»   » ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ವಿಮರ್ಶೆ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ವಿಮರ್ಶೆ

Posted By:
Subscribe to Filmibeat Kannada
Rating:
3.5/5
ಸಾಮಾನ್ಯವಾಗಿ ಐತಿಹಾಸಿಕ ಚಿತ್ರ ಎಂದರೆ ಜನ ಚಿತ್ರಮಂದಿರದ ಕಡೆ ಹೆಜ್ಜೆ ಹಾಕುವುದಿರಲಿ ಅತ್ತ ಅಪ್ಪಿತಪ್ಪಿಯೂ ಸುಳಿಯುವುದೂ ಕಷ್ಟ. ಅಯ್ಯೋ ಗೊತ್ತಿರೋದೆ ಬಿಡ್ರಿ ಕಥೆ ಎಂಬ ಧೋರಣೆಯೇ ಇದಕ್ಕೆ ಕಾರಣವೇನೋ. ಆದರೆ ದರ್ಶನ್ ಅವರ 'ಸಂಗೊಳ್ಳಿ ರಾಯಣ್ಣ' ಚಿತ್ರ ಮಾತ್ರ ಇದಕ್ಕೆ ಅಪವಾದ.

ಮಳೆ, ಚಳಿ, ಗಾಳಿಯ 'ನೀಲಂ' ಚಂಡಮಾರುತದ ಥಂಡಿಯನ್ನೂ ಲೆಕ್ಕಿಸದೆ ಚಿತ್ರ ನೋಡಲು ಜನ ಸಾಲು ಸಾಲಾಗಿ ಬಂದಿದ್ದರು. ಅದರಲ್ಲೂ ಮುಖ್ಯವಾಗಿ ನಾವು ನೋಡಿದ ಮಲ್ಟಿಫ್ಲೆಕ್ ಚಿತ್ರಮಂದಿರ ಹೌಸ್ ಫುಲ್ ಆಗಲು ಕೆಲವೇ ಕೆಲವು ಸೀಟುಗಳು ಮಾತ್ರ ಖಾಲಿ ಉಳಿದಿದ್ದವು.

ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ವೀರನಾಗಿ ದರ್ಶನ್

'ಸಂಗೊಳ್ಳಿ ರಾಯಣ್ಣ'ನಾಗಿ ದರ್ಶನ್ ಹುಲಿಯಂತೆ ಅಬ್ಬರಿಸಿದ್ದಾರೆ. ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ ವೀರನಾಗಿ ಕಂಗೊಳಿಸಿದ್ದಾರೆ. ಚಿತ್ರದ ಆದಿಯಿಂದ ಅಂತ್ಯದವರೆಗೂ ದರ್ಶನ್ ಮಿಂಚುತ್ತಾರೆ. ರಾಯಣ್ಣನ ಅಬ್ಬರದ ಮುಂದೆ ಕಿತ್ತೂರು ರಾಣಿ ಚೆನ್ನಮ್ಮ (ಜಯಪ್ರದಾ) ಸ್ವಲ್ಪ ಕಳೆಗುಂದಿದಂತೆ ಭಾಸವಾಗುತ್ತದೆ.

ಇನ್ನೊಂದು ಚಿಟಿಕೆ ಉಪ್ಪು ಕಡಿಮೆಯಾದ ಭಾವ

ಚಿತ್ರದಲ್ಲಿನ ಬ್ರಿಟೀಷರೊಂದಿಗಿನ ಹೋರಾಟ, ಯುದ್ಧ ಸನ್ನಿವೇಶಗಳು, ಕತ್ತಿವರಸೆ, ಕುದುರೆಸವಾರಿ ಮುಂತಾದ ಅಂಶಗಳಿಗೆ ಇನ್ನಷ್ಟು ಒತ್ತುಕೊಟ್ಟಿದ್ದರೆ ಚಿತ್ರಕ್ಕೆ ಇನ್ನೊಂದಷ್ಟು ಕಳೆಬರುತ್ತಿತ್ತು. ಅಂದಿನ ಕಾಲದ ವಸ್ತ್ರ ವೈವಿಧ್ಯ, ಉಡುಗೆತೊಡುಗೆ, ಭಾಷೆಯನ್ನು ಚಿತ್ರದಲ್ಲಿ ಬಳಸಿಕೊಂಡಿದ್ದರೂ ಎಲ್ಲೋ ಸಾರಿಗೆ ಇನ್ನೊಂದು ಚಿಟಿಕೆ ಉಪ್ಪು ಕಡಿಮೆಯಾಯಿತೇನೋ ಅನ್ನಿಸಿದರೂ ರುಚಿ ಮಾತ್ರ ಕೆಟ್ಟಿಲ್ಲ.

ಕೆಂಚವ್ವಳಾಗಿ ಉಮಾಶ್ರೀ ಕೆಚ್ಚೆದೆಯ ಪಾತ್ರ

ರಾಯಣ್ಣನ ತಾಯಿ ಕೆಂಚವ್ವಳಾಗಿ ಕೆಚ್ಚೆದೆಯ ಪಾತ್ರದಲ್ಲಿ ಉಮಾಶ್ರೀ ಅವರದು ವೀರಾವೇಶದ ಪಾತ್ರ. ಬಿಚ್ಚುಗತ್ತಿ ಚೆನ್ನಬಸಪ್ಪನಾಗಿ ಶಶಿಕುಮಾರ್ ಗಮನಸೆಳೆಯುತ್ತಾರೆ. ವಿಶೇಷ ಎಂದರೆ ಚಿತ್ರದ ನಾಯಕಿ ನಿಖಿತಾ ತುಕ್ರಲ್ (ಮಲ್ಲವ್ವ) ಅವರ ಪಾತ್ರ ಒಂದೇ ಒಂದು ಹಾಡಿಗಷ್ಟೇ ಸೀಮಿತವಾಗಿದೆ.

ಉತ್ತರ ಕನ್ನಡ ಭಾಷೆಯೇ ಪ್ರಮುಖ ಹೈಲೈಟ್

ಉತ್ತರ ಕನ್ನಡ ಭಾಷೆಯಲ್ಲಿರುವ ಚಿತ್ರದ ಸಂಭಾಷಣೆ (ಕೇಶವಾದಿತ್ಯ) ಚಿತ್ರದ ಪ್ರಮುಖ ಹೈಲೈಟ್. ಮೊದಲೇ ಗಂಡುಭಾಷೆ, ದರ್ಶನ್ ಚಿಂದಿ ಉಡಾಯಿಸಿದ್ದಾರೆ. ಚಿತ್ರದಲ್ಲಿ ಕ್ಯಾಮೆರಾ ಕೈಚಳಕಕ್ಕಿಂತ ಸೌಂಡ್ ಎಫೆಕ್ಟ್ ಮಿಂಚಿದೆ. ರಾಯಣ್ಣನ ಹಾವಭಾವಗಳು, ಬ್ರಿಟೀಷರ ದರ್ಪ, ದೌರ್ಜನ್ಯ, ಅರಮನೆ, ಕೋಟೆ ಕೊತ್ತಲಗಳನ್ನು ಸೆರೆಹಿಡಿಯುವಲ್ಲಿ ರಮೇಶ್ ಬಾಬು ಕ್ಯಾಮೆರಾ ಕಣ್ಮನ ಸೆಳೆಯುಯುತ್ತದೆ.

ತೆಲುಗು ಚಿತ್ರದ ಟ್ಯೂನ್ ಹೋಲುವ ಹಾಡು

ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಕಂಠಸಿರಿಯಲ್ಲಿ ಹೊಮ್ಮಿರುವ "ವೀರಭೂಮಿ" ಹಾಡಿನ ಟ್ಯೂನ್ ತೆಲುಗಿನ 'ಮೇಜರ್ ಚಂದ್ರಕಾಂತ್' (ಎನ್ ಟಿ ರಾಮಾರಾವ್) "ಪುಣ್ಯಭೂಮಿ ನಾದೇಶಂ ನಮೋ ನಮಾಮಿ" ಹಾಡನ್ನು ಹೆಚ್ಚುಕಡಿಮೆ ಹೋಲುತ್ತದೆ. ಇನ್ನುಳಿದಂತೆ ಯಶೋವರ್ಧನ್ ಅವರ ಸಂಗೀತ ಪರ್ವಾಗಿಲ್ಲ.

ರಾಣಿ ಚೆನ್ನಮ್ಮಳದ್ದು ಆತ್ಮಹತ್ಯೆಯೇ, ಹತ್ಯೆಯೇ?

ರಾಣಿ ಚೆನ್ನಮ್ಮ ತಾವೇ ಆತ್ಮಹತ್ಯೆ ಮಾಡಿಕೊಂಡರೋ ಅಥವಾ ಬ್ರಿಟೀಷರೆ ಆಕೆಗೆ ವಿಷವಿಕ್ಕಿ ಸಾಯಿಸಿದರೋ ಎಂಬ ಅಂಶದ ಬಗ್ಗೆ ಇತಿಹಾಸದ ಪುಟಗಳಲ್ಲಿ ನಿಖರ ಮಾಹಿತಿ ಇಲ್ಲ. ಆದರೆ ಇಲ್ಲಿ ಚೆನ್ನಮ್ಮ ವಜ್ರದ ಉಂಗುರವನ್ನು ಕುಟ್ಟಿ ಪುಡಿಮಾಡಿಕೊಂಡು ಸ್ವೀಕರಿಸಿ ಸಾವಪ್ಪುತ್ತಾರೆ.

ಕಣ್ಣೀರ ಕೋಡಿ ಹರಿಸುವ ಕೆಂಚವ್ವ, ರಾಯಣ್ಣ

ಕೆಂಚವ್ವ ಹಾಗೂ ರಾಯಣ್ಣನ ನಡುವಿನ ಕೆಲವು ಸನ್ನಿವೇಶಗಳಂತೂ ಭಾವನಾತ್ಮಕವಾಗಿದ್ದು ಪ್ರೇಕ್ಷಕರು ಎಷ್ಟೇ ಬಿಗಿಹಿಡಿದರೂ ಅವರಿಗೆ ಗೊತ್ತಿಲ್ಲದಂತೆ ಕಣ್ಣಾಲಿಳು ತುಂಬಿ ಬರುತ್ತವೆ. ಇನ್ನು ಶ್ರೀನಿವಾಸಮೂರ್ತಿ, ಸೌರವ್, ಧರ್ಮ, ಕರಿಬಸವಯ್ಯ, ಅವಿನಾಶ್ ಅವರು ತಮ್ಮ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ.

ಕಿತ್ತೂರು ಚೆನ್ನಮ್ಮಳನ್ನು ಮತ್ತೆ ನೆನಪಿಸಿದ ಪಂತುಲು

ಸುಮಾರು ಇನ್ನೂರು ವರ್ಷಗಳ ಹಿಂದೆ ನಡೆದಂತೆಯೇ ಘಟನೆಗಳನ್ನು ಬೆಳ್ಳಿಪರದೆ ಮೇಲೆ ಮೂಡಿಸಿ ಕನ್ನಡ ಚಿತ್ರರಸಿಕರಿಗೆ ಇತಿಹಾಸದ ವೈಭವನ್ನು ತೋರಿಸಿಕೊಟ್ಟವರು ಸುಪ್ರಸಿದ್ಧ ಚಿತ್ರ ತಯಾರಕರೂ ಒಳ್ಳೆಯ ನಟರೂ ನಾಟಕಕಾರರೂ ಆಗಿದ್ದ ಬಿ.ಆರ್.ಪಂತುಲು. ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬಂದ 'ಕಿತ್ತೂರು ಚೆನ್ನಮ್ಮ' (1961) ಚಿತ್ರ ನೋಡಿದರೆ ಎಂಥಹವರಿಗೂ ಇಂದಿಗೂ ರಕ್ತ ಕುದಿಯುತ್ತದೆ, ದೇಶಭಕ್ತಿ ಉಕ್ಕಿಬರುತ್ತದೆ.

ಉತ್ತಿರಾ ಬಿತ್ತಿರಾ, ನಿಮಗೇಕೆ ಕೊಡ ಬೇಕು ಕಪ್ಪಾ

ರಾಣಿ ಚೆನ್ನಮ್ಮನಾಗಿ ಅಭಿನಯಿಸಿದ್ದ ಬಿ ಸರೋಜಾದೇವಿ ಅವರ "ಉತ್ತಿರಾ ಬಿತ್ತಿರಾ, ನಿಮಗೇಕೆ ಕೊಡ ಬೇಕು ಕಪ್ಪಾ" ಎಂಬ ಡೈಲಾಗ್ ಕಿವಿಗೆ ಬಿದ್ದರೆ ಈಗಲೂ ಕಿವಿ ನಿಮಿರುತ್ತದೆ. ಐತಿಹಾಸಿಕ ಚಿತ್ರವನ್ನು ಮಾಡಲು ಪಂತುಲು ಬಹಳಷ್ಟು ಶ್ರಮಿಸಿದ್ದರು. ಸಂಗೊಳ್ಳಿ ರಾಯಣ್ಣ ಚಿತ್ರದಲ್ಲೂ ಶ್ರಮ ಇದೆ. ಚಿತ್ರದ ನಿರ್ದೇಶಕ ನಾಗಣ್ಣ ಇನ್ನೊಂದಿಷ್ಟು ಸಿದ್ಧತೆಗಳನ್ನೂ ಮಾಡಿಕೊಂಡಿದ್ದಿದ್ದರೆ ಚಿತ್ರ ಇನ್ನಷ್ಟು ಸೊಗಸಾಗಿ ಮೂಡಿಬರುತ್ತಿತ್ತು.

ಓವರ್ ಆಲ್ ನೋಡಲೇ ಬೇಕಾದ ಚಿತ್ರವಿದು

ಮನೆಮಂದಿಯಲ್ಲಾ ಒಟ್ಟಿಗೆ ಕೂತು ನೋಡುವ ಚಿತ್ರಗಳು ಅಪರೂಪವಾಗುತ್ತಿವೆ. ಅದರಲ್ಲೂ ಐತಿಹಾಸಿಕ ಚಿತ್ರಗಳಂತೂ ಬರುತ್ತಲೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಅದ್ದೂರಿಯಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ರಾಯಣ್ಣ ಯಾರು, ಏನು, ಎತ್ತ ಎಂಬುದು ಇಂದಿನ ಮಕ್ಕಳಿಗೆ ಮತ್ತೊಮ್ಮೆ ನೆನಪಿಸುವ ಚಿತ್ರ. ಕುಟುಂಬ ಸಮೇತ ಹೋಗಿ ನೋಡಿ.


ಮೊದಲ ದಿನ ಮೊದಲ ಶೋಗೆ ಅದರಲ್ಲೂ ಮಲ್ಟಿಫೆಕ್ಸ್ ನಲ್ಲಿ ಈ ಪಾಟಿ ಪ್ರತಿಕ್ರಿಯೆ ನೋಡಿ ತಾಯಿ ಕನ್ನಡಾಂಬೆ ನೀವು ನಿಜಕ್ಕೂ ಧನ್ಯಳಾದೆ ಎನ್ನಿಸಿತು. ಇದೊಂದು ಐತಿಹಾಸಿಕ ಚಿತ್ರವಾದರೂ ಇತಿಹಾಸದ ಪುಟಗಳು ಒಂದೊಂದಾಗಿ ಸರಿಯುತ್ತಿದ್ದಂತೆ ಸಾಮಾಜಿಕ, ಕೌಟುಂಬಿಕ, ರಾಯಕೀಯ ಚೌಕಟ್ಟಿನಲ್ಲಿ ಚಿತ್ರ ಸಾಗುತ್ತದೆ.
English summary
Krantiveera Sangolli Rayanna review. It is a movie based on the freedom fighter of the same name with the Challenging Star Darshan performing the role of Sangolli Rayanna and veteran actress Jayaprada enacting the role of Kittur Chenamma. It is a must watch film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada