twitter
    For Quick Alerts
    ALLOW NOTIFICATIONS  
    For Daily Alerts

    Nayattu movie review: ಇಲ್ಲಿ ಎಲ್ಲರೂ ಬೇಟೆಗಾರರೆ

    |

    ಶಾಹಿ ಕಬೀರ್ ಬರೆದು, ಮಾರ್ಟಿನ್ ಪ್ರಕ್ಕಟ್ ನಿರ್ದೇಶಿಸಿರುವ ಮಲಯಾಳಂ ಸಿನಿಮಾ 'ನಾಯಟ್ಟು'ನ ಆರಂಭದಲ್ಲಿ ಹಿರಿಯ ಅಧಿಕಾರಿಯ ಅಣತಿಯಂತೆ ಮಂತ್ರಿಯೊಬ್ಬನ ಸಂಬಂಧಿಯ ಹಿತ ಕಾಯಲು ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಮನಿಯನ್, ಅಮಾಯಕ ಯುವಕನೊಬ್ಬನನ್ನು ಸುಳ್ಳು ಕೇಸಿನಲ್ಲಿ ಸಿಕ್ಕಿಸುತ್ತಾನೆ. ನಂತರ ಮನಿಯನ್ ಹಾಗೂ ಇನ್ನಿಬ್ಬರು ಪೊಲೀಸರನ್ನು ಅದೇ ರಾಜಕಾರಣಿಗಳ ಒತ್ತಡದಿಂದ ಪೊಲೀಸ್ ಅಧಿಕಾರಿಗಳು ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತಾರೆ. ಈ ಸಿನಿಮಾದಲ್ಲಿ ಎಲ್ಲರೂ ಬೇಟೆಗಾರರೆ. ಎಲ್ಲರೂ ಮತ್ತೊಬ್ಬರನ್ನು ಉರುಳಿಸಿ ತಾವು ಸೇಫ್ ಆಗುವ ಪ್ರಯತ್ನದಲ್ಲಿರುವವರೇ. 'ನಾಯಟ್ಟು' ಎಂದರೆ ಬೇಟೆ ಎಂದರ್ಥ.

    ದಲಿತ ರಾಜಕೀಯ ಕಾರ್ಯಕರ್ತರೊಬ್ಬರ ಆಕಸ್ಮಿಕ ಸಾವು, ಅದರಲ್ಲಿ ಸಿಕ್ಕಿಹಾಕಿಕೊಳ್ಳುವ ಮೂವರು ಪೊಲೀಸ್ ಸಿಬ್ಬಂದಿಗಳು ಮತ್ತು ಈ ಘಟನೆಯ ಸುತ್ತ ನಡೆಯುವ ಚುನಾವಣಾ ರಾಜಕೀಯವನ್ನು ಬಿಂಬಿಸುವ ಅದ್ಭುತ ಥ್ರಿಲ್ಲರ್ ಸಿನಿಮಾ 'ನಾಯಟ್ಟು'. ಒಬ್ಬ ಅನುಭವಿ ಸಹಾಯಕ ಸಬ್ ಇನ್‌ಸ್ಪೆಕ್ಟರ್, ಇಬ್ಬರು ಹೊಸ ಕಾನ್ಸ್‌ಟೇಬಲ್‌ಗಳು ತಾವು ತಪ್ಪು ಮಾಡದಿದ್ದರೂ ತಮ್ಮ ಸುತ್ತಲಿನವರು ತಮ್ಮನ್ನು ತಪ್ಪಿತಸ್ಥರು ಎಂದು ನಿರೂಪಿಸಲು ಹೊರಟಿರುವ ಬಗ್ಗೆ ಅರಿತು ಕೊಲೆಗಾರರ ಹಣೆ ಪಟ್ಟಿ ಕಟ್ಟಿಕೊಂಡು ಓಡಿಹೋಗುತ್ತಾರೆ. ರಾಜಕಾರಣಿಗಳ ಒತ್ತಡಕ್ಕೆ ಬಿದ್ದ ಪೊಲೀಸರು ತಪ್ಪಿಸಿಕೊಂಡ ಮೂವರು ಪೊಲೀಸರನ್ನು ಶತಾಯಗತಾಯ ಹಿಡಿಯಲೇ ಬೇಕೆಂದು ಅವರ ಹಿಂದೆ ಬೀಳುತ್ತಾರೆ. ಅಲ್ಲಿಂದ ಒಂದು ಅದ್ಭುತ ಥ್ರಿಲ್ಲರ್ ಜರ್ನಿ ಆರಂಭವಾಗುತ್ತದೆ.

    Rating:
    3.5/5

    ಮೂವರು ನಿರಪರಾಧಿ ಪೊಲೀಸರು ತಮ್ಮನ್ನು ಭೇಟೆಯಾಡಲು ಬರುವವರಿಂದ ತಪ್ಪಿಸಿಕೊಳ್ಳಲು ಮಾಡುವ ಯತ್ನ. ಪರಸ್ಪರರ ನಡುವೆ ಮಾಡಿಕೊಳ್ಳುವ ಜಗಳ, ಪ್ರೀತಿ. ತಪ್ಪಿಸಿಕೊಂಡವರನ್ನು ಹಿಡಿಯಲು ಪೊಲೀಸರು ಬಳಸುವ ತಂತ್ರಗಳು. ಇಡೀ ಸನ್ನಿವೇಶವನ್ನು ಚುನಾವಣೆ ಗೆಲ್ಲಲು ಬಳಸಿಕೊಳ್ಳಲು ತಯಾರಾಗಿರುವ ರಾಜಕಾರಣಿಗಳು. ಥ್ರಿಲ್ಲರ್ ಕತೆಯ ಒಳಗೆ ಅಲ್ಲಲ್ಲಿ ಕಾಣಿಸಿಕೊಳ್ಳುವ ಮಾನವೀಯ ಮೌಲ್ಯದ ಎಳೆಗಳು. ಇವೆಲ್ಲವೂ 'ನಾಯಟ್ಟು' ಸಿನಿಮಾವನ್ನು ಸುಂದರ ಕೃತಿಯನ್ನಾಗಿ ಮಾಡಿದೆ.

    ಕತೆಯಲ್ಲಿ 'ಮಿರ್ಯಾಕಲ್‌' ನಡೆಯುವುದಿಲ್ಲ

    ಕತೆಯಲ್ಲಿ 'ಮಿರ್ಯಾಕಲ್‌' ನಡೆಯುವುದಿಲ್ಲ

    ತಪ್ಪು ಮಾಡದವರ ಮೇಲೆ ಆರೋಪ ಹೊರಿಸಿ ವ್ಯವಸ್ಥೆಯೊಂದು ಅವರನ್ನು ಬಲಿ ಹಾಕಲು ಯತ್ನಿಸುವ ಕತೆಗಳುಳ್ಳ ಸಿನಿಮಾಗಳು ಹಲವು ಬಂದಿವೆ. ಆದೆ ಮಾದರಿಯ ಸಿನಿಮಾ ಆದರೂ 'ನಾಯಟ್ಟು' ಭಿನ್ನವಾಗಿ ನಿಲ್ಲುತ್ತದೆ. ಕಾರಣ, ಈ ಸಿನಿಮಾದಲ್ಲಿ 'ಮಿರ್ಯಾಕಲ್'ಗಳು ನಡೆಯುವುದಿಲ್ಲ. ಇತರೆ ಸಿನಿಮಾಗಳಲ್ಲಿಯಾದರೆ ಆರೋಪಿಗಳು ಮಾಧ್ಯಮದ ಮೂಲಕವೊ, ಸಾಮಾಜಿಕ ಜಾಲತಾಣ ಬಳಸಿಕೊಂಡೊ ತಾವು ತಪ್ಪಿತಸ್ಥರಲ್ಲ ನಮಗೆ ಅನ್ಯಾಯವಾಗಿದೆ ಎಂದು ಎಲ್ಲರಿಗೂ ತಿಳಿಸಿ ತಮ್ಮ ಮೇಲಿನ ಆರೋಪದಿಂದ ಮುಕ್ತರಾಗುತ್ತಾರೆ, ಅಲ್ಲಿಗೆ ಅವರಿಗೆ 'ಸಿನಿಮಿಕ್ ಜಸ್ಟಿಸ್' ದೊರೆತು ಸಿನಿಮಾ ಮುಗಿಯುತ್ತದೆ. ಆದರೆ ಇಲ್ಲಿ ಮೂವರು ಪೊಲೀಸರಿಗೆ ತಾವು ನಿರಪರಾಧಿಗಳು ಎಂದು ಜಗತ್ತಿಗೆ ಹೇಳುವ ಅವಕಾಶಗಳು ದೊರೆಯುವುದಿಲ್ಲ. ಇದಕ್ಕೆ ಕಾರಣ ಸಿನಿಮಾದ ಕತೆ ವಾಸ್ತವತೆಗೆ ಹೆಚ್ಚು ಹತ್ತಿರವಾಗಿರುವುದು.

    ವಾಸ್ತವಕ್ಕೆ ಹೆಚ್ಚು ಹತ್ತಿರದ ಕತೆ ಹೆಣೆಯಲಾಗಿದೆ

    ವಾಸ್ತವಕ್ಕೆ ಹೆಚ್ಚು ಹತ್ತಿರದ ಕತೆ ಹೆಣೆಯಲಾಗಿದೆ

    ಕತೆಯನ್ನು ವಾಸ್ತವತೆಗೆ ಹೆಚ್ಚು ಹತ್ತಿರವಿರುವಂತೆ ಹೆಣೆಯಲಾಗಿದೆ. ಸಿನಿಮಾದಲ್ಲಿ ಒಂದು ಘಟನೆಗೆ ಮತ್ತೊಂದು ಘಟನೆ, ಒಂದು ದೃಶ್ಯಕ್ಕೆ ಮತ್ತೊಂದು ದೃಶ್ಯ ಪೂರಕವಾಗಿ ಸರಣಿ ಮಾದರಿಯಲ್ಲಿ ನಡೆದುಕೊಂಡು ಹೋಗುತ್ತದೆ. ಇದೇ ಕಾರಣಕ್ಕೆ ಪ್ರೇಕ್ಷಕ ಸಿನಿಮಾದ ಕತೆಯ ಜೊತೆ ಎಲ್ಲಿಯೂ ನಂಟು ಕಳೆದುಕೊಳ್ಳುವುದಿಲ್ಲ.

    ಪೊಲೀಸ್ ಇಲಾಖೆಯ ಎರಡು ಮುಖ ದರ್ಶನ

    ಪೊಲೀಸ್ ಇಲಾಖೆಯ ಎರಡು ಮುಖ ದರ್ಶನ

    ಸಿನಿಮಾದಲ್ಲಿ ಪೊಲೀಸ್ ಇಲಾಖೆಯ ಸಣ್ಣ-ಸಣ್ಣ ಡೀಟೇಲ್‌ಗೂ ಮಹತ್ವ ನೀಡಲಾಗಿದೆ. ಜೊತೆಗೆ ರಾಜಕಾರಣಿಗಳು ತಮ್ಮ ಅವಶ್ಯಕತೆಗೆ ತಕ್ಕಂತೆ ಪೊಲೀಸ್ ಸೇರಿದಂತೆ ಇತರೆ ಸರ್ಕಾರಿ ಸಂಸ್ಥೆಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ತೋರಿಸಲಾಗಿದೆ. ಜೊತೆಗೆ ಪೊಲೀಸ್ ಇಲಾಖೆಯ ಎರಡು ಮುಖಗಳ ಪರಿಚಯವನ್ನೂ ಮಾಡಿಸಲಾಗಿದೆ. ಅಮೂರ್ತ ಎನ್ನಬಹುದಾದ ಕೆಲವು ದೃಶ್ಯಗಳೂ ಸಿನಿಮಾದಲ್ಲಿ ಇವೆ, ಸಿನಿಮಾದ ಅಂತ್ಯದಲ್ಲಿ ಕುರುಡ ಮತದಾರನ ಮತವನ್ನು ಬಲವಂತದಿಂದ ಒತ್ತಿಸುವುದು ಇಂಥ ದೃಶ್ಯಗಳಿಗೆ ಒಂದು ಉದಾಹರಣೆ.

    ಮೂವರ ನಟನೆ ಅದ್ಭುತ

    ಮೂವರ ನಟನೆ ಅದ್ಭುತ

    ಅಮಾಯಕ ಪೊಲೀಸರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜೋಜು ಜಾರ್ಜ್, ಕುಂಚಾಕೊ ಬೋಬನ್, ನಿಮಿಷ ಸಜಯನ್ ಮೂವರುಗಳು ಈಗಾಗಲೇ ಹಲವು ಸಿನಿಮಾಗಳಲ್ಲಿ ತಮ್ಮ ಅಭಿನಯ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ಈ ಸಿನಿಮಾದಲ್ಲಿಯೂ ಸಹ ತಮ್ಮ ಅದ್ಭುತ ನಟನೆಯನ್ನು ಮುಂದುವರೆಸಿದ್ದಾರೆ. ಇತರೆ ಪಾತ್ರಗಳಲ್ಲಿ ನಟಿಸಿರುವ ಯಮಾ ಗಿಲ್ಗಮೇಶ್, ಅನಿಲ್ ನೆಡುಮಾಂಗಡ (ಇವರು ಚಿತ್ರೀಕರಣದ ವೇಳೆಯಲ್ಲಿ ನೀರಿನಲ್ಲಿ ಮುಳುಗಿ ಅಸುನೀಗಿದರು), ಅಜಿತ್ ಕೋಶಿ ಇನ್ನೂ ಕೆಲವರ ನಟನೆ ನೆನಪುಳಿಯುತ್ತದೆ.

    'ನಾಯಟ್ಟು' ನೋಡಬೇಕಾದ ಸಿನಿಮಾ

    'ನಾಯಟ್ಟು' ನೋಡಬೇಕಾದ ಸಿನಿಮಾ

    ಸಿನಿಮಾದ ತಾಂತ್ರಿಕ ವಿಷಯ ಚರ್ಚಿಸುವುದಾದರೆ ಸಿನಿಮಾವನ್ನು ಕಾಡುವ ಥ್ರಿಲ್ಲರ್ ಆಗಿ ಮಾಡುವಲ್ಲಿ ಹಿನ್ನೆಲೆ ಸಂಗೀತದ ಕೊಡುಗೆ ದೊಡ್ಡದಿದೆ. ಹಿನ್ನೆಲೆ ಸಂಗೀತವು ಥ್ರಿಲ್ಲರ್ ದೃಶ್ಯಗಳ ತೀವ್ರತೆಯನ್ನು ಹೆಚ್ಚಿಸುವಂತಿದೆ. ಮುನ್ನಾರ್‌ನ ಸುಂದರ ದೃಶ್ಯಗಳನ್ನು ಸೆರೆಹಿಡಿದಿರುವ ಕ್ಯಾಮೆರಾಮನ್ ಶಿಜುಖಾಲಿದ್ ರಾತ್ರಿ ದೃಶ್ಯಗಳನ್ನೂ ಸಹ ಅಷ್ಟೇ ಸುಂದರವಾಗಿ ಸೆರೆಹಿಡಿದಿದ್ದಾರೆ. ಕಡಿಮೆ ಸಂಪನ್ಮೂಲ ಬಳಸಿಕೊಂಡು ಸುಂದರ ಸಿನಿಮಾ ಮಾಡುವ ಕಲೆ ಕೇರಳಿಗರಿಗೆ ಸಿದ್ದಿಸಿಬಿಟ್ಟಂತಿದೆ. ಒಟ್ಟಾರೆ 'ನಾಯಟ್ಟು' ನೋಡಬೇಕಾದ ಸಿನಿಮಾ.

    English summary
    Nayattu Malayalam movie review in Kannada. Movie directed by Martin Prakkat. Written by Shahi Kabir.
    Monday, May 17, 2021, 16:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X