»   » ವಿಮರ್ಶೆ: 'ದೊಡ್ಮನೆ' ಬಿರಿಯಾನಿ ರುಚಿ ಓಕೆ, 'ಪೀಸ್'ಗಳು ಕಮ್ಮಿ

ವಿಮರ್ಶೆ: 'ದೊಡ್ಮನೆ' ಬಿರಿಯಾನಿ ರುಚಿ ಓಕೆ, 'ಪೀಸ್'ಗಳು ಕಮ್ಮಿ

Posted By:
Subscribe to Filmibeat Kannada

''ನಾವು ದೊಡ್ಮನೆಯವರು. ನಮಗೆ ಕೊಡೋದಷ್ಟೇ ಗೊತ್ತು ಹೊರತು ಬೇರೆಯವರಿಂದ ಏನನ್ನೂ ಅಪೇಕ್ಷೆ ಪಡಲ್ಲ'' - ಇದು 'ದೊಡ್ಮನೆ' ರಾಜೀವ (ಅಂಬರೀಶ್) ಬಾಯಿಂದ ಬರುವ ಡೈಲಾಗ್ ಹೌದು, ಹಾಗೇ 'ದೊಡ್ಮನೆ ಹುಡ್ಗ' ಚಿತ್ರದ ಸಾರಾಂಶ ಕೂಡ ಹೌದು.


ಹೇಳಿ ಕೇಳಿ 'ದೊಡ್ಮನೆ ಹುಡ್ಗ' ಪುನೀತ್ ರಾಜ್ ಕುಮಾರ್ ನಾಯಕನಾಗಿ ಅಭಿನಯಿಸಿರುವ 25 ನೇ ಸಿನಿಮಾ. ಹೀಗಾಗಿ ನಿರೀಕ್ಷೆ ಬೆಟ್ಟದಷ್ಟು ಇದ್ದರೂ ಅದನ್ನ ತಲುಪುವಲ್ಲಿ 'ದುನಿಯಾ' ಸೂರಿ ಅಲ್ಲಲ್ಲಿ ಎಡವಿದರೂ, ಒಂದೇ ಉಸಿರಿನಲ್ಲಿ ಓಡುವುದನ್ನು ಮಾತ್ರ ನಿಲ್ಲಿಸಿಲ್ಲ.!

Rating:
4.0/5

ಚಿತ್ರ: 'ದೊಡ್ಮನೆ ಹುಡ್ಗ'
ನಿರ್ಮಾಣ: ಎಂ.ಗೋವಿಂದು
ನಿರ್ದೇಶನ: ದುನಿಯಾ ಸೂರಿ
ಸಂಗೀತ: ವಿ.ಹರಿಕೃಷ್ಣ
ಛಾಯಾಗ್ರಹಣ: ಸತ್ಯ ಹೆಗಡೆ
ತಾರಾಗಣ: ಪುನೀತ್ ರಾಜ್ ಕುಮಾರ್, ರಾಧಿಕಾ ಪಂಡಿತ್, ಅಂಬರೀಶ್, ಸುಮಲತಾ ಅಂಬರೀಶ್, ಭಾರತಿ ವಿಷ್ಣುವರ್ಧನ್, ಶ್ರೀನಿವಾಸ್ ಮೂರ್ತಿ, ಚಿಕ್ಕಣ್ಣ, ರವಿಶಂಕರ್, ರಂಗಾಯಣ ರಘು ಮತ್ತು ಇತರರು
ಬಿಡುಗಡೆ ದಿನಾಂಕ: ಸೆಪ್ಟೆಂಬರ್ 30, 2016


ಬಿರಿಯಾನಿ ಮಾರುವ 'ದೊಡ್ಮನೆ ಹುಡ್ಗ'

ಹುಬ್ಬಳ್ಳಿಯಲ್ಲಿ ರಸ್ತೆ ಬದಿ ಪ್ಲೇಟ್ ಲೆಕ್ಕದಲ್ಲಿ ಬಿರಿಯಾನಿ ಮಾರುವ ಸೂರ್ಯ (ಪುನೀತ್ ರಾಜ್ ಕುಮಾರ್), ಅಪ್ಪನ (ಶ್ರೀನಿವಾಸ್ ಮೂರ್ತಿ) ಮುಖಕ್ಕೆ ಮೊಟ್ಟೆ ಹೊಡೆದು ಅವಮಾನ ಮಾಡಿದವರ ಮೈ ಮೂಳೆ ಮುರಿಯುತ್ತಾನೆ. ಜೊತೆಗೆ ಉಷಾ (ರಾಧಿಕಾ ಪಂಡಿತ್) ರನ್ನ ಅಟ್ಟಾಡಿಸಿಕೊಂಡು ಬರುವ ಕುಡುಕರನ್ನ ಮಣ್ಣು ಮುಕ್ಕಿಸುತ್ತಾನೆ. ದುಷ್ಟ ಸಂಹಾರಕ್ಕೆ ಸದಾ ಸಿದ್ಧನಾಗಿರುವ ಸೂರ್ಯ, ಹಸಿದವರ ಪಾಲಿಗೆ ಆಪತ್ಭಾಂಧವ.!


ಕಲಿಯುಗದ ಕರ್ಣ 'ದೊಡ್ಮನೆ' ರಾಜೀವ

ಕಲಿಯುಗದ ಕರ್ಣ, ಸಮಾಜ ಸೇವಕ, ಊರಿನ ಜನರ ಉನ್ನತಿ ಬಯಸುವ 'ದೊಡ್ಮನೆ' ರಾಜೀವ (ಅಂಬರೀಶ್) ವಿರುದ್ಧ ಕೇಬಲ್ ಬಾಬು (ರವಿಶಂಕರ್) ಷಡ್ಯಂತ್ರ ರೂಪಿಸುತ್ತಾನೆ. ಇಬ್ಬರ ತಿಕ್ಕಾಟಕ್ಕೆ ಕಾರಣವೇನು? 'ದೊಡ್ಮನೆ' ರಾಜೀವ ಪಾರಾಗುವುದು ಹೇಗೆ? ಎಂಬುದು ಬಾಕಿ ಸ್ಟೋರಿ. ಅದನ್ನ ನೀವು ಚಿತ್ರಮಂದಿರದಲ್ಲೇ ನೋಡಿರಿ....


ಸೂರ್ಯನಿಗೂ ರಾಜೀವನಿಗೂ ಎಲ್ಲಿಗೆಲ್ಲಿಯ ಸಂಬಂಧ?

ಬಿರಿಯಾನಿ ಮಾರುವ ಸೂರ್ಯ (ಪುನೀತ್ ರಾಜ್ ಕುಮಾರ್)ನಿಗೂ, 'ದೊಡ್ಮನೆ' ರಾಜೀವನಿಗೂ ಎಲ್ಲಿಗೆಲ್ಲಿಯ ಸಂಬಂಧ ಅಂದ್ರೆ, ಅದಕ್ಕೊಂದು ಇತಿಹಾಸ ಇದೆ. ನೀವು ಸಿನಿಮಾ ನೋಡುವವರೆಗೂ ಆ ಫ್ಲ್ಯಾಶ್ ಬ್ಯಾಕ್ ಸಸ್ಪೆನ್ಸ್ ಹಾಗೇ ಇರಲಿ.


ಅಪ್ಪು ಅಭಿನಯಕ್ಕೆ ಫುಲ್ ಮಾರ್ಕ್ಸ್

'ದೊಡ್ಮನೆ ಹುಡ್ಗ'ನಾಗಿ ಪುನೀತ್ ರಾಜ್ ಕುಮಾರ್ ಅಭಿನಯ ಸೂಪರ್. ಡ್ಯಾನ್ಸ್ ಮತ್ತು ಫೈಟ್ಸ್ ನಲ್ಲಿ ಅಪ್ಪು ಎಂದಿನಂತೆ ಲೀಲಾಜಾಲ. ನಿಜ ಹೇಳ್ಬೇಕಂದ್ರೆ, ಪುನೀತ್ ರಾಜ್ ಕುಮಾರ್ ಇರುವುದೇ 'ದೊಡ್ಮನೆ ಹುಡ್ಗ' ಚಿತ್ರಕ್ಕೆ ಕಳೆ.


'ರೆಬೆಲ್' ಅಂಬರೀಶ್

ನಿಜ ಜೀವನದ 'ಮಂಡ್ಯದ ಗಂಡು' ಅಂಬರೀಶ್ ಗೂ, 'ದೊಡ್ಮನೆ' ರಾಜೀವನ ಪಾತ್ರಕ್ಕೂ ಅಷ್ಟು ವ್ಯತ್ಯಾಸ ಇಲ್ಲವೇ ಇಲ್ಲ. ಹೀಗಾಗಿ, ಅಂಬರೀಶ್ ಅಭಿನಯ ತುಂಬಾ 'ನೈಜ'ವಾಗಿದೆ. ಅಂಬಿ ಡೈಲಾಗ್ ಡೆಲಿವರಿ ಖಡಕ್ ಅಗಿದೆ.


ರವಿಶಂಕರ್ ಆರ್ಭಟ

ಕೇಬಲ್ ಬಾಬು ಆಗಿ ರವಿಶಂಕರ್ ರವರದ್ದು ಅಬ್ಬರದ ಅಭಿನಯ. ಸೀರಿಯಸ್ ಪಾತ್ರದಲ್ಲೂ ರವಿಶಂಕರ್ ಕೆಲವೊಮ್ಮೆ ನಗಿಸುತ್ತಾರೆ. ಕೇಬಲ್ ಬಾಬು ಸಹೋದರ ಕರಾಟೆ ಮಂಜನಾಗಿ ರಾಘವ ಉದಯ್ ನಟನೆ ಚೆನ್ನಾಗಿದೆ. 'ದೊಡ್ಮನೆ ಹುಡ್ಗ'ನಾಗಿ ನೆಗೆಟಿವ್ ಶೇಡ್ ನಲ್ಲೂ ಮಿಂಚಿರುವ ಕೃಷ್ಣ ನಟನೆ ಇಷ್ಟವಾಗುತ್ತೆ. ಇನ್ನೂ ಅವಿನಾಶ್ ಮತ್ತು ಶ್ರೀನಿವಾಸ್ ಮೂರ್ತಿ ರವರದ್ದು ಅಚ್ಚುಕಟ್ಟಾದ ಅಭಿನಯ.


ರಾಧಿಕಾ ಪಂಡಿತ್ ಗ್ಲಾಮರ್

ಹಳ್ಳಿ ಹುಡುಗಿ ವೇಷದಲ್ಲಿ ನಟಿ ರಾಧಿಕಾ ಪಂಡಿತ್ ಅಭಿನಯ ಸೊಗಸಾಗಿದೆ. ''ಡ್ಯಾನ್ಸ್ ನಲ್ಲೂ ನಾನು ಕಮ್ಮಿ ಇಲ್ಲ'' ಎನ್ನುವುದನ್ನ 'ದೊಡ್ಮನೆ ಹುಡ್ಗ' ಚಿತ್ರದ ಮೂಲಕ ರಾಧಿಕಾ ಪಂಡಿತ್ ಸಾಬೀತು ಮಾಡಿದ್ದಾರೆ.


ಸುಮಲತಾ ಅಂಬರೀಶ್, ಭಾರತಿ ವಿಷ್ಣುವರ್ಧನ್ ಆಟಕ್ಕುಂಟು ಲೆಕ್ಕಕ್ಕಿಲ್ಲ.!

ಸುಮಲತಾ ಅಂಬರೀಶ್ ಹಾಗೂ ಭಾರತಿ ವಿಷ್ಣುವರ್ಧನ್ ರವರ ಇರುವಿಕೆ 'ದೊಡ್ಮನೆ ಹುಡ್ಗ' ಚಿತ್ರದ ಘನತೆ ಹೆಚ್ಚಿಸಿದೆ. ಆದರೆ ಅಭಿನಯದಲ್ಲಿ ಅವರಿಗೆ ಅವಕಾಶ ಸಿಕ್ಕಿಲ್ಲ. ಇಡೀ ಸಿನಿಮಾದಲ್ಲಿ ಸುಮಲತಾ ಹಾಗೂ ಭಾರತಿ ರವರಿಗೆ ಮೂರ್ನಾಲ್ಕು ಡೈಲಾಗ್ ಇದ್ದರೆ ಹೆಚ್ಚು.


ಚಿಕ್ಕಣ್ಣ ಇದ್ದರೂ ಇಲ್ಲದಂತೆ.!

ಇದ್ದಕ್ಕಿದ್ದಂತೆ ಎಂಟ್ರಿಕೊಡುವ ಚಿಕ್ಕಣ್ಣ ಇದ್ದಕ್ಕಿದ್ದಂತೆ ಮಾಯವಾಗುತ್ತಾರೆ. ತೆರೆಮೇಲೆ ಇದ್ದಷ್ಟು ಕಾಲ ಚಿಕ್ಕಣ್ಣ ಕಾಮಿಡಿ ಪ್ರೇಕ್ಷಕರಿಗೆ ಹೆಚ್ಚು ನಗು ತರಿಸುವುದಿಲ್ಲ.


ಅಪ್ಪು ಎಂಟ್ರಿಗೆ ಉಘೇ ಎನ್ನಬೇಕು

ಪವರ್ ಸ್ಟಾರ್ ಗೆ ಬೇಕಾಗಿರುವ ಹೈ ವೋಲ್ಟೇಜ್ ಎಂಟ್ರಿ 'ದೊಡ್ಮನೆ ಹುಡ್ಗ' ಚಿತ್ರದಲ್ಲಿದೆ. ತಮಟೆ ಸೌಂಡ್ ಗೆ ಸ್ಟೆಪ್ ಹಾಕಿ, ವಿಲನ್ ಗಳಿಗೆ ತದಕುವ ಅಪ್ಪು ಎಂಟ್ರಿ 'ಚಿಂದಿ'.


ಮಾತ್ತೆತ್ತಿದ್ರೆ ಫೈಟ್

'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಡೈಲಾಗ್ ಗಳ ಜೊತೆ ಅಭಿಮಾನಿಗಳಿಗಾಗಿ ಫೈಟ್ ಗಳ ಅಬ್ಬರವೂ ಇದೆ. ರವಿವರ್ಮಾ ಸಂಯೋಜಿಸಿರುವ ಹೊಡಿಬಡಿ ದೃಶ್ಯಗಳಲ್ಲಿ ಅಪ್ಪು-ಅಂಬಿ ಕೇಡಿಗಳನ್ನ ಚಚ್ಚಿ ಬಿಸಾಕಿದ್ದಾರೆ.


ಕಥೆ ತುಂಬಾ ಸಿಂಪಲ್

'ದೊಡ್ಮನೆ ಹುಡ್ಗ' ಚಿತ್ರದ ಕಥಾಹಂದರ ತುಂಬಾ ಸಿಂಪಲ್. ಎಷ್ಟು ಸಿಂಪಲ್ ಅಂದ್ರೆ ಕಥೆಯಲ್ಲಿ ಹೇಳಿಕೊಳ್ಳುವಂತಹ ತಿರುವುಗಳಿಲ್ಲ. ಅಪ್ಪಿ-ತಪ್ಪಿ ತಿರುವು ಸಿಕ್ಕರೂ, ಅವು ತೀರಾ ಪೇಲವ.!


ಸಂಗೀತ ಅಷ್ಟಕಷ್ಟೆ

ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ಹಾಡುಗಳಲ್ಲಿ ಅಂತಹ 'ಖಾಸ್' ಇಲ್ಲ. 'ಅಭಿಮಾನಿಗಳೇ...ನಮ್ಮನೆ ದೇವ್ರು' ಹಾಡನ್ನ ಪ್ರೇಕ್ಷಕರು ಎಂಜಾಯ್ ಮಾಡುತ್ತಾರೆ. ಬಹುಶಃ ಇದನ್ನ ಊಹಿಸಿಯೇ, ಬೇಕು ಅಂತ ಫಸ್ಟ್ ಹಾಫ್ ನಲ್ಲಿ 'ಅಭಿಮಾನಿಗಳೇ...ನಮ್ಮನೆ ದೇವ್ರು' ಹಾಡನ್ನ ತುರುಕಿದ್ದಾರೆ ನಿರ್ದೇಶಕರು.


ಟೆಕ್ನಿಕಲಿ ಸಿನಿಮಾ ಹೇಗಿದೆ?

ರಾಧಿಕಾ ಪಂಡಿತ್ ರನ್ನ ಬುಲೆಟ್ ಓಡಿಸುವಂತೆ ಮಾಡಿರುವ ದುನಿಯಾ ಸೂರಿ ರವರ ಮೇಕಿಂಗ್ ನಲ್ಲಿ 'ಜಾಣ್ಮೆ' ಇದೆ. ಸತ್ಯ ಹೆಗಡೆ ಸೆರೆ ಹಿಡಿದಿರುವ ದೃಶ್ಯ ವೈಭವ ನೋಡಲು ಸೊಗಸು. ದೀಪು ಸಂಕಲನ ಚುರುಕು.


ಮಸಾಲೆಗೆ ಹೆಚ್ಚು ಒತ್ತು ನೀಡಿರುವ ಸೂರಿ

ಕಮರ್ಶಿಯಲ್ ಅಂಶಗಳಿಗೆ ಹೆಚ್ಚು ಒತ್ತು ನೀಡಲು ಹೋಗಿ 'ಲಾಜಿಕ್' ಮರೆತಿದ್ದಾರೆ ಸೂರಿ. ಅದಕ್ಕೆ 'ಕಾರಾಗೃಹ' ಸನ್ನಿವೇಶ ಸಾಕ್ಷಿ.


ಅಭಿಮಾನಿಗಳಿಗೆ 'ಬಿರಿಯಾನಿ' ಊಟ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳಿಗಂತೂ 'ದೊಡ್ಮನೆ ಹುಡ್ಗ' ಬೊಂಬಾಟ್ ಬಿರಿಯಾನಿ ಸವಿದಂತೆ. ಆದ್ರೆ, ಸಾಮಾನ್ಯ ಪ್ರೇಕ್ಷಕರಿಗೆ ಬಿರಿಯಾನಿಯಲ್ಲಿ 'ಪೀಸ್'ಗಳ ಕೊರತೆ ಕಾಡಿದ ಅನುಭವ ಆಗ್ಬಹುದು.


ಮನಮುಟ್ಟುವ ಸೆಂಟಿಮೆಂಟ್

'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಅಪ್ಪ-ಮಗನ ಸೆಂಟಿಮೆಂಟ್ ಕೂಡ ಹೈಲೈಟ್. ಹೆಂಗಳೆಯರಿಗೆ ಇದು ಮನಮುಟ್ಟಬಹುದು.


ಫೈನಲ್ ಸ್ಟೇಟ್ ಮೆಂಟ್

ಅಲ್ಲಲ್ಲಿ ತೆಲುಗು ಚಿತ್ರಗಳ ಛಾಯೆ ಇರುವ 'ದೊಡ್ಮನೆ ಹುಡ್ಗ' ಇಡೀ ಫ್ಯಾಮಿಲಿ ಕೂತು ನೋಡಬಹುದಾದ ಸಿನಿಮಾ. ಲಾಜಿಕ್ ಬಿಟ್ಟು, ಅಪ್ಪು ಹಾಗೂ ಅಂಬರೀಶ್ ಅಭಿಮಾನಿ ಆಗಿ ಸಿನಿಮಾ ನೋಡಿದರೆ ಇಷ್ಟವಾಗಬಹುದು.


English summary
Kannada Actor Puneeth Rajkumar starrer Kannada Movie 'Dodmane Hudga' has hit the screens today (September 30th). 'Dodmane Hudga' is a complete treat for Puneeth Rajkumar and Ambareesh fans. Here is the complete review.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada