»   » ಚಿತ್ರ ವಿಮರ್ಶೆ: ಸಾಮಾನ್ಯದವನಲ್ಲ ಈ 'ಗುಳ್ಟು'!

ಚಿತ್ರ ವಿಮರ್ಶೆ: ಸಾಮಾನ್ಯದವನಲ್ಲ ಈ 'ಗುಳ್ಟು'!

Posted By:
Subscribe to Filmibeat Kannada

''ವ್ಯಕ್ತಿಯ ಬಯೋಮೆಟ್ರಿಕ್ ಸೇರಿದಂತೆ ಖಾಸಗಿ ಮಾಹಿತಿ ಒಳಗೊಂಡಿರುವ ಆಧಾರ್ ಮಾಹಿತಿ ಸೋರಿಕೆ ಆಗಿದೆ''... ''ಮಿಲಿಯನ್ ಗಟ್ಟಲೆ ಫೇಸ್ ಬುಕ್ ಬಳಕೆದಾರರ ದತ್ತಾಂಶ ಲೀಕ್ ಆಗಿದೆ''... ಎಂಬ ಸುದ್ದಿಗಳು ಇತ್ತೀಚಿನ ದಿನಗಳಲ್ಲಂತೂ ಹೆಚ್ಚಾಗಿ ಕೇಳಿ ಬರುತ್ತಿವೆ. ಆದ್ರೆ, ಆಧಾರ್ ಮಾಹಿತಿ, ಫೇಸ್ ಬುಕ್ ದತ್ತಾಂಶ ಮಾಹಿತಿ ಕದಿಯುವ ಕಳ್ಳರಿಗೆ ಸಿಗುವ ಲಾಭವಾದರೂ ಏನು? ಒಬ್ಬ ವ್ಯಕ್ತಿಯ ಮಾಹಿತಿಯನ್ನ ಇಟ್ಟುಕೊಂಡು ಯಾರು ಏನು ತಾನೆ ಮಾಡಲು ಸಾಧ್ಯ? ಎಂದು ಸಾಮಾನ್ಯ ಜನರು ಯೋಚಿಸಬಹುದು. ಅಂಥ ಸಾಮಾನ್ಯ ಜನರೆಲ್ಲರೂ ನೋಡಲೇಬೇಕಾದ ಸಿನಿಮಾ 'ಗುಳ್ಟು'!

ಸೈಬರ್ ಯುಗದಲ್ಲಿ ಈಗ ಏನೇನೆಲ್ಲಾ ನಡೆಯುತ್ತಿದೆ... ಓರ್ವ ವ್ಯಕ್ತಿಯ ಮಾಹಿತಿಯನ್ನ ಗೌಪ್ಯವಾಗಿ ಇಡುವುದು ಎಷ್ಟು ಮುಖ್ಯ ಎಂಬುದರ ಬಗ್ಗೆ ಬೆಳಕು ಚೆಲ್ಲುವ ಸಿನಿಮಾ 'ಗುಳ್ಟು'.

Rating:
4.0/5

ಚಿತ್ರ: ಗುಳ್ಟು
ನಿರ್ಮಾಣ: ಪ್ರಶಾಂತ್ ರೆಡ್ಡಿ, ದೇವರಾಜ್.ಆರ್
ನಿರ್ದೇಶನ: ಜನಾರ್ಧನ್ ಚಿಕ್ಕಣ್ಣ
ಸಂಗೀತ: ಅಮಿತ್ ಆನಂದ್
ಛಾಯಾಗ್ರಹಣ: ಶಾಂತಿ ಸಾಗರ್
ಸಂಕಲನ: ಭರತ್.ಎಂ.ಸಿ
ತಾರಾಗಣ: ನವೀನ್ ಶಂಕರ್, ಸೋನು ಗೌಡ, ಅವಿನಾಶ್ ಮತ್ತು ಇತರರು
ಬಿಡುಗಡೆ: ಮಾರ್ಚ್ 30, 2018

ಸಾಫ್ಟ್ ವೇರ್ ಎಂಜಿನಿಯರ್ ಗಳ ಕಥೆ-ವ್ಯಥೆ

ತಂದೆ-ತಾಯಿ ಇಲ್ಲದ ಅನಾಥ ಹುಡುಗ ಅಲೋಕ್ (ನವೀನ್ ಶಂಕರ್) ಬುದ್ಧಿವಂತ. ಬುಕ್ ಮೈ ಶೋ ವೆಬ್ ತಾಣವನ್ನೇ ಹ್ಯಾಕ್ ಮಾಡಿ, ಸ್ನೇಹಿತರಿಗೆ ಟಿಕೆಟ್ ಕೊಡಿಸುವಷ್ಟು ಚಾಣಾಕ್ಷ. ಎಂಜಿನಿಯರ್ ಪದವೀಧರ ಅಲೋಕ್ ಗೆ ಅನ್ ಲೈನ್ ಸ್ಟಾರ್ಟ್ ಅಪ್ ಪ್ರಾರಂಭ ಮಾಡುವ ಹಂಬಲ. ಆದ್ರೆ, ಅದಕ್ಕೆ ಬಂಡವಾಳ ಇಲ್ಲ. ಸಾಫ್ಟ್ ವೇರ್ ಕಂಪನಿಯಲ್ಲಿ ದುಡಿದು, ಟೀಮ್ ಲೀಡರ್ ಗೆ ಬಕೆಟ್ ಹಿಡಿದು, ಸಂಬಳ ಹೈಕ್ ಮಾಡಿಸಿಕೊಂಡು, ಹದಿನೈದು ವರ್ಷಗಳಲ್ಲಿ ಸಾಧಿಸುವುದಕ್ಕಿಂತ, ಮೂರೇ ವರ್ಷಕ್ಕೆ ಕೋಟ್ಯಾಧಿಪತಿ ಆಗಬೇಕು ಎಂಬ ಹಠ ಅಲೋಕ್ ಗೆ. ಇದಕ್ಕಾಗಿ ಆತ ಹಿಡಿಯುವ ವಾಮ ಮಾರ್ಗವೇ 'ಗುಳ್ಟು' ಸಿನಿಮಾ.

ಯಾರೀ 'ಗುಳ್ಟು'?

ಚಿತ್ರದ ಕಥಾನಾಯಕ ಅಲೋಕ್ ಸಿಕ್ಕಾಪಟ್ಟೆ ಸ್ಮಾರ್ಟ್. ಹಾಗಾದ್ರೆ, 'ಗುಳ್ಟು' ಯಾರು ಅಂತ ನೀವು ಕೇಳಬಹುದು. 'ಗುಳ್ಟು' ಯಾರು ಎಂಬುದೇ ಚಿತ್ರದ ಸಸ್ಪೆನ್ಸ್. ಅದನ್ನ ತಿಳಿದುಕೊಳ್ಳಲು ನೀವು ಥಿಯೇಟರ್ ನಲ್ಲಿ ಸಿನಿಮಾ ನೋಡಿ...

ನಾಯಕ-ನಾಯಕಿಯ ಪರ್ಫಾಮೆನ್ಸ್ ಹೇಗಿದೆ?

ಎಷ್ಟು ಬೇಕೋ ಅಷ್ಟೇ ಮಾತನಾಡುವ, ಭಯಂಕರ ಬುದ್ಧಿ ಉಪಯೋಗಿಸುವ ಹೀರೋ ಅಲೋಕ್ ಪಾತ್ರ ನಿರ್ವಹಿಸಿರುವ ನವೀನ್ ಶಂಕರ್ ಅಭಿನಯ ಚೆನ್ನಾಗಿದೆ. ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿರುವ ನಾಯಕಿ ಸೋನು ಗೌಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಲೋಕ್ ಫ್ರೆಂಡ್ ಆಸ್ತಿ ಪಾತ್ರಧಾರಿಯ ಕಾಮಿಡಿ ಟೈಮಿಂಗ್ ಸೂಪರ್.

ಅಚ್ಚರಿ ಮೂಡಿಸುವ ಪವನ್ ಕುಮಾರ್

'ಲೂಸಿಯಾ', 'ಯು ಟರ್ನ್' ಅಂತಹ ಸಿನಿಮಾಗಳನ್ನ ನಿರ್ದೇಶನ ಮಾಡಿರುವ ಪವನ್ ಕುಮಾರ್ 'ಗುಳ್ಟು' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತಮ್ಮ ಅಭಿನಯದ ಮೂಲಕ ಪವನ್ ಕುಮಾರ್ ಅಚ್ಚರಿ ಮೂಡಿಸುತ್ತಾರೆ. ಅವಿನಾಶ್ ನಟನೆಗೆ 'ಗುಳ್ಟು' ಚಿತ್ರದಲ್ಲಿ 'ಬೆಲೆ' ಸಿಕ್ಕಿದೆ. ರಂಗಾಯಣ ರಘು ಅಕ್ಟಿಂಗ್ ಎಂದಿನಂತೆ ಅಚ್ಚುಕಟ್ಟಾಗಿದೆ.

ಹೊಸ ಕ್ರೈಂ ಸ್ಟೋರಿ

ಮರ್ಡರ್ ಮಿಸ್ಟರಿ ಕಥಾನಕ ಹೊಂದಿರುವ ಹಲವು ಸಿನಿಮಾಗಳು ಈಗಾಗಲೇ ಬಂದು ಹೋಗಿವೆ. ಆದ್ರೆ, 'ಗುಳ್ಟು' ಚಿತ್ರದಲ್ಲಿರುವ ಕ್ರೈಂ ಕಥೆ ಸ್ವಲ್ಪ ವಿಚಿತ್ರವಾದದ್ದು, ಅನೇಕರ ಊಹೆಗೆ ನಿಲುಕದ್ದು. ಇಂಟರ್ ನೆಟ್ ಯುಗದ ತಲ್ಲಣಗಳನ್ನು ಸಿನಿಮಾವಾಗಿಸಿರುವ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಪ್ರಯತ್ನ ಪ್ರಶಂಸಾರ್ಹ.

ಎಲ್ಲೂ ಬೋರ್ ಆಗಲ್ಲ

ಚಿತ್ರಕ್ಕೆ ಅದ್ದೂರಿ ಮೆರುಗು ನೀಡಬೇಕು ಅಂತ ಫಾರಿನ್ ನಲ್ಲಿ ಹಾಡುಗಳ ಚಿತ್ರೀಕರಣ ನಡೆಸಿಲ್ಲ. ಹೀರೋ ಇಂಟ್ರೊಡಕ್ಷನ್ ಗೊಂದು, ನಾಯಕಿ ಎಂಟ್ರಿಗೊಂದು ಸಾಂಗ್ ತುರುಕಿಲ್ಲ. ಇಡೀ ಸಿನಿಮಾದಲ್ಲಿ ಯಾವುದೇ ಸ್ಟಂಟ್ ಇಲ್ಲ. ಗಿಮಿಕ್ ಕೂಡ ಇಲ್ಲ. ಇಷ್ಟೆಲ್ಲ 'ಇಲ್ಲ'ಗಳ ನಡುವೆಯೂ 'ಗುಳ್ಟು' ಎಲ್ಲೂ ಬೋರ್ ಆಗಲ್ಲ. ಮೊದಲ ಸೀನ್ ನಿಂದ ಹಿಡಿದು ಕ್ಲೈಮ್ಯಾಕ್ಸ್ ವರೆಗೂ ಪ್ರೇಕ್ಷಕರನ್ನ ಹಿಡಿದಿಡುವಲ್ಲಿ ನಿರ್ದೇಶಕರು ಯಶಸ್ವಿ ಆಗಿದ್ದಾರೆ.

ಟೆಕ್ನಿಕಲಿ ಸಿನಿಮಾ ಹೇಗಿದೆ?

ಇಬ್ಬರು ಎಂಜಿನಿಯರ್ಸ್ ಮತ್ತು ಸೈಬರ್ ಕ್ರೈಂ ಸುತ್ತ ನಡೆಯುವ ಕಥೆ ಇದಾದ್ದರಿಂದ, ಒಂದು ಕಾಲೇಜು, ಒಂದು ರೂಮ್, ಎರಡು ಆಫೀಸ್ ಹಾಗೂ ಪೊಲೀಸ್ ಸ್ಟೇಷನ್ ನಲ್ಲಿ ಸಿನಿಮಾ ಮುಗಿಸಲಾಗಿದೆ. ಶಾಂತಿ ಸಾಗರ್ ಕ್ಯಾಮರಾ ವರ್ಕ್ ಓಕೆ. ಭರತ್.ಎಂ.ಸಿ ಕತ್ರಿ ಕೆಲಸ ಚಿತ್ರದ ಓಟ ಹೆಚ್ಚಿಸಿದೆ. ಬ್ಯಾಕ್ ಗ್ರೌಂಡ್ ಸ್ಕೋರ್ ಕಥೆಗೆ ಕರೆಕ್ಟ್ ಆಗಿದೆ. ಆದ್ರೆ, ಹಾಡುಗಳು ಮತ್ತೆ ಮತ್ತೆ ಗುನುಗುವಂತಿಲ್ಲ.

ಪ್ರೇಕ್ಷಕರ ತಲೆಗೆ ಕೆಲಸ

'ಗುಳ್ಟು' ಎಂಟರ್ ಟೇನರ್ ಅನ್ನೋದಕ್ಕಿಂತ ಹೆಚ್ಚಾಗಿ ಇನ್ಫೋಟೇನರ್. ಸೈಬರ್ ಕ್ರೈಂ, ಇಂಟರ್ ನೆಟ್, ಡೇಟಾ, ಕಂಟೆಂಟ್ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲದವರಿಗೆ 'ಗುಳ್ಟು' ಹೊಸ ಪ್ರಪಂಚವೇ ಪರಿಚಯ ಮಾಡಿಕೊಡುತ್ತೆ. ಚಿತ್ರದ ನಾಯಕನ ಜಾಣ್ಮೆ ಪ್ರೇಕ್ಷಕರಿಗೆ ಅರ್ಥ ಆಗಬೇಕಾದರೆ, ತಲೆಗೆ ಸ್ವಲ್ಪ ಕೆಲಸ ಕೊಡಬೇಕು.

ತಪ್ಪದೆ ನೋಡಿರಿ...

ಬರೀ ಲವ್ ಸ್ಟೋರಿ, ರಿವೆಂಜ್ ಡ್ರಾಮಾ, ಸಸ್ಪೆನ್ಸ್ ಸಿನಿಮಾಗಳನ್ನೇ ನೋಡಿ ನೋಡಿ ಬೋರ್ ಆಗಿದ್ರೆ, 'ಗುಳ್ಟು' ಚಿತ್ರವನ್ನ ಮಿಸ್ ಮಾಡಿಕೊಳ್ಳಬೇಡಿ.

English summary
Read Naveen Shankar, Sonu Gowda starrer Kannada Movie 'Gultoo' review.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X