»   » ಕಿಲ್ಲಿಂಗ್ ವೀರಪ್ಪನ್: ಕನ್ನಡ ಚಲನಚಿತ್ರ ವಿಮರ್ಶೆ

ಕಿಲ್ಲಿಂಗ್ ವೀರಪ್ಪನ್: ಕನ್ನಡ ಚಲನಚಿತ್ರ ವಿಮರ್ಶೆ

Subscribe to Filmibeat Kannada

ಥಿಯೇಟರ್ ಒಳಗೆ ಹೊಕ್ಕಲ್ಲಿಂದ ಹೊರಗೆ ಬರುವವರೆಗೂ ಆನೆ ಘೀಳಿಡುವ ಸದ್ದು. ಡಕ್ಕಂ ಡಿಕ್ಕಂ ಡಕ್ಕಂ ಡಿಕ್ಕಂ ಡಕ್ಕಂ ಡಿಕ್ಕಂ ಡಕ್ಕಂ... ಬ್ಯಾಕ್ ಗ್ರ್ಯೌಂಡ್ ಸ್ಕೋರ್ ಹೊರಬಿದ್ದಮೇಲೂ ತಲೆಯಲ್ಲಿ ಗಿರಕಿ ಹಾಕುತ್ತಲೇ ಇರುತ್ತದೆ. ಒಟ್ಟಿನಲ್ಲಿ ಚಂದನವನಕ್ಕೆ 2016ಕ್ಕೆ ಸುಂದರ ಆರಂಭ ಸಿಕ್ಕಿದೆ.['ಕಿಲ್ಲಿಂಗ್ ವೀರಪ್ಪನ್' ಚಿತ್ರದ ಮೊದಲ ವಿಮರ್ಶೆ ಇಲ್ಲಿದೆ ಓದಿ....']


"ಕಿಲ್ಲಿಂಗ್ ವೀರಪ್ಪನ್" ಕತೆಯಲ್ಲಿ ಹೊಸತೇನಿದೆ? ಮಾಧ್ಯಮದಲ್ಲೆಲ್ಲಾ ನರಹಂತಕನ ಸಾವಿನ ಸುದ್ದಿಯನ್ನು ಧಾರಾವಾಹಿ ತರಹ ಬರೆದಿದ್ದಾರಲ್ಲ. ಎರಡು ವರ್ಷಗಳ ಹಿಂದೆ "ಅಟ್ಟಹಾಸ" ಸಿನಿಮಾದಲ್ಲೂ ವೀರಪ್ಪನ್ ಹತ್ಯೆ ಕತೆಯನ್ನೇ ಬಳಸಿಕೊಂಡಿದ್ದಲ್ಲ.. ಎಂದು ಅಂದುಕೊಂಡು ಸುಮ್ಮನಿದ್ದರೆ ನಿಮಗೆ ನಷ್ಟ. [ರಾಮ್ ಗೋಪಾಲ್ ವರ್ಮಾ ನ ಕಿಲ್ ಮಾಡ್ತಾರಂತೆ ಮುತ್ತುಲಕ್ಷ್ಮಿ!]

ನರಹಂತಕನನ್ನು ಅರಣ್ಯದಿಂದ ಹೊರಕ್ಕೆ ಕರೆಸಿ ಸೆರೆಹಿಡಿಯುವುದು ಅಥವಾ ಹತ್ಯೆ ಮಾಡುವುದು ಹೇಗೆ? ಇದಕ್ಕೆ ನಾಯಕ ಶಿವರಾಜ್ ಕುಮಾರ್ ಮಾಡುವ ತಂತ್ರಗಳೇನು? ಯಾರನ್ನೆಲ್ಲ ತನ್ನ ಕೆಲಸಕ್ಕೆ ಬಳಸಿಕೊಳ್ಳುತ್ತಾನೆ? ಪೊಲೀಸ್ ಇಲಾಖೆಗೆ ಸರ್ಕಾರಕ್ಕೆ ಗೊತ್ತಿಲ್ಲದೆ ಮಾಡುವ ಕೆಲ ಆಫ್ ದಿ ರೆಕಾರ್ಡ್ ಕೆಲಸಗಳು ಏನು? ಕೊನೆಯಲ್ಲಿ ವೀರಪ್ಪನ್ ಬೇಟೆಯಾಡುವ ಪರಿ ಎಂಥದ್ದು? ಇದೆಲ್ಲದರ ಸುಂದರ ನಿರೂಪಣೆಯನ್ನು ಕಣ್ಣು ತುಂಬಿಕೊಳ್ಳಲು ಚಿತ್ರಮಂದಿರಕ್ಕೆ ಲಗ್ಗೆ ಹಾಕಲೇಬೇಕು.


Rating:
4.5/5

ಚಿತ್ರ : ಕಿಲ್ಲಿಂಗ್ ವೀರಪ್ಪನ್
ನಿರ್ಮಾಣ: ಜಿ ಆರ್ ಪಿಕ್ಚರ್ಸ್
ಕಥೆ-ಚಿತ್ರಕಥೆ-ನಿರ್ದೇಶನ : ರಾಮ್ ಗೋಪಾಲ್ ವರ್ಮಾ
ಸಂಗೀತ :
ರವಿಶಂಕರ್
ಛಾಯಾಗ್ರಹಣ: ರಾಮಿ
ತಾರಾಗಣ: ಶಿವರಾಜ್ ಕುಮಾರ್, ಪಾರುಲ್ ಯಾದವ್, ಯಜ್ಞಾ ಶೆಟ್ಟಿ, ಸಂದೀಪ್ ಭಾರಧ್ವಜ್, ಸಂಚಾರಿ ವಿಜಯ್
ಬಿಡುಗಡೆ : ಜನವರಿ 1


ಲೊಕೆಶನ್ ನಮ್ಮವೇ!

ಸಿನಿಮಾದ ಬಹುಪಾಲನ್ನು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಮತ್ತು ಅಂಕೋಲಾ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಂದಕ್ಕಿಂತ ಒಂದು ದೃಶ್ಯಗಳು ವೈಭವ ಸಾರುತ್ತವೆ. ಮಲೆನಾಡ ಸುಂದರ ಪರಿಸರ, ಮನೆ, ಅರಣ್ಯ, ನದಿ ಎಲ್ಲವನ್ನು ಕಣ್ಣು ತುಂಬಿಕೊಳ್ಳಬಹುದು.


ವೀರಪ್ಪನ್ ಗೆ ಫುಲ್ ಮಾರ್ಕ್ಸ್

ವೀರಪ್ಪನ್ ಪಾತ್ರ ಮಾಡಿದ ಸಂದೀಪ್ ಭಾರಧ್ವಜ್ ಗೆ ಫುಲ್ ಮಾರ್ಕ್ಸ್. ವೀರಪ್ಪನ್ ಬಾಡಿ ಲ್ಯಾಂಗ್ವೇಜನ್ನು ಸಂದೀಪ್ ಅರೆದು ಕುಡಿದು ಅಭಿನಯಿಸಿದ್ದಾರೆ. ಸಿನಿಮಾ ಆರಂಭದ ಭಾಗದಲ್ಲಿ ವಿಜೃಂಭಿಸುವ ವೀರಪ್ಪನ್ ನೋಡಿ ಕುಳಿತ ಪ್ರೇಕ್ಷಕನ ರಕ್ತ ಬಿಸಿಯಾಗುತ್ತದೆ.
ನಾಯಕ-ಖಳನಾಯಕ

ನಾಯಕ ಶಿವರಾಜ್ ಕುಮಾರ್ ಸ್ಪೇಶಲ್ ಟಾಸ್ಕ್ ಫೋರ್ಸ್ ಅಧಿಕಾರಿಯಾಗಿ ಖದರ್ ತೋರಿಸಿದ್ದಾರೆ. ನಾಯಕನದ್ದೂ ಜಾಸ್ತಿ ಮಾತಿಲ್ಲ, ಕೆಲಸವೇ ಹೆಚ್ಚು. ಕೈಯಲ್ಲೊಂದು ಕಾಫಿ ಕಪ್, ಸಿಗರೇಟ್ ಶಿವಣ್ಣ ಅವರಿಗೆ ವಿಭಿನ್ನ ಗೆಟಪ್ ನೀಡಿದೆ.


ರಾಕ್ಷಸರ ಕೊಲ್ಲಲು ರಾಕ್ಷಸರಾಗಬೇಕು

ಸಿನಿಮಾದ ಕ್ಲೈಮಾಕ್ಸ್ ನಲ್ಲಿ ಶಿವಣ್ಣ ಹೇಳುವ ಡೈಲಾಗ್ 'ರಾಕ್ಷಸರ ಕೊಲ್ಲಲು ರಾಕ್ಷಸರಾಗಬೇಕಾಗುತ್ತದೆ' ಒಂದು ಕ್ಷಣ ಇಂದಿನ ವ್ಯವಸ್ಥೆ ವಿರುದ್ಧ ನಾವು ನಿಂತುಬಿಡೋಣವೇ ಅನ್ನಿಸುವಂತೆ ಮಾಡುತ್ತದೆ. ಅಲ್ಲಲ್ಲಿ ಕಡ್ಡಿಪುಡಿ ಶಿವಣ್ಣನ ಶೇಡ್ ಸಹ ಕಂಡುಬರುತ್ತದೆ.


ರಾಮಿ ರಾಕ್ಸ್

ಛಾಯಾಗ್ರಾಹಕ ರಾಮಿ ನಿಜಕ್ಕೂ ಮ್ಯಾಜಿಕ್ ಮಾಡಿದ್ದಾರೆ. ಅರಣ್ಯದಲ್ಲಿ ಎಸ್ ಟಿ ಎಫ್ ಅಧಿಕಾರಿಗಳು ಮತ್ತು ವೀರಪ್ಪನ್ ಸಹಚರರ ನಡುವೆ ನಡೆಯುವ ಶೂಟೌಟ್ ದೃಶ್ಯಾವಳಿಗಳನ್ನು ಮೆಚ್ಚಿಕೊಳ್ಳದೇ ಇರಲು ಸಾಧ್ಯವೇ ಇಲ್ಲ.


ಆರಂಭದಲ್ಲಿ ಅಧಿಕಾರಿ ಹತ್ಯೆ

ಆರಂಭದಲ್ಲಿ ಪೊಲೀಸ್ ಅಧಿಕಾರಿ(ರಾಕ್ ಲೈನ್ ವೆಂಕಟೇಶ್) ಅವರನ್ನು ಹತ್ಯೆ ಮಾಡುವ ಮೂಲಕ ವೀರಪ್ಪನ್ ಎಂಟ್ರಿ. ನಿಜಕ್ಕೂ ವೀರಪ್ಪನ್ ಅಬ್ಬರ ಹೇಗಿತ್ತು? ಎಂಬುದನ್ನು ಸಿನಿಮಾದ ಮುಂದಿನ ಒಂದೊಂದೆ ದೃಶ್ಯಗಳು ಹೇಳುತ್ತ ಹೋಗುತ್ತವೆ.


ಇದು ವರ್ಮಾ ಸ್ಟೈಲ್

ರಾಮ್ ಗೋಪಾಲ್ ವರ್ಮಾ ಕತೆಯನ್ನು ವೀರಪ್ಪನ್ ಹತ್ಯೆಗೆ ಮಾತ್ರ ಸಿಮೀತ ಮಾಡಿಲ್ಲ. ಎಲ್.ಟಿ.ಟಿ.ಇ, ಕಂಚಿಸ್ವಾಮಿ, ರಜನೀಕಾಂತ್ , ಪೊಲೀಸ್ ಸಿಸ್ಟಂ ಒಳಗೇ ನಡೆಯುವ ಗೊತ್ತಿರದ ವಿಚಾರಗಳು. ಸಂದೇಶ ನೀಡುವವರ ರಹಸ್ಯ ಕೊಲೆ ಎಲ್ಲದರಲ್ಲೂ ವರ್ಮಾ ಕೈಚಳಕವಿದೆ.


ಕಧಾನಿ ಟ್ರಾಪ್ ಸೀನ್

ಆಪ್ಟೋಕಾಪ್ಟರ್ ಬಳಸಿ ಚಿತ್ರೀಕರಿಸಿರುವ 'ಕಧಾನಿ ಟ್ರಾಪ್ ಸೀನ್' ಸಿನಿಮಾದ ಮತ್ತೊಂದು ಹೈಲೈಟ್ಸ್. ಗುಡ್ಡಗಾಡಿನಲ್ಲಿ ಅಲೆದಾಡುತ್ತ ತೆರಳುವ ಶಿವಣ್ಣ ಲುಕ್ ಹೊಸ ಲೋಕವನ್ನು ನಿಮಗೆ ಕಟ್ಟಿಕೊಡುತ್ತದೆ.


ತಾರಾಗಣ ಏನೆನ್ನುತ್ತದೆ?

ಎಸ್ ಟಿಎಫ್ ಅಧಿಕಾರಿಗಳಿಗೆ ಸಹಾಯ ಮಾಡುವ ಯುವತಿ ಪಾರೂಲ್ ಯಾದವ್ ನಂತರ ಎಸ್ ಟಿಎಫ್ ಅವರ ಜತೆಯೇ ಕೆಲಸಕ್ಕೆ ನಿಲ್ಲುತ್ತಾಳೆ. ಮುತ್ತುಲಕ್ಷ್ಮೀ ಪಾತ್ರದಲ್ಲಿ ಯಜ್ಞಾ ಶೆಟ್ಟಿ ಅವರದ್ದು ಮನೋಜ್ಞ ಅಭಿನಯ. ಎಸ್ ಟಿಎಫ್ ಅಧಿಕಾರಿಯಾಗಿ ಸಂಚಾರಿ ವಿಜಯ್ ಸಹ ಮೆಚ್ಚುಗೆ ಪಡೆದುಕೊಳ್ಳುತ್ತಾರೆ.


ಮೂರು ಬಾರಿ ಟ್ರಾಪ್ ಗೆ ಯತ್ನ

ಒಮ್ಮೆ ಮುತ್ತುಲಕ್ಷ್ಮೀಯನ್ನು ಬಳಸಿಕೊಂಡು, ಇನ್ನೊಮ್ಮೆ ಕಧಾನಿ ಟ್ರಾಪ್ ಸೀನ್ ಮೂಲಕ ವೀರಪ್ಪನ್ ಹಿಡಿಯಲು ಯತ್ನ ಮಾಡಲಾಗುತ್ತದೆ. ಆದರೆ ಎರಡು ಸಾರಿ ವೀರಪ್ಪನ್ ಪೊಲೀಸರ ಕೈಯಿಂದ ಬಚಾವ್. ಮೂರನೇ ಸಾರಿ ನರಹಂತಕನನ್ನು ಅರಣ್ಯದಿಂದ ಹೊರಕ್ಕೆ ಕರೆತರಲು ನಾಯಕ ಯಶಸ್ವಿಯಾಗುತ್ತಾನೆ. ಯಾವ ಕಾರಣ ಇಟ್ಟುಕೊಂಡು ವೀರಪ್ಪನ್ ಅರಣ್ಯದಿಂದ ಹೊರಬರುತ್ತಾನೆ? ಎಂಬುದನ್ನೇ ಇಟ್ಟುಕೊಂಡು ವರ್ಮಾ ಆಟ ಆಡಿದ್ದಾರೆ.


ಮೈನಸ್ ಏನು?

ವೀರಪ್ಪನ್ ತನ್ನ ಆರ್ಭಟ ಮೆರೆದಿದ್ದು ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿ. ಆದರೆ ಈ ಚಿತ್ರದ ಉದ್ದಕ್ಕೂ ಕಂಡುಬರುವುದು ಮಲೆನಾಡ ಅರಣ್ಯ, ಮನೆಗಳು. ಕೆಲ ವಾಹನಗಳಿಗೆ ಬೇಕಂತಲೇ ಮೈಸೂರು ನೋಂದಣಿ ಮಾಡಿದ್ದನ್ನು ಸ್ಷಷ್ಟವಾಗಿ ಗಮನಿಸಬಹುದು.


ವರ್ಮಾ ಕೈಚಳಕಕ್ಕೇನು ಸಾಟಿ

ಸೆಂಚುರಿ ಸ್ಟಾರ್ ಬಳಿಯೂ ಇಂಥದ್ದೊಂದು ಖಡಕ್ ಅಧಿಕಾರಿ ಇದ್ದಾನೆ. ನಮ್ಮ ಕರ್ನಾಟಕದಲ್ಲೇ ಎಂಥ ಸಿನಿಮಾವನ್ನಾದರೂ ಸುಂದರವಾಗಿ ಚಿತ್ರಿಸಬಹುದು. ಛಾಯಾಗ್ರಹಣವನ್ನೂ ಹೀಗೂ ಮಾಡಬಹುದು, ನೆರಳು ಬೆಳಕಿನೊಂದಿಗೆ ಆಟ ಆಟೋದು ಹೇಗೆ? ಅಬ್ಬರದ ಉದ್ದುದ್ದ ಡೈಲಾಗ್ ಗಳಿಲ್ಲದೇ, ಅಗತ್ಯವಿಲ್ಲದೆಡೆ ಹಾಡುಗಳನ್ನು ತುರುಕದೇ ಸಿನಿಮಾ ಕಮಾಲ್ ಹೇಗೆ ಮಾಡಬೇಕು ಎಂದು ವರ್ಮಾ ಮತ್ತೊಮ್ಮೆ ನಿರೂಪಣೆ ಮಾಡಿ ತೋರಿಸಿದ್ದಾರೆ.


ಹಲುಬುವ ಮಂದಿ ನೋಡಲಿ

ಗ್ಲಾಮರ್ ಬೇಕು, ಐಟಂ ಡ್ಯಾನ್ಸ್ ಬೇಕು, ಫೈಟ್ ಬೇಕು ಆಗ ತಾನೆ ಸಿನಿಮಾ ಓಡೋದು.. ಇಲ್ಲವಾದರೆ ಜನರು ನೋಡಲ್ಲ ಎಂದು ಹಲುಬುವ ಕೆಲ ಸಿನಿಮಾ ಮಂದಿಯಂತೂ ಕಿಲ್ಲಿಂಗ್ ವೀರಪ್ಪನ್ ನೋಡಲೇ ಬೇಕು.


English summary
Ram Gopal Varma Directorial 'Killing Veerappan' movie review. How is Kannada actor Shiva Rajakumar and director Ramgopal Verma combination? Read the movie review here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada