸರೇ ಜಯ್ ಉರುಫ್ ವಿಜಯ್. ಇದು ತೆಲುಗಿನ ಯಶಸ್ವಿ ಚಿತ್ರ 'ಮಿರ್ಚಿ' ರೀಮೇಕ್ ಆದರೂ ಸುದೀಪ್ ಅಲ್ಲಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ಮಾಣಿಕ್ಯವನ್ನು ಕೊಟ್ಟಿದ್ದಾರೆ. ಟೈಟಲ್ ಕಾರ್ಡ್ ನಲ್ಲೇ ಆ ಬದಲಾವಣೆಯನ್ನು ಕಾಣಬಹುದು. 'ಮಿರ್ಚಿ' ಚಿತ್ರವನ್ನು ಫ್ರೇಮ್ ಟು ಫ್ರೇಮ್ ಮಾಡದೆ ಒಂದಷ್ಟು ಬದಲಾವಣೆಗಳನ್ನು ಚಿತ್ರದಲ್ಲಿ ಕಾಣಬಹುದು.

Rating:
3.5/5

ಚಿತ್ರ: ಮಾಣಿಕ್ಯ
ನಿರ್ಮಾಣ: ಕಿಚ್ಚ ಕ್ರಿಯೇಷನ್ಸ್, ಎನ್ ಕುಮಾರ್, ಕೊಲ್ಲಾ ಪ್ರವೀಣ್
ನಿರ್ದೇಶನ: ಸುದೀಪ
ಸಂಭಾಷಣೆ: ರವಿಶ್ರೀವತ್ಸ
ಸಂಗೀತ: ಅರ್ಜುನ್ ಜನ್ಯ
ಛಾಯಾಗ್ರಹಣ: ಶೇಖರ್ ಚಂದ್ರ
ಸಂಕಲನ: ಎನ್.ಎಂ.ವಿಶ್ವ
ಪಾತ್ರವರ್ಗ: ಸುದೀಪ್, ರವಿಚಂದ್ರನ್, ರಮ್ಯಕೃಷ್ಣ, ವರಲಕ್ಷ್ಮಿ, ರನ್ಯ, ರವಿಶಂಕರ್, ವಿಜಯ್ ಕುಮಾರ್, ಅಶೋಕ್, ಸಾಧು ಕೋಕಿಲ, ಚಿತ್ರ ಶೆಣೈ, ಪದ್ಮವಾಸಂತಿ, ಶರಣ್, ಧರ್ಮ, ಶೋಭರಾಜ್, ನಾಗಶೇಖರ್, ಟೆನ್ನಿಸ್ ಕೃಷ್ಣ ಮುಂತಾದವರು.

ಕೇವಲ ರೋಷಾವೇಷಕ್ಕಷ್ಟೇ ಕಥೆ ಸೀಮಿತವಾಗಿಲ್ಲ

ಎರಡು ಊರಿನ ಕುಟುಂಬಗಳ ನಡುವಿನ ದ್ವೇಷ, ವೈಷಮ್ಯ, ರೋಷಗಳ ಸಂಕಲನವೇ ಚಿತ್ರದ ಕಥಾವಸ್ತು. ಹಾಗಂತ ಕೇವಲ ಕಥೆ ಜಗಳ ಕುಟುಂಬ ಕಲಹಗಳಿಗಷ್ಟೇ ಸೀಮಿತವಾಗಿಲ್ಲ. ಒಂದಷ್ಟು ಕಾಮಿಡಿ, ಲವ್, ಸೆಂಟಿಮೆಂಟ್ ಅಂಶಗಳಿಗೂ ಸ್ಥಾನ ನೀಡಲಾಗಿದೆ. ಕಥೆ ಆರಂಭವಾವುದೇ ದೂರದ ಇಟಲಿಯ ಮಿಲನ್ ನಗರದಿಂದ.

ಮೊದಲರ್ಧ ಮುಗಿಯುವ ಹೊತ್ತಿಗೆ ಹೊಸ ಟ್ವಿಸ್ಟ್

ಅಲ್ಲಿ ಪರಿಚಯವಾಗುವ ಮಾನಸಾರ (ರನ್ಯ) ಹಿಂದೆ ಬೀಳುವ ಜಯ್ (ಸುದೀಪ) ಅಲ್ಲಿಂದ ಅವರ ಊರಿಗೆ ಬರುತ್ತಾನೆ. ಮನುಷ್ಯತ್ವವನ್ನೇ ಕಳೆದುಕೊಂಡು ರಾಕ್ಷಸರಂತೆ ಬದುಕುತ್ತಿರುವವರನ್ನು ಬದಲಾಯಿಸಲು ಪ್ರಯತ್ನಿಸುತ್ತಾನೆ. ಮೊದಲರ್ಧ ಮುಗಿಯುವ ಹೊತ್ತಿಗೆ ಜಯ್ ತಾನ್ಯಾರೆಂದು ರನ್ಯಾಗೆ ಹೇಳುತ್ತಾನೆ. ತಮ್ಮ ಕುಟುಂಬದ ಜಿದ್ದಿಗೆ ಕಾರಣವಾಗಿರುವವರ ಪುತ್ರ ಎಂಬುದನ್ನು ಹೇಳುತ್ತಾನೆ.

ದ್ವಿತೀಯಾರ್ಧದಲ್ಲಿ ಎಂಟ್ರಿ ಕೊಡುವ ಕ್ರೇಜಿಸ್ಟಾರ್

ಅಲ್ಲಿಂದ ಕಥೆ ಫ್ಲ್ಯಾಶ್ ಬ್ಯಾಕ್ ಗೆ ಹೊರಳುತ್ತದೆ. ಇಷ್ಟಕ್ಕೂ ಜಯ್ ಯಾರು? ಅವನ್ಯಾಕೆ ಅಲ್ಲಿಗೆ ಬಂದ? ಅವನ ಉದ್ದೇಶ ಏನು? ಎಂಬುದೇ ಚಿತ್ರದ ಕಥಾಹಂದರ. ಇದಿಷ್ಟನ್ನು ನೀಟಾಗಿ ಪ್ರೆಸೆಂಟ್ ಮಾಡಲಾಗಿದೆ. ದ್ವಿತೀಯಾರ್ಧದದಲ್ಲಿ ರವಿಚಂದ್ರನ್ ಎಂಟ್ರಿ ಕೊಡುವ ಮೂಲಕ ಚಿತ್ರ ಇನ್ನೊಂದು ತಿರುವು ಪಡೆದುಕೊಳ್ಳುತ್ತದೆ.

ಆದಿಶೇಷನಾಗಿ ರವಿಚಂದ್ರನ್ ಪಾತ್ರ

ಸುದೀಪ್ ಅವರ ತಂದೆಯಾಗಿ ರವಿಚಂದ್ರನ್ ಅವರು ಆದಿಶೇಷ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸದಾ ಶಾಂತಿಯನ್ನೇ ಹಂಬಲಿಸುವ ಅವರ ಪಾತ್ರಕ್ಕೆ ಚಿತ್ರದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇದೆ. ಗಂಡನನ್ನು ಬಿಟ್ಟು ತನ್ನ ಮಗನೊಂದಿಗೆ ದೂರ ಬದುಕುತ್ತಿರುವ ಜಯ್ ಅವರ ತಾಯಿಯಾಗಿ ರಮ್ಯಾಕೃಷ್ಣ ಪಾತ್ರವೂ ಚೆನ್ನಾಗಿ ಮೂಡಿಬಂದಿದೆ.

ಪೋಷಕ ಪಾತ್ರಗಳಲ್ಲಿ ಸಾಕಷ್ಟು ಕಲಾವಿದರ ಕಲರವ

ತಮಿಳಿನ ವಿಜಯ್ ಕುಮಾರ್ ಸೇರಿದಂತೆ ಶೋಭಾರಾಜ್, ಅಶೋಕ್, ಅವಿನಾಶ್, ಧರ್ಮ ಅವರ ಪಾತ್ರಗಳು ರೋಷಾವೇಶ ಪ್ರದರ್ಶಿಸುವಲ್ಲಿ ಗೆದ್ದಿವೆ. ಪದ್ಮಾ ವಾಸಂತಿ, ಚಿತ್ರಾ ಶೆಣೈ, ರೇಖಾ ಕುಮಾರ್, ವೀಣಾ ಸುಂದರ್ ಅವರ ಪಾತ್ರಗಳು ಸಾಂದರ್ಭಿಕವಾಗಿವೆ.

ಬೀರನಾಗಿ ರವಿಶಂಕರ್ ರಫ್ ಅಂಡ್ ಟಪ್ ರೋಲ್

ಅತಿಹೆಚ್ಚು ಗಮನಸೆಳೆಯುವ ಇನ್ನೊಂದು ಪಾತ್ರ ಬೀರ (ರವಿಶಂಕರ್). ಇಲ್ಲಿ ಅವರದು ಸಾಕ್ಷಾತ್ ಕಟುಕನಂತಹ ಪಾತ್ರ. ರಫ್ ಅಂಡ್ ಟಫ್ ಬೀರ ಕಡೆಗೆ ಬದಲಾಗುವ ಮೂಲಕ ಆಪ್ತವಾಗುತ್ತಾರೆ. ರವಿಶ್ರೀವತ್ಸ ಅವರು ತೆಲುಗು ಡೈಲಾಗ್ಸನ್ನು ಯಥಾವತ್ತಾಗಿ ಕನ್ನಡೀಕರಿಸಿಕೊಟ್ಟಿದ್ದಾರೆ.

ಇಬ್ಬರು ಹುಡುಗಿಯರ ನಡುವೆ ಜಯ್ ಜೂಟಾಟ

ಹೊಸ ಪರಿಚಯ ರನ್ಯ ಮುಗ್ಧ ಅಭಿನಯದಿಂದ ಮೊದಲ ಚಿತ್ರದಲ್ಲೇ ಗಮನಸೆಳೆದಿದ್ದಾರೆ. ಈ ಮೂಲಕ ಕನ್ನಡಕ್ಕೆ ಮತ್ತೊಬ್ಬ ಕನ್ನಡ ಬೆಡಗಿ ಸಿಕ್ಕಂತಾಗಿದೆ. ಮತ್ತೊಬ್ಬ ಬೆಡಗಿ ವರಲಕ್ಷ್ಮಿ ಶರತ್ ಕುಮಾರ್ ಅವರು ಹಳ್ಳಿ ಹುಡುಗಿಯಾಗಿ ಗಮನಸೆಳೆಯುತ್ತಾರೆ. ಇಬ್ಬರ ನಡುವೆ ಜಯ್ ಜೂಟಾಟವೂ ಇದೆ.

ಕಾಮಿಡಿಯಲ್ಲಿ ನಕ್ಕುನಲಿಸುವ 'ಮುಸಿಯಾ' ಸಾಧು

ಸಾಧು ಕೋಕಿಲ, ಶರಣ್, ನಾಗಶೇಖರ್, ಟೆನ್ನಿಸ್ ಕೃಷ್ಣ ಹೀಗೆ ಚಿತ್ರದಲ್ಲಿ ಸಾಕಷ್ಟು ಕಾಮಿಡಿ ಕಲಾವಿದರಿದ್ದಾರೆ. ಇವರೆಲ್ಲರ ನಡುವೆ 'ಮುಸಿಯಾ' ಅನ್ನಿಸಿಕೊಳ್ತಾ ವೀರ ಪ್ರತಾಪ ಸಿಂಹನಾಗಿ ಸಾಧು ಕೋಕಿಲ ನಕ್ಕು ನಲಿಸುತ್ತಾರೆ. ಸಾಧು ಕಾಮಿಡಿ ಮುಂದೆ ಉಳಿದವರು ಡಲ್.

ಹಾಡುಗಳ ಮೇಕಿಂಗ್ ಡಿಫರೆಂಟ್ ಆಗಿದೆ

ಸುದೀಪ ಅವರು ಹಾಡುಗಳ ಮೇಕಿಂಗ್ ನಲ್ಲಿ ತಮ್ಮದೇ ಆದಂತಹ ಟ್ರ್ಯಾಕ್ ನಲ್ಲಿ ಪ್ರೆಸೆಂಟ್ ಮಾಡಿದ್ದಾರೆ. ಮೂಲ ಚಿತ್ರಕ್ಕೆ ಹೋಲಿಸಿದರೆ ಹಾಡುಗಳು ಕಂಪ್ಲೀಟ್ ಡಿಫರೆಂಟ್. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್. ಶೇಖರ್ ಚಂದ್ರ ಅವರ ಛಾಯಾಗ್ರಹಣವೂ ಚಿತ್ರದಕ್ಕೆ ತನ್ನದೇ ಆದಂತಹ ಚೌಕಟ್ಟನ್ನು ಹಾಕಿಕೊಟ್ಟಿದೆ.

ಒಟ್ಟಾರೆಯಾಗಿ ಇದೊಂದು ಮರೆಯದ ಮಾಣಿಕ್ಯ

ಒಟ್ಟಾರೆಯಾಗಿ 'ಮಾಣಿಕ್ಯ' ಚಿತ್ರವನ್ನು ಮೂಲ 'ಮಿರ್ಚಿ'ಗೆ ಹೋಲಿಕೆ ಮಾಡದೆ ನೋಡಿದರೆ ಕಿಚ್ಚ ಸುದೀಪ್ ಅವರ ಶ್ರಮ ಎದ್ದು ಕಾಣುತ್ತದೆ. ಇಲ್ಲಿ ಅವರು ಯಥಾವತ್ತಾಗಿ ಚಿತ್ರವನ್ನು ತರದೆ ತಮ್ಮದೇ ಆದಂತಹ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಸುದೀಪ್ ಅಭಿಮಾನಿಗಳ ಪಾಲಿಗೆ ಇದು ಮರೆಯದ ಮಾಣಿಕ್ಯ. ಒಳ್ಳೆಯ ಫ್ಯಾಮಿಲಿ ಎಂಟರ್ ಟೈನರ್ ಚಿತ್ರ.

English summary
Though it was well known fact that Maanikya is the remake of Telugu hit Mirchi, high expectations were lying on the movie as it is the directorial venture of Kiccha Sudeep with another maverick movie maker Ravichandran. With all these highlights, Maanikya will never be a disappointment the fans of Nalla and Malla, who plays the role of father and a son in the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada