twitter
    For Quick Alerts
    ALLOW NOTIFICATIONS  
    For Daily Alerts

    Kantara Review: ಅಪ್ಪು, ಯಶ್ ಬಿಟ್ಟು ಮೊದಲ ಬಾರಿಗೆ ಇತರರಿಗೆ ಸಿನಿಮಾ ಮಾಡಿ ಗೆದ್ರಾ ಹೊಂಬಾಳೆ? ಹೇಗಿದೆ ಕಾಂತಾರ?

    |
    Kantara Review: Rishab Shetty starrer Kantara movie getting huge positive reactions from audience

    ಚಿತ್ರ: ಕಾಂತಾರ ( ಕನ್ನಡ )
    ನಿರ್ದೇಶನ: ರಿಷಬ್ ಶೆಟ್ಟಿ
    ನಿರ್ಮಾಣ: ಹೊಂಬಾಳೆ ಫಿಲ್ಮ್ಸ್
    ತಾರಾಗಣ: ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್.

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಮೂಲಕ ಉತ್ತಮ ಮಕ್ಕಳ ಚಿತ್ರಕ್ಕಾಗಿ ನ್ಯಾಷನಲ್ ಅವಾರ್ಡ್ ಪಡೆದಿದ್ದ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ರಾಜಕುಮಾರ ಮತ್ತು ಕೆಜಿಎಫ್ ಸರಣಿಗಳ ರೀತಿಯ ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಕೈಜೋಡಿಸಿದಾಗಲೇ ಕಾಂತಾರ ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಹುಟ್ಟುಕೊಂಡಿತ್ತು. ಚಿತ್ರದ ಒಂದು ಹಾಡು ಹಾಗೂ ಟ್ರೈಲರ್ ಬಿಡುಗಡೆಯಾದ ನಂತರ ಈ ನಿರೀಕ್ಷೆ ದುಪ್ಪಟ್ಟಾಗಿದ್ದವು. ಈ ರೀತಿ ದೊಡ್ಡ ಹೆಸರುಗಳು ಕೇಳಿಬಂದಾಗ ನಿರೀಕ್ಷೆ ಹುಟ್ಟುವುದು ಸಹಜ, ಆದರೆ ಆ ನಿರೀಕ್ಷೆಯನ್ನು ಉಳಿಸಿಕೊಳ್ಳುವುದು ಮುಖ್ಯ ಎಂಬುದು ಪ್ರತಿ ಸಿನಿ ರಸಿಕನ ಅಭಿಪ್ರಾಯವಾಗಿತ್ತು.

    ಹೀಗೆ ನಿರೀಕ್ಷೆ ಮತ್ತು ಕುತೂಹಲದೊಂದಿಗೆ ಚಿತ್ರಮಂದಿರಕ್ಕೆ ತೆರಳುವ ಪ್ರೇಕ್ಷಕನಿಗೆ ಈ ಚಿತ್ರ ಎಲ್ಲಿಯೂ ನಿರಾಸೆಯನ್ನು ಮಾಡುವುದಿಲ್ಲ. 1847ರಲ್ಲಿ ಆರಂಭವಾಗುವ ಕತೆ ಚಿತ್ರ ಆರಂಭವಾದ ಹದಿನೈದು ನಿಮಿಷಗಳೊಳಗೆ 90ರ ದಶಕಕ್ಕೆ ಬಂದು ತಲುಪಿಬಿಡುತ್ತದೆ. ಟ್ರೈಲರ್‌ ನೋಡಿ ಈ ಚಿತ್ರ ಭೂತಕೋಲದ ಸುತ್ತ ನಡೆಯುವ ಕತೆ ಎಂದುಕೊಂಡರೆ ನಿಮ್ಮ ಊಹೆ ಸರಿ, ಕೇವಲ ಭೂತಕೋಲದ ಸುತ್ತ ಮಾತ್ರ ನಡೆಯುತ್ತೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಈ ಚಿತ್ರದಲ್ಲಿ ಭೂತಕೋಲ ಪ್ರಮುಖ ಅಂಶವಾಗಿದ್ದರೂ ಕತೆಯಲ್ಲಿ ಹೆಚ್ಚಾಗಿ ತೋರಿಸಿರುವುದು ಕಾಡುಬೆಟ್ಟು ಊರಿನ ಕುರಿತು, ಆ ಊರನ್ನು ಅರಣ್ಯ ಇಲಾಖೆಯಿಂದ ಉಳಿಸಿಕೊಳ್ಳಲು ಅವರು ನಡೆಸುವ ಹೋರಾಟದ ಕುರಿತು.

    Rating:
    4.0/5

    ಚಿತ್ರದ ಒನ್‌ಲೈನ್ ಕತೆಯೇನು?

    ಚಿತ್ರದ ಒನ್‌ಲೈನ್ ಕತೆಯೇನು?

    ಈ ಚಿತ್ರದ ಟ್ರೈಲರ್ ಅನ್ನು ನೀವೆಲ್ಲಾ ಬಹುತೇಕ ನೋಡಿರ್ತೀರ, ಈ ಚಿತ್ರದ ಟ್ರೈಲರ್ ಅನ್ನು ನೋಡಿದಾಗ ನಿಮಗೆ ಚಿತ್ರ ಯಾವ ವಿಷಯದ ಕುರಿತಾಗಿ ಇರಬಹುದು ಎನಿಸಿತ್ತೋ ಅದೇ ಚಿತ್ರದ ಒನ್‌ಲೈನ್ ಕತೆ. ಹೌದು, ಜಾಗ ತಮಗೆ ಸೇರಬೇಕೆಂದು ವಾಸವಿದ್ದ ಜನರ ಗುಂಪು ಹೋರಾಡಿದರೆ, ಉಪ ವಲಯ ಅರಣ್ಯಾಧಿಕಾರಿ ಊರನ್ನು ಸರ್ಕಾರಕ್ಕೆ ಸೇರಿಸಬೇಕೆಂದು ಹೋರಾಡ್ತಾನೆ ಹಾಗೂ ಈ ಊರಿಗೆ ಓರ್ವ ಜಮೀನ್ದಾರ ಕೂಡ ಇರ್ತಾನೆ. ಹೀಗೆ ಈ ಹೋರಾಟದಲ್ಲಿ ಊರು ಯಾರ ಪಾಲಾಗಲಿದೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ. ಆದರೆ ಟ್ರೈಲರ್ ನೋಡಿದಾಗ ಇವರೇ ವಿಲನ್ ಎಂದು ಫಿಕ್ಸ್ ಆಗಿದ್ದ ನಿಮ್ಮ ಯೋಚನೆ ಇಲ್ಲಿ ತಪ್ಪಾಗಿರುವ ಸಾಧ್ಯತೆ ಹೆಚ್ಚಿದೆ.

    ಕತೆಯಲ್ಲಿ ಹೊಸತನವಿಲ್ಲ, ಆದರೆ ಕತೆ ಹೇಳಿದ ಶೈಲಿ ಹೊಸತು

    ಕತೆಯಲ್ಲಿ ಹೊಸತನವಿಲ್ಲ, ಆದರೆ ಕತೆ ಹೇಳಿದ ಶೈಲಿ ಹೊಸತು

    ಇನ್ನು ಕಾಡುವಾಸಿಗಳ ಜಾಗವನ್ನು ವಶಪಡಿಸಿಕೊಳ್ಳುವುದು ಹಾಗೂ ಅದರ ವಿರುದ್ಧ ಅವರು ಹೋರಾಡುವುದು ಹೊಸತೇನಲ್ಲ, ಈ ವಿಷಯದ ಮೇಲೆ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ ಈ ಕತೆಯನ್ನು ಹೇಳಿರುವ ರೀತಿ ನೂತನವಾದದ್ದು ಹಾಗೂ ಪ್ರೇಕ್ಷಕರು ಮೆಚ್ಚುಕೊಳ್ಳುವಂತದ್ದು. ಈ ಕತೆಯನ್ನು ಭೂತಕೋಲದ ಜತೆ ತಳುಕು ಹಾಕಿರುವುದು ನಿರ್ದೇಶಕರ ಜಾಣ್ಮೆ ಹಾಗೂ ಕತೆ ಹೇಳಿರುವ ನೂತನ ಶೈಲಿಯೂ ಹೌದು. ಅದರಲ್ಲಿಯೂ ಚಿತ್ರದ ಗಂಭೀರ ಸಂದರ್ಭಗಳಲ್ಲಿ ಕಾಮಿಡಿ ಪಂಚ್ ಇಟ್ಟಿರುವುದು ಹಾಗೂ ಚಿತ್ರ ಇಲ್ಲಿ ಬೀಳಲಿದೆ ಎನ್ನುವಾಗ ಬರುವ ಕಾಮಿಡಿ ಸಂಭಾಷಣೆಗಳು ಚಿತ್ರವನ್ನು ಹಲವು ಬಾರಿ ಮೇಲೆತ್ತಿವೆ. ಹೀಗೆ ಸಿನಿಮಾ ಎಲ್ಲಿಯೂ ಬೋರ್ ಹೊಡೆಸದೇ ರಂಜಿಸಲಿದೆ.

    ಗೆದ್ರಾ ರಿಷಬ್, ಹೊಂಬಳೆ ಫಿಲ್ಮ್ಸ್?

    ಗೆದ್ರಾ ರಿಷಬ್, ಹೊಂಬಳೆ ಫಿಲ್ಮ್ಸ್?

    ಇನ್ನು ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ನಿರ್ದೇಶಕನಾಗಿ ಗೆದ್ರಾ ಎನ್ನುವುದಕ್ಕಿಂತ ಮುಂಚೆ ನಾಯಕನಾಗಿ ಅಬ್ಬರದ ಗೆಲುವು ಸಾಧಿಸಿದ್ದಾರೆ ಎನ್ನಬಹುದು. ಅದರಲ್ಲಿಯೂ ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್ ನೀಡಿರುವ ಪ್ರದರ್ಶನಕ್ಕೆ ಹಲವಾರು ಪ್ರಶಸ್ತಿಗಳು ಲಭಿಸುವುದಂತೂ ಖಚಿತ ಎನ್ನಬಹುದು. ಇನ್ನು ನಾಯಕನಾಗಿ ಮಾತ್ರವಲ್ಲದೇ ರಿಷಬ್ ಶೆಟ್ಟಿ ನಿರ್ದೇಶಕನಾಗಿಯೂ ಗೆದ್ದಿದ್ದಾರೆ. ಒಂದೊಳ್ಳೆ ಚಿತ್ರ ನೋಡಬೇಕೆಂಬ ಯೋಜನೆಯನ್ನೊತ್ತು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ರಿಷಬ್ ಶೆಟ್ಟಿ ಮನರಂಜನೆಯ ನೂತನ ಶೈಲಿಯ ರಸದೌತಣ ಬಡಿಸಿದ್ದಾರೆ. ಅತ್ತ ಹೊಂಬಾಳೆ ಫಿಲ್ಮ್ಸ್ ಚಿತ್ರಕ್ಕೇನು ಬೇಕು ಎಂಬುದನ್ನು ಯಾವುದೇ ರಾಜಿಯಾಗದೇ ನೀಡಿರುವುದು ಚಿತ್ರದ ಮೇಕಿಂಗ್ ಅಚ್ಚುಕಟ್ಟಾಗಿ ಬರುವುದಕ್ಕೆ ಕಾರಣವಾಗಿದೆ. ಈ ಮೂಲಕ ಅಪ್ಪು, ಯಶ್ ಇಲ್ಲದ ತಮ್ಮ ಬ್ಯಾನರ್‌ನ ಮೊದಲ ಸಿನಿಮಾದಲ್ಲಿ ಹೊಂಬಾಳೆ ಫಿಲ್ಮ್ಸ್ ಗೆದ್ದಿದೆ.

    ಚಿತ್ರದ ಪ್ಲಸ್ ಪಾಯಿಂಟ್‌ಗಳು

    ಚಿತ್ರದ ಪ್ಲಸ್ ಪಾಯಿಂಟ್‌ಗಳು

    ಚಿತ್ರದ ಬಹುತೇಕ ಅಂಶಗಳು ಪ್ಲಸ್ ಪಾಯಿಂಟ್ ಎನಿಸುತ್ತವೆ. ಅದರಲ್ಲಿಯೂ ಛಾಯಾಗ್ರಹಣ ಹಾಗೂ ಸಂಗೀತ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್, ಚಿತ್ರದ ದೃಶ್ಯಗಳು ನಮ್ಮ ಕಣ್ಮುಂದೆಯೇ ನಡೆಯುತ್ತಿದ್ದೆಯೇನೋ ಎನ್ನುವಂತಿದೆ.. ಛಾಯಾಗ್ರಾಹಕ ಫೈಟಿಂಗ್ ದೃಶ್ಯಗಳನ್ನು ವಿಭಿನ್ನವಾಗಿ ಹಾಗೂ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಇನ್ನು ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕ್‌ನಾಥ್ ಮತ್ತೊಮ್ಮೆ ಮನ ಗೆದ್ದಿದ್ದಾರೆ. ಇನ್ನು ಚಿತ್ರದ ಕಾಮಿಡಿ ಪಂಚ್‌ಗಳು ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿವೆ. ಚಿತ್ರ ಸ್ಲೋ ಎನಿಸಲು ಆರಂಭಿಸಿದ ಸಂದರ್ಭಗಳಲ್ಲಿ ಕಾಮಿಡಿ ಪಂಚ್ ಇರಿಸಲಾಗಿದ್ದು, ಬಹಳ ಯೋಜನೆ ರೂಪಿಸಿ ಚಿತ್ರಕತೆಯನ್ನು ಬರೆಯಲಾಗಿದೆ. ಇದು ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಎನ್ನಬಹುದು. ಇನ್ನು ಪಾತ್ರಗಳಿಗೆ ಸಂಪೂರ್ಣವಾಗಿ ಫಿಟ್ ಆಗಬಲ್ಲ ಕಲಾವಿದರನ್ನು ಆಯ್ಕೆ ಮಾಡಿರುವುದು ಚಿತ್ರದ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್.

    ಮೈನಸ್ ಪಾಯಿಂಟ್

    ಮೈನಸ್ ಪಾಯಿಂಟ್

    ಚಿತ್ರದಲ್ಲಿ ಹೆಚ್ಚೇನೂ ಮೈನಸ್ ಪಾಯಿಂಟ್‌ಗಳಿಲ್ಲ. ಚಿತ್ರದ ಮೊದಲಾರ್ಧ ನಿಧಾನಗತಿಯಲ್ಲಿ ಸಾಗುವುದು ಹಾಗೂ ಕೆಲವೆಡೆ ಡೈಲಾಗ್‌ಗಳನ್ನು ಕನ್ನಡ ಸಬ್‌ಟೈಟಲ್‌ಗಳನ್ನು ಬಳಸಿ ಅರ್ಥ ಮಾಡಿಕೊಳ್ಳಬೇಕಿರುವುದು ಮೈನಸ್ ಪಾಯಿಂಟ್ ಎಂದೆನಿಸಲಿವೆ.

    English summary
    Kantara Review: Rishab Shetty starrer Kantara movie getting huge positive reactions from audience
    Friday, September 30, 2022, 10:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X