»   » ವಿಮರ್ಶೆ: 'ಅಪ್ಪು' ನಂತರ ಅಪ್ಪಿಕೊಳ್ಳಬಹುದಾದ ಪುರಿ'ಯ ಖಡಕ್ 'ರೋಗ್'

ವಿಮರ್ಶೆ: 'ಅಪ್ಪು' ನಂತರ ಅಪ್ಪಿಕೊಳ್ಳಬಹುದಾದ ಪುರಿ'ಯ ಖಡಕ್ 'ರೋಗ್'

Posted By:
Subscribe to Filmibeat Kannada

ಹುಡುಗ-ಹುಡುಗಿ ಇಬ್ಬರ ಪ್ರೇಮ ಎಷ್ಟೇ ಸತ್ಯವಾಗಿದ್ರು, ಪ್ರೀತಿಸಿದ ಹುಡುಗನನ್ನು ಬಿಟ್ಟು ಬೇರೊಬ್ಬ ಹುಡುಗನನ್ನು ಮದುವೆ ಆದ ಹುಡುಗಿ ತನ್ನ ಪ್ರಿಯಕರನ ಮುಂದೆ ಬಂದು ನಾನೇ ಒಪ್ಪಿಕೊಂಡು ಅವನನ್ನು ಮದುವೆ ಆಗಿದ್ದು ಎಂದು ಹೇಳಿದ್ರೆ ಈ ಟ್ರೂ ಲವರ್ ಗೆ ಎಷ್ಟು ಕೋಪ ಬರಬಾರದು. ಇದೇ ಕೋಪದಲ್ಲಿ ನಿಜವಾದ ಪ್ರೀತಿಗೆ ಬೆಲೆಯಿಲ್ಲ. ಈ ಹುಡುಗಿಯರೇ ಹೀಗೆ ಎಂದು ಅವರನ್ನು ಕಂಡರೆ ಕೆಂಡ ಕಾಡುವ ಹುಡುಗನಲ್ಲೂ ಮತ್ತೊಮ್ಮೆ ಪ್ರೀತಿಯ ಮೊಳಕೆ ಹೊಡೆಯುತ್ತದೆ ಎಂಬ ಕಥೆಯ ಎಳೆಯನ್ನು ಹೊಂದಿರುವ ಚಿತ್ರ 'ರೋಗ್'.

ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್, ಒಂದು ಪ್ರೇಮಕಥೆ ಮೂಲಕ ಹೊಸ ಪ್ರತಿಭೆಯನ್ನು ಸಿನಿಮಾ ಕ್ಷೇತ್ರಕ್ಕೆ ಪರಿಚಯಿಸಲು ಬೇಕಾದ ಎಲ್ಲಾ ಎಲಿಮೆಂಟ್ಸ್ ಗಳನ್ನು ತುಂಬಿ ಪ್ರೇಕ್ಷಕರನ್ನು ರಂಜಿಸುವಲ್ಲಿಯೂ ಯಶಸ್ವಿ ಆಗಿದ್ದಾರೆ.

Rating:
3.5/5

ಚಿತ್ರ : ರೋಗ್
ಕಥೆ-ಚಿತ್ರಕಥೆ-ನಿರ್ದೇಶನ: ಪುರಿ ಜಗನ್ನಾಥ್
ಸಂಭಾಷಣೆ: ವಿ.ನಾಗೇಂದ್ರ ಪ್ರಸಾದ್
ನಿರ್ಮಾಣ: ಸಿ.ಆರ್ ಮನೋಹರ್ ಮತ್ತು ಸಿ.ಆರ್ ಗೋಪಿ
ಛಾಯಾಗ್ರಹಣ: ಮುಖೇಶ್ ಜಿ
ಸಂಗೀತ : ಸುನಿಲ್ ಕಶ್ಯಪ್
ತಾರಾಗಣ : ಇಶಾನ್, ಮನ್ನಾರ ಛೋಪ್ರಾ, ಏಂಜೆಲಾ, ಸಾಧು ಕೋಕಿಲ, ಅವಿನಾಶ್,
ಬಿಡುಗಡೆ : ಮಾರ್ಚ್ 31, 2017

ಟೈಟಲ್ 'ರೋಗ್' ಏಕೆ?

ಎಂಬಿಎ ಪದವಿ ಹುಡುಗ ಜೈಯ್(ಇಶಾನ್) ಪೊಲೀಸ್ ಕಮಿಷನರ್ ತಂಗಿ ಅಂಜಲಿ(ಏಂಜೆಲಾ) ಪ್ರಿಯತಮ. ಆಕೆಯ ನಿಶ್ಚಿತಾರ್ಥದಂದು ಗಲಾಟೆ ಮಾಡಿ ಜೈಲಿಗೆ ಸೇರುತ್ತಾನೆ. ಜೈಲಿಗೆ ಬಂದು ಅಂಜಲಿ ತಾನೆ ಮದುವೆಗೆ ಒಪ್ಪಿಕೊಂಡಿದ್ದು ಎಂದು ಹೇಳಿದಾಗಿನಿಂದ ಹುಡುಗಿಯರು ಎಂದರೆ ಬೆಂಕಿ ಕಾರುವ ಜೈಯ್ ವರ್ತನೆಗೆ 'ರೋಗ್' ಎಂಬ ಬಿರುದು ಬರುತ್ತದೆ.

'ರೋಗ್'ಗೆ ಎದುರಾಗುವ 'ಸೈಕೋ'

ಎರಡು ವರ್ಷಗಳ ನಂತರ ಜೈಲಿನಿಂದ ಹೊರಬಂದ ಜೈಯ್(ಇಶಾನ್) ಗಲಾಟೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬನ ಕಾಲು ಮುರಿದಿದ್ದ ತಪ್ಪಿಗೆ ಆತನ ಸಂಸಾರದ ಹೊಣೆ ಹೊರುತ್ತಾನೆ. ಕಾಲು ಮುರಿದುಕೊಂಡಿದ್ದ ಪೊಲೀಸ್ ಅಧಿಕಾರಿಯ ಸಂಪೂರ್ಣ ಸಾಲ ತೀರಿಸಿ, ಇನ್ನೇನು ತನ್ನ ಜವಾಬ್ದಾರಿ ಮುಗಿಯುತ್ತೆ, ನಂತರ ಬ್ಯಾಂಕಾಕ್ ಗೆ ಹೋಗಿ ಬಿಡೋಣ ಎನ್ನುವ ಪ್ಲಾನ್ ಮಾಡಿಕೊಂಡಿದ್ದ ಜೈಯ್(ರೋಗ್)ಗೆ, ಪೊಲೀಸ್ ಅಧಿಕಾರಿಯ ತಂಗಿ ಅಂಜಲಿ(ಮನ್ನಾರ ಛೋಪ್ರಾ) ಕಡೆಯಿಂದ ಸಮಸ್ಯೆಯೊಂದು ಎದುರಾಗುತ್ತದೆ. ಅದೇನು ಎಂಬುದನ್ನಾ ಚಿತ್ರಮಂದಿರಕ್ಕೇ ಹೋಗಿ ನೋಡಿ.

ಎಲ್ಲರೂ ಫಿದಾ ಆಗುವ ಇಶಾನ್ ಲುಕ್

ಖಡಕ್ ಹುಡುಗನ ಖಾದಲ್ ಕಥೆಗೆ ತಕ್ಕಂತೆ 'ರೋಗ್' ಚಿತ್ರದಲ್ಲಿ ಇಶಾನ್ ಸ್ಟೈಲ್, ಸ್ಮೈಲ್ ಮತ್ತು ಸೈಲೆಂಟ್ ಕ್ಯಾರೆಕ್ಟರ್ ಗೆ ಎಲ್ಲರೂ ಫಿದಾ ಆಗಬಹುದು. ಅಷ್ಟೊಂದು ಚೆನ್ನಾಗಿ ಅವರ ಪಾತ್ರ ಮೂಡಿಬಂದಿದೆ. ಆದರೆ ಇಶಾನ್ ಡೈಲಾಗ್ ಡೆಲಿವರಿ ಮತ್ತು ಸಂಭಾಷಣೆಯಲ್ಲಿ ಇನ್ನೂ ಆಕರ್ಷಣೆ ಬೇಕಿತ್ತು. ಅಲ್ಲದೇ ಪಾತ್ರ ನಿರ್ವಹಣೆಗೆ ಹೆಚ್ಚಿನ ವರ್ಕೌಟ್ ಬೇಕಿತ್ತು.

ಫೈಟ್ ಮತ್ತು ರೊಮ್ಯಾಂಟಿಕ್ ದೃಶ್ಯಗಳಲ್ಲಿ ಇಶಾನ್ ಮಿಂಚು

ಇದೇ ಮೊಟ್ಟ ಮೊದಲ ಬಾರಿಗೆ ತೆಲುಗು ಮತ್ತು ಕನ್ನಡ ಚಿತ್ರರಂಗಕ್ಕೆ 'ರೋಗ್' ಚಿತ್ರದ ಮೂಲಕ ಎಂಟ್ರಿ ಕೊಟ್ಟಿರುವ ಇಶಾನ್, ಫೈಟ್ ಮತ್ತು ಆಕ್ಷನ್ ದೃಶ್ಯಗಳಲ್ಲಿ ಯಾವ ಅನುಭವಿಗಳಿಗೂ ಕಡಿಮೆ ಇಲ್ಲ ಎಂಬಂತೆ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಇಬ್ಬರು ನಟಿಯರೊಂದಿಗೆ ಡ್ಯುಯೆಟ್ ಸೀನ್ ಗಳಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸುವ ಹಾಗೆ ಮಿಂಚಿದ್ದಾರೆ.

ಏಂಜೆಲಾ ಮತ್ತು ಮನ್ನಾರ ಛೋಪ್ರಾ

ವಿಶೇಷ ಅಂದ್ರೆ ಚಿತ್ರದಲ್ಲಿ ಇಬ್ಬರು ನಾಯಕಿಯರ ಹೆಸರು ಅಂಜಲಿ. ಫಸ್ಟ್ ಆಫ್ ನಲ್ಲಿ ಏಂಜೆಲಾ ಪ್ರೀತಿಯ ಮೋಸದಿಂದ ಹುಡುಗಿಯರನ್ನು ದ್ವೇಷಿಸುವ ಇಶಾನ್, ಸೆಕೆಂಡ್ ಆಫ್ ನಲ್ಲಿ ಮನ್ನಾರ ಪ್ರೀತಿಯಲ್ಲಿ ಬೀಳುತ್ತಾರೆ. ಏಂಜೆಲಾ ಚಿತ್ರದ ನಾಯಕಿ ಆದರು ತೆರೆ ಮೇಲೆ ಕಾಣುವುದು ತೀರ ಕಡಿಮೆ. ಮನ್ನಾರ ತಮ್ಮ ಪಾತ್ರ ಮತ್ತು ಪಾತ್ರದ ನಿರ್ವಹಣೆಯಿಂದ ಇಷ್ಟವಾಗುತ್ತಾರೆ.

ಪಡ್ಡೆ ಹುಡುಗರಿಗೆ ನಿದ್ದೆಗೆಡಿಸುವ ಹಾಡುಗಳು

ಏಂಜೆಲಾ ಮತ್ತು ಮನ್ನಾರ ಛೋಪ್ರಾ ಜೊತೆಗಿನ ಇಶಾನ್ ಅವರ ಎರಡು ರೊಮ್ಯಾಂಟಿಕ್ ಸಾಂಗ್ ಗಳಲ್ಲಿನ ದೃಶ್ಯಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸುವಲ್ಲಿ ಸಂಶಯವಿಲ್ಲ. ಸಮುದ್ರ ತೀರ ಮತ್ತು ವಾಟರ್ ಫಾಲ್ಸ್ ಗಳಲ್ಲಿ ಸೆರೆಹಿಡಿದ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದ್ದು ಹಾಡುಗಳಲ್ಲಿನ ಮೇಕಿಂಗ್ ಸೀನ್ ಗಳು ಎಂತಹವವರಿಗೂ ಇಷ್ಟವಾಗುತ್ತವೆ.

'ರೋಗ್' ನಲ್ಲಿ ಉಳಿದವರು

ಚಿತ್ರದಲ್ಲಿ ನಾಯಕ ನಟನಿಗೆ ಖಡಕ್ ವಿಲನ್ ಆಗಿ ಟಾಕುರ್ ಅನೂಪ್ ಸಿಂಗ್ ಅಭಿನಯಕ್ಕೆ ಫುಲ್ ಮಾರ್ಕ್ ಕೊಡಬಹುದು. ಇನ್ನೂ ಅವಿನಾಶ್ ಮತ್ತು ಸಾಧು ಕೋಕಿಲ ಮತ್ತು ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಕನ್ನಡದ ನೇಟಿವಿಟಿ ಕಡಿಮೆ

ನಿರ್ದೇಶಕ ಪುರಿ ಜಗನ್ನಾಥ್, ಇಶಾನ್ ಅವರನ್ನು ತೆಲುಗು ಮತ್ತು ಕನ್ನಡದಲ್ಲಿ ಒಮ್ಮೆಲೇ ಪರಿಚಯಿಸಲು ಆಯ್ದುಕೊಂಡ ಚಿತ್ರಕಥೆ ಉತ್ತಮವಾಗೇ ಇದೆ. ಆದರೆ ಚಿತ್ರವನ್ನು ಪೂರ್ಣವಾಗಿ ಕಲ್ಕತ್ತ, ಮುಂಬೈ, ಹೈದರಾಬಾದ್ ಗಳಲ್ಲಿ ಚಿತ್ರೀಕರಿಸಿರುವುದು ಮತ್ತು ಸ್ಯಾಂಡಲ್ ವುಡ್ ನ ಇಬ್ಬರೇ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವುದು ಕನ್ನಡದ ನೇಟಿವಿಟಿ ತೀರ ಕಡಿಮೆ ಎಂಬಂತೆ ಫೀಲ್ ಆಗುತ್ತದೆ. ಆದರೂ ಪುರಿ ಜಗನ್ನಾಥ್ ಚಿತ್ರದಲ್ಲಿ ತುಂಬಿರುವ ಕಮರ್ಷಿಯಲ್ ಎಲಿಮೆಂಟ್ಸ್ ನಿಂದ ಕನ್ನಡ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿ ಆಗಿದ್ದಾರೆ.

ಸಂಗೀತ

ಚಿತ್ರದಲ್ಲಿ ಸುನಿಲ್ ಕಶ್ಯಪ್ ಸಂಗೀತ ಉತ್ತಮವಾಗಿ ವರ್ಕೌಟ್ ಆಗಿದೆ. ಒಂದು ಹಾಡು ಮಾತ್ರ ಕೇಳಲು ಇಂಪಾಗಿದ್ದು, ಕಿವಿಯಲ್ಲಿ ಗುನುಗುತ್ತದೆ.

ಮುಖೇಶ್ ಜಿ ಛಾಯಾಗ್ರಹಣ ಬ್ಯೂಟಿಫುಲ್

ಚಿತ್ರದ ಪ್ರತಿಯೊಂದು ಸೀನ್ ಗಳನ್ನು ಮುಖೇಶ್ ಜಿ ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಹಾಡುಗಳನ್ನು ಸಮುದ್ರ ತೀರ ಮತ್ತು ಕಾಡುಗಳ ಮಧ್ಯದಲ್ಲಿನ ವಾಟರ್ ಫಾಲ್ಸ್ ನಲ್ಲಿ ಚಿತ್ರೀಕರಿಸಿದ್ದು, ಈ ದೃಶ್ಯಗಳು ಕಣ್ಣಿಗೆ ಕಟ್ಟುವ ಹಾಗಿವೆ.

ಟೆಕ್ನಿಕಲಿ ಸಿನಿಮಾ

ತಾಂತ್ರಿಕವಾಗಿ ಬೆರಳೆಣಿಕೆ ದೃಶ್ಯಗಳ ಡೈಲಾಗ್ ಡೆಲಿವರಿ ಲಿಪ್ ಸಿಂಕಿಂಗ್ ಸಂಕಲನದಲ್ಲಿ ಎಡವಿರುವುದು ಕಂಡುಬಂದಿದ್ದು ಬಿಟ್ಟರೆ, ಜುನೈದ್ ಸಿದ್ದಿಕಿ ಸಂಕಲನ ಉತ್ತಮವಾಗಿದೆ.

ಯಾರೆಲ್ಲಾ ನೋಡಬಹುದು?

'ರೋಗ್' ಚಿತ್ರವನ್ನು ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರು ಎಂಬ ಭೇದಭಾವ ಇಲ್ಲದೇ ಕುಟುಂಬ ಸಮೇತರಾಗಿ ಒಟ್ಟಿಗೆ ಕುಳಿತು ನೋಡಬಹುದಾದ ಸಿನಿಮಾ. ತಿಳಿ ಪ್ರೇಮಕಾವ್ಯದ 'ರೋಗ್' ಚಿತ್ರವನ್ನು ಈ ವೀಕೆಂಡ್ ನಲ್ಲಿ ತಪ್ಪದೇ ನೋಡಿ, ಕನ್ನಡ ಚಿತ್ರಗಳನ್ನ ಪ್ರೋತ್ಸಾಹಿಸಿ.

English summary
Puri Jagannath Directorial 'Rogue' has hit the screens today (March 31st). Here is the review of 'Rogue' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada