»   » ವಿಮರ್ಶೆ: 'ಮುಕುಂದ'ನ ಸವಾಲಿಗೆ ಪರಮಾತ್ಮ 'ಮುರಾರಿ' ಪರಾರಿ....

ವಿಮರ್ಶೆ: 'ಮುಕುಂದ'ನ ಸವಾಲಿಗೆ ಪರಮಾತ್ಮ 'ಮುರಾರಿ' ಪರಾರಿ....

By: ಸುನೀತಾ ಗೌಡ
Subscribe to Filmibeat Kannada

'ಎಲ್ಲಿ ಸತ್ಯ ಇದೆಯೋ ಅಲ್ಲಿ ಧರ್ಮ ಇರುತ್ತೆ, ಸತ್ಯ ಇಲ್ಲದ ಕಡೆ ಧರ್ಮಕ್ಕೆ ಬೆಲೆ ಇಲ್ಲ' ಈ ಸಂದೇಶ ಇರುವ, 'ಮುಕುಂದ ಮುರಾರಿ' ಒಬ್ಬ ಶುದ್ಧ ಮನಸ್ಸಿನ ನಾಸ್ತಿಕ ಮತ್ತು ಆಸ್ತಿಕರು ಎಂದು ಹೇಳಿಕೊಳ್ಳುವ ಢೋಂಗಿ ಬಾಬಾ-ಸ್ವಾಮೀಜಿಗಳ ನಡುವಿನ ಕಥೆ.


ಹಿಂದಿಯ 'ಓ ಮೈ ಗಾಡ್' ಚಿತ್ರದ ರೀಮೇಕ್ ಆಗಿರುವ 'ಮುಕುಂದ ಮುರಾರಿ' ಕಿಚ್ಚ ಮತ್ತು ಉಪ್ಪಿಯ ನಟನೆಯಿಂದ ಪ್ರೇಕ್ಷಕರ ಮನ ಸೆಳೆಯುತ್ತದೆ.[ಟ್ವಿಟ್ಟರ್ ವಿಮರ್ಶೆ: 'ಮುಕುಂದ ಮುರಾರಿ'ಯ ಜುಗಲ್ ಬಂದಿಗೆ ಭಕ್ತರು ಏನಂದ್ರು ಗೊತ್ತಾ?]

ನಾಸ್ತಿಕನಾಗಿರುವವರಿಗೆ ಮಾತ್ರ ದೇವರು ಕಾಣಿಸಿಕೊಳ್ಳುತ್ತಾನೆ ಎಂಬುದು ಎಲ್ಲಾ ಪುರಾಣ ಕಥೆಗಳಲ್ಲಿ ಇದೆ. ಹಾಗೆಯೇ ಇಲ್ಲಿ ನಾಸ್ತಿಕ ಕಥಾ ನಾಯಕ, ಮುಕುಂದ ಅಲಿಯಾಸ್ ಉಪೇಂದ್ರ ಅವರಿಗೆ ಶ್ರೀಕೃಷ್ಣ ಪರಮಾತ್ಮ ಗೆಳೆಯನ ರೂಪದಲ್ಲಿ ದರ್ಶನ ನೀಡುತ್ತಾನೆ. ಸಂಪೂರ್ಣ ವಿಮರ್ಶೆಗಾಗಿ ಮುಂದೆ ಓದಿ....


Rating:
3.0/5

ಚಿತ್ರ: 'ಮುಕುಂದ ಮುರಾರಿ'
ನಿರ್ಮಾಣ: ಎಂ.ಎನ್ ಕುಮಾರ್ ಮತ್ತು ಬಿ.ಜಯಶ್ರೀ ದೇವಿ
ಕಥೆ: ಉಮೇಶ್ ಶುಕ್ಲಾ
ಚಿತ್ರಕಥೆ-ನಿರ್ದೇಶನ: ನಂದ ಕಿಶೋರ್
ಸಂಗೀತ: ಅರ್ಜುನ್ ಜನ್ಯ
ಛಾಯಾಗ್ರಹಣ: ಸುಧಾಕರ್ ಎಸ್.ರಾಜ್
ತಾರಾಗಣ: ಕಿಚ್ಚ ಸುದೀಪ್, ಉಪೇಂದ್ರ, ನಿಖಿತಾ ತುಕ್ರಾಲ್, ಪಿ.ರವಿಶಂಕರ್, ಇಶಿತಾ ವ್ಯಾಸ್, ಅವಿನಾಶ್, ತಬಲಾ ನಾಣಿ, ಕುರಿ ಪ್ರತಾಪ್, ಶಿವರಾಂ, ದೇವರಾಜ್, ಪ್ರಕಾಶ್ ಬೆಳವಾಡಿ ಮತ್ತು ಮುಂತಾದವರು.
ಬಿಡುಗಡೆ: ಅಕ್ಟೋಬರ್ 28,


'ಮುಕುಂದ ಮುರಾರಿ' ಕಥಾನಕ

ಸದಾ ಬಡವರ ಬಗ್ಗೆ, ಕೈಲಾಗದವರರ ಬಗ್ಗೆಯೇ ಆಲೋಚನೆ ಮಾಡುವ ಮಧ್ಯಮ ವರ್ಗದ ಕುಟುಂಬದ 'ಮುಕುಂದ' (ಉಪೇಂದ್ರ)ನಿಗೆ ದೇವರ ಮೇಲೆ ಸ್ವಲ್ಪವೂ ನಂಬಿಕೆ ಇರೋದಿಲ್ಲ. ಆದ್ರೆ ಮುಕುಂದನ ಪತ್ನಿ ಸುಕನ್ಯ (ನಿಖಿತಾ ತುಕ್ರಾಲ್) ಮತ್ತು ಒಬ್ಬನೇ ಮಗ ಪಾಪುಗೆ ದೇವರೆಂದರೆ ಭಯ-ಭಕ್ತಿ.


ದೇವರೆಂದರೆ ಅಲರ್ಜಿ

ದೇವರಿಗೆ ಬೈಯುತ್ತಾ, ದೇವರ ಇಲ್ಲ, ನಾನೇ ದೇವರು, ನಾನೇ ಬುದ್ಧಿವಂತ ಅಂತ ಹೇಳ್ಕೊಂಡು, ತಿರುಗಾಡೋ ಮುಕುಂದ, ಒಂದ್ಸಾರಿ ಭೂಕಂಪದಿಂದ ತನ್ನ ಸರ್ವಸ್ವ ಆಗಿರುವ ಅಂಗಡಿಯನ್ನು ಕಳೆದುಕೊಳ್ಳುತ್ತಾನೆ. ಸಹಾಯಕ್ಕೆ ಬರಬೇಕಿದ್ದ ಇನ್ಶ್ಯೂರೆನ್ಸ್ ಕಂಪೆನಿ, ಇದು ಗಾಡ್ಸ್ ಆಕ್ಟ್ ಅಂತ ಕೈ ಎತ್ತಿ ಬಿಡುತ್ತಾರೆ.


ದೇವರಿಗೆ ನೋಟೀಸ್

ಅತ್ತ ಇನ್ಶ್ಯೂರೆನ್ಸ್ ಸಿಗದೆ, ಇತ್ತ ಅಂಗಡಿ ಕಳೆದುಕೊಂಡು ಕಂಗಲಾಗುವ ಮುಕುಂದನಿಗೆ ಕಷ್ಟಗಳ ಸರಮಾಲೆಯೇ ಬರುತ್ತದೆ. ಇದಕ್ಕೆ ತಕ್ಕ ಶಾಸ್ತ್ರಿ ಮಾಡಬೇಕೆಂದು ನಿರ್ಧರಿಸುವ ಮುಕುಂದ, ಮನೆ ಕೆಡವಿದ ದೇವರ ಮೇಲೆ ಕೇಸ್ ಹಾಕಲು ಹೊರಡುತ್ತಾನೆ. ಇದರಿಂದ ಹೆಂಡತಿ-ಮಗ ಮನೆ ಬಿಟ್ಟು ಹೊರಡುತ್ತಾರೆ. ಅವರೂ ಹೋದ ಮೇಲೆ ಮುಕುಂದನಿಗೆ ಯಾರು ಗತಿ. ದೇವರ ಮೇಲೆ ಕೇಸ್ ಹಾಕಿ, ಎಲ್ಲಾ ದೇವಾಲಯಗಳಿಗೆ ನೋಟೀಸ್ ಕಳುಹಿಸುವ ಮುಕುಂದನ ಗತಿ ಏನಾಗುತ್ತೆ ಇತ್ಯಾದಿ ಎಲ್ಲಾ ಕುತೂಹಲಗಳಿಗೆ ನೀವು ಥಿಯೇಟರ್ ಗೆ ಭೇಟಿ ಕೊಡಿ...


'ಮುಕುಂದ' ಉಪ್ಪಿ ನಟನೆ ಹೇಗಿತ್ತು?

ಮಧ್ಯಮ ವರ್ಗದ ಕುಟುಂಬದ ನಾಸ್ತಿಕ 'ಮುಕುಂದ'ನ ಪಾತ್ರಕ್ಕೆ ಉಪೇಂದ್ರ ಸರಿಯಾದ ನ್ಯಾಯ ಒದಗಿಸಿದ್ದಾರೆ. ನಾನೇ ದೇವರು, ನನಗಿಂತ ದೊಡ್ಡ ದೇವರಿಲ್ಲ, ಎನ್ನೋ ಉಪೇಂದ್ರ ಅವರ ನಟನೆ ಕೊಂಚ 'ಎ' ಸಿನಿಮಾವನ್ನು ನೆನಪಿಸುತ್ತದೆ. ಎಂದಿನಂತೆ ಪ್ರತೀ ಮಾತಿಗೂ ಪಂಚ್ ಡೈಲಾಗ್ ಹೊಡೆದು ಅಭಿಮಾನಿಗಳಿಂದ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ.


'ಮುರಾರಿ' ಕಿಚ್ಚ ಇಷ್ಟ ಆಗ್ತಾರಾ?

ಕಟ್ಟಾ ಭಕ್ತೆ ಸುಕನ್ಯ (ನಿಖಿತಾ ತುಕ್ರಾಲ್) 'ಕೃಷ್ಣಾ' ಅಂತ ಕೂಗಿದಾಗ ದೇವಲೋಕದಿಂದ 'ಭರ್ರ...' ಅಂತ ಧರೆಗಿಳಿದು ಬರುವ 'ಮುರಾರಿ' ಕಿಚ್ಚ ಎಂಟ್ರಿ ಸೀನ್ ನಲ್ಲಿಯೇ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ವಿಶೇಷ ಬೈಕ್ ನಲ್ಲಿ ಧರೆಗಿಳಿದು ಬರುವ ಸುದೀಪ್ ಸ್ಟೈಲ್ ಸಖತ್. ಅಂತೆಯೇ ತಮ್ಮ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಸ್ತಿಕನಿಗೆ 'ನಂಬಿಕೆ' ಅನ್ನೋದು ಎಲ್ಲಕ್ಕಿಂತ ದೊಡ್ಡದು ಅಂತ ಪಾಠ ಮಾಡುವ ಶ್ರೀಕೃಷ್ಣ ಪರಮಾತ್ಮನಾಗಿ ಕಿಚ್ಚ ಸೂಪರ್.


ಇಬ್ಬರ ಜುಗಲ್ ಬಂದಿ

ಅಂತೂ ಉಪೇಂದ್ರ ಮತ್ತು ಸುದೀಪ್ ಅವರ ಕಾಂಬಿನೇಷನ್ ಅಭಿಮಾನಿಗಳಲ್ಲಿ ಮೋಡಿ ಮಾಡಿದೆ. ಮುಕುಂದ ಅಲಿಯಾಸ್ ಉಪ್ಪಿ ಅವರ ಸ್ವಲ್ಪ ಕಾಮಿಡಿ, ಸ್ವಲ್ಪ ಉದ್ವೇಗ, ಬೇಸರ, ಕೋಪ-ತಾಪ ಎಲ್ಲದಕ್ಕೂ 'ಮುರಾರಿ' ಕಿಚ್ಚನ ಸಮಾಧಾನಕರ ಉತ್ತರ, ಮಂದಹಾಸ ಬೀರುವ ವದನ. ಒಟ್ನಲ್ಲಿ ಈ ಜೋಡಿಯ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿದೆ.


ನಿಖಿತಾ 'ಆಟಕ್ಕುಂಟು ಲೆಕ್ಕಕ್ಕಿಲ್ಲ'

ಉಪೇಂದ್ರ ಪತ್ನಿ, ಕಟ್ಟಾ ದೇವರ ಭಕ್ತೆ ಸುಕನ್ಯ ಪಾತ್ರದಲ್ಲಿ ನಟಿ ನಿಖಿತಾ ತುಕ್ರಾಲ್ ಅವರು ಒಂಥರಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಇದ್ದರು. ಇಡೀ ಚಿತ್ರದಲ್ಲಿ ಅವರು ಹೆಚ್ಚು ಹೊತ್ತು ಇರಲಿಲ್ಲ.


ರವಿಶಂಕರ್/ಅವಿನಾಶ್

ಲೀಲಾಧರ ಸ್ವಾಮೀಜಿಯಾಗಿ ರವಿಶಂಕರ್ ಅವರ ನಟನೆ ಪ್ರೇಕ್ಷಕರ ಮುಖದಲ್ಲಿ ಸಣ್ಣ ನಗು ಮೂಡಿಸಿದರೆ, ಸಿದ್ಧೇಶ್ವರ ಸ್ವಾಮೀಜಿಯಾಗಿ ಅವಿನಾಶ್ ಅವರ ನಟನೆ ಇನ್ನೂ ಹಾಸ್ಯಕರ.


ಅತಿಥಿಗಳಾಗಿ ಬಂದವರು

'ಗೋಪಾಲ' ಹಾಡಿಗೆ ಕಿಚ್ಚನ ಜೊತೆ ರಾಧೆ ಮತ್ತು ರುಕ್ಮಿಣಿಯಾಗಿ ಹೆಜ್ಜೆ ಹಾಕಲು ಬಂದ ರಚಿತಾ ರಾಮ್ ಮತ್ತು ಭಾವನಾ ಮೆನನ್, ತೆರೆ ಮೇಲೆ ಇದ್ದಷ್ಟು ಹೊತ್ತು ಅಭಿಮಾನಿಗಳ ಕಣ್ಣಿಗೆ ಚಿತ್ತಾರ ಮೂಡಿಸುತ್ತಾರೆ. ಇನ್ನು ನಿನಾಸಂ ಸತೀಶ್ ಬಂದು ಕಿಚ್ಚ ಸುದೀಪ್ ಗೆ ಕೌಂಟರ್ ಕೊಟ್ಟು ಹೋಗಿದ್ದು, ಯಾಕೆ ಅಂತ ಯಾರಿಗೂ ಗೊತ್ತಾಗಲಿಲ್ಲ.


ಇನ್ನುಳಿದವರು

ಇನ್ನುಳಿದಂತೆ ಉಪೇಂದ್ರ ಬಲಗೈ ಭಂಟನಾಗಿ ತಬಲಾ ನಾಣಿ, ಟಿವಿ ನಿರೂಪಕಿಯಾಗಿ ಮಾಳವಿಕಾ ಅವಿನಾಶ್, ಗೋಪಿಕಾ ಮಾತೆಯಾಗಿ ಇಶಿತಾ ವ್ಯಾಸ್, ಕಾವ್ಯ ಶಾ, ಪೂಜಾರಿಯಾಗಿ ಶಿವರಾಂ, ಕುರಿ ಪ್ರತಾಪ್ ಮುಂತಾದವರು ತಮ್ಮ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.


ಸಂಗೀತ

ಅರ್ಜುನ್ ಜನ್ಯ ಅವರ ಮ್ಯೂಸಿಕ್ ಕಂಪೋಸ್ ನಲ್ಲಿ ಮೂಡಿಬಂದ ಚಿತ್ರದ ಹಾಡುಗಳು ಕೇಳುವಂತಿದೆ ಹೊರತು, ಗುನುಗುವಂತಿಲ್ಲ. 'ಗೋಪಾಲ ಬಾ...' ಒಂದು ಹಾಡು ಕೇಳಬೇಕೆನಿಸುತ್ತದೆ.


ವೇಗವಾಗಿ ಸಾಗುವ ಸಿನಿಮಾ

ಚಿತ್ರದ ಸ್ಕ್ರೀನ್-ಪ್ಲೇ ಬಹಳ ವೇಗವಾಗಿ ಸಾಗಿದ್ದು, ಇಂಟರ್ ವಲ್ ಬಂದಿದ್ದೇ ತಿಳಿಯುವುದಿಲ್ಲ. ಇಂಟರ್ ವಲ್ ಹತ್ತತ್ತಿರ ಸುದೀಪ್ ಎಂಟ್ರಿಯಾದ ನಂತರ, ಉಪ್ಪಿ-ಕಿಚ್ಚನ ಜುಗಲ್ ಬಂದಿ ನೋಡಲು ಅಭಿಮಾನಿಗಳು ಕಾತರರಾಗುತ್ತಾರೆ.


ಹಿಂದಿ ಸಿನಿಮಾ ನೋಡದವರು ನೋಡಿಬಿಡಿ

ಹಿಂದಿಯ 'ಓ ಮೈ ಗಾಡ್' ರೀಮೇಕ್ ಇದಾದರೂ, ಉಪೇಂದ್ರ ಮತ್ತು ಕಿಚ್ಚ ಸುದೀಪ್ ಜುಗಲ್ ಬಂದಿಯನ್ನು ನೋಡಲು ಹಾಗೂ ಹಿಂದಿ ಸಿನಿಮಾ ನೋಡದವರು ಈ ಸಿನಿಮಾ ನೋಡಬಹುದು. ಅಬ್ಬರದ ಫೈಟ್ ಇಲ್ಲದೇ, ಕಾಮ್ ಆಗಿ ಸಾಗುವ ಸಿನಿಮಾ ಮನಸ್ಸಿಗೆ ನಾಟುತ್ತದೆ. ಜೊತೆಗೆ ದೇವರು ಇದ್ದಾನೋ ಇಲ್ವೋ ಅನ್ನೋ, ಕನ್ ಫ್ಯೂಶನ್ ಇರೋವವರು ಈ ಸಿನಿಮಾ ನೋಡಿ ತಮ್ಮ ಡೌಟ್ ಕ್ಲೀಯರ್ ಮಾಡಿಕೊಳ್ಳಬಹುದು.


English summary
Kannada Movie 'Mukunda Murrari' Review. A Kannada Film directed by Nanda Kishore. Kannada Actor Sudeep, Kannada Actor Upendra, Actress Nikitha Thukral are in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada