»   » ಮಿ. 420: ನಗುವುದೋ ಬಿಡುವುದೋ ನೀವೇ ಹೇಳಿ!

ಮಿ. 420: ನಗುವುದೋ ಬಿಡುವುದೋ ನೀವೇ ಹೇಳಿ!

By: ಜೀವನ್ ಸೂರ್ಯ
Subscribe to Filmibeat Kannada
Rating:
2.0/5
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮಿಸ್ಟರ್ 420' ಚಿತ್ರವು ತೆರೆಯ ಮೇಲೆ ಪ್ರದರ್ಶನ ಕಾಣುತ್ತಿದೆ. ಆದರೆ ಈ ಚಿತ್ರವು ಗಣೇಶ್ ಅಭಿಮಾನಿಗಳನ್ನು ಕೂಡ ಮೆಚ್ಚಿಸುವುದು ಸಂದೇಹ. ಈ ಮೊದಲು ಬಂದಿದ್ದ ಗಣೇಶ್ ನಟನೆಯ 'ರೋಮಿಯೋ' ಚಿತ್ರ ಚೆನ್ನಾಗಿತ್ತಾದ್ದರಿಂದ ಸಹಜವಾಗಿಯೇ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟು ಚಿತ್ರಮಂದಿರಕ್ಕೆ ಧಾವಿಸಲು ಸಜ್ಜಾಗಿದ್ದಾರೆ. ಆದರೆ ಈ 'ಮಿಸ್ಟರ್ 420'ಚಿತ್ರವು ನಿರೀಕ್ಷೆಯನ್ನು ಸಫಲವಾಗಿಸಲು ಬೇಕಾದ ಉತ್ತಮ ಕಥೆ, ಚಿತ್ರಕಥೆಯನ್ನಾಗಲೀ ಅಥವಾ ನಿರೂಪಣೆಯನ್ನಾಗಲೀ ಹೊಂದಿಲ್ಲ. ಸಂಭಾಷಣೆ ಕೂಡ ಅಷ್ಟೇನೂ ಗಮನಸೆಳೆಯುವುದಿಲ್ಲ.

ಅನಾಥ, ಹಳ್ಳಿಯ ಮುಗ್ಧ ಕಥಾನಾಯಕ ಸಿಟಿಯಲ್ಲಿರುವ ತನ್ನ ಸೋದರಮಾವ (ಪಕ್ಕಾ 420) ಕೈಗೆ ಸಿಕ್ಕಿ ನರಳುವುದು ಒನ್ ಲೈನ್ ಸ್ಟೋರಿ. 420 ಜೊತೆಗಿದ್ದ ಮೇಲೆ ಮಾಮೂಲಿ ಎನಿಸುವ ಪಿಕ್ ಪಾಕೆಟ್, ಕಳ್ಳತನದಲ್ಲಿ ಸಿಕ್ಕಿಬಿದ್ದು ಪೊಲೀಸ್ ಬೆತ್ತದ ರುಚಿ, ಜೈಲೂಟದ ರುಚಿ ಅವೆಲ್ಲವನ್ನೂ ನೋಡುವ ಕಥಾನಾಯಕ 'ಮಿಸ್ಟರ್ 420' ಪಟ್ಟ ಗಿಟ್ಟಿಸುತ್ತಾನೆ. ಘಟನೆಯೊಂದರಲ್ಲಿ ಜೊತೆಯಾಗಿ ಪ್ರೇಯಸಿಯಾಗುವ ಹುಡುಗಿ, ಕಥಾನಾಯಕನ ಜೀವ ರಕ್ಷಣೆ ಹಾಗು ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾಳೆ. ಕಥಾನಾಯಕ 'ಮಿಸ್ಟರ್ 420' ಕಥೆ ಏನಾಗುತ್ತದೆ ಎಂಬುದನ್ನು ತಿಳಿಯಲು ಚಿತ್ರ ನೋಡಿ...

'ಮಿಸ್ಟರ್ 420' ಚಿತ್ರ ಹೆಸರಿಗೆ ತಕ್ಕಂತೆ ಕಥಾನಾಯಕ ಕೃಷ್ಣನ (ಮಿಸ್ಟರ್ 420) ಜೀವನದಲ್ಲಿ ನಡೆಯುವ ಘಟನೆ ಸುತ್ತ ಕೇಂದ್ರೀಕರಿಸಿದೆ. ಆದರೆ, ನಾಯಕನಿಗಿಂತಲೂ 'ಡಬ್ಬಲ್ 420' ಆಗಿರುವ ಆತನ ಸೋದರ ಮಾವನ ಪಾತ್ರದ ಸುತ್ತವೇ ಚಿತ್ರಕಥೆ ಸುತ್ತುತ್ತದೆ. ಚಿತ್ರದ ನಿರೂಪಣೆ ಇಬ್ಬರ ಜೊತೆ ಪೊಲೀಸ್ ಪಾತ್ರಧಾರಿ ಮತ್ತೊಬ್ಬರನ್ನೂ ಸುತ್ತಿಸುತ್ತಿ ಸುಸ್ತಾಗಿದೆ. ಆದರೆ ಚಿತ್ರ ನೋಡಿದ ಪ್ರೇಕ್ಷಕರಿಗೆ, ಚಿತ್ರದಲ್ಲಿ ಕೇವಲ ಗಣೇಶ್, ಪ್ರಣೀತಾ, ರಂಗಾಯಣ ರಘು, ಸಾಧು ಕೋಕಿಲ ಜೊತೆ ಕೆಲವೊಂದು ಕಾಮಿಡಿ ದೃಶ್ಯಗಳು ಮತ್ತು ಸಂಭಾಷಣೆಗಳು ಮಾತ್ರ ನೆನಪಿನಲ್ಲಿ ಉಳಿದರೆ ಅಚ್ಚರಿಯಿಲ್ಲ. ಬಿಎ ಮಧು ಕಥೆಯಾಗಲೀ, ಸಂಭಾಷಣೆಯಾಗಲೀ ಅಷ್ಟೇನೂ ಚೆನ್ನಾಗಿಲ್ಲ.

ನಿರ್ದೇಶನದ ಬಗ್ಗೆ: ನಿರ್ದೇಶಕ ಪ್ರದೀಪ್ ರಾಜ್ ಈ ಮೊದಲು ಯಶ್ ನಾಯಕತ್ವದ 'ಕಿರಾತಕ' ಚಿತ್ರದ ಮೂಲಕ ಗಮನಸೆಳೆದವರು. ಆದರೆ, ಈ ಚಿತ್ರವನ್ನು ಅವರು ಸಾಕಷ್ಟು ಪೂರ್ವಸಿದ್ಧತೆಯಿಲ್ಲದೇ ಮಾಡಿ ಮುಗಿಸಿದಂತಿದೆ. ಒಂದು ಕಾಲದ ಗೋಲ್ಡನ್ ಸ್ಟಾರ್ ಗಣೇಶ್ ನಂಬಿ ಚಿತ್ರಕ್ಕೆ ಕಥೆ ಮಾಡಿದ್ದಾರೆ ಖ್ಯಾತ ಸಂಭಾಷಣೆಕಾರ ಬಿಎ ಮಧು. ಆದರೆ ಚಿತ್ರಕಥೆ ಮಾಡಿರುವ ಪ್ರದೀಪ್ ರಾಜ್, ಗಣೇಶ್ ಅವರಿಗಿಂತ ಹೆಚ್ಚು ರಂಗಾಯಣ ರಘು ಅವರನ್ನೇ ನಂಬಿದಂತಿದೆ. ನಿರೂಪಣೆ ಮಾಡುವ ಸಮಯದಲ್ಲಿ ಸಾಧು ಕೋಕಿಲ ಅವರನ್ನೂ ಸಾಕಷ್ಟು ನಂಬಿದ್ದಾರೆ ಪ್ರದೀಪ್ ರಾಜ್.

ಆದರೆ ಮೂವರನ್ನು ತೀರಾ ನಂಬಿ ಮಾಡಿರುವ 'ಮಿಸ್ಟರ್ 420' ಚಿತ್ರ, ಪ್ರೇಕ್ಷಕರನ್ನು ರಂಜಿಸಲು ಮಾತ್ರ ಸಾಕಷ್ಟು ಪರದಾಡುತ್ತದೆ. ಕಾರಣ, ಬಿಎ ಮಧು ಕಥೆ ಹಾಗೂ ಸಂಭಾಷಣೆಗೆ ಚಿತ್ರಕಥೆ ಮತ್ತು ನಿರ್ದೇಶನ ಮಾಡುವಲ್ಲಿ ಕಂಟ್ರೋಲ್ ಸಿಗದೇ ಒದ್ದಾಡಿದ್ದಾರೆ ನಿರ್ದೇಶಕ ಪ್ರದೀಪ್ ರಾಜ್. ಕಾಮಿಡಿ ದೃಶ್ಯಗಳನ್ನು ಚಿತ್ರದ ತುಂಬಾ ತುರುಕಿ, ಮೂವರೂ ನಟರ ಮೇಲೆ ಭಾರ ಹಾಕಿ ಚಿತ್ರವನ್ನು ಮುಗಿಸಿ ನಿಟ್ಟುಸಿರುಬಿಟ್ಟಿದ್ದಾರೆ ನಿರ್ದೇಶಕರು. ಚಿತ್ರದ ನಿರೂಪಣೆಯಲ್ಲೂ ನಿರ್ದೇಶಕರಿಗೆ ಹಿಡಿತ ಸಾಧಿಸಲು ಸಾಧ್ಯವಾಗದೇ ಇರುವುದರಿಂದ ಗಣೇಶ್, ರಂಗಾಯಣ ರಘು ಹಾಗೂ ಸಾಧು ಕೋಕಿಲ ಅಭಿಮಾನಿಗಳು ಮಾತ್ರ ಚಿತ್ರ ನೋಡುವಂತಾಗಿದೆ. ಅವರೂ ಮೆಚ್ಚಿಕೊಳ್ಳುವುದು ಕಷ್ಟ!

ಕಲಾವಿದರ ಬಗ್ಗೆ: ಗೋಲ್ಡನ್ ಸ್ಟಾರ್ ಗಣೇಶ್ ನಟನೆ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಮುಂಗಾರು ಮಳೆ ಮೂಲಕ ಗೋಲ್ಡನ್ ಸ್ಟಾರ್ ಆದ ಗಣೇಶ್ ಅವರು ಈಗ 'ಗೋಲ್ಡನ್ ಸ್ಟಾರ್' ಆಗಿ ಉಳಿದಿಲ್ಲ. ಆದರೆ ಗಣೇಶ್ 'ಗೋಲ್ಡನ್ ನಟ', ಅಪ್ಪಟ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ಪಾತ್ರಕ್ಕೆ ತಕ್ಕ ನಟನೆ, ಮನಮೆಚ್ಚುವ, ಚುರುಕು ಶೈಲಿಯ ಸಂಭಾಷಣೆ ಹಾಗೂ ಸೂಕ್ತ ಮ್ಯಾನರಿಸಂ ಮೂಲಕ ಚಿತ್ರದುದ್ದಕ್ಕೂ ಎಂದಿನಂತೆ ಮಿಂಚಿದ್ದಾರೆ ಗಣೇಶ್. ಚಿತ್ರದುದ್ದಕ್ಕೂ ಅವರಿಗೆ ಸಾಥ್ ನೀಡಿರುವ ರಂಗಾಯಣ ರಘು, ಈ ಚಿತ್ರದಲ್ಲಿ ಎಂದಿನ ತಮ್ಮ ಅಬ್ಬರದ ಅಭಿನಯದ ಮುಂದುವರಿದ ಭಾಗವನ್ನು ನೀಡಿದ್ದಾರೆ.

ಗಣೇಶ್ ಅವರಿಗೆ ನಾಯಕಿಯಾಗಿ ನಟಿಸಿರುವ ಪ್ರಣೀತಾ ಎಂದಿನ ತಮ್ಮ ಅಭಿನಯಕ್ಕಿಂತ ಕೊಂಚ ಹೆಚ್ಚೇ ನಟಿಸಿ ಗಮನಸೆಳೆದಿದ್ದಾರೆ, ಇಷ್ಟು ಕಾಲ ಕೇವಲ ಚೆಂದದ ಕಣ್ಣು ಹಾಗೂ ಸುಂದರ ಮುಖ, ಮೈಮಾಟದ ಮೂಲಕ ಮಾತ್ರ ಗಮನ ಸೆಳೆಯುತ್ತಿದ್ದ ಪ್ರಣೀತಾ ಈ ಚಿತ್ರದ ಮೂಲಕ ಅಭಿನಯದಲ್ಲೂ ಭರವಸೆ ಮೂಡಿಸಿದ್ದಾರೆ. ಪೋಷಕಪಾತ್ರವಾದರೂ ಚಿತ್ರದಲ್ಲಿ ಪ್ರಮುಖ ಎನಿಸುವ ಪೊಲೀಸ್ ಪಾತ್ರದಲ್ಲಿ ಸಾಧುಕೋಕಿಲ ಮಿರಮಿರ ಮಿಂಚಿದ್ದಾರೆ. ಉಳಿದಂತೆ ಕುರಿಗಳು ಖ್ಯಾತಿಯ ಪ್ರತಾಪ್, ಸ್ವಯಂವರ ಚಂದ್ರು ಹಾಗೂ ಇತರ ಪೋಷಕ ನಟರದು ಪಾತ್ರಕ್ಕೆ ತಕ್ಕ ಅಭಿನಯ.

ವಿ ಹರಿಕೃಷ್ಣ ಸಂಗೀತದಲ್ಲಿ ಮೂಡಿಬಂದಿರುವ ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಯೋಗರಾಜ್ ಭಟ್ ಸಾಹಿತ್ಯದ ಹಾಡುಗಳು ಓಕೆ. ಹರಿಕೃಷ್ಣ ಹಿನ್ನೆಲೆ ಸಂಗೀತ ಅಷ್ಟೇನೂ ಗಮನಸೆಳೆಯುವುದಿಲ್ಲ. ಆರ್ ಗಿರಿ ಛಾಯಾಗ್ರಹಣ, ವಿ ಯತೀಶ್ ಕುಮಾರ್ ಸಂಕಲನ ಚಿತ್ರಕ್ಕೆ ನೀಡಿರುವ ಕೊಡುಗೆ 'ಫಿಫ್ಟಿ-ಫಿಫ್ಟಿ'.

ಒಟ್ಟಿನಲ್ಲಿ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮಿಸ್ಟರ್ 420' ಚಿತ್ರವು ಗಣೇಶ್ ಅಭಿಮಾನಿಗಳಿಗೆ ಮೆಚ್ಚುಗೆಯಾಗಬಹುದು. ಗಣೇಶ್ ನೋಡಲೆಂದೇ ಚಿತ್ರಮಂದಿರಕ್ಕೆ ಹೋದವರಿಗೆ ಚಿತ್ರ ಇಷ್ಟವಾಗಬಹುದು ಅಷ್ಟೇ. ರಂಗಾಯಣ ರಘು ಮತ್ತು ಸಾಧು ಕೋಕಿಲ ಇಷ್ಟಪಡುವವರೂ ಕೂಡ ಗಣೇಶ್ ಅಭಿಮಾನಿಗಳ ಜೊತೆ ಹೋಗಿ ಚಿತ್ರಮಂದಿರದಲ್ಲಿ ಖುಷಿಯಾಗಿರಬಹುದು. ಆದರೆ, ಉತ್ತಮ ಚಿತ್ರವೊಂದನ್ನು ನೋಡುವುದಕ್ಕೆಂದೇ ಹೋದವರು ಸ್ವಲ್ಪ ಕಸಿವಿಸಿ ಅನುಭವಿಸಿದರೆ ಅಚ್ಚರಿಯಲ್ಲ. ಇನ್ನೂ ಚೆನ್ನಾಗಿ ಮಾಡಬಹುದಾಗಿದ್ದ ಚಿತ್ರವನ್ನು ಹೀಗೆ ಕೈಚೆಲ್ಲಿರುವುದು ಯಾಕೆ ಎಂಬುದೇ ಎಲ್ಲರನ್ನೂ ಕಾಡಬಹುದಾದ ಪ್ರಶ್ನೆ!

English summary
Ganesh and Pranitha lead movie 'Mister 420' is with full of Comedy. But, the film will not impress more for the adience either by its comedy or story. Ganesh, Rangayana Raghu and Sadhukokila acted well in this Pradeep Raj directed Movie is the only thing to see. Sandesh Nagaraj is the Producer for this movie. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada