»   » ಸೀಜರ್ ವಿಮರ್ಶೆ: ಆಕ್ಷನ್ ಅಬ್ಬರದಲ್ಲೊಂದು ರಿವೇಂಜ್ ಕಥೆ

ಸೀಜರ್ ವಿಮರ್ಶೆ: ಆಕ್ಷನ್ ಅಬ್ಬರದಲ್ಲೊಂದು ರಿವೇಂಜ್ ಕಥೆ

Posted By:
Subscribe to Filmibeat Kannada
ಹೇಗಿದೆ ಸೀಜರ್ ಚಿತ್ರ ? | Siezer a movie filled with suspense | Filmibeat Kannada

ಸೀಜರ್.....ಲೋನ್ ಗೆ ವಾಹನಗಳನ್ನ ಖರೀದಿ ಮಾಡಿ, ಫೈನಾನ್ಸ್ ಕಟ್ಟದೇ ಇರುವಂತಹ ಗಾಡಿಗಳನ್ನ 'ಸೀಜ್' ಮಾಡುವ ವ್ಯಕ್ತಿಯೇ ಸೀಜರ್. ಈ ಚಿತ್ರದಲ್ಲಿ ನಾಯಕ ಸೀಜರ್. ಈತ ಕೇವಲ ವಾಹನಗಳನ್ನ ಮಾತ್ರ ಸೀಜ್ ಮಾಡಲ್ಲ, ಸಮಾಜಘಾತುಕರನ್ನ ಕೂಡ ಸೀಜ್ ಮಾಡ್ತಾನೆ. ಪೂರ್ತಿ ವಿಮರ್ಶೆ ಮುಂದೆ ಓದಿ.....

Rating:
3.5/5

ಚಿತ್ರ: ಸೀಜರ್
ನಿರ್ದೇಶನ: ವಿನಯ್ ಕೃಷ್ಣ
ನಿರ್ಮಾಣ: ತ್ರಿವಿಕ್ರಮ ಸಪಲ್ಯ
ಸಂಗೀತ: ಚಂದನ್ ಶೆಟ್ಟಿ
ಕಲಾವಿದರು: ಚಿರಂಜೀವಿ ಸರ್ಜಾ, ರವಿಚಂದ್ರನ್, ಪಾರೂಲ್ ಯಾದವ್, ಪ್ರಕಾಶ್ ರಾಜ್, ಶೋಭರಾಜ್ ಮತ್ತು ಇತರರು
ಬಿಡುಗಡೆ: ಏಪ್ರಿಲ್ 13, 2018

ಕೂತುಹಲಕಾರಿ ರಿವೇಂಜ್ ಕಥೆ

ಯಾರೂ ಸೀಜ್ ಮಾಡೋಕೆ ಆಗದೆ ಇರುವಂತಹ ವಾಹನಗಳನ್ನ ಸೀಜ್ ಮಾಡೋ ಧೈರ್ಯ, ತಾಕತ್, ಚುರುಕತನ ಸೀಜರ್ (ಚಿರಂಜೀವಿ ಸರ್ಜಾ) ಗೆ ಮಾತ್ರ ಇರುತ್ತೆ. ಇವನು ಕೈಯಿಟ್ರೆ ಎಂತಹ ಗಾಡಿಯೇ ಆಗಲಿ, ಎಂತಹ ಜಾಗದಲ್ಲೇ ಇರಲಿ ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಎತ್ತಾಕ್ಕೊಂಡು ಬರ್ತಾನೆ. ಹೀಗೆ, ವಾಹನಗಳನ್ನ ಸೀಜ್ ಮಾಡ್ತಾ, ಜೊತೆಗೆ ಎರಡ್ಮೂರು ಕೊಲೆ ಕೂಡ ಮಾಡ್ತಾನೆ. ಈ ಕೊಲೆಗಳನ್ನ ಯಾಕೆ ಮಾಡ್ತಾನೆ, ಈ ಸೀಜರ್ ಕೆಲಸ ಯಾಕೆ ಮಾಡ್ತಾನೆ ಎಂಬುದು ಚಿತ್ರದ ಕಥೆ. ಇದನ್ನ ತಿಳಿಯಲು ಕ್ಲೈಮ್ಯಾಕ್ಸ್ ವರೆಗೂ ಕೂತುಹಲದಿಂದ ಕಾಯಬೇಕು.

ಪಕ್ಕಾ ಲೋಕಲ್ ಹುಡುಗ

ಈ ಸೀಜರ್ ಪಕ್ಕಾ ಲೋಕಲ್. ದಿನದ 24 ಗಂಟೆಯೂ ವಾಹನಗಳನ್ನ ಸೀಜ್ ಮಾಡೋದೆ ಇವನ ಕಾಯಕ. ಹುಡುಗಿ ಜೊತೆಯಿದ್ರೂ ಸೀಜ್ ಮಾಡೋ ಕೆಲಸ ಮರೆಯಲ್ಲ. ಪೊಲೀಸರ ವಾಹನ, ಆಂಬುಲೆನ್ಸ್, ಸಿಐಡಿ ಅಧಿಕಾರಿ, ರೌಡಿಗಳು, ದೊಡ್ಡ ದೊಡ್ಡ ಉದ್ಯಮಿಗಳು, ಸಾಮಾನ್ಯ ವ್ಯಕ್ತಿಗಳು ಹೀಗೆ ಎಲ್ಲರ ವಾಹನಗಳನ್ನ ಮುಲಾಜಿಲ್ಲದೇ ವಶಕ್ಕೆ ಪಡಿತಾನೆ. ಅಡ್ಡ ಬಂದವರಿಗೆ ಡಿಶುಂ ಡಿಶುಂ ಅಂತ ಹೊಡೆದು ಹೋಗ್ತಾ ಇರ್ತಾನೆ. ಅಂದ್ಹಾಗೆ, ಇವನ ಬಳಿ ಮಾನವೀಯತೆಗೂ ಬೆಲೆ ಇದೆ. ಇಂತಹ ಯುವಕನಾಗಿ ಚಿರು ಸರ್ಜಾ ಪಕ್ಕಾ ಅಭಿನಯ ಮಾಡಿದ್ದಾರೆ.

ಇಷ್ಟವಾಗುವ ರವಿಚಂದ್ರನ್ ಪಾತ್ರ

ಸಿನಿಮಾದಲ್ಲಿ ತುಂಬಾ ಇಷ್ಟವಾಗುವ ಪಾತ್ರ ರವಿಚಂದ್ರನ್ ಅವರದ್ದು. 'ಒನ್ ಅಂಡ್ ಒನ್ಲಿ ಫೈನಾನ್ಸ್' ಕಂಪನಿಯ ಮಾಲೀಕನಾಗಿ ಕಾಣಿಸಿಕೊಂಡಿರುವ ರವಿಚಂದ್ರನ್ ಪಕ್ಕಾ ಫೈನಾನ್ಸ್ ವ್ಯಕ್ತಿಯ ರೀತಿಯಲ್ಲಿ ಮಿಂಚಿದ್ದಾರೆ. ಅವರ ಭಾಷೆ, ಮ್ಯಾನರಿಸಂ, ಗತ್ತು, ಗೆಟಪ್ ಎಲ್ಲವೂ ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸಿಕೊಳ್ಳುತ್ತೆ. ಇವರ ಬಳಿಯೇ ಚಿರು ಸರ್ಜಾ ಸೀಜರ್ ಆಗಿ ಕೆಲಸ ಮಾಡುತ್ತಿರುತ್ತಾರೆ. ರವಿಚಂದ್ರನ್ ಅವರದ್ದು ಸಿನಿಮಾ ಪೂರ್ತಿ ಇರುವ ಪಾತ್ರ ಮತ್ತು ಬಹುಮುಖ್ಯ ಪಾತ್ರ.

ಆಟಕ್ಕುಂಟು ಲೆಕ್ಕಕ್ಕಿಲ್ಲದ ಲವ್ ಸ್ಟೋರಿ

ಸೀಜರ್ ಚಿತ್ರದಲ್ಲಿ ಲವ್ ಸ್ಟೋರಿ ಇದೆ. ಆದ್ರೆ, ಅದನ್ನ ನಿರ್ದೇಶಕರು ಗಂಭೀರವಾಗಿ ಪರಿಗಣಿಸಿಲ್ಲ. ಚಿತ್ರಕ್ಕೊಂದು ನಾಯಕಿ ಬೇಕು ಅಂತ ಈ ಕಥೆ ಸೇರಿಸಿದ್ದಾರೆ ಅಷ್ಟೇ ಅನಿಸುತ್ತೆ. ಇನ್ನು ಪಾರೂಲ್ ಯಾದವ್ ಪಾತ್ರಕ್ಕೂ ಅಷ್ಟಾಗಿ ಮಹತ್ವವಿಲ್ಲ. ಆಗಾಗ ಬಂದು ಹೋಗುವ ಪಾರೂಲ್ ಗೆ ಎರಡು ಹಾಡುಗಳು ಇರುವುದು ಹೆಚ್ಚು. ಬಟ್, ಸಿಕ್ಕಿರುವ ಪಾತ್ರವನ್ನ ನಿಭಾಯಿಸಿದ್ದಾರೆ ಎನ್ನಬಹುದು ಅಷ್ಟೇ.

ಸೀದಾ ಸಾದ ಸಿನಿಮಾ

ಚಿತ್ರದಲ್ಲಿ ಅಂತಹ ವಿಶೇಷವೇನು ಇಲ್ಲ. ಮತ್ತು ಹೊಸತನವೇನು ಇಲ್ಲ. ರೆಗ್ಯೂಲರ್ ಆಗಿ ನೋಡುವಂತಹ ಒಂದು ಸಾಮಾನ್ಯ ರಿವೇಂಜ್ ಕಥೆ. ನಿರ್ದೇಶಕ ವಿನಯ್ ಕೃಷ್ಣ ಅವರು ನೀಟ್ ಆಗಿ ಸಿನಿಮಾ ಮಾಡಿದ್ದಾರೆ ಎನ್ನುವುದಷ್ಟೇ ಖುಷಿ. ಇನ್ನು ಚಂದನ್ ಶೆಟ್ಟಿ ಮ್ಯೂಸಿಕ್ ನಲ್ಲಿ Rap ಸ್ಟೈಲ್ ಎದ್ದು ಕಾಣುತ್ತೆ. ಟೈಟಲ್ ಟ್ರ್ಯಾಕ್ ಸೇರಿದಂತೆ ಉಳಿದು ಹಾಡುಗಳು ಕೂಡ ಅವರದ್ದೇ Rap ಸ್ಟೈಲ್ ನಲ್ಲಿದೆ. ಫೈಟ್ ದೃಶ್ಯಗಳಲ್ಲೂ ಚಂದನ್ Rap ಕಾಣಬಹುದು. ಒಟ್ನಲ್ಲಿ, ಸೀಜರ್ ಆಲ್ಬಂನ್ನೇ Rap ಮಾಡಿದ್ದಾರೆ.

ಚಿತ್ರದಲ್ಲಿ ಮತ್ತೇನು ಕಾಣಬಹುದು

ಇನ್ನು ವಿಲನ್ ಪಾತ್ರದಲ್ಲಿ ನಟ ಪ್ರಕಾಶ್ ರೈ ತಮ್ಮ ಖದರ್ ತೋರಿಸಿದ್ದಾರೆ. ಚಿತ್ರದಲ್ಲಿ ಕಾಮಿಡಿ ಇಲ್ಲವಾದರೂ, ಸಾಧುಕೋಕಿಲಾ ಬರುವ ದೃಶ್ಯಗಳು ಮಜಾ ಕೊಡುತ್ತೆ. ಬಿಡುಗಡೆಗೂ ಮುಂಚೆ ವಿವಾದ ಹುಟ್ಟುಹಾಕಿದ್ದ ರವಿಚಂದ್ರನ್ ಅವರ ಡೈಲಾಗ್ ಚಿತ್ರದಲ್ಲಿ ಮ್ಯೂಟ್ ಆಗಿದೆ. ವಿಶೇಷ ಪಾತ್ರದಲ್ಲಿ ಶೋಭರಾಜ್, ಪೊಲೀಸ್ ಪಾತ್ರದಲ್ಲಿ ತೆಲುಗು ನಟ ರವಿ ಪ್ರಕಾಶ್ ಹಾಗೂ ದುಬೈ ದೊರೆ ಪಾತ್ರದಲ್ಲಿ ನಾಗಿನೀಡು ಗಮನ ಸೆಳೆಯುತ್ತಾರೆ. ಒಟ್ನಲ್ಲಿ, ಆಕ್ಷನ್ ಜೊತೆ ಜೊತೆಗೆ ಪ್ರೇಕ್ಷಕರನ್ನೂ ಸೀಜ್ ಮಾಡುವ ಎಂಟರ್ ಟೈನರ್ ಎನ್ನಬಹುದು.

English summary
Kannada actor chiranjeevi sarja and ravichandran starrer seizer movie has released today (april 13th). the movie directed by vinay krishna. here is the full review of seizer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X