twitter
    For Quick Alerts
    ALLOW NOTIFICATIONS  
    For Daily Alerts

    100 Movie Review: ಸೋಶಿಯಲ್ ಮೀಡಿಯಾಗೆ ಅಡಿಕ್ಟ್ ಆದವರು '100' ನೋಡಲೇಬೇಕು

    |

    ಅದೆಷ್ಟು ಮರ ಸುತ್ತುವ ಕಥೆಯನ್ನೇ ನೋಡಬೇಕು. ಅದೆಷ್ಟು ಲವ್ ಸ್ಟೋರಿ ನೋಡಬೇಕು. ಕನ್ನಡದಲ್ಲಿ ಪ್ರೇಮ್ ಕಹಾನಿ, ರೌಡಿಸಂ ಬಿಟ್ಟರೆ ಬೇರೆ ತರಹದ ಕಥೆನೇ ಸಿಗುತ್ತಿಲ್ವಾ? ಹೀಗಂತ ಕಮೆಂಟ್ ಮಾಡುವವರಿಗೆ ರಮೇಶ್ ಅರವಿಂದ್ ನಿರ್ದೇಶಕನ '100' ಸಿನಿಮಾ ಹೊಸದು ಅಂತ ಅನಿಸುತ್ತೆ. ಹಾಗಂತ, ಸೈಬರ್ ಕ್ರೈಂ ಕಹಾನಿಯನ್ನು ಇಟ್ಟುಕೊಂಡು ಹೆಣೆದ ಕಥೆ ಕನ್ನಡದಲ್ಲಿ ಬಂದೇ ಇಲ್ವಾ? ಅನ್ನುವ ಪ್ರಶ್ನೆನೂ ಸಹಜ. ಆದರೆ, ಈಗಿನ ಪರಿಸ್ಥಿತಿಗೆ ಸಮಾಜಕ್ಕೆ ಹೇಳಿ ಮಾಡಿಸಿದ ಸಿನಿಮಾ ಅಂತ ನಿಸ್ಸಂದೇಹವಾಗಿ ಹೇಳಬಹುದು.

    ಕ್ರಿಪ್ಟೋ ಕರೆನ್ಸಿ ವಿವಾದ.. ಹ್ಯಾಕರ್ ಶ್ರೀಕಿ.. ಕಳೆದೊಂದು ವಾರದಿಂದ ಎಲ್ಲಿ ನೋಡಿದರೂ ಇದೇ ಸುದ್ದಿ. ವಿಶ್ವದ ಮೂಲೆಯಲ್ಲೂ ಹ್ಯಾಕರ್‌ಗಳು ಹಾವಳಿ ಎಬ್ಬಿಸುವ ಒಂದಲ್ಲಾ ಸುದ್ದಿ ಓಡಾಡುತ್ತಲೇ ಇರುತ್ತೆ. ಇನ್ನೊಂದು ಕಡೆ ಫೇಸ್‌ಬುಕ್ ಅಂತಹ ಸೋಶಿಯಲ್ ಮೀಡಿಯಾ ಬಳಸಿಕೊಂಡು ಮೋಸ ಹೋದವರ ಸುದ್ದಿಗೇನು ಕಮ್ಮಿಯಿಲ್ಲ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಫೇಸ್‌ಬುಕ್‌ಗೆ ಅಡಿಕ್ಟ್ ಆದವರು ಮೋಸ ಹೋದಾಗ ಏನೆಲ್ಲಾ ಆಗುತ್ತೆ. ಅವರ ಕುಟುಂಬದಲ್ಲಿ ಏನೆಲ್ಲಾ ಅವಾಂತರಗಳು ಸೃಷ್ಟಿಯಾಗುತ್ತೆ ಅನ್ನೋದೇ '100'.

    Rating:
    3.5/5

    ಈ ಹಿಂದೆ 'ಗುಳ್ಟು' ಅನ್ನುವ ಸಿನಿಮಾ ಬಂದಿತ್ತು. ಅದು ಪಕ್ಕಾ ಸೈಬರ್ ಕ್ರೈಂ ಸಿನಿಮಾ. ಹಾಗಾಗಿ ಕನ್ನಡಿಗರಿಗೆ ಸೈಬರ್ ಕ್ರೈಂ ಸಿನಿಮಾ ಹೊಸತದಲ್ಲ. ಹಾಗಂತ ಹಳೆದೂ ಅಲ್ಲ. ಸೈಬರ್ ಕ್ರೈಂ ಆಧರಿಸಿದ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ರಿಲೀಸ್ ಆಗಿದ್ದು ತೀರಾ ವಿರಳ. ಇದೇ ಸಾಲಿಗೆ ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸಿದ ಸಿನಿಮಾ '100' ಕೂಡ ನಿಲ್ಲುತ್ತೆ. ಹಾಗಿದ್ದರೆ ಈ ಸಿನಿಮಾ ಹೇಗಿದೆ? '100' ಅನ್ನುವ ಟೈಟಲ್ ಯಾಕೆ? ಯಾರ ನಟನೆ ಹೇಗಿದೆ? ಅನ್ನುವುದನ್ನು ಮುಂದೆ ಓದಿ.

    '100' ಸಿನಿಮಾದ ಕಥೆ ಏನು?

    '100' ಸಿನಿಮಾದ ಕಥೆ ಏನು?

    ಒಬ್ಬ ಹುಡುಗಿಯ ಆತ್ಮಹತ್ಯೆ ದೃಶ್ಯದಿಂದ '100' ಸಿನಿಮಾದ ಆರಂಭ ಆಗುತ್ತೆ. ಪ್ರೀತಿಯ ಬಲೆಗೆ ಬಿದ್ದ ಹುಡುಗಿಯೊಬ್ಬಳು ಶಾಲೆಯ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪುತ್ತಾಳೆ. ಈ ದೃಶ್ಯದಿಂದ ಸಿನಿಮಾದ ಕಥೆ ಆರಂಭ. ಚಿತ್ರದ ನಾಯಕ ರಮೇಶ್ ಅರವಿಂದ ಎಂಟ್ರಿ ಎರಡೂ ಆಗುತ್ತೆ. ರಮೇಶ್ ಅರವಿಂದ್ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ. ಇವರದ್ದೊಂದು ಸುಂದರ ಕುಟುಂಬ, ತಂಗಿ, ತಾಯಿ, ಹೆಂಡ್ತಿ, ಮಗಳು. ಈ ಪ್ರಾಮಾಣಿಕ ಪೊಲೀಸ್ ಅಧಿಕಾರಿಗೆ ಕುಟುಂಬವೇ ಪ್ರಧಾನ. ಅದರಲ್ಲೂ ತಂಗಿ ರಚಿತಾ ರಾಮ್ ಅಂದರೆ ಪಂಚಪ್ರಾಣ. ಫೇಸ್‌ಬುಕ್‌ಗೆ ಅಡಿಕ್ಟ್ ಆಗಿರುವ ತಂಗಿ, ಸಮಸ್ಯೆಯಲ್ಲಿ ಸಿಕ್ಕಿಕೊಂಡಾಗ, ಅಣ್ಣನಾದವನಿಗೆ ಹೇಗೆ ಸಮಸ್ಯೆ ಎದುರಾಗುತ್ತೆ. ಅವುಗಳನ್ನು ಅವನು ಹೇಗೆ ನಿಭಾಯಿಸುತ್ತಾನೆ? ಸೋಶಿಯಲ್ ಮೀಡಿಯಾ ಪೊಲೀಸ್ ಅಧಿಕಾರಿ, ಆತನ ಹೆಂಡತಿ ಹಾಗೂ ತಂಗಿಯ ನೆಮ್ಮದಿಯನ್ನು ಹೇಗೆ ಹಾಡು ಮಾಡುತ್ತೆ ಅನ್ನುವುದನ್ನೇ ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

    ಕ್ರೈಂ, ಫ್ಯಾಮಿಲಿ, ಆಕ್ಷನ್ ಸಿನಿಮಾ

    ಕ್ರೈಂ, ಫ್ಯಾಮಿಲಿ, ಆಕ್ಷನ್ ಸಿನಿಮಾ

    '100' ಸೈಬರ್ ಕ್ರೈಂ ಆಧಾರಿತ ಸಿನಿಮಾ ಅಂತ ಅನಿಸಿದರೂ ಇದು ಪಕ್ಕಾ ಕೌಟುಂಬಿಕ ಸಿನಿಮಾ. ಎಲ್ಲಕ್ಕಿಂತ ಹೆಚ್ಚಾಗಿ ಮೊಬೈಲ್‌ಗೆ ಅಡಿಕ್ಟ್ ಆದವರಿಗಾಗಿ ಹೇಳಿ ಮಾಡಿಸಿದ ಸಿನಿಮಾ. ಪ್ರತಿಯೊಬ್ಬರ ಮನೆಯಲ್ಲೂ, ಮಗನೋ, ಮಗಳೋ, ಪತ್ನಿಯೋ, ಗಂಡನೋ ಯಾರಾದರೂ ಒಬ್ಬರು ಮೊಬೈಲ್‌ಗೆ ಇಲ್ಲ ಸೋಶಿಯಲ್ ಮೀಡಿಯಾಗೆ ಅಡಿಕ್ಟ್ ಆಗಿರುತ್ತಾರೆ. ಇದರಿಂದ ಅವರ ಕುಟುಂಬ ಹೇಗೆ ಸಂಕಷ್ಟಕ್ಕೆ ಸಿಲುಕುತ್ತೆ ಅನ್ನುವುದೇ ಕಥೆಯ ಜೀವಾಳ. ಒಂದು ಹಾಡಿದೆ. ಅದು ಆರಂಭದಲ್ಲೇ ಬಂದು ಹೋಗುತ್ತೆ. ಅದು ಸಿನಿಮಾದಲ್ಲಿ ರಮೇಶ್ ಅರವಿಂದ್ ಕುಟುಂಬದ ಪರಿಚಯ ಮಾಡಿಸುವ ಹಾಡು. ಥ್ರಿಲ್ಲರ್ ಕಥೆಯಾಗಿದ್ದರಿಂದ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯಿಲ್ಲ. ಸಿರೀಯಸ್ ಆಗಿ ಸಾಗುತ್ತಿರುವಾಗ ಕಥೆಯಲ್ಲಿ ಅಲ್ಲಲ್ಲಿ ಕಾಮಿಡಿ ಕಚುಗುಳಿ ಇಟ್ಟು ಮಾಯವಾಗುತ್ತೆ.

    ರಚಿತಾ ರಾಮ್ ಪಾತ್ರವೇನು?

    ರಚಿತಾ ರಾಮ್ ಪಾತ್ರವೇನು?

    ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಂದಲೇ '100' ಸಿನಿಮಾದ ಕಥೆ ಸಾಗುತ್ತೆ. ಅಷ್ಟಕ್ಕೂ ಈ ಸೈಬರ್ ಕ್ರೈಂ ಸ್ಟೋರಿಗೆ ರಮೇಶ್ ಅರವಿಂದ್ '100' ಅಂತ ಟೈಟಲ್ ಯಾಕಿಟ್ಟರು ಅನ್ನೋದೇ ವಿಶೇಷ. ಎಲ್ಲರಿಗೂ '100' ಎಮರ್ಜನ್ಸಿ ವೇಳೆ ಪೊಲೀಸರಿಗೆ ಕರೆ ಮಾಡುವ ಸಂಖ್ಯೆ ಅನಿಸಬಹುದು. ಆದರೆ ಸಿನಿಮಾ ನೋಡಿದಾಗ, ಬೇರೊಂದು ಕಾರಣಕ್ಕೆ ಈ ಟೈಟಲ್ ಇಟ್ಟಿದ್ದಾರೆ ಅನ್ನೋದು ಗಮನಕ್ಕೆ ಬರುತ್ತೆ. ಇನ್ನು ಫೇಸ್‌ಬುಕ್‌ಗೆ ಅಡಿಕ್ಟ್ ಆಗಿರುವ ರಚಿತಾ ರಾಮ್ ಮನೆಯ ಇಂಟಿಯರ್ ಡಿಸೈನ್‌ ಮಾಡುವುದಕ್ಕೆ ಸಲಹೆ ಕೇಳುತ್ತಾಳೆ. ಅಲ್ಲಿಂದ ಫೇಸ್‌ಬುಕ್ ಫ್ರೆಂಡ್ ಆಗುವ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಯುತ್ತೆ. ಆತನೇ ಈಕೆಯ ಬಾಳಲ್ಲಿ ವಿಲನ್ ಆದಾಗ, ರಮೇಶ್ ಅರವಿಂದ್ ತನ್ನ ತಂಗಿಯನ್ನು ಬಚಾವ್ ಮಾಡಲು ಏನೆಲ್ಲಾ ಹರಸಾಹಸ ಮಾಡುತ್ತಾರೆ ಅನ್ನುವುದು ಥ್ರಿಲ್ಲಿಂಗ್ ಆಗಿದೆ.

    '100' ಖಳನಾಯಕ ಸೂಪರ್

    '100' ಖಳನಾಯಕ ಸೂಪರ್

    ವಿಶ್ವಕರ್ಣ ಅನ್ನುವ ಹೊಸ ಪ್ರತಿಭೆಯನ್ನು ರಮೇಶ್ ಅರವಿಂದ್ ಈ ಸಿನಿಮಾ ಮೂಲಕ ಪರಿಚಯಿಸಿದ್ದಾರೆ. ಪೈಲೆಟ್ ಆಗಿದ್ದ ವ್ಯಕ್ತಿ ಸಿನಿಮಾ ಗೀಳು ಬೆಳೆಸಿಕೊಂಡು ಅಭಿನಯ ಕಲಿತು ಸಿನಿಮಾದಲ್ಲಿ ನಟಿಸಿದ್ದಾರೆ. '100' ಸಿನಿಮಾದ ಮೇನ್ ವಿಲನ್ ಇವರೇ.. ಫೇಸ್‌ಬುಕ್‌ನಲ್ಲಿ ಚಾಟ್ ಮಾಡುವುದು, ಹ್ಯಾಕಿಂಗ್ ಇವೇ ಇವನ ವೃತ್ತಿ. ಕ್ಲೌಸ್ಟೋಪೋಬಿಯಾ ಅನ್ನುವ ಖಾಯಿಲೆಯಿಂದ ಬಳಲುತ್ತಿರುತ್ತಾನೆ. ಈತನ ಬಲೆಗೆ ಬೀಳುವ ರಚಿತಾ ರಾಮ್‌ ಅನ್ನು ಈ ಕಾಮುಖನಿಂದ ಸೇವ್ ಮಾಡುವುದು ಸಿನಿಮಾ. ಇಲ್ಲಿ ಗಮನ ಸೆಳೆಯುವುದು ಖಳನಾಯಕನಿಗೆ ಧ್ವನಿ ನೀಡಿರುವ ವಿನಾಯಕ್ ಜೋಷಿ.

    ಬೇಗ ಮುಗಿದು ಹೋಗುತ್ತೆ

    ಬೇಗ ಮುಗಿದು ಹೋಗುತ್ತೆ

    '100' ಹಾಲಿವುಡ್ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಸಿನಿಮಾ. ಹೀಗಾಗಿ ಕಥೆ ಇನ್ನೇನು ಆರಂಭ ಆಗಿದೆ ಅನ್ನುವಾಗಲೇ ಇಂಟರ್‌ವಲ್ ಬಂದು ಬಿಡುತ್ತೆ. ಎರಡು ಗಂಟೆಯೊಳಗೆ ಇಡೀ ಸಿನಿಮಾ ಮುಗಿದು ಹೋಗುತ್ತೆ. ಎಡಿಟಿಂಗ್ ಚುಟುಕಾಗಿದೆ. ರವಿಬಸ್ರೂರ್ ಹಿನ್ನೆಲೆ ಸಂಗೀತ ಸಿನಿಮಾಗೆ ತಕ್ಕಂತೆ ಇದೆ. ಪ್ರಕಾಶ್ ಬೆಳವಾಡಿ, ಶೋಭ್ ರಾಜ್ ಪಾತ್ರಗಳು ಅಲ್ಲಲ್ಲಿ ಬಂದು ಹೋಗುತ್ತವೆ. ಅವರಿಗೆ ಇನ್ನೂ ಹೆಚ್ಚು ಅವಕಾಶ ನೀಡಬೇಕಿತ್ತು ಅಂತ ಅನಿಸದೆ ಇರುವುದಿಲ್ಲ. ರಚಿತಾ ರಾಮ್ ಪಾತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತೋರಿಸಿದ್ದರೆ. ಸಿನಿಮಾದ ಗತಿ ಮತ್ತಷ್ಟು ಹೆಚ್ಚಾಗುತ್ತಿತ್ತು. ಒಟ್ನಲ್ಲಿ ಒಮ್ಮೆ ಫ್ಯಾಮಿಲಿ ಜೊತೆ ಕೂತು '100' ಸಿನಿಮಾವನ್ನು ನೋಡಬಹುದು.

    English summary
    100 movie is directed by Ramesh Aravind and will feature Ramesh Aravind, Rachita Ram as lead characters. Check out 100 Kannada Movie Review and Rating.
    Friday, November 19, 2021, 17:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X