twitter
    For Quick Alerts
    ALLOW NOTIFICATIONS  
    For Daily Alerts

    Gandhada Gudi Review: ಅಂತ್ಯ ಆಗಬಾರದಿದ್ದ ಸುಂದರ ಪಯಣ

    |

    ಸುಂದರ ದೃಶ್ಯ ಕಂಡಾಗ, ಒಳ್ಳೆಯ ತಿನಿಸು ಸವಿದಾಗ ಅದನ್ನು ತನ್ನಿಷ್ಟದ ವ್ಯಕ್ತಿಗಳಿಗೂ ಹಂಚಬೇಕು ಎಂಬ ಆಲೋಚನೆ ತನ್ನವರನ್ನು ಉತ್ಕಟವಾಗಿ ಪ್ರೀತಿಸುವವರಿಗಷ್ಟೆ ಬರಲು ಸಾಧ್ಯ. ಪುನೀತ್ ರಾಜ್‌ಕುಮಾರ್ ಸಹ ತಾವು ಕಂಡ, ಅನುಭವಿಸಿದ ಪ್ರಕೃತಿಯ ಅದ್ಭುತವನ್ನು ತಾವು ಇಷ್ಟಪಡುವ ರಾಜ್ಯದ ಜನರಿಗೆ ತೋರಿಸುವ ಆ ಸಹೃದಯತೆಯಿಂದ ನಿರ್ಮಾಣವಾಗಿರುವುದೇ 'ಗಂಧದ ಗುಡಿ' ಡಾಕ್ಯು-ಸಿನಿಮಾ.

    ಮಾಹಿತಿಗಳನ್ನು ರಾಶಿ ಹಾಕಿದ ಡಾಕ್ಯುಮೆಂಟರಿ ಇದಲ್ಲ, ಪ್ರವಾಸವನ್ನು ಸೆರೆ ಹಿಡಿದಿರುವ ಟ್ರಾವೆಲ್ ವ್ಲಾಗ್ ಸಹ ಅಲ್ಲ, ಭಾವುಕತೆ, ಥ್ರಿಲ್ಲಿಂಗ್ ಅನುಭವ, ಹಾಡು-ಕುಣಿತಗಳು ತುಂಬಿದ ಸಿನಿಮಾ ಸಹ ಇದಲ್ಲ. ಆದರೆ ಮೇಲಿನ ಎಲ್ಲವೂ ಹದವಾಗಿ ಒಳಗೊಂಡಿರುವ ಅಪರೂಪದ ದೃಶ್ಯ ಕೃತಿ. ಇದು 'ಅರಣ್ಯದೊಳಗೆ ಅಪ್ಪುವಿನ ಪಯಣ'.

    ಈ ಪಯಣ ಆರಂಭವಾಗುವುದು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಅಪ್ಪು ಜೊತೆ ಪಯಣದಲ್ಲಿ ಭಾಗಿಯಾಗಿರುವ ಅಮೋಘವರ್ಷರ ಮಾತಿನ ಮೂಲಕ. ಹೆಚ್ಚಿನ ಅತಿಶೋಯಕ್ತಿಗಳು ಇಲ್ಲದೆ ಸರಳವಾಗಿ ಪ್ರೇಕ್ಷಕರನ್ನು ಪಯಣಕ್ಕೆ ಸಜ್ಜು ಮಾಡುತ್ತಾರಿವರು. ನಂತರ ಅಪ್ಪು, ಪ್ರೇಕ್ಷಕರ ಕೈಹಿಡಿದುಕೊಂಡು ನಸು-ನಗುತ್ತಾ ಕರ್ನಾಟಕದ ಸುಂದರ ಅರಣ್ಯದೊಳ್ಳಕ್ಕೆ ಕರೆದೊಯ್ದುಬಿಡುತ್ತಾರೆ. ಇಷ್ಟಪಡುವ ಹಿರಿಯಣ್ಣನೊ, ಗೆಳೆಯನೊ ನಮ್ಮನ್ನು ಪ್ರವಾಸ ಕರೆದೊಯ್ದರೆ ಆಗುವ ಅನುಭವ ಪ್ರೇಕ್ಷಕನದ್ದು.

    ಕಾಡಿನ ಕದಲಿಕೆಗಳ ಬಗ್ಗೆ, ಪ್ರಾಣಿಗಳ ವರ್ತನೆಗಳ ಬಗ್ಗೆ ಅಪ್ಪುವಿನ ಸಹಜ ಕುತೂಹಲ, ತನಗಾದ ಅನುಭವವನ್ನು ತನಗೆ ತೋಚಿದಂತೆ ಸರಳವಾಗಿ ವಿವರಿಸುವ ರೀತಿ. ತನ್ನ ಭಯ, ಆತಂಕ, ಪ್ರಕೃತಿ ಬಗ್ಗೆ ತನಗಿರುವ ಪ್ರೀತಿ, ಆಗಾಗ್ಗೆ ಒಗೆಯುವ ಒನ್‌ಲೈನರ್‌ ಜೋಕ್‌ಗಳು ಎಲ್ಲವೂ ಆಪ್ತ ಗೆಳೆಯನೊಟ್ಟಿಗೆ ಮಾತನಾಡುತ್ತಾ ನಡೆಯುತ್ತಿರುವಂತೆ ಭಾಸವಾಗುತ್ತದೆ. ಹೋದ ಸ್ಥಳಗಳಲ್ಲಿ ತಮ್ಮ ತಂದೆ ಡಾ ರಾಜ್‌ಕುಮಾರ್ ಅವರಿಗೆ ಇರುವ ನಂಟಿನ ಬಗ್ಗೆಯೂ ವಿವರಿಸುತ್ತಾ ಒಟ್ಟಾರೆ ಪಯಣವನ್ನು ಇನ್ನಷ್ಟು-ಮತ್ತಷ್ಟು ಪ್ರಫುಲ್ಲಗೊಳಿಸುತ್ತಲೇ ಸಾಗುತ್ತಾರೆ. ಆಗಾಗ್ಗೆ ಅಮೋಘ ವರ್ಷ ನೀಡುವ ಕಾಡಿನ, ಪ್ರಾಣಿಗಳ ಬಗ್ಗೆ ಮಾಹಿತಿಗಳು ವನ್ಯಜೀವ ವೈವಿಧ್ಯದ ಬಗ್ಗೆ ಜ್ಞಾನವನ್ನೂ ಒದಗಿಸುತ್ತವೆ.

    ಅಪ್ಪು ಕೈಹಿಡಿದು ಪ್ರವಾಸ ಹೋದ ಅನುಭವ

    ಅಪ್ಪು ಕೈಹಿಡಿದು ಪ್ರವಾಸ ಹೋದ ಅನುಭವ

    ನಾಗರಹೊಳೆ ಅಭಯಾರಣ್ಯ, ಚಾಮರಾಜನಗರದ ಕಾಡುಗಳು, ಮಲೆನಾಡು, ಪಶ್ಚಿಮ ಘಟ್ಟ, ಬಯಲು ಸೀಮೆಯ ಕುರುಚಲು ಕಾಡು, ಮಲ್ಪೆ, ಗೋಕರ್ಣದ ಸಮುದ್ರದಾಳ ಎಲ್ಲೆಡೆ ಪ್ರೇಕ್ಷಕರನ್ನು ಕರೆದೊಯ್ಯುಯ್ದಿದ್ದಾರೆ ಅಪ್ಪು ಹಾಗೂ ಅಮೋಘ ವರ್ಷ. ಅವರು ತೋರಿಸಿದ ಸ್ಥಳಗಳನ್ನು ಈ ಹಿಂದೆ ನೋಡಿದ್ದರೂ 'ಗಂಧದ ಗುಡಿ'ಯಲ್ಲಿ ಭಿನ್ನವಾಗಿಯೂ, ಆಪ್ತವಾಗಿಯೂ ಕಾಣುತ್ತದೆ. ಇವುಗಳ ನಡುವೆ, ಡಾ ರಾಜ್‌ಕುಮಾರ್ ಅವರ ಹುಟ್ಟೂರು, ಹುಟ್ಟಿದ ಮನೆಯ ಪರಿಚಯವನ್ನೂ ಅಪ್ಪು ಮಾಡಿಸುತ್ತಾರೆ. ಅಣ್ಣಾವ್ರಿಗೆ ಇಷ್ಟವಾದ ಜಾಗ, ಅವರಿಗೆ ಪ್ರಕೃತಿಯೊಟ್ಟಿಗೆ, ತಮ್ಮ ಊರಿನೊಂದಿಗೆ ಇದ್ದ ನಂಟನ್ನು ಆಪ್ತವಾಗಿ ತೆರೆದಿಟ್ಟಿದ್ದಾರೆ. ಎಲ್ಲೂ ಅತಿಶಯೋಕ್ತಿ, ನಾಟಕೀಯತೆ, ಹೆಚ್ಚುಗಾರಿಕೆಗಳಿಲ್ಲ ಅಪ್ಪು ಧ್ವನಿಯಲ್ಲಿ ಕಾಣುವುದು ವಿನಮ್ರತೆಯಷ್ಟೆ.

    ಥ್ರಿಲ್ಲಿಂಗ್ ಅಂಶಗಳೂ ಇವೆ

    ಥ್ರಿಲ್ಲಿಂಗ್ ಅಂಶಗಳೂ ಇವೆ

    ಈ ಡಾಕ್ಯು ಸಿನಿಮಾದಲ್ಲಿ ಕೆಲವು ಥ್ರಿಲ್ಲಂಗ್ ಅಂಶಗಳೂ ಇವೆ. ಮೊದಲ ಬಾರಿಗೆ ಕಾಡಲ್ಲಿ ಹುಲಿಯನ್ನು ನೋಡುವ ಅಪ್ಪು ಅನುಭವಿಸುವ ರೋಮಾಂಚಕತೆ, ಆನೆಗಳನ್ನು ಪಳಗಿಸುವ ವಿಧಾನದ ವಿಡಿಯೋ ಕ್ಲಿಪ್ಪಿಂಗ್, ಹಾವು ಹಿಡಿಯುವ ದೃಶ್ಯಗಳು ಥ್ರಿಲ್ ನೀಡುತ್ತವೆ. ಬಳಸಿರುವ ಹಿನ್ನೆಲೆ ಸಂಗೀತ ದೃಶ್ಯದ ವೈಭವತೆಯನ್ನು, ಸೌಂದರ್ಯವನ್ನು ಇನ್ನಷ್ಟು ಎತ್ತರಗೊಳಿಸಿದೆ. ಎರಡು ಹಾಡುಗಳಿದ್ದು, ಎರಡೂ ಚೆನ್ನಾಗಿಯೂ, ಅರ್ಥವತ್ತಾಗಿಯೂ ಇವೆ.

    ಅಪ್ಪುವಿನ ಸರಳತೆಗೆ ಹಲವು ಉದಾಹರಣೆ

    ಅಪ್ಪುವಿನ ಸರಳತೆಗೆ ಹಲವು ಉದಾಹರಣೆ

    ಅಪ್ಪುವಿನ ಸರಳತೆಯನ್ನು ಕಂಡವರು ಹೇಳಿದ್ದನ್ನು ಕೇಳಿದ್ದವರಿಗೆ, ಬರೆದಿದ್ದನ್ನು ಓದಿದ್ದೆವರಿಗೆ, ನಿಜವಾಗಿಯೂ ಅಪ್ಪು ಸರಳತೆ ಎಂಥಹದ್ದು ಎಂಬುದಕ್ಕೆ ಡಾಕ್ಯು ಸಿನಿಮಾದಲ್ಲಿ ಹಲವು ಉದಾಹರಣೆ ಸಿಗುತ್ತವೆ. ಕಾಡಿನಲ್ಲಿ ಕಾಡು ರಕ್ಷಕರ ಜೊತೆ ಕಿ.ಮೀ ಗಟ್ಟಲೆ ನಡೆಯುತ್ತಾರೆ. ಅವರೊಟ್ಟಿಗೆ ಕುಳಿತು, ಏಳುತ್ತಾರೆ, ಅವರು ಕೊಟ್ಟಿದ್ದನ್ನು ತಿನ್ನುತ್ತಾರೆ. ಅವರೆಲ್ಲಾ ಎಷ್ಟೋ ವರ್ಷಗಳಿಂದ ಪರಿಚಿತರೇನೋ ಎಂಬಂತೆ ಮಾತಿಗೆ ಕೂರುತ್ತಾರೆ. ಆಡುತ್ತಾರೆ-ಹಾಡುತ್ತಾರೆ. ಅಪ್ಪು ತಮ್ಮ ಈ ಪಯಣದಲ್ಲಿ ಹೋದಲ್ಲೆಲ್ಲ ಅಲ್ಲಿನ ಸ್ಥಳೀಯರೊಡನೆ ಸ್ಥಳೀಯರಾಗಿ ಬೆರೆತಿದ್ದಾರೆ. ಅವರ ಜೀವನ, ಸಂಪ್ರದಾಯ, ಆಚರಣೆ, ಕಷ್ಟ-ಸುಖಗಳನ್ನು ಕೇಳಿ ತಿಳಿದಿದ್ದಾರೆ. ಹೀಗೆ ಪಯಣದ ನಡುವೆ ಅಪ್ಪು-ಅಮೋಘ ವರ್ಷ ಕುರುಬರ ಹಟ್ಟಿಗೆ ಹೋದಾಗ ಕುರುಬರ ಮಹಿಳೆ ಹೇಳುವ ತೋಳದ ಕತೆ ಅತ್ಯದ್ಭುತವಾಗಿದೆ.

    ಪ್ರಕೃತಿ ಉಳಿಸುವ ಬಗ್ಗೆ ಅಪ್ಪು ಮಾತು

    ಪ್ರಕೃತಿ ಉಳಿಸುವ ಬಗ್ಗೆ ಅಪ್ಪು ಮಾತು

    ಪ್ರಕೃತಿಯ ಸೊಬಗನ್ನು ಮಗುವಿನ ಕುತೂಹಲದಿಂದ ಅನುಭವಿಸುವ, ಖುಷಿ ಪಡುವ ಅಪ್ಪು, ಕೆಲವು ಉಪಯುಕ್ತ ಸಂದೇಶಗಳನ್ನೂ ನೀಡಿದ್ದಾರೆ. ನೀರಿನಾಳಕ್ಕೆ ಧುಮುಕಿ, ಅಲ್ಲಿಂದ ಪ್ಲಾಸ್ಟಿಕ್ ಹೆಕ್ಕಿ ತರುವ ಅಪ್ಪು, ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವ ಬಗ್ಗೆ ಮಾತನಾಡುತ್ತಾರೆ. ಪ್ರಕೃತಿಯನ್ನು ಉಳಿಸುವ ಬಗ್ಗೆ, ಆನೆ-ಮಾನವ ಸಂಘರ್ಷದ ಬಗ್ಗೆ, ಆನೆಗಳನ್ನು ಪಳಗಿಸುವ ಕ್ರೂರ ವಿಧಾನಕ್ಕೆ ಬದಲಿ ವ್ಯವಸ್ಥೆಯ ಬಗ್ಗೆ, ಒಟ್ಟಾರೆ ಪ್ರಕೃತಿ ಉಳಿಸುವ ಬಗ್ಗೆ ಮಾತನಾಡುತ್ತಾರೆ. ಆದರೆ ಒಮ್ಮೆಯೂ ಇವು ಉಪದೇಶ ಎನಿಸುವುದಿಲ್ಲ, ತಮಗೆ ಅನಿಸಿದ್ದನ್ನು ಮನವಿ ರೂಪದಲ್ಲಿ ತಮ್ಮ ಪಕ್ಕದವರಿಗೆ ಅಪ್ಪು ಹೇಳುತ್ತಿದ್ದಾರೆ ಎನಿಸುತ್ತದೆಯಷ್ಟೆ. ಅಧಿಕಾರಯುತ ಆಗ್ರಹ ಅಪ್ಪು ಮಾಡುವುದಿಲ್ಲ.

    ಪ್ರತಿ ಪ್ರೇಮ್‌ಗಳು ಸುಂದರವಾಗಿವೆ

    ಪ್ರತಿ ಪ್ರೇಮ್‌ಗಳು ಸುಂದರವಾಗಿವೆ

    ಡಾಕ್ಯು-ಸಿನಿಮಾದ ಪ್ರತಿ ಪ್ರೇಮ್‌ಗಳು ಸುಂದರವಾಗಿವೆ. ಕೆಲವು ದೃಶ್ಯಗಳಂತೂ ಕಾವ್ಯದಂತೆ ಭಾಸವಾಗುತ್ತವೆ. ಅಪ್ಪು-ಅಮೋಘ ವರ್ಷರ ನಡುವಿನ ಸಂಭಾಷಣೆ ಬೋರ್ ಅಥವಾ ಸ್ಕ್ರಿಪ್ಟೆಡ್ ಎನಿಸುವುದಿಲ್ಲ. ಕೊನೆಯಲ್ಲಿ ತೋರಿಸುವ ಹಳ್ಳಿ, ಶಾಲೆ, ಶಾಲೆಯ ಮಕ್ಕಳಿಗೆ ತಾವ್ಯಾರು ಎಂದು ಗೊತ್ತಿರದ್ದನ್ನು ಖುಷಿಯಿಂದ ಹೇಳುವ ಅಪ್ಪು, ಆ ಹಳ್ಳಿಯ ದೃಶ್ಯಗಳು, ಹಳ್ಳಿಗರೊಡನೆ ಗುಡ್ಡ ಹತ್ತಿ, ತೊರೆಗಳನ್ನು ದಾಟಿ ದೇವರನ್ನು ಕಾಣಲು ಹೋಗುವ ಅಪ್ಪುವಿನ ಆ ಸಹಜ ಕುತೂಹಲ, ಹೊಸದು ತಿಳಿಯಬೇಕೆಂಬ ಬಯಕೆ ಎಲ್ಲವೂ ಆಪ್ತ ಎನಿಸುತ್ತದೆ. ಸಿನಿಮಾಕ್ಕೆ ನೀಡಿರುವ ಅಂತ್ಯವೂ ಚೆನ್ನಾಗಿದೆ. ಆದರೆ ಸಿನಿಮಾ ಮುಗಿದಾಗ ಈ ಸುಂದರ ಪಯಣ ಇಷ್ಟು ಬೇಗ ಮುಗಿಯಿತೇಕೆ ಎನಿಸುತ್ತದೆ. ಅಪ್ಪು ವಿಷಯದಲ್ಲಿಯೂ ಅದೇ ಭಾವ ಮೂಡಿ ಎದೆ ಭಾರವಾಗಿ ಬಿಡುತ್ತದೆ. ನಾಟಕೀಯತೆ ಇಲ್ಲದ 'ನಟ', 'ಹೀರೋಯಿಸಂ' ಇರದಿದ್ದ ಹೀರೋ, ಅಗಾಧ ಮನುಷ್ಯ ಪ್ರೀತಿಯುಳ್ಳ ಮನುಷ್ಯ ನಮ್ಮನ್ನಗಲಿ ಹೋದರಲ್ಲ ಎಂದು ಮನಸ್ಸು ಹಿಂಡಿದಂತಾಗುತ್ತದೆ.

    'ಗಂಧದ ಗುಡಿ' ನೋಡಬೇಕಾದ ಕೃತಿ

    'ಗಂಧದ ಗುಡಿ' ನೋಡಬೇಕಾದ ಕೃತಿ

    ಒಟ್ಟಾರೆ ''ಗಂಧದ ಗುಡಿ' ನೋಡಬೇಕಾದ ಕೃತಿ. ನಾಡಿನ ಸೌಂದರ್ಯವನ್ನು ಅನುಭವಿಸಲು, ಕನ್ನಡ ನಾಡಿನ ಪ್ರಕೃತಿ ಸಂಪತ್ತಿನ ಬಗ್ಗೆ ಹೆಮ್ಮೆ ಪಡಲು, ಅಪ್ಪುವನ್ನು ಯಾವುದೋ ಪಾತ್ರವಾಗಿ ಅಲ್ಲದೆ, ಅವರನ್ನಾಗಿಯೇ ನೋಡಲು, ಅವರಿಂದ ನಾವೂ ಸ್ಪೂರ್ತಿ ಪಡೆಯಲು, ಪ್ರಕೃತಿಯ ಮಹತ್ವ ಅರಿಯಲು ಇನ್ನೂ ಹತ್ತು ಹಲವು ಕಾರಣಗಳಿಗಾಗಿ ಇದನ್ನು ನೋಡ ಬೇಕು. 'ಗಂಧದ ಗುಡಿ' ಯನ್ನು ಸಾಧ್ಯವಾಗಿಸಿದ ಅಶ್ವಿನಿ, ಅಪ್ಪು, ಅಮೋಘ ವರ್ಷಗೆ ಅಭಿನಂದನೆ ಹೇಳಲೇಬೇಕು.

    English summary
    Puneeth Rajkumar-Amogha Varsha's docu movie Gandhada Gudi review. This is a must watch docu-movie for many reasons.
    Thursday, October 27, 2022, 23:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X