»   »  ಒಂದು ಮೊಟ್ಟೆಯ ಕಥೆ : ಡಬ್ಬಲ್ ಮೀನಿಂಗ್ ಇಲ್ಲದ ಕಾಶೀನಾಥ್ ಚಿತ್ರ

ಒಂದು ಮೊಟ್ಟೆಯ ಕಥೆ : ಡಬ್ಬಲ್ ಮೀನಿಂಗ್ ಇಲ್ಲದ ಕಾಶೀನಾಥ್ ಚಿತ್ರ

Posted By:
Subscribe to Filmibeat Kannada

ಸಿನಿಮಾದ ಹೀರೋ ಅಂದ್ರೆ ಕಟ್ಟುಮಸ್ತಾದ ದೇಹ ಹೊಂದಿರಬೇಕು... ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಆಗಿರಬೇಕು... ಸಿಕ್ಸ್ ಪ್ಯಾಕ್ ಮಾಡಿರಬೇಕು... ಕೇಡಿಗಳನ್ನ ಚಚ್ಚಿ ಬಿಸಾಡಬೇಕು... ಚೆನ್ನಾಗಿ ಡ್ಯಾನ್ಸ್ ಮಾಡಬೇಕು... ಸಿನಿಮಾದಲ್ಲಿ ಬೇಜಾನ್ ಬಿಲ್ಡಪ್ ತೆಗೆದುಕೊಳ್ಳಬೇಕು... ಇಷ್ಟೆಲ್ಲ ಇದ್ದರೆ ಮಾತ್ರ 'ಸ್ಟಾರ್' ಹೀರೋ.! 'ಸ್ಟಾರ್' ಹೀರೋ ಒಬ್ಬ ಇದ್ದರೆ... ಸಿನಿಮಾ ಸಕ್ಸಸ್ ಗ್ಯಾರೆಂಟಿ ಎಂಬುದು ಸಿದ್ಧ ಸೂತ್ರ.

ಆದರೆ, ಈ ಸಿದ್ಧ ಸೂತ್ರವನ್ನ ಮುರಿದು ಬೋಳು ತಲೆಯ ವ್ಯಕ್ತಿಯೇ ಹೀರೋ ಆಗಿ... ಬೋಳು ತಲೆ ಹೊಂದಿರುವವರ ಕಥೆಯನ್ನ ಬೆಳ್ಳಿತೆರೆ ಮೇಲೆ ಅಚ್ಚುಕಟ್ಟಾಗಿ ತರುವಲ್ಲಿ 'ಒಂದು ಮೊಟ್ಟೆಯ ಕಥೆ' ಚಿತ್ರತಂಡ ಯಶಸ್ವಿ ಆಗಿದೆ.

Rating:
4.0/5

ಚಿತ್ರ: ಒಂದು ಮೊಟ್ಟೆಯ ಕಥೆ
ನಿರ್ಮಾಣ: ಪವನ್ ಕುಮಾರ್, ಸುಹಾನ್ ಪ್ರಸಾದ್
ನಿರ್ದೇಶಕ: ರಾಜ್.ಬಿ.ಶೆಟ್ಟಿ
ಸಂಗೀತ ನಿರ್ದೇಶನ: ಮಿಥುನ್ ಮುಕುಂದನ್
ಛಾಯಾಗ್ರಹಣ: ಪ್ರವೀಣ್ ಶ್ರಿಯಾನ್
ತಾರಾಗಣ: ರಾಜ್.ಬಿ.ಶೆಟ್ಟಿ, ಉಷಾ ಭಂಡಾರಿ, ಶೈಲಶ್ರೀ, ಅಮೃತಾ ನಾಯಕ್ ಮತ್ತು ಇತರರು
ಬಿಡುಗಡೆ: ಜುಲೈ 7, 2017

ಇದು ಒಂದು 'ಮೊಟ್ಟೆ'ಯ ಕಥೆ

ಮಂಗಳೂರಿನ ಬೋಳು ತಲೆಯ ಜನಾರ್ಧನ್ (ರಾಜ್.ಬಿ.ಶೆಟ್ಟಿ) ಗೆ ಸುಂದರ ಯುವತಿಯನ್ನ ಮದುವೆ ಆಗುವ ಆಸೆ. ಆದ್ರೆ, ತಲೆ ಮೇಲೆ ಕೂದಲು ಇಲ್ಲದ ಜನಾರ್ಧನ್ ಕಂಡ್ರೆ ಸುಂದರ ಹುಡುಗಿಯರು ಮಾರುದ್ದ ದೂರ.!

'ಮೊಟ್ಟೆ'ಗೆ ಮದುವೆ ಆಗುತ್ತಾ.?

ಇನ್ನೊಂದು ವರ್ಷದಲ್ಲಿ ಜನಾರ್ಧನ್ ಮದುವೆ ಆಗಲಿಲ್ಲ ಅಂದ್ರೆ 'ಸನ್ಯಾಸಿ' ಯೋಗ ಇದೆ. ಮಗ ಸನ್ಯಾಸಿ ಆಗದೆ, ಸಂಸಾರಿ ಆಗಬೇಕು ಎಂಬುದು ತಂದೆ-ತಾಯಿಯ ಬಯಕೆ. ಹೀಗಿರುವಾಗ 'ಮೊಟ್ಟೆ' ಜನಾರ್ಧನ್ ಗೆ ಮದುವೆ ಆಗುತ್ತಾ.? 'ದೊಡ್ಡ' ಮನಸ್ಸು ಮಾಡಿ ಒಪ್ಪಿಕೊಳ್ಳುವ ಹುಡುಗಿ ಯಾರು.? ಎಂಬುದು ಉಳಿದ ಕಥೆ. ಅದನ್ನ ನೀವು ಚಿತ್ರಮಂದಿರದಲ್ಲಿಯೇ ನೋಡಿ ಎಂಜಾಯ್ ಮಾಡಿ...

ಗಮನ ಸೆಳೆಯುವ 'ಮೊಟ್ಟೆ' ಜನಾರ್ಧನ್

ಎಲ್ಲರಿಂದ 'ಮೊಟ್ಟೆ' ಅಂತ ಕರೆಯಿಸಿಕೊಂಡು ಅಪಹಾಸ್ಯಕ್ಕೆ ಒಳಗಾಗುವ ಬೋಳು ತಲೆಯ ಜನಾರ್ಧನ್ ಆಗಿ ರಾಜ್.ಬಿ.ಶೆಟ್ಟಿ ಅಭಿನಯ ಚೆನ್ನಾಗಿದೆ. ನಟನೆ ಜೊತೆಗೆ ನಿರ್ದೇಶನದ ಹೊಣೆಯನ್ನೂ ಹೊತ್ತಿರುವ ರಾಜ್.ಬಿ.ಶೆಟ್ಟಿ ಅದ್ಭುತ ಪ್ರತಿಭೆ ಎನ್ನುವುದರಲ್ಲಿ ಡೌಟೇ ಇಲ್ಲ.

ಉಳಿದವರ ಅಭಿನಯ ಹೇಗಿದೆ.?

'ಸರಳ' ಪಾತ್ರದಲ್ಲಿ ಶೈಲಶ್ರೀ, ಜನಾರ್ಧನ್ ತಾಯಿಯಾಗಿ ಉಷಾ ಭಂಡಾರಿ, ಶ್ರೀನಿವಾಸ್ ಆಗಿ ಪ್ರಕಾಶ್ ಸೇರಿದಂತೆ ಎಲ್ಲ ಪಾತ್ರಧಾರಿಗಳು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.

ಕಾಡುವ ರಾಜಣ್ಣ

'ಒಂದು ಮೊಟ್ಟೆಯ ಕಥೆ' ಚಿತ್ರದಲ್ಲಿ ಆಗಾಗ ಡಾ.ರಾಜ್ ಕುಮಾರ್ ಕಾಡುತ್ತಾರೆ. ಅದು ಹೇಗೆ ಮತ್ತು ಯಾಕೆ ಎಂಬುದು ಸರ್ ಪ್ರೈಸ್. ಆ ಸರ್ ಪ್ರೈಸ್ ತಿಳಿದುಕೊಳ್ಳಲು 'ಒಂದು ಮೊಟ್ಟೆಯ ಕಥೆ' ಚಿತ್ರವನ್ನ ನೋಡಿ..

ಸರಳ ಮತ್ತು ಸುಂದರ..

'ಒಂದು ಮೊಟ್ಟೆಯ ಕಥೆ' ಸಿನಿಮಾ ಸರಳವಾಗಿದ್ದರೂ ಸುಂದರವಾಗಿದೆ. ಸಿನಿಮಾದ ಉದ್ದಕ್ಕೂ ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗಲ್ಲ. ಬೇಕು ಅಂತ ಹಾಡುಗಳನ್ನು ತುರುಕಿಲ್ಲ. ಡ್ಯುಯೆಟ್ ಹಾಡಲು ಫಾರಿನ್ ಗೆ ಹೋಗಿಲ್ಲ. ನಗಿಸಲು ಕಾಮಿಡಿ ಕಿಲಾಡಿಗಳಿಲ್ಲ. ಇಷ್ಟೆಲ್ಲ 'ಇಲ್ಲ'ಗಳಿದ್ದರೂ, 'ಒಂದು ಮೊಟ್ಟೆಯ ಕಥೆ' ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುತ್ತದೆ.

ವಾಸ್ತವಕ್ಕೆ ಹತ್ತಿರ

ಮದುವೆ ವಯಸ್ಸಿಗೆ ಬಂದಿರುವ ಅದರಲ್ಲೂ ತಲೆ ಬೋಳಾಗಿರುವ ಹುಡುಗರ ಗೋಳು 'ಒಂದು ಮೊಟ್ಟೆಯ ಕಥೆ' ಚಿತ್ರದಲ್ಲಿದೆ. ವಾಸ್ತವಕ್ಕೆ ತೀರಾ ಹತ್ತಿರವಾಗಿರುವ ಈ ಚಿತ್ರದಲ್ಲಿ ಮಂಗಳೂರು ಸೊಗಡು ತುಂಬಿ ತುಳುಕುತ್ತದೆ.

ಟೆಕ್ನಿಕಲಿ...

'ಒಂದು ಮೊಟ್ಟೆಯ ಕಥೆ' ಮೇಕಿಂಗ್ ಚೆನ್ನಾಗಿ ಮೂಡಿಬಂದಿದೆ. ಸಂಗೀತ ಕಥೆಗೆ ಪೂರಕವಾಗಿದೆ. ಹೊನಲು ಬೆಳಕಿನ ಆಟದಲ್ಲಿ ಛಾಯಾಗ್ರಹಣ ಸೊಗಸಾಗಿದೆ. ಕಥೆ ಸಿಂಪಲ್ ಆಗಿದ್ದರೂ ಅದನ್ನ ಪರಿಣಾಮಕಾರಿ ಅಗಿ ತೋರಿಸುವಲ್ಲಿ ನಿರ್ದೇಶಕ ರಾಜ್.ಬಿ.ಶೆಟ್ಟಿ ಸಕ್ಸಸ್ ಆಗಿದ್ದಾರೆ.

ಎಲ್ಲ ಬ್ಯಾಚುಲರ್ಸ್ ತಿಳಿದುಕೊಳ್ಳಬೇಕಾಗಿರುವ ವಿಷಯ...

''ಬಹಿರಂಗ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ'' ಎಂಬ ಸಂದೇಶ 'ಒಂದು ಮೊಟ್ಟೆಯ ಕಥೆ' ಸಿನಿಮಾ ನೀಡುತ್ತದೆ. ಇನ್ನೂ ಮದುವೆ ಆಗದೇ ಇರುವವರು, ಮದುವೆ ಆಗಲು ತಯಾರಿ ನಡೆಸುತ್ತಿರುವವರು ಮಿಸ್ ಮಾಡದೆ 'ಒಂದು ಮೊಟ್ಟೆಯ ಕಥೆ' ಚಿತ್ರ ನೋಡಿರಿ...

ಫೈನಲ್ ಸ್ಟೇಟ್ಮೆಂಟ್

ಲವ್ ಸ್ಟೋರಿ, ಹಾರರ್-ಸಸ್ಪೆನ್ಸ್, ರೌಡಿಸಂ ಕಥೆಗಳನ್ನೇ ನೋಡಿ ನೋಡಿ ಬೋರ್ ಆದವರಿಗೆ 'ಒಂದು ಮೊಟ್ಟೆಯ ಕಥೆ' ಉತ್ತಮ ಸೆಲೆಕ್ಷನ್. ಈ ವೀಕೆಂಡ್ ಫ್ರೀ ಇದ್ರೆ, 'ಮೊಟ್ಟೆ' ಕಡೆ ಗಮನ ಹರಿಸಿ...

English summary
Raj.B.Shetty starrer and directorial 'Ondu Motteya Kathe' has hit the screens today (July 7th). 'Ondu Motteya Kathe' review is here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada