»   » ಚಿತ್ರ ವಿಮರ್ಶೆ: ಯೋಗರಾಜ್ ಭಟ್ ರ 'ಸರಳ' ವಾಸ್ತು

ಚಿತ್ರ ವಿಮರ್ಶೆ: ಯೋಗರಾಜ್ ಭಟ್ ರ 'ಸರಳ' ವಾಸ್ತು

Posted By:
Subscribe to Filmibeat Kannada

ವಾಸ್ತುಶಾಸ್ತ್ರವನ್ನು ನಂಬುವವರು, ನಂಬದವರು ಯಾವುದಕ್ಕೂ ಈ ಚಿತ್ರವನ್ನು ಒಮ್ಮೆ ನೋಡುವುದು ಒಳಿತು. ಇಬ್ಬರಲ್ಲಿನ ಭ್ರಮೆಗೆ ಯೋಗರಾಜ್ ಭಟ್ರು 'ವಾಸ್ತುಪ್ರಕಾರ' ಸರಳ ಪರಿಹಾರ ನೀಡಿದ್ದಾರೆ. ಅಷ್ಟರ ಮಟ್ಟಿಗೆ ಯೋಗರಾಜ್ ಭಟ್ ನಿರ್ದೇಶಕರಾಗಿ ಗೆದ್ದಿದ್ದಾರೆ. ಈ ಚಿತ್ರದ ಮೂಲಕ ನಾಡಿನ ಜನತೆಗೂ ಒಂದೊಳ್ಳೆಯ ಸಂದೇಶವನ್ನೂ ರವಾನಿಸಿದ್ದಾರೆ.


ಕಥೆ ಆರಂಭದಲ್ಲಿ ತಿರುಪತಿ ಬೆಟ್ಟ ಹತ್ತಿದಷ್ಟೇ ವೇಗವಾಗಿ ಸಾಗುತ್ತದೆ. ಆದರೆ ಕೊನೆಗೆ ಬೆಟ್ಟ ಹತ್ತಿದ ಮೇಲೆ ಸಿಗುವ ನೋಟ ಇದೆಯಲ್ಲಾ, ಆ ಒಂದು ಅನುಭವವನ್ನು 'ವಾಸ್ತುಪ್ರಕಾರ' ಚಿತ್ರ ಕೊಡುತ್ತದೆ. ಬೆಟ್ಟ ಹತ್ತುತ್ತಾ ಹತ್ತುತ್ತಾ ಅಲ್ಲಲ್ಲಿ ರಿಲಾಕ್ಸ್ ಆಗಲು ಜಗ್ಗೇಶ್ ಅವರ ಸಂಭಾಷಣೆ ಇದೆ. [ಡ್ರಾಮಾ ಚಿತ್ರ ವಿಮರ್ಶೆ]

Rating:
3.5/5

ಸಾಮಾನ್ಯವಾಗಿ ಯೋಗರಾಜ್ ಭಟ್ ಸಿನಿಮಾಗಳೆಂದರೆ ಸಂಭಾಷಣೆ ಹಾಗೂ ಹಾಡುಗಳು ಪ್ರಮುಖ ಆಕರ್ಷಣೆಯಾಗಿರುತ್ತವೆ. ಆದರೆ ಇಲ್ಲಿ ಭಟ್ಟರ ವರಸೆ ಭಿನ್ನವಾಗಿದೆ. ತಮ್ಮ ಹಿಂದಿನ ಚಿತ್ರಗಳ ನೆರಳನ್ನೂ ಕಾಣದಂತೆ ಇಲ್ಲಿ ಎಚ್ಚರ ವಹಿಸಿದ್ದಾರೆ. ಇನ್ನು ಜಗ್ಗೇಶ್ ಸಹ ಅಷ್ಟೇ ತೀರಾ ಐತಲಕಡಿ ಪಕಡಿ ಜುಮ್ಮಾ ಸ್ಟೈಲಿಗೆ ಕೈಹಾಕಿಲ್ಲ.


ಚಿತ್ರ: ವಾಸ್ತುಪ್ರಕಾರ
ನಿರ್ಮಾಣ: ಯೋಗರಾಜ್ ಮೂವೀಸ್
ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ: ಯೋಗರಾಜ್ ಭಟ್
ಸಂಗೀತ: ವಿ ಹರಿಕೃಷ್ಣ
ಛಾಯಾಗ್ರಹಣ: ಸಂತೋಷ್ ರೈ ಪತಾಜೆ
ಸಂಕಲನ: ಸುರೇಶ್
ಪಾತ್ರವರ್ಗ: ಜಗ್ಗೇಶ್, ರಕ್ಷಿತ್ ಶೆಟ್ಟಿ, ಪಾರೂಲ್ ಯಾದವ್, ಐಶಾನಿ ಶೆಟ್ಟಿ, ಅನಂತನಾಗ್, ಟಿ.ಎನ್.ಸೀತಾರಾಂ, ಸುಧಾರಾಣಿ, ಸುಧಾ ಬೆಳವಾಡಿ ಮುಂತಾದವರು


ಅಪ್ಪ ಉತ್ತರ ಅಂದ್ರೆ, ಮಗ ದಕ್ಷಿಣ

ಕಥೆಯ ವಿಚಾರಕ್ಕೆ ಬಂದರೆ ಕುಬೇರನ (ರಕ್ಷಿತ್ ಶೆಟ್ಟಿ) ಅಪ್ಪ ಕೋದಂಡ ಸ್ವಾಮಿ (ಟಿ.ಎನ್. ಸೀತಾರಾಮ್) ಪಕ್ಕಾ ವಾಸ್ತುಪಂಡಿತರು. ಆದರೆ ಮಗ ಮಾತ್ರ ಇದ್ಯಾವುದನ್ನೂ ನಂಬಲ್ಲ. ವಾಸ್ತು ಹೆಸರಿನಲ್ಲಿ ಇನ್ನೊಬ್ಬರ ಮನೆ ಕೆಡವಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದು ಸರಿಯಲ್ಲ ಎಂಬ ವಾದ ಮಗನದು.


ವಿದೇಶದಲ್ಲಿ 'ವಾಸ್ತು' ಬಿಜಿನೆಸ್ ಶುರು

ಇದೇ ವಿಚಾರಕ್ಕೆ ಜಗಳವಾಡಿಕೊಂಡು ಮನೆಬಿಟ್ಟು ವಿದೇಶಕ್ಕೆ ಹಾರುತ್ತಾನೆ. ಅಲ್ಲಿ ತನ್ನ ಜಗ್ಗು ಮಾವನ (ಜಗ್ಗೇಶ್) ಜೊತೆ ಬಿಜಿನೆಸ್ ಮಾಡಲು ಹೊರಡುತ್ತಾನೆ. ವಿದೇಶದಲ್ಲಿ ಜಗ್ಗು ಮಾವನ ಪರಿಸ್ಥಿತಿಯೂ ಹದಗೆಟ್ಟಿರುತ್ತದೆ. ಕಡೆಗೆ ಇಬ್ಬರೂ ದುಡ್ಡು ಮಾಡಲು ಹುಡುಕುವ ದಾರಿ 'ವಾಸ್ತುಪ್ರಕಾರ' ಬಿಜಿನೆಸ್.


ಗೆಲ್ಲುತ್ತಾರಾ ಸೋಲುತ್ತಾರಾ ಮುಂದೇನು?

ನಮ್ಮ ದೇಶದಲ್ಲಾದರೆ ಬೀದಿಗೊಬ್ಬರು ವಾಸ್ತು ಪಂಡಿತರಿದ್ದಾರೆ, ಅದೇ ವಿದೇಶದಲ್ಲಾದರೆ ನಾವು ಹೇಳಿದ್ದೇ ವಾಸ್ತು ಎಂದು ಜಗ್ಗು ಮಾವ ತನ್ನ ಸೋದರಳಿಯನ್ನು ಒಪ್ಪಿಸಿ ಇಬ್ಬರೂ 'ವಾಸ್ತುಪ್ರಕಾರ' ಫೀಲ್ಡಿಗಿಳಿಯುತ್ತಾರೆ. ಅದರಲ್ಲಿ ಅವರು ಗೆಲ್ಲುತ್ತಾರಾ? ಮುಂದೇನಾಗುತ್ತದೆ ಎಂಬುದೇ ಕಥೆಯ ತಿರುಳು.


ಅನಂತ್-ಸುಧಾರಾಣಿ ಜೋಡಿ ಹೇಗಿದೆ?

ವಿದೇಶದಲ್ಲಿ ಸೆಟ್ಲ್ ಆಗಿರುವ ದಂಪತಿಗಳ (ಅನಂತ್ ನಾಗ್ ಮತ್ತು ಸುಧಾರಾಣಿ) ಮನೆಯ ವಾಸ್ತು ಬದಲಾಯಿಸಲು ಹೋಗಿ ಏನೆಲ್ಲಾ ಪ್ರಸಂಗಗಳು ನಡೆಯುತ್ತವೆ ಎಂಬುದನ್ನು ತೆರೆಯ ಮೇಲೆ ನೋಡಿದರೇನೇ ಚೆಂದ. ಆ ದಂಪತಿಗಳ ಏಕೈಕ ಪುತ್ರಿ (ಐಶಾನಿ ಶೆಟ್ಟಿ) ವಾಸ್ತು ಬದಲಾಯಿಸಲು ಒಪ್ಪುತ್ತಾಳೆ. ಅದರ ಜೊತೆಗೆ ಒಂದು ಕಂಡೀಷನ್ ಸಹ ಹಾಕುತ್ತಾಳೆ.


ವಾಸ್ತು, ವಾಸ್ತವದ ನೆಲೆಗಟ್ಟಿನಲ್ಲಿ ಸಾಗುವ ಕಥೆ

ಅದೇನೆಂದರೆ ನಿಮ್ಮ ಪ್ರಕಾರ ವಾಸ್ತು ಬದಲಾಯಿಸ್ತೀನಿ. ಆದರೆ ವಿಚ್ಛೇದನಕ್ಕೆ ಮುಂದಾಗಿರುವ ನಮ್ಮ ತಂದೆತಾಯಿ ಕೂಡ ಒಂದಾಗಬೇಕು. ಇಲ್ಲದಿದ್ದರೆ ಕೋರ್ಟ್ ನಲ್ಲಿ ಕೇಸ್ ಹಾಕುತ್ತೇನೆ ಎನ್ನುತ್ತಾಳೆ. ವಾಸ್ತು, ವಾಸ್ತವದ ನೆಲೆಗಟ್ಟಿನಲ್ಲಿ ಕಥೆ ಸಾಗುತ್ತದೆ.


ಆಕ್ಷನ್, ಸಸ್ಪೆನ್ಸ್, ಥ್ರಿಲ್ ಇಲ್ಲ..ಆದರೆ

ಈ ಚಿತ್ರದಲ್ಲಿ ಸಾಕಷ್ಟು ಕುತೂಹಲ, ತಿರುವುಗಳು, ಆಕ್ಷನ್, ಸಸ್ಪೆನ್ಸ್, ಥ್ರಿಲ್ ಇಲ್ಲ ಎಂಬುದನ್ನು ಹೊರತುಪಡಿಸಿದರೆ ಒಂದು ಸಮೃದ್ಧ ಅನುಭವಂತೂ ಕೊಡುತ್ತದೆ. ವಕೀಲೆಯಾಗಿ ಅರೆಬರೆ ಕನ್ನಡದಲ್ಲಿ ಮಾತನಾಡುತ್ತಾ ಪರುಲ್ ಯಾದವ್ ಕಾಣಿಸುತ್ತಾರೆ.


ವಿಚಿತ್ರ ಭಾಷೆಯಲ್ಲಿ ನಗಿಸುವ ಪರುಲ್

ಅಲ್ಲಲ್ಲಿ ಬರುವ ವಿಚಿತ್ರ ಭಾಷೆ ಕನ್ನಡದ ಪ್ರೇಕ್ಷಕರಿಗೆ ಅರ್ಥವಾಗದಿದ್ದರೂ ನಗುವನ್ನಂತೂ ತರಿಸುತ್ತದೆ. ರಕ್ಷಿತ್ ಶೆಟ್ಟಿ ಹಾಗೂ ಐಶಾನಿ ಶೆಟ್ಟಿ ಅವರ ಅಭಿನಯ ಸಹಜವೇನೋ ಎಂಬಂತಿದೆ. ಎಂದಿನಂತೆ ಜಗ್ಗೇಶ್ ಅವರು ತಮ್ಮದೇ ಶೈಲಿಯ ಡೈಲಾಗ್ ಮೂಲಕ ಕಚಗುಳಿ ಇಡುತ್ತಾರೆ.


ವಾಸ್ತುಪಂಡಿತನಾಗಿ ಸೀತಾರಾಮ್

ಸುಧಾರಾಣಿ ಹಾಗೂ ಅನಂತ್ ನಾಗ್ ಜೋಡಿ ಚೆನ್ನಾಗಿದೆ. ತನ್ನ ಗಂಡನಿಂದ ವಿಚ್ಛೇದನ ಪಡೆಯಲು ಹೆಣಗುವ ಪಾತ್ರದಲ್ಲಿ ಸುಧಾರಾಣಿ , ಸಾತ್ವಿಕ ಗಂಡನ ಪಾತ್ರದಲ್ಲಿ ಅನಂತ್ ನಾಗ್ ಮನಸೆಳೆದಿದ್ದಾರೆ. ಲಾಯರ್ ಪಾತ್ರಗಳಲ್ಲಿ ಮಿಂಚಿರುವ ಸೀತಾರಾಮ್ ಇಲ್ಲಿ ವಾಸ್ತುಪಂಡಿತನಾಗಿ ಗಮನಸೆಳೆಯುತ್ತಾರೆ.


ಹೋಗಿ ನೋಡಿ ಸರಳ ಪರಿಹಾರ ಸಿಗುತ್ತೆ

ದೇಹಕ್ಕಿಂತ ದೊಡ್ಡ ಮನೆಯಿಲ್ಲ, ಮನಸ್ಸಿಗಿಂತ ದೊಡ್ಡ ವಾಸ್ತು ಇಲ್ಲ ಎಂಬುದು ಚಿತ್ರದ ಸಂದೇಶ. ವಾಸ್ತುಶಾಸ್ತ್ರ ಎಂಬುದು ಮನೆಯಲ್ಲಿಲ್ಲ, ಅದೆಲ್ಲಾ ನಮ್ಮ ಮನಸ್ಸಿನಲ್ಲಿದೆ ಅಷ್ಟೇ. ಅದನ್ನು ದೂರ ಮಾಡಿಕೊಳ್ಳಿ. ಮನಸ್ಸಿನಲ್ಲಿ ಕಟ್ಟಿಕೊಂಡ ಗೋಡೆಗಳನ್ನು ಮೊದಲು ಕೆಡವಿ ಹಾಕಿ ಎಂಬ 'ಸರಳ' ಪರಿಹಾರವನ್ನು ಭಟ್ಟರು ನೀಡಿದ್ದಾರೆ.


English summary
Kannada movie Vaastu Prakaara review. The movie depicts the impact of Vaasthu (astrology) tradition on the society. The movie portrays a message to all who are suffering with problems of Vaasthu. It is definitely worth a watch.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada