For Quick Alerts
  ALLOW NOTIFICATIONS  
  For Daily Alerts

  777 Charlie Movie Review: ನಾಯಿ-ಮನುಷ್ಯ ಬಾಂಧವ್ಯದ ಭಾವುಕ ಕಥನ

  |

  ಧರ್ಮರಾಯ, ತನ್ನ ಪ್ರೀತಿಯ ನಾಯಿಗಾಗಿ ಸ್ವರ್ಗವನ್ನೇ ತಿರಸ್ಕರಿಸಿದ ಕತೆಯೊಂದು ಮಹಾಭಾರತದಲ್ಲಿದೆ. '777 ಚಾರ್ಲಿ' ಕನ್ನಡ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ 'ಕಲಿಯುಗದ ಧರ್ಮರಾಯ'. ಹೀಗಾಗಿಯೇ ಸಿನಿಮಾದಲ್ಲಿ ಅವರ ಪಾತ್ರದ ಹೆಸರು 'ಧರ್ಮ'.

  ನಾಯಿ ಹಾಗೂ ಮನುಷ್ಯನ ನಡುವೆ ಅನಾದಿ ಕಾಲದಿಂದಲೂ ಸಾಗಿ ಬಂದಿರುವ ಸ್ನೇಹ, ಪ್ರೀತಿ ಪದಗಳಿಗೆ ನಿಲುಕುವಂಥಹದ್ದಲ್ಲ. ಯುಗ-ಯುಗಗಳು ಕಳೆದರೂ ಪರಸ್ಪರರ ಮೇಲಿನ ಪ್ರೀತಿ, ಅವಲಂಬನೆ ಜಾರಿಯಲ್ಲಿದೆ. ಇಂಥಹಾ ಅನೂಹ್ಯ ಬಾಂಧವ್ಯವನ್ನು ಸಿನಿಮಾ ಚೌಕಟ್ಟಿನಲ್ಲಿ ಕಟ್ಟಿಕೊಡುವ ಪ್ರಯತ್ನ ಕನ್ನಡದ ಸಿನಿಮಾ '777 ಚಾರ್ಲಿ'. ತಮ್ಮ ಈ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ್ದಾರೆ ನಿರ್ದೇಶಕ ಕಿರಣ್ ರಾಜ್.

  777 Charlie 1st Half Review: ನಾಯಿಯ ತುಂಟಾಟ-ರಕ್ಷಿತ್ ಶೆಟ್ಟಿ ಪರದಾಟ! 777 Charlie 1st Half Review: ನಾಯಿಯ ತುಂಟಾಟ-ರಕ್ಷಿತ್ ಶೆಟ್ಟಿ ಪರದಾಟ!

  Rating:
  3.0/5

  ಧರ್ಮ (ರಕ್ಷಿತ್ ಶೆಟ್ಟಿ) ತನ್ನದೇ ಆದ ವೈಯಕ್ತಿಕ ಕಾರಣಗಳಿಂದಾಗಿ ಸಮಾಜಕ್ಕೆ ವಿಮುಖನಾಗಿ ಬದುಕುತ್ತಿರುವ ಏಕಾಂಗಿ. ಅವನ ಬಾಳಿನಲ್ಲಿ ಅಚಾನಕ್ಕಾಗಿ ಮುದ್ದಾದ ನಾಯಿಯೊಂದರ ಪ್ರವೇಶವಾಗುತ್ತದೆ. ಆರಂಭದಲ್ಲಿ ನಾಯಿಯ ಸಾಂಗತ್ಯ ಧರ್ಮನಿಗೆ ಕಿರಕಿರಿ ತಂದರೂ ಒಂದು ಸಂದರ್ಭದಲ್ಲಿ ನಾಯಿಯ ಮೇಲೆ ಧರ್ಮನಿಗೆ ಪ್ರೇಮ ಉಕ್ಕುತ್ತದೆ. ಇದಕ್ಕೆ ಮಹಾನ್ ಮಾನವತಾವಾದಿ, ನಟ ಚಾರ್ಲಿ ಚಾಪ್ಲಿನ್ ಸಹ ಕಾರಣನಾಗುತ್ತಾನೆ! ಧರ್ಮ-ಚಾರ್ಲಿಯ ಸ್ನೇಹ-ಬಾಂಧವ್ಯ ಚೆನ್ನಾಗಿಯೇ ಸಾಗುತ್ತಿದ್ದ ಸಂದರ್ಭದಲ್ಲಿ ಧುತ್ತನೆ ವಿಷಮ ಸಂಗತಿಯೊಂದು ಬೆಳಕಿಗೆ ಬರುತ್ತದೆ ಅಲ್ಲಿಂದ ಕತೆಯ ಹಾದಿ ಹೊರಳುತ್ತದೆ. ಆ ವರೆಗೆ ಮೈಸೂರಿನ ಕಾಲೊನಿಯೊಂದರಲ್ಲಿದ್ದ ಕತೆ, ಭಾರತದ ಉತ್ತರದತ್ತ ಹೊರಟು ನಿಲ್ಲುತ್ತದೆ.

  ಪಾತ್ರಗಳ ಪರಿಚಯ, ಧರ್ಮನ ವ್ಯಕ್ತಿತ್ವ ಅನಾವರಣಕ್ಕೆ ಸಿನಿಮಾದ ಮೊದಲಾರ್ಧ ತುಸು ಸಮಯ ಮೀಸಲಿಟ್ಟಿದ್ದಾರೆ ನಿರ್ದೇಶಕ. ಬಳಿಕ ನಾಯಿ ಚಾರ್ಲಿಯ ಮುದ್ದುತನ, ಪೆದ್ದುತನ, ಚಾರ್ಲಿಯ ತುಂಟಾಟ, ಧರ್ಮನ ಪರದಾಟಗಳೆಲ್ಲವು ನೋಡುಗರಿಗೆ ಕಚಗುಳಿ ಇಡುತ್ತವೆ. ನಾಯಿಯ ಪೋಷಣೆಯ ಬಗ್ಗೆಯೂ ಕೆಲವು ಮಾಹಿತಿಯನ್ನು ದೃಶ್ಯಗಳ ನಡುವೆ ಜಾಣ್ಮೆಯಿಂದ ಸೇರಿಸಿದ್ದಾರೆ ನಿರ್ದೇಶಕ. ಇನ್ನೇನು ಎಲ್ಲವೂ ಸರಿಹೋಯ್ತೆನ್ನುವ ವೇಳೆಗೆ ಇಂಟರ್ವೆಲ್‌ನಲ್ಲಿ ದೊಡ್ಡ ಟ್ವಿಸ್ಟ್‌ ಒಂದು ಎದುರಾಗುತ್ತದೆ. ಅಲ್ಲಿಂದ ಆರಂಭ ಧರ್ಮ-ಚಾರ್ಲಿಯ ಭಾವ ಪ್ರಯಾಣ.

  ದ್ವಿತೀಯಾರ್ಧದಲ್ಲಿ ಭಾವ ಪಯಣ

  ದ್ವಿತೀಯಾರ್ಧದಲ್ಲಿ ಭಾವ ಪಯಣ

  ಸಿನಿಮಾದ ದ್ವಿತೀಯಾರ್ಧ ಧರ್ಮ-ಚಾರ್ಲಿಯ ನಡುವಿನ ಪ್ರೇಮದ ಉತ್ಕಟತೆಯ ಅನಾವರಣವಾಗುತ್ತದೆ. ದ್ವೀತೀಯಾರ್ಧದಲ್ಲಿ ಸೆಂಟಿಮೆಂಟ್‌ನದ್ದೇ ಮೇಲುಗೈ ಆದರೂ ಅಲ್ಲಲ್ಲಿ ಹಾಸ್ಯದ ಪಂಚ್, ಧರ್ಮ ಹಾಗೂ ಚಾರ್ಲಿಯ ಕೆಲವು 'ಹೀರೋಯಿಕ್' ಸನ್ನಿವೇಶಗಳೊಂದಿಗೆ ಸಮತೋಲನ ಕಾಯ್ದುಕೊಂಡಿದ್ದಾರೆ ನಿರ್ದೇಶಕ. ಪ್ರೇಕ್ಷಕನನ್ನು 'ಸೆಂಟಿಮೆಂಟ್ ಸಾಗರ'ದೊಳಗೆ ಮುಳುಗಿಸಬಹುದಾದ ಎಲ್ಲ ಅವಕಾಶಗಳಿದ್ದರೂ ಅಲ್ಲಲ್ಲಿ ಸಂಯಮ ಕಾಯ್ದುಕೊಂಡಿರುವ ನಿರ್ದೇಶಕ ಆ ಕಾರ್ಯಕ್ಕೆ ಸಿನಿಮಾದ ಕ್ಲೈಮ್ಯಾಕ್ಸ್‌ವರೆಗೆ ಕಾದಿದ್ದಾರೆ.

  ರಕ್ಷಿತ್ ಶೆಟ್ಟಿ ನಟನೆ ಹೇಗಿದೆ?

  ರಕ್ಷಿತ್ ಶೆಟ್ಟಿ ನಟನೆ ಹೇಗಿದೆ?

  ಸಿನಿಮಾದ ಪ್ರಮುಖ ಅಂಶಗಳೆಂದರೆ ನಾಯಕ ರಕ್ಷಿತ್ ಶೆಟ್ಟಿ ಮತ್ತು ನಾಯಿ ಚಾರ್ಲಿ. ರಕ್ಷಿತ್ ಶೆಟ್ಟಿ, ಸಿನಿಮಾದಿಂದ ಸಿನಿಮಾಕ್ಕೆ ಅಭಿನಯವನ್ನು ಉತ್ತಮಪಡಿಸಿಕೊಳ್ಳುತ್ತಲೇ ಸಾಗುತ್ತಿದ್ದಾರೆ. ಅವರ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಹೆಚ್ಚಿನ ಅಭಿನಯ ಬೇಡುವ ಪಾತ್ರವಿದು, ಅದನ್ನು ಚೆನ್ನಾಗಿ ನಿಭಾಯಿಸಿದ್ದಾರೆ ರಕ್ಷಿತ್ ಶೆಟ್ಟಿ. ಆದರೆ ಅವರ ಧ್ವನಿ ಮಾತ್ರ ಏರಿಳಿತಗಳಿಲ್ಲದೆ ಸಪಾಟಾಗಿದೆ ಅನಿಸುತ್ತದೆ. ಅವರ ಮುಖ ಭಾವದಲ್ಲಾಗುವ ಏರಿಳಿತಗಳು ಧ್ವನಿಯಲ್ಲಿ ಇಲ್ಲ. ಮುಖದಲ್ಲಿ ಕಾಣುವ ನೋವು ಧ್ವನಿಯಲ್ಲಿ ಮಿಸ್ಸಿಂಗ್. ನಟನೆಯಲ್ಲಿ ಉತ್ತಮದಿಂದ ಅತ್ಯುತ್ತಮದೆಡೆಗೆ ಸಾಗುತ್ತಿರುವ ರಕ್ಷಿತ್ ಶೆಟ್ಟಿ ಅದನ್ನು ತಿದ್ದಿಕೊಳ್ಳುವುದು ಪಕ್ಕಾ ಎಂಬ ವಿಶ್ವಾಸವಿದೆ.

  ಹೆಚ್ಚು ಅಂಕ ನಾಯಿಗೆ

  ಹೆಚ್ಚು ಅಂಕ ನಾಯಿಗೆ

  ಇನ್ನು ಚಾರ್ಲಿ ಪಾತ್ರದಲ್ಲಿರುವ ನಾಯಿಗಳು (ಒಂದು ಪಾತ್ರಕ್ಕೆ ಎರಡು ನಾಯಿಗಳನ್ನು ಬಳಸಿಕೊಳ್ಳಲಾಗಿದೆ) ರಕ್ಷಿತ್ ಶೆಟ್ಟಿಗಿಂತಲೂ ಹೆಚ್ಚು ಅಂಕ ಮೀಸಲು. ಏಕೆಂದರೆ ಅವುಗಳ ಭಾವನೆಗಳು ಒರಿಜಿನಲ್. ನಾಯಿಗಳಿಗೆ ನಟನೆ ಗೊತ್ತಿಲ್ಲ, ಬದುಕಿಯಷ್ಟೆ ಗೊತ್ತು. ಸಿನಿಮಾದ ಪ್ರತಿ ದೃಶ್ಯದಲ್ಲೂ ಆ ಸನ್ನಿವೇಶಕ್ಕೆ ತಕ್ಕಂತೆ ನಾಯಿ, ಭಾವ ಹೊಮ್ಮಿಸುವ ರೀತಿ ಆಶ್ಚರ್ಯ ಹುಟ್ಟಿಸುತ್ತದೆ. ಭಾವುಕ ಸನ್ನಿವೇಶದಲ್ಲಿ ಬೇಸರಗೊಳ್ಳುತ್ತದೆ, ಬೈದಾಗ ಮುನಿಸಿಕೊಳ್ಳುತ್ತದೆ, ಖುಷಿಯಾದಾಗ ಮುಖ ಅರಳಿಸುತ್ತದೆ. ರಕ್ಷಿತ್ ಶೆಟ್ಟಿ ಅಥವಾ ಇತರೆ ನಟರಿಗೆ ಭಾವಾಭಿವ್ಯಕ್ತಿಗೆ ನಟನೆ ಜೊತೆ ಸಂಭಾಷಣೆ, ಆಂಗಿಕ ಅಭಿನಯದ ನೆರವಿದೆ, ಆದರೆ ಅದ್ಯಾವುದೂ ಇಲ್ಲದೆ, ನಾಯಿ ತನ್ನ ಭಾವನೆಗಳನ್ನು ದಾಟಿಸುತ್ತದೆ. ಇದಕ್ಕೆ ನಾಯಿಯನ್ನು ತರಬೇತಿಗೊಳಿಸಿದವರಿಗೆ, ಸರಿಯಾದ ಸಮಯದಲ್ಲಿ ಸಂಯಮದಿಂದ ಸನ್ನಿವೇಶಕ್ಕೆ ಸೂಕ್ತವಾದ ಭಾವಗಳನ್ನು ಸೆರೆಹಿಡಿದ ನಿರ್ದೇಶಕ ಹಾಗೂ ಕ್ಯಾಮೆರಾಮಾನ್‌ಗೆ ಸೆಲ್ಯೂಟ್ ಹೇಳಲೇ ಬೇಕು.

  ಸಿನಿಮಾದ ಸಂಗೀತ ಹೇಗಿದೆ?

  ಸಿನಿಮಾದ ಸಂಗೀತ ಹೇಗಿದೆ?

  ಸಿನಿಮಾದ ಸಂಗೀತ ಸಹ ಚಿತ್ರಕತೆಗೆ ಬಲ ತುಂಬಿದೆ. ಹಿನ್ನೆಲೆ ಸಂಗೀತಕ್ಕಿಂತಲೂ ಸಿನಿಮಾದ ಹಾಡುಗಳು ಗಮನ ಸೆಳೆಯುತ್ತವೆ. ಕೊಂಕಣಿ ಹಾಡು, ಜನಪದ ಹಾಡುಗಳಂತೂ ಭಿನ್ನವಾಗಿವೆ. ದೃಶ್ಯಗಳೊಟ್ಟಿಗೆ ಕೇಳಿದಾಗ ಹಾಡುಗಳು ಇನ್ನಷ್ಟು ಹತ್ತಿರವಾಗುತ್ತವೆ. ಸನ್ನಿವೇಶವನ್ನು ಮೀರಿ ಹಿನ್ನೆಲೆ ಸಂಗೀತ ಗಮನ ಸೆಳೆಯುವುದಿಲ್ಲವಾದರೂ ದೃಶ್ಯಕ್ಕೆ ತೀವ್ರತೆ ಕೊಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸಿನಿಮಾಕ್ಕೆ ಸಂಗೀತ ನೀಡಿರುವುದು ನೊಬಿಲ್ ಪೌಲ್. ಸಿನಿಮಾದ ಕ್ಯಾಮೆರಾ ಕೆಲಸವೂ ಚೆನ್ನಾಗಿದೆ. ದ್ವೀತೀಯಾರ್ಧದಲ್ಲಿ ಕೆಲವು ಒಳ್ಳೆಯ ಫ್ರೇಮ್‌ಗಳನ್ನು ನೀಡಿದ್ದಾರೆ ಕ್ಯಾಮೆರಾಮನ್ ಅರವಿಂದ್ ಕಶ್ಯಪ್. ಪ್ಯಾರಾ ಗ್ಲೈಡಿಂಗ್ ದೃಶ್ಯ, ಚಾರ್ಲಿ ಹಾಗೂ ಧರ್ಮ ದಿಗಂತ ನೋಡುತ್ತಾ ಕುಳಿತ ದೃಶ್ಯ, ಹಿಮಾಲಯದ ದೃಶ್ಯಗಳೆಲ್ಲವೂ ಕಣ್ಣಿಗೆ ಮುದ.

  ಚಾರ್ಲಿ ಚಾಪ್ಲಿನ್ ಅನ್ನು ಬಳಸಿಕೊಂಡಿರುವ ರೀತಿ ಸುಂದರ

  ಚಾರ್ಲಿ ಚಾಪ್ಲಿನ್ ಅನ್ನು ಬಳಸಿಕೊಂಡಿರುವ ರೀತಿ ಸುಂದರ

  ಸಿನಿಮಾದ ಬರವಣಿಗೆಯೂ ಉತ್ತಮಾಗಿದೆ. ಅದರಲ್ಲಿಯೂ ಚಾರ್ಲಿ ಚಾಪ್ಲಿನ್ ದೃಶ್ಯಗಳನ್ನು, ಚಿತ್ರಗಳನ್ನು ಬಳಸಿಕೊಂಡಿರುವ ರೀತಿ ಚೆನ್ನಾಗಿದೆ. ಒಂದೂ ಪಕ್ಕಾ ಫೈಟ್‌ ದೃಶ್ಯಗಳಲ್ಲಿದೆಯೂ ರಕ್ಷಿತ್ ಶೆಟ್ಟಿಯನ್ನು ಮೊದಲಾರ್ಧ ಮಾಸ್‌ ಇಮೇಜಿನಲ್ಲಿ ತೋರಿಸಿರುವ ತಂತ್ರವೂ ಚೆನ್ನಾಗಿದೆ. ಇನ್ನು, ರಕ್ಷಿತ್ ಶೆಟ್ಟಿ, ನಾಯಿ ಚಾರ್ಲಿಯ ಹೊರತಾಗಿ ರಾಜ್ ಬಿ ಶೆಟ್ಟಿ, ಸಂಗೀತ ಶೃಂಗೇರಿ ಪಾತ್ರಕ್ಕನುಗುಣವಾಗಿ ಚೆನ್ನಾಗಿ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಬರುವ ನಟ ಬಾಬಿ ಸಿಂಹ ಸಹ ಗಮನ ಸೆಳೆಯುತ್ತಾರೆ. ದಾನಿಶ್‌ಗೆ ಡ್ಯಾಶಿಂಗ್ ಎಂಟ್ರಿ ಏನಿಲ್ಲ. '777 ಚಾರ್ಲಿ' ಸಿನಿಮಾವು ಜೂನ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

  English summary
  777 Charlie Movie Review in Kannada: Rakshit shetty starrer 777 Charlie movie review and rating. The movie was written and directed by Kiranraj K.
  Thursday, October 20, 2022, 12:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X