»   » ಎರಡೊಂದ್ಲಾ ಮೂರು ವಿಮರ್ಶೆ:ಎಡವಿದ ನಿರ್ದೇಶಕ, ಮಲಗಿದ ಪ್ರೇಕ್ಷಕ

ಎರಡೊಂದ್ಲಾ ಮೂರು ವಿಮರ್ಶೆ:ಎಡವಿದ ನಿರ್ದೇಶಕ, ಮಲಗಿದ ಪ್ರೇಕ್ಷಕ

By: ಬಾಲರಾಜ್ ತಂತ್ರಿ
Subscribe to Filmibeat Kannada

ಡೈಲಾಗುಗಳು ಚಿತ್ರದ ಪ್ರಮುಖಾಂಶ, ಹಾಗಂತ ನಿರೂಪಣೆಯ ಬಗ್ಗೆ ತಲೆಕೆಡಿಸಿಕೊಳ್ಳದೇ ಬರೀ ಸಂಭಾಷಣೆಗೆ ಪ್ರಾಮುಖ್ಯತೆ ನೀಡಿದರೆ ಚಿತ್ರ ಕಳೆಗೆಡದೇ ಕುಲಗೆಡುತ್ತದೆ. ಚಿತ್ರದ ಶುರುವಾದ ಹದಿನೈದೇ ನಿಮಿಷದಲ್ಲಿ ಪ್ರೇಕ್ಷಕ ಒಂದೋ ಎದ್ದು ಹೋಗುತ್ತಾನೆ, ಇಲ್ಲಾ ನಿದ್ದೆಗೆ ಶರಣಾಗುತ್ತಾನೆ.

ಕಿರುತೆರೆಯಲ್ಲಿನ ಚಿರಪರಿಚಿತ ಹೆಸರು ಚಂದನ್ ನಾಯಕನಟನಾಗಿ ನಟಿಸಿರುವ ಮೊದಲ ಚಿತ್ರ 'ಎರಡೊಂದ್ಲಾ ಮೂರು' ಶುಕ್ರವಾರ (ಮೇ 22) ಬಿಡುಗಡೆಯಾಗಿದೆ. 'ಲೆಕ್ಕಾ ಫುಲ್ ಪಕ್ಕಾ' ಶೀರ್ಷಿಕೆಯಡಿ ಬಿಡುಗಡೆಯಾದ ಈ ಚಿತ್ರದ ನಿರ್ದೇಶಕರು ಕುಮಾರ್ ದತ್.

Rating:
2.5/5

ಚಿತ್ರ: ಎರಡೊಂದ್ಲಾ ಮೂರು
ನಿರ್ಮಾಪಕ: ದೀಪಕ್ ಪಾಟೀಲ್, ನಳಿನಿ ನಾಗರಾಜ್
ತಾರಾಗಣದಲ್ಲಿ : ಚಂದನ್, ಶ್ವೇತಾ ಪಂಡಿತ್, ಶೋಭಿತಾ, ಶ್ರೀಧರ್, ಮಿತ್ರ, ಇತರರು
ಸಂಗೀತ: ಎ ಎಂ ನೀಲ್
ಫೋಟೋಗ್ರಾಫಿ : ನವೀನ್ ಕುಮಾರ್

ಚಿತ್ರದ ಕಥೆಯ ಬಗ್ಗೆ

ಸ್ನೇಹಾ (ಶ್ವೇತಾ ಪಂಡಿತ್) ಮತ್ತು ಕುರುಡಿಯಾಗಿರುವ ಪ್ರೀತಿ (ಶೋಭಿತಾ) ಆತ್ಮೀಯ ಸ್ನೇಹಿತರು, ಇವರ ಮನೆಯ ಪಕ್ಕದಮನೆಯ ಹುಡುಗ ಪ್ರೇಮ್ (ಚಂದನ್). ನಾಯಕಿ ಹಾಡುತ್ತಿದ್ದನ್ನು ಕೇಳಿಸಿಕೊಂಡು ನಾಯಕನಿಗೆ ನಾಯಕಿಯ ಮೇಲೆ ಪ್ರೇಮಾಂಕುರವಾಗುತ್ತದೆ. ನಾಯಕನಿಗೆ ನಾಯಕಿ ಪ್ರೀತಿ ಕುರುಡಿ ಎಂದು ತಿಳಿದಿರುವುದಿಲ್ಲ.

ಚಿತ್ರದ ಕಥೆಯ ಬಗ್ಗೆ ಇನ್ನೂ ಸ್ವಲ್ಪ

ನಾಯಕಿಯ ಹಿಂದೆ ಬೀಳದಂತೆ ಹಲವು ಬಾರಿ ಸ್ನೇಹಾ ನಾಯಕನಿಗ ಎಚ್ಚರಿಕೆ ಕೊಟ್ಟರೂ, ಆಕೆಗೆ ಈಗಾಗಲೇ ಎಂಗೇಜ್ಮೆಂಟ್ ಆಗಿದೆ ಎಂದರೂ ಅದು ವರ್ಕೌಟ್ ಆಗೋಲ್ಲ. ಜೊತೆಜೊತೆಗೆ ಸ್ನೇಹಾಗೂ ನಾಯಕನ ಮೇಲೆ ಒಲವು ಮೂಡುತ್ತೆ. ಆದರೆ ಸ್ನೇಹಾ ತನ್ನ ಪ್ರೀತಿಯನ್ನು ಮುಚ್ಚಿಡುತ್ತಾಳೆ. ಸ್ನೇಹಿತೆಗಾಗಿ ಸ್ನೇಹಾ ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಾಳಾ ಎನ್ನುವ ಈ ತ್ರಿಕೋಣ ಪ್ರೇಮ ಕಥೆಯನ್ನು ಹೊಂದಿರುವ ನೀರಸ ಟೆಸ್ಟ್ ಪಂದ್ಯದ ಕ್ಲೈಮ್ಯಾಕ್ಸ್ ಏನಾಗುತ್ತದೆ ಎನ್ನುವುದನ್ನು ಮನಸಿದ್ದರೆ ಚಿತ್ರಮಂದಿರದಲ್ಲಿ ನೋಡಬಹುದು.

ಸಂಭಾಷಣೆಯೇ ಚಿತ್ರದ ವಿಲನ್

ಇಡೀ ಚಿತ್ರದ ಪ್ರಮುಖ ವಿಲನ್ ಎಂದರೆ ಸಂಭಾಷಣೆ. ಅದರಲ್ಲೂ ಮೊದಲಾರ್ಧದಲ್ಲಿ ಪಾತ್ರಧಾರಿಗಳಿಗೆ ಉಸಿರಾಡಲೂ ಪುರುಷೋತ್ತು ಇಲ್ಲದಂತೆ, ಪ್ರೇಕ್ಷಕರಿಗೆ ಕಿರಿಕಿರಿಯಾಗುವ ಮಟ್ಟಿಗೆ ನಿರ್ದೇಶಕರು ಸಂಭಾಷಣೆಯ ಮೇಲೆ ತನ್ನ ಪ್ರೇಮವನ್ನು ತೋರಿದ್ದಾರೆ.

ಪೇಲವ ನಿರೂಪಣೆ

ಚಿತ್ರದ ಇನ್ನೊಂದು ವೀಕ್ ಪಾಯಿಂಟ್ ಏನಂದರೆ, ಆಮೆಗತಿಯಲ್ಲಿ ಸಾಗುವ ಚಿತ್ರದ ನಿರೂಪಣೆ. ಪುಂಖಾನುಪುಂಖವಾಗಿ ಬರುವ ಡಬಲ್ ಮೀನಿಂಗ್ ಡೈಲಾಗುಗಳು, ರಾಂಗ್ ಎಂಟ್ರಿ ಕೊಡುವ ಕಾಮಿಡಿ ದೃಶ್ಯಗಳು, 140 ನಿಮಿಷದ ಸಿನಿಮಾ ನೂರು ಎಪಿಸೋಡಿನ ಮೆಗಾ ಧಾರವಾಹಿಯಂತೆ ಕಾಡುತ್ತದೆ.

ಪಾತ್ರವರ್ಗ ಮತ್ತು ಇತರರು

ಚಂದನ್ ಹೀರೋ ಮೆಟೀರಿಯಲ್ ಆಗಿದ್ದರೂ, ದೊಡ್ಡ ಪರದೆಯ ಮೇಲೆ ಇನ್ನೂ ಪಳಗಬೇಕು. ಕೆಲವೊಂದು ಸನ್ನಿವೇಶದಲ್ಲಿ ಶ್ವೇತಾ ಪಂಡಿತ್ ಗೆ ತನ್ನ ನಟನಾ ಶಕ್ತಿಯನ್ನು ತೋರಿಸುವ ಅವಕಾಶವಿತ್ತು, ಆದರೆ..?. ಚಿತ್ರದ ಇನ್ನೋರ್ವ ನಾಯಕಿ ಶೋಭಿತಾ ನಟನೆ ಅಡ್ಡಿಯಿಲ್ಲ, ಶ್ರೀಧರ್ ನಟನೆ ಚೆನ್ನಾಗಿದೆ. ಚಿತ್ರದ ಸಂಗೀತದ ಬಗ್ಗೆ ಹೆಚ್ಚೇನು ಹೇಳುವಂತದ್ದಿಲ್ಲ, ಛಾಯಾಗ್ರಹಣ ಓಕೆ..

ಲಾಸ್ಟ್ ಬಟ್ ನಾಟ್ ಲೀಸ್ಟ್, ಇಟ್ ಇಸ್ ಯುವರ್ ರಿಸ್ಕ್

ಅನಾವಶ್ಯಕ ಸಂಭಾಷಣೆ, ಜೊತೆಗೆ ಅಶ್ಲೀಲ ಸಂಭಾಷಣೆಗೆ ತಲೆಕೆಡಿಸಿಕೊಂಡಷ್ಟು ನಿರ್ದೇಶಕರು ನಿರೂಪಣೆಯ ವಿಚಾರದಲ್ಲಿ ಜಾಣ್ಮೆ ತೋರಿದ್ದರೆ, ಚಿತ್ರಕ್ಕೆ ಒಂದು ತೂಕ ಬರುತ್ತಿತ್ತು ಜೊತೆಗೆ ನಿರ್ದೇಶಕನಿಗೂ ಒಂದು ಸಾರ್ಥಕತೆ ಇರುತ್ತಿತ್ತು. ಗಾಂಧಿ ಕ್ಲಾಸ್ ಮತ್ತು ಬಾಲ್ಕನಿ ಕ್ಲಾಸ್ ಎಲ್ಲಾ ವರ್ಗದ ಪ್ರೇಕ್ಷಕರು ಮೆಚ್ಚುವಂತ ಸಿನಿಮಾ ನಿರ್ದೇಶಕರಿಂದ ಮುಂದಿನ ದಿನದಲ್ಲಿ ಬರಲಿ.

English summary
Kannada movie review of Eradondla Mooru. Movie directed by Kumar Dutt and Chandan, Shweta Pandit, Shobhitha in lead role.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada