twitter
    For Quick Alerts
    ALLOW NOTIFICATIONS  
    For Daily Alerts

    'One Cut Two Cut' Movie Review: ಏನೋ ಮಾಡಲು ಹೋಗಿ...!

    |

    ಸೋಷಿಯಲ್ ಮೀಡಿಯಾ ಸೆನ್ಸೇಷನ್ ದಾನಿಶ್ ಸೇಠ್ ನಟಿಸಿರುವ 'ಒನ್ ಕಟ್ ಟು ಕಟ್' ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಇಂದು ಬಿಡುಗಡೆ ಆಗಿದೆ. ಪುನೀತ್ ರಾಜ್‌ಕುಮಾರ್ ಅಗಲಿದ ಬಳಿಕ ಪಿಆರ್‌ಕೆ ಪ್ರೊಡಕ್ಷನ್‌ನಿಂದ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ ಇದು.

    ಪಾತ್ರಗಳನ್ನು ಸೃಷ್ಟಿಸಿ, ಆ ಪಾತ್ರಗಳಿಗೆ ಕೆಲವು ಮ್ಯಾನರಿಸಂ, ದೇಹಭಾಷೆ, ಭಾಷಾ ಶೈಲಿಗಳನ್ನು ನೀಡಿ ಅವುಗಳನ್ನು ತಾವೇ ಅನುಕರಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ದಾನಿಶ್ ಸೇಠ್ ಗಳಿಸಿದ್ದಾರೆ. ಅವರು ಸೃಷ್ಟಿಸಿರುವ ಹಲವು ಪಾತ್ರಗಳು ಸೂಪರ್ ಹಿಟ್ ಆಗಿವೆ, ಅವುಗಳಲ್ಲಿ ಒಂದು ಗೋಪಿ.

    ಶೈಕ್ಷಣಿಕವಾಗಿ ಬುದ್ಧಿವಂತನಾದ ಆದರೆ ವ್ಯಾವಹಾರಿಕ ಜ್ಞಾನ ಇರದ, ಇಂಗ್ಲಿಷನ್ನು ತಪ್ಪಾಗಿಯೂ ಭಿನ್ನವಾಗಿಯೂ ಮಾತನಾಡುವ ಗೋಪಿ 'ಒನ್ ಕಟ್ ಟು ಕಟ್' ಸಿನಿಮಾದಲ್ಲಿ ಆರ್ಟ್ ಆಂಡ್ ಕ್ರಾಫ್ಟ್ಸ್‌ನ ಶಿಕ್ಷಕ. ಶಿಕ್ಷಕನಾಗಿ ಮೊದಲ ದಿನ, ಮೊದಲ ತರಗತಿ ತೆಗೆದುಕೊಂಡ ದಿನವೇ ಆ ಶಾಲೆಯ ಮೇಲೆ ನಾಲ್ವರು ದಾಳಿ ಮಾಡಿ ಶಾಲೆಯ ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳುತ್ತಾರೆ. ಆ ನಾಲ್ವರು ಯಾರು, ಯಾಕೆ ಶಾಲೆಯ ಮೇಲೆ ದಾಳಿ ಮಾಡುತ್ತಾರೆ. ನಾಲ್ವರ ಒತ್ತಾಯಗಳೇನು ಇನ್ನೂ ಹಲವು ಅಂಶಗಳು ಸ್ಪಷ್ಟವಾಗಲು ಸಿನಿಮಾ ನೋಡಬೇಕು. ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಲಭ್ಯವಿದೆ.

    Rating:
    2.5/5

    'ಒನ್ ಕಟ್ ಟು ಕಟ್' ಸಿನಿಮಾ ಹಾಸ್ಯ ಸಿನಿಮಾ ಎಂದು ಮಾಡಲಾಗಿದೆ. ಆದರೆ ಸಿನಿಮಾದಲ್ಲಿ ಹಾಸ್ಯ ನಿರೀಕ್ಷಿಸಿದ ಮಟ್ಟದಲ್ಲಿ ಇಲ್ಲ. ಹಲವು ಸಣ್ಣ-ಸಣ್ಣ ಪಂಚ್‌ ಲೈನ್‌ಗಳು ಇವೆಯಾದರೂ ದೊಡ್ಡ ಮಟ್ಟದ ನಗು ಉಕ್ಕಿಸುವ ಸನ್ನಿವೇಶಗಳಾಗಲಿ, ಡೈಲಾಗ್‌ಗಳಾಗಲಿ ಸಿನಿಮಾದಲ್ಲಿರುವುದು ದೊಡ್ಡ ಕೊರತೆ. ಸಿನಿಮಾದಲ್ಲಿ ಬರುವ ಏಜೆಂಟ್ ಒಬ್ಬನ ಮಾತ್ರ ಮತ್ತು ದೃಶ್ಯಗಳೇ ತುಸು ಹೆಚ್ಚು ನಗು ತರಿಸುತ್ತವೆ. ಸ್ವತಃ ದಾನಿಶ್ ಸೇಠ್‌ ಹೆಚ್ಚು ನಗಿಸುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆ ಪೇಲವ ಬರವಣಿಗೆ ಕಾರಣ ಎನ್ನಬಹುದು.

    ಪ್ರೇಕ್ಷಕರಿಗೆ ಹಲವು ಪ್ರಶ್ನೆಗಳು ಏಳುತ್ತವೆ

    ಪ್ರೇಕ್ಷಕರಿಗೆ ಹಲವು ಪ್ರಶ್ನೆಗಳು ಏಳುತ್ತವೆ

    ಸಿನಿಮಾದ ಕತೆಯಲ್ಲಿಯೂ ಸಹ ಬಹಳ ಗೊಂದಲಗಳಿವೆ. ಆತುರದಲ್ಲಿ ಕತೆಯನ್ನು ಬರೆದು, ಕತೆ ಹೇಗೆ ಬರುತ್ತದೆಯೋ ಅದನ್ನು ಹಾಗೆಯೇ ಚಿತ್ರೀಕರಣ ಮಾಡಿಕೊಂಡು ಹೋದಂತಿದೆ. ಕೆಲವೆಡೆಯಂತೂ ಸರಳ ಲಾಜಿಕ್‌ಗಳೇ ಮಿಸ್ ಆಗಿಬಿಟ್ಟಿವೆ. ಸಿನಿಮಾ ನೋಡಬೇಕಾದರೆ ಪ್ರೇಕ್ಷಕರ 'ಇದ್ಯಾಕೆ ಹೀಗೆ?' ಎಂದು ಕೇಳಲು ಹಲವು ಅವಕಾಶಗಳನ್ನು ನಿರ್ದೇಶಕ ವಂಸಿಧರ ಭೋಗರಾಜು.

    ದಾನಿಶ್, ಪ್ರಕಾಶ್ ಬೆಳವಾಡಿ ನಟನೆ ಉತ್ತಮ

    ದಾನಿಶ್, ಪ್ರಕಾಶ್ ಬೆಳವಾಡಿ ನಟನೆ ಉತ್ತಮ

    ಸಿನಿಮಾದ ಕತೆ, ಚಿತ್ರಕತೆ ಅದ್ಭುತವಾಗಿಲ್ಲದಿದ್ದರೂ ಸಿನಿಮಾವನ್ನು 'ನೋಡೆನಲ್' ಮಾಡಿರುವುದು ದಾನಿಶ್ ಸೇಠ್‌, ಪ್ರಕಾಶ್ ಬೆಳವಾಡಿ, ವಿನೀತ್ ಇನ್ನು ಕೆಲವರ ನಟನೆ. ಪ್ರಕಾಶ್ ಬೆಳವಾಡಿ ಅದ್ಭುತವಾಗಿ ನಟಿಸಿದ್ದಾರೆ. ದಾನಿಶ್ ಸೇಠ್ ನಟನೆಯೂ ಸಾಕಷ್ಟು ಸುಧಾರಿಸಿದೆ ಪಕ್ವತೆಯೆಡೆಗೆ ಸಾಗುತ್ತಿದ್ದಾರೆ. ಜೋರ್ಡ್‌ ಇಂಡಿಯನ್ ಯೂಟ್ಯೂಬ್ ಚಾನೆಲ್‌ ಖ್ಯಾತಿಯ ವಿನೀತ್ ಬೀಪ್ ಕುಮಾರ್ ನಟನೆಯೂ ಚೆನ್ನಾಗಿದೆ. ಅವರ ಕೆಲವು ಹಾವ ಭಾವಗಳು, ಸಂಭಾಷಣೆಯ ರೀತಿ ನಗೆ ಉಕ್ಕಿಸುತ್ತವೆ. ಸಂಯುಕ್ತಾ ಹೊರನಾಡು ಅವರಿಗೆ ಹೆಚ್ಚಿನ ಅವಕಾಶವಿಲ್ಲವಾದರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

    ಸಿನಿಮಾಟೊಗ್ರಫರ್ ಕಾರ್ಯ ಅಭಿನಂದನಾರ್ಹ

    ಸಿನಿಮಾಟೊಗ್ರಫರ್ ಕಾರ್ಯ ಅಭಿನಂದನಾರ್ಹ

    ಸಿನಿಮಾ ಅತ್ಯಂತ ಕಡಮೆ ಬಜೆಟ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಶಾಲಾ ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡ ರೂಮ್‌ ಹಾಗೂ ಸಿಎಂ ಕಾರ್ಯದರ್ಶಿ ಪಾತ್ರದಲ್ಲಿ ನಟಿಸಿರುವ ಸಂಪತ್‌ ಕುಳಿತಿರುವ ರೂಮ್ ಇವೆರಡರಲ್ಲೇ ಸಿನಿಮಾದ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಕಡಿಮೆ ಬಜೆಟ್ ಆದರೂ ಸಿನಿಮಾದಲ್ಲಿ ರಿಚ್ ಫೀಲಿಂಗ್ ಇರುವಂತೆ ನೋಡಿಕೊಳ್ಳಲಾಗಿದೆ. ಸಿನಿಮಾದ ಸಿನಿಮಾಟೊಗ್ರಾಫರ್‌ ಇದಕ್ಕೆ ಅಭಿನಂದನಾರ್ಹರು. ಸಿನಿಮಾದ ಹಿನ್ನೆಲೆ ಸಂಗೀತ ಕೆಲವೊಮ್ಮೆ ಉತ್ತರ ಎನಿಸಿದರೆ ಕೆಲವೊಮ್ಮೆ ಗೊಂದಲಮಯ ಎನಿಸುತ್ತದೆ. ಸಿನಿಮಾವನ್ನು ಕೇವಲ 80 ನಿಮಿಷವಷ್ಟೆ ಇದೆ. ನಿರ್ದೇಶಕರ ಈ ನಿರ್ಣಯ ಸಿನಿಮಾವನ್ನು ಒಂದಷ್ಟು ಸಹ್ಯ ಮಾಡುತ್ತದೆ.

    ಸಿನಿಮಾದಲ್ಲಿ ಸಂದೇಶವೂ ಇದೆ, ಆದರೆ..

    ಸಿನಿಮಾದಲ್ಲಿ ಸಂದೇಶವೂ ಇದೆ, ಆದರೆ..

    ಸಿನಿಮಾದಲ್ಲಿ ಸಾಕಷ್ಟು ಪ್ರಚಲಿತ ವಿಷಯಗಳ ಉಲ್ಲೇಖಗಳು ಆಗುತ್ತವೆ. ಕಮಿಡಿಯನ್ ಕುನಾಲ್ ಕಾಮ್ರ, ದನದ ಮಾಂಸ, ಸಂಸ್ಕೃತ ಇನ್ನೂ ಹಲವು ವಿಷಯಗಳ ಉಲ್ಲೇಖ ಆಗುತ್ತವೆ ಆದರೆ ಇವು ಕೇವಲ 'ಹಾಸ್ಯ'ವಾಗಿ ಮಾತ್ರವೇ ಇವೆ. ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಊಟ ಸಿಗೊಲ್ಲ, ಸರಿಯಾದ ಸ್ವಚ್ಛತೆ ಇಲ್ಲ, ಶಿಕ್ಷಕರಿಗೆ ಸೂಕ್ತ ಸಂಬಳ ಇಲ್ಲ ಇತರೆ ವಿಷಯಗಳ ಬಗ್ಗೆಯೂ ಸಿನಿಮಾ ಮಾತನಾಡುತ್ತದೆ ಆದರೆ ಇದಕ್ಕೆ ಸರಿಯಾದ ಒತ್ತು ಕೊಡುವಲ್ಲಿ ನಿರ್ದೇಶಕರು ಧಾರುಣವಾಗಿ ಸೋತಿದ್ದಾರೆ. ಸಿನಿಮಾದಲ್ಲಿನ ಸಂದೇಶ ಕೇವಲ ಬಾಯಿ ಮಾತಿಗಷ್ಟೆ ಸೀಮಿತವಾಗಿದೆ. ಸಂದೇಶವನ್ನು ಅಂತ್ಯದಲ್ಲಿ ಬಲವಂತವಾಗಿ ತುರುಕಿದಂತೆಯೂ ಭಾಸವಾಗುತ್ತದೆ.

    ಅದು ಸುಲಭ, ಇದು ಕಷ್ಟ

    ಅದು ಸುಲಭ, ಇದು ಕಷ್ಟ

    ಕಿರು ವಿಡಿಯೋಗಳ ಮೂಲಕ ಜನರನ್ನು ಎರಡು-ಮೂರು ನಗಿಸುವುದು ಸುಲಭ ಆದರೆ ಒಂದು ಸಿನಿಮಾ ಮಾಡಿ ಪ್ರೇಕ್ಷಕರನ್ನು ಗಂಟೆ ಗಂಟ್ಟಲೆ ರಂಜಿಸುವುದು ಸುಲಭದ ಕಾರ್ಯವಲ್ಲ. ಅದಕ್ಕೆ ಕೇವಲ ನಟ ಇದ್ದರೆ ಮಾತ್ರ ಸಾಲದು ಎಲ್ಲ ವಿಭಾಗಗಳು ಜೊತೆ-ಜೊತೆಯಾಗಿ ಕೆಲಸ ಮಾಡಬೇಕು ಎಂಬುದಕ್ಕೆ 'ಒನ್‌ ಕಟ್ ಟು ಕಟ್' ಒಂದೊಳ್ಳೆ ಉದಾಹರಣೆ. ಸಾಮಾಜಿಕ ಜಾಲತಾಣದಲ್ಲಿ ಕಿರು ವಿಡಿಯೋಗಳಿಂದ ಮೋಡಿ ಮಾಡಿರುವ ದಾನಿಶ್‌, ಸಿನಿಮಾಗಳಲ್ಲಿ ಅದೇ ಮೋಡಿಯನ್ನು ರಿಪೀಟ್ ಮಾಡಲು ಹೆಣಗುತ್ತಿದ್ದಾರೆ. ಒಟ್ಟಾರೆಯಾಗಿ, ಸಿನಿಮಾದ ಅವಧಿ ಚಿಕ್ಕದಾಗಿರುವ ಕಾರಣ ಸಮಯ ಇರುವವರು ಹಾಗೂ ಅಮೆಜಾನ್‌ನಲ್ಲಿ ಖಾತೆ ಇರುವವರು ಒಮ್ಮೆ ನೋಡಬಹುದು.

    English summary
    Danish Sait starer One Cut Two Cut Kannada movie review. Movie is directed by Vamsidhara Bhaogaraju.
    Thursday, February 3, 2022, 17:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X