»   » ಚಿತ್ರ ವಿಮರ್ಶೆ: ಮೇಡಂಗೆ 'ಒಮ್ಮೆ' ನಮಸ್ತೇ ಹಾಕಿ

ಚಿತ್ರ ವಿಮರ್ಶೆ: ಮೇಡಂಗೆ 'ಒಮ್ಮೆ' ನಮಸ್ತೇ ಹಾಕಿ

By: ಉದಯರವಿ
Subscribe to Filmibeat Kannada

ಹತ್ತು ವರ್ಷಗಳ ಹಳೆಯ ಕಥೆ ಇದು. ತೆಲುಗಿನಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಚಿತ್ರ 'ಮಿಸ್ಸಮ್ಮ'ನ್ನೇ (2003) ಕನ್ನಡದ 'ನಮಸ್ತೇ ಮೇಡಂ'. ಕಥೆ ಹಳೆಯದಾದರೂ ಇಂದಿಗೂ ಪ್ರಸ್ತುತ ಎಂಬ ಕಾರಣಕ್ಕೋ ಏನೋ ಕನ್ನಡಕ್ಕೆ 'ಮಿಸ್ಸಮ್ಮ' ಈಗ ಎಂಟ್ರಿಕೊಟ್ಟಿದ್ದಾಳೆ. ಆದರೆ ಆ 'ಮಿಸ್ಸಮ್ಮ'ನಂತೆ ಈ 'ಮೇಡಂ' ಇಲ್ಲ ಎಂಬುದೇ ದುರಂತ.

ಪರ ಪುರುಷನ ಹೈಜಾಕ್ ಮಾಡುವ ಹೆಣ್ಣೊಬ್ಬಳ ಕಥೆ ಇದಾಗಿದೆ. ಟ್ವಿಸ್ಟ್ ಏನೆಂದರೆ ತನ್ನ ಗಂಡನನ್ನು ಉಳಿಸಿಕೊಳ್ಳಲು ಇನ್ನೊಬ್ಬ ಹೆಣ್ಣು ಮಾಡುವ ಸಾಹಸವೇ ಚಿತ್ರದ ಕಥಾವಸ್ತು. ಕೆಲವು ಹಾಲಿವುಡ್, ಬಾಲಿವುಡ್ ಚಿತ್ರಗಳ ಸಂಗಮದಂತಿರುವ ಈ ಚಿತ್ರ ಹನಿಟ್ರ್ಯಾಪ್ ಗೆ ಒಳಗಾಗುವವನ ಪೀಕಲಾಟಗಳ ಕೌಟುಂಬಿಕ ಧಾರಾವಾಹಿ.

ಹನಿಟ್ರ್ಯಾಪ್ ಗೆ ಒಳಗಾಗುವ ಗಂಡನಾಗಿ, ಪ್ರೀತಿಯ ಮಡದಿಯ ಮುದ್ದಿನ ಪತಿಯಾಗಿ, ಕಾರ್ಪೊರೇಟ್ ಕಂಪನಿಯೊಂದರ ನೌಕರ ನಂದ ಗೋಪಾಲನಾಗಿ ಶ್ರೀನಗರ ಕಿಟ್ಟಿ ಅಭಿನಯಿಸಿದ್ದಾರೆ. ಕಂಪನಿಯ ಎಂಡಿಯಾಗಬೇಕೆಂದು ಕನಸನ್ನೂ ಕಂಡಿರುತ್ತಾನೆ. [ಫೇರ್ ಅಂಡ್ ಲವ್ಲಿ ಚಿತ್ರ ವಿಮರ್ಶೆ]

Rating:
2.0/5

ಚಿತ್ರ: ನಮಸ್ತೇ ಮೇಡಂ
ನಿರ್ಮಾಪಕರು: ರವಿ.ಆರ್.ಗರಣಿ
ನಿರ್ದೇಶನ: ರಘುರಾಜ್.ಆರ್
ಛಾಯಾಗ್ರಹಣ: ಸಂತೋಷ್ ರೈ ಪತಾಜೆ
ಸಂಗೀತ: ಶ್ರೀಧರ್.ವಿ.ಸಂಭ್ರಮ್
ಸಂಭಾಷಣೆ: ವಿನಾಯಕರಾಮ ಕಲಗಾರು ಹಾಗೂ ಸಾಯಿ
ಪಾತ್ರವರ್ಗ: ಶ್ರೀನಗರ ಕಿಟ್ಟಿ, ರಾಗಿಣಿ ದ್ವಿವೇದಿ, ನಿಕಿಶ ಪಟೇಲ್, ಸಾಧುಕೋಕಿಲ, ಸತ್ಯಜಿತ್, ಸೀತಾ, ಸನಾ, ಬ್ಯಂಕ್ ಜನಾರ್ದನ್, ಶ್ರೀನಾಥ್ ವಸಿಷ್ಠ, ಸಂಗಮೇಶ್, ಶಂಕರ್‍ರಾವ್, ಲಯೇಂದ್ರ, ನಾಗರಾಜ್ ಮೂರ್ತಿ, ಸವಿತಾ ಕೃಷ್ಣಮೂರ್ತಿ, ಮಾಲತೇಶ್, ಗಂಡಸಿ ನಾಗರಾಜ್ ಇದ್ದಾರೆ. ವಿಶೇಷಪಾತ್ರದಲ್ಲಿ ನಿಖಿತಾ ಅಭಿನಯಿಸಿದ್ದಾರೆ.

ಕನಸಿಗೆ ಕೊಳ್ಳಿ ಇಡುವ ರಾಧಿಕಾ

ಆದರೆ ಇವನ ಕನಸಿಗೆ ಕೊಳ್ಳಿ ಇಡುತ್ತಾಳೆ ಕಂಪನಿಯ ಒಡತಿ ರಾಧಿಕಾ (ರಾಗಿಣಿ ದ್ವಿವೇದಿ). ರಾಧಿಕಾಳ ಮೈಂಡ್ ಗೇಮ್ ಗೆ ಸುಲಭವಾಗಿ ತುತ್ತಾಗುತ್ತಾನೆ ನಂದ ಗೋಪಾಲ. ತನ್ನ ಮುದ್ದಿನ ಮಡದಿ ರುಕ್ಮಿಣಿಯನ್ನೂ (ನಿಕೇಶಾ ಪಟೇಲ್) ಮರೆಸುವಂತೆ ಮಾಡುತ್ತಾಳೆ ರಾಧಿಕಾ.

ನಂದ ಗೋಪಾಲನಿಗೆ ನಾನಾ ಕಿರುಕುಳ

ರಾಧಿಕಾ ಮತ್ತು ನಂದ ಗೋಪಾಲನ ವ್ಯವಹಾರ ಮದುವೆ ತನಕ ಹೋಗುತ್ತದೆ. ತನ್ನ ಗಂಡನನ್ನು ಮರಳಿ ಪಡೆಯಲು ರುಕ್ಮಿಣಿಯ ರಂಗಪ್ರವೇಶವಾಗುತ್ತದೆ. ಇದರಿಂದ ರೊಚ್ಚಿಗೆದ್ದ ರಾಧಿಕಾ ತನ್ನ ನೌಕರ ನಂದ ಗೋಪಾಲನಿಗೆ ನಾನಾ ಕಿರುಕುಳ ಕೊಡಲು ಪ್ರಾರಂಭಿಸುತ್ತಾಳೆ. ಕಡೆಗೆ ನಂದ ಗೋಪಾಲ ಹೇಗೆ ಪಾರಾಗುತ್ತಾನೆ, ರಾಧಿಕಾ ಅವನನ್ನು ಟ್ರ್ಯಾಪ್ ಮಾಡಲು ಕಾರಣ ಏನಿರಬಹುದು ಎಂಬುದನ್ನು ಸಾಧ್ಯವಾದರೆ ತೆರೆಯ ಮೇಲೆ ನೋಡಿ ಆನಂದಿಸಿ.

ಗಮನಸೆಳೆಯುವ ರಾಗಿಣಿ ಪಾತ್ರ

ರಾಧಿಕಾ ಪಾತ್ರಕ್ಕೆ ನ್ಯಾಯ ಸಲ್ಲಿಸಲು ರಾಗಿಣಿ ಅವರು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಉನ್ಮಾದಭರಿತ ಪಾತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಬಗೆ ಗಮನಸೆಳೆಯುತ್ತದೆ. ರಾಗಿಣಿ ಅವರ ಅಬ್ಬರದಲ್ಲಿ ನಿಕೇಶಾ ಪಟೇಲ್ ಮಂಕಾಗಿದೆ. ಚಿತ್ರದಲ್ಲಿ ಅವರದು ಮುದ್ದಿನ ಮಡದಿ ಪಾತ್ರವಾದರೂ ಅಷ್ಟು ಮುದ್ದಾಗಿ ಮೂಡಿಬಂದಿಲ್ಲ.

ಸೊರಗಿದ ಶ್ರೀನಗರ ಕಿಟ್ಟಿ ಪಾತ್ರ

ಇನ್ನು ಶ್ರೀನಗರ ಕಿಟ್ಟಿ ಅವರ ಪಾತ್ರವೂ ಸಂಪೂರ್ಣ ಸೊರಗಿದೆ. 'ಬಹುಪರಾಕ್' ಚಿತ್ರದಲ್ಲಿ ಇದೇ ಕಿಟ್ಟಿ ಇವರೇನಾ ಎಂಬ ಅನುಮಾನ ಮೂಡುವಂತಿದೆ. ಇನ್ನು ಚಿತ್ರದ ತಾಂತ್ರಿಕ ಅಂಶಗಳ ಬಗ್ಗೆ ಹೇಳದಿರುವುದೇ ಒಳಿತು.

ತಾಂತ್ರಿಕ ಅಂಶಗಳ ಬಗ್ಗೆ ಹೇಳದಿರುವುದೇ ಒಳಿತು

ಡಬ್ಬಿಂಗ್ ಅಂತೂ ತುಂಬಾ ಕಳಪೆ ಮಟ್ಟದಲ್ಲಿದೆ. ಛಾಯಾಗ್ರಹಣ ಸಾಧಾರಣ. ಮೊದಲರ್ಧದ ಚಿತ್ರಕಥೆಯಲ್ಲಿ ಧಂ ಇಲ್ಲ. ದ್ವಿತೀಯಾರ್ಧದಲ್ಲಿ ಚಿತ್ರ ಸ್ವಲ್ಪ ವೇಗ ಪಡೆದುಕೊಳ್ಳುತ್ತದೆ. ಸಾಧುಕೋಕಿಲ ಅವರ ಕಾಮಿಡಿ ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಿದೆ.

ಸಾಧ್ಯವಾದರೆ ಮೇಡಂಗೆ ಒಮ್ಮೆ ನಮಸ್ತೆ ಹಾಕಿ

ಒಂದೆರಡು ಹಾಡುಗಳು ಬಿಟ್ಟರೆ ಹಿನ್ನೆಲೆ ಸಂಗೀತ, ಉಳಿದ ಹಾಡುಗಳ ಬಗ್ಗೆ ಕೇಳಲೇಬೇಡಿ. 'ನಮಸ್ತೆ ಮೇಡಂ' ಚಿತ್ರ ಇಂದಿನ ದೈನಿಕ ಧಾರಾವಾಹಿಗಳನ್ನು ನೆನಪಿಸುವಂತಿದೆ. ಸಮಯ, ದುಡ್ಡು, ತಾಳ್ಮೆ, ಸಂಯಮ ಇದ್ದರೆ ಒಮ್ಮೆ ನಮಸ್ತೇ ಹಾಕಿ.

English summary
Kannada movie Namasthe Madam review. It seems more like a daily soap opera than an actual movie. Not worth the watch in a theater. Wait for it to come on television.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada