»   » ಚಿತ್ರ ವಿಮರ್ಶೆ: ನನ್ ಲೈಫ್ ಅಲ್ಲಿ ತಾಜಾ ಲವ್ ಸ್ಟೋರಿ

ಚಿತ್ರ ವಿಮರ್ಶೆ: ನನ್ ಲೈಫ್ ಅಲ್ಲಿ ತಾಜಾ ಲವ್ ಸ್ಟೋರಿ

Posted By:
Subscribe to Filmibeat Kannada

ಹೊಸಬರ ಪ್ರಯತ್ನಗಳು ಹೊಸದಾಗಿಯೇ ಇರುತ್ತವೆ ಎಂಬುದಕ್ಕೆ 'ನನ್ ಲೈಫ್ ಅಲ್ಲಿ' ಚಿತ್ರ ಒಂದು ಉತ್ತಮ ನಿದರ್ಶನ. ಪಕ್ಕಾ ತಂತ್ರಜ್ಞರು ಕೈಜೋಡಿಸಿದರೆ ತೆರೆಯ ಮೇಲೆ ಏನೆಲ್ಲಾ ಕಮಾಲ್ ಮಾಡಬಹುದು ಎಂಬುದಕ್ಕೆ ಈ ಚಿತ್ರ ಸಾಕ್ಷಿ.

ಮೂಲತಃ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಚಿತ್ರದ ನಿರ್ದೇಶಕ ರಾಮ್ ದೀಪ್ ಅವರು ತಂತ್ರಜ್ಞರನ್ನು ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. ತಮ್ಮ ಸೊಗಸಾದ ಪ್ರೇಮಕಥೆಗೆ ಅಷ್ಟೇ ಅಚ್ಚುಕಟ್ಟಾದ ನಿರೂಪಣೆ ಇದೆ. ಕಥೆ ಎಲ್ಲೂ ಬೋರು ಹೊಡೆಸುವುದಿಲ್ಲ. ಹಾಗಂತ ಸಿಕ್ಕಾಪಟ್ಟೆ ಹೀರೋಯಿಸಂ ತೋರಿಸುವ ಚಿತ್ರವೂ ಇದಲ್ಲ. ಎಲ್ಲವೂ ನೇರ, ದಿಟ್ಟ ಹಾಗೂ ನಿರಂತರ.

Rating:
4.0/5
ಒಂದು ಚಿತ್ರ ಹೇಗಿರಬೇಕು ಎಂಬುದಕ್ಕೆ 'ನನ್ ಲೈಫ್ ಅಲ್ಲಿ' ಚಿತ್ರವನ್ನು ಮಾಡೆಲ್ ಆಗಿ ಬೇಕಾದರೂ ತೆಗೆದುಕೊಳ್ಳಬಹುದು. ಟೈಟಲ್ ಕಾರ್ಡ್ ನಿಂದಲೇ ಗಮನಸೆಳೆಯುತ್ತಾ ಸಾಗುವ ಚಿತ್ರ ಸಂಭಾಷಣೆ (ಮನೋಜವ ಗಲಗಲಿ) ಹಾಗೂ ತಾಂತ್ರಿಕ ಅಂಶಗಳಿಂದ ಪ್ರೇಕ್ಷಕರು ವಾವ್ ಎನ್ನುವಂತೆ ಮಾಡುತ್ತದೆ.

ಚಿತ್ರ: ನನ್ ಲೈಫ್ ಅಲ್ಲಿ
ನಿರ್ಮಾಣ: ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್
ಕಥೆ, ನಿರ್ದೇಶನ: ರಾಮ್ ದೀಪ್
ಸಂಭಾಷಣೆ: ಮನೋಜವ ಗಲಗಲಿ
ಸಂಗೀತ ನಿರ್ದೇಶನ: ಬಿ.ಅಜನೀಶ್ ಲೊಕನಾಥ್
ಛಾಯಾಗ್ರಹಣ: ಮನೋಹರ್ ಜೋಶಿ
ಸಂಕಲನ: ಸಂತೋಷ್ ರಾಧಾಕೃಷ್ಣ
ಸಾಹಸ ನಿರ್ದೇಶನ: ಡಿಫರೆಂಟ್ ಡ್ಯಾನಿ
ಕಲಾ ನಿರ್ದೇಶನ ಹೊಸ್ಮನೆ ಮೂರ್ತಿ
ಪಾತ್ರವರ್ಗ: ಅನೀಶ್, ಸಿಂಧೂ ಲೋಕನಾಥ್, ದಿಲೀಪ್ ರಾಜ್, ಮಿತ್ರ, ನಾಗತಿಹಳ್ಳಿ ಚಂದ್ರಶೇಖರ್ ಮುಂತಾದವರು.

ಇಷ್ಟಕ್ಕೂ ಚಿತ್ರದ ಟೂ ಲೈನ್ ಸ್ಟೋರಿ ಏನೆಂದರೆ

ಇಷ್ಟಕ್ಕೂ ಚಿತ್ರದ ಟೂ ಲೈನ್ ಸ್ಟೋರಿ ಏನೆಂದರೆ... ಜಾಲಿ ಹುಡುಗ ದೀಪು (ಅನೀಶ್ ತೇಜಸ್ವರ್) ಲೈಫಲ್ಲಿ ಏನೆಲ್ಲಾ ಆಗುತ್ತದೆ, ಈ ದೇಶದ ಬಗ್ಗೆ ಅವನಿಗೆ ಯಾಕೆ ತಿರಸ್ಕಾರ ನೋಟ, ಅಸಹ್ಯ. ಇಲ್ಲಿನ ದುಃಸ್ಥಿತಿಗೆ ರೋಸಿ ಸಂಶೋಧನೆಗಾಗಿ ನಾರ್ವೆ ದೇಶಕ್ಕೆ ಹೋಗಬೇಕೆಂದುಕೊಳ್ಳುತ್ತಾನೆ.

ಅಣ್ಣ ಪಕ್ಕಾ ಸ್ವದೇಶಿ, ತಮ್ಮ ವಿದೇಶಿ

ಆದರೆ ದೀಪು ಅಣ್ಣ (ದಿಲೀಪ್ ರಾಜ್) ತಮ್ಮನಿಗೆ ತದ್ವಿರುದ್ಧ. ಪಕ್ಕಾ ಸ್ವದೇಶಿ. ಇಲ್ಲೇ ಇದ್ದು ರೀಸರ್ಚ್ ಮಾಡು ಎನ್ನುತ್ತಾನೆ. ಇಲ್ಲಿ ರೀಸರ್ಚ್ ಗಿಂತಲೂ ರೀಸಸ್ ಮಾಡಲು ಲಾಯಕ್ಕಾದ ದೇಶ ಎಂಬ ಮನೋಭಾವದ ದೀಪು ಅಣ್ಣನ ಮಾತಿಗೆ ಬೆಲೆ ಕೊಡಲ್ಲ.

ದೀಪು, ಮೌನ ಲವ್ ಏನಾಗುತ್ತದೆ?

ಕಥೆ ಅಲ್ಲಿಂದ ತಿರುವು ಪಡೆದುಕೊಂಡು ಕಡಲೂರಿಗೆ ಹೊರಳುತ್ತದೆ. ಅಲ್ಲಿ ಅಚಾನಕ್ ಆಗಿ ಮೌನ (ಸಿಂಧು ಲೋಕನಾಥ್) ಸಿಗುತ್ತಾಳೆ. ಇಬ್ಬರಲ್ಲೂ ಲವ್ ಆಗುತ್ತದೆ. ಮುಂದೇನಾಗುತ್ತದೆ? ದೀಪು ನಾರ್ವೆಗೆ ಹೋಗುತ್ತಾನಾ? ಲವ್ ಸಕ್ಸಸ್ ಆಗುತ್ತದಾ ಎಂಬುದನ್ನು ನೀವು ತೆರೆಯ ಮೇಲೆ ನೋಡಿಯೇ ಆಸ್ವಾದಿಸಬೇಕು.

ಒಂದು ಸರಳ ಸುಂದರ ಲವ್ ಸ್ಟೋರಿ

ಒಂದು ಸರಳ ಸುಂದರ ಲವ್ ಸ್ಟೋರಿ ಜೊತೆಗೆ ಪ್ರತಿಭಾಪಲಾಯನದ ಬಗ್ಗೆ ಒಂದು ಒಳ್ಳೆಯ ಸಂದೇಶವನ್ನು ಚಿತ್ರ ನೀಡುತ್ತದೆ. ಇಂದಿನ ಯುವಕರು ಹಣ, ಡಾಲರ್ ಮೋಹಕ್ಕೆ ಒಳಗಾಗಿ ತನ್ನ ದೇಶ, ಭಾಷೆ, ಪೋಷಕರನ್ನು ಮರೆಯುತ್ತಿರುವವರನ್ನು ನಿಲ್ಲಿಸಿ ಎಚ್ಚರಿಸುತ್ತದೆ.

ತಾಂತ್ರಿಕವಾಗಿ ಪ್ರೌಢವಾಗಿರುವ ಚಿತ್ರ

ರಾಮ್ ದೀಪ್ ನಿರ್ದೇಶನದ ಮೊದಲ ಚಿತ್ರವಿದು ಎನ್ನಿಸುವುದಿಲ್ಲ. ಚಿತ್ರದಲ್ಲಿ ತಾಂತ್ರಿಕ ಅಂಶಗಳಿಗೆ ನೀಡಿದಷ್ಟೇ ಒತ್ತನ್ನು ಕಥೆ, ಸಂಭಾಷಣೆ, ಸಂಗೀತದ ಕಡೆಗೂ ಮೀಸಲಿಟ್ಟಿರುವುದು ಎದ್ದುಕಾಣುವ ಅಂಶ. ಸಂತೋಷ್ ರಾಧಾಕೃಷ್ಣ ಅವರ ಸಂಕಲನ ಚಿತ್ರಕ್ಕೆ ಒಂದು ಸುಂದರವಾದ ಚೌಕಟ್ಟನ್ನು ಹಾಕಿಕೊಟ್ಟಿದೆ.

ಛಾಯಾಗ್ರಹಣ ಚಿತ್ರದ ಹೈಲೈಟ್ ಗಳಲ್ಲಿ ಒಂದು

ಇನ್ನು ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಡಿಫರೆಂಟ್ ಆಗಿಯೇ ಇದೆ. ಮನೋಹರ್ ಜೋಶಿ ಅವರ ಛಾಯಾಗ್ರಹಣ ಚಿತ್ರದ ಹೈಲೈಟ್ ಗಳಲ್ಲಿ ಒಂದು. ಸಮುದ್ರತೀರ, ಮರಳು, ಸಿಂಧು ಲೋಕನಾಥ್ ಮುಗ್ಧ, ಮೋಹಕ ದೃಶ್ಯಗಳನ್ನು ಸೊಗಸಾಗಿ ಸೆರೆಹಿಡಿದಿದ್ದಾರೆ.

ಮಿತ್ರ ಅವರ ಕಾಮಿಡಿ ಸ್ವಲ್ಪ ಅತಿಯಾಯಿತು

ಅಜನೀಶ್ ಲೋಕನಾಥ್ ಅವರ ಸಂಗೀತವೂ ಅಷ್ಟೇ ಹಿತವಾಗಿದೆ. ಇನ್ನು ಚಿತ್ರದ ಸಂಭಾಷಣೆಯಲ್ಲಿ ಮನೋಜವ್ ಗಲಗಲಿ ಅವರು ಅಲ್ಲಲ್ಲಿ ಹುಬ್ಬಳ್ಳಿ, ಮಂಗಳೂರು ಶೈಲಿಯ ಭಾಷೆಯನ್ನು ಬೆರೆಸಿ ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಮಿತ್ರ ಅವರ 'ಹಾಲಪ್ಪ ಶರಣಪ್ಪ ಮ್ಯಾಲಿನಮನಿ' ಕಾಮಿಡಿ ಸ್ವಲ್ಪ ಅತಿಯಾಯಿತು ಎನ್ನಿಸುತ್ತದೆ. ಅದು ಬಿಟ್ಟರೆ ಚಿತ್ರದಲ್ಲಿ ಬೆರಳು ಮಾಡಿ ತೋರಿಸುವ ಲೋಪದೋಷಗಳು ಕಾಣಿಸುವುದಿಲ್ಲ.

ಜಾಲಿ ಬಾಯ್ ಪಾತ್ರದಲ್ಲಿ ಅನೀಶ್

ದೀಪು ಪಾತ್ರವನ್ನು ಅನೀಶ್ ಅವರು ಜಾಲಿಯಾಗಿ ನಿಭಾಯಿಸಿದ್ದಾರೆ. ಫೈಟ್ಸ್, ಡಾನ್ಸ್ ಅಭಿನಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ ಅನೀಶ್ ಭಾವನಾತ್ಮಕ ಸನ್ನಿವೇಶಗಳಲ್ಲಿ ಅಷ್ಟು ಪರಿಣಾಮಕಾರಿ ಅನ್ನಿಸುವುದಿಲ್ಲ. ಉಳಿದಂತೆ ಅವರ ಪಾತ್ರಕ್ಕೆ ನೈಂಟಿನೈನ್ ಪರ್ಸೆಂಟ್ ನ್ಯಾಯ ಒದಗಿಸಿದ್ದಾರೆ.

ಮೌನವಾಗಿ ಕಾಡುವ ಸಿಂಧು ಲೋಕನಾಥ್

ಇನ್ನು ಚಿತ್ರದಲ್ಲಿ ಮೌನವಾಗಿಯೇ ಆವರಿಸಿಕೊಳ್ಳುವ ಪಾತ್ರ ಸಿಂಧು ಲೋಕನಾಥ್ ಅವರದು. ಮೌನ ಪಾತ್ರಕ್ಕೆ ಅವರು ಬಹುತೇಕ ನ್ಯಾಯ ಸಲ್ಲಿಸಿದ್ದಾರೆ. ಅನೀಶ್ ಜೊತೆಗಿನ ಆನ್ ಸ್ಕ್ರೀನ್ ಕೆಮಿಸ್ಟ್ರಿ ಲೆಕ್ಕಾಚಾರ ತಪ್ಪದಂತೆ ನೋಡಿಕೊಂಡಿದ್ದಾರೆ.

ಗಮನಸೆಳೆಯುವ ಇನ್ನೊಂದಿಷ್ಟು ಪಾತ್ರಗಳು

ಚಿತ್ರದಲ್ಲಿ ಗಮನಸೆಳೆಯುವ ಇನ್ನೊಂದಿಷ್ಟು ಪಾತ್ರಗಳೆಂದರೆ ದಿಲೀಪ್ ರಾಜ್, ಮನೋಜವ ಗಲಗಲಿ ಹಾಗೂ ನಾಗತಿಹಳ್ಳಿ ಚಂದ್ರಶೇಖರ್. ದಿಲೀಪ್ ಅವರು ಇಲ್ಲಿ ಸ್ವಲ್ಪ ಸೀರಿಯಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಮನೋಜವ ಗಲಗಲಿ ಅವರು ಖಳನಟನಾಗಿ ಸಾಫ್ಟ್ ಅಭಿನಯ ಗಮನಸೆಳೆಯುತ್ತದೆ. ನಾಗತಿಹಳ್ಳಿ ಮೇಷ್ಟ್ರು ಕೊನೆಯಲ್ಲಿ ಕೊಡುವ ಸಂದೇಶ 'ಅಮೆರಿಕ ಅಮೆರಿಕ' ಚಿತ್ರವನ್ನು ನೆನಪಿಸುತ್ತದೆ.

ಖಂಡಿತ ನೋಡಲೇಬೇಕಾದ ಚಿತ್ರವಿದು

ಕನ್ನಡ ಚಿತ್ರಗಳಲ್ಲಿ ಧಂ ಇರಲ್ಲ, ಕಥೆ ಇರಲ್ಲ, ತಾಂತ್ರಿಕವಾಗಿ ಸಾಕಷ್ಟು ಸುಧಾರಿಸಬೇಕು ಎಂದು ಕೊರಗುವವರು ಖಂಡಿತ ನೋಡಲೇಬೇಕಾದ ಚಿತ್ರವಿದು. ಹೊಸಬರ ಹೊಸ ಪ್ರಯತ್ನಕ್ಕೆ ಕನ್ನಡ ಪ್ರೇಕ್ಷಕರು ಸದಾ ಫಿದಾ ಆಗುತ್ತಾರೆ. ಇದೂ ಅದೇ ತರಹದ ಚಿತ್ರ.

English summary
Kannada movie Nan Life Alli (NLA) review. No doubt the debutant director Ramdeep is intelligent and dexterous at places in the film. NLA is worth a watch for those who are in love and who hates India's brain drain. Anish Tejeshwar, Sindhu Loknath, Dilip Raj are in lead.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada