For Quick Alerts
  ALLOW NOTIFICATIONS  
  For Daily Alerts

  'ರತ್ನನ್ ಪ್ರಪಂಚ' movie review: ರತ್ನನ ಭಾವುಕ ಪ್ರಪಂಚದಲ್ಲೊಂದು ಸುಂದರ ಪಯಣ

  |

  'ರತ್ನನ್ ಪ್ರಪಂಚ' ಸಿನಿಮಾ ಮೂಲಕ ನಿರ್ದೇಶಕ ರೋಹಿತ್ ಪದಕಿ ವೀಕ್ಷಕರನ್ನು ಒಂದೊಳ್ಳೆ ಭಾವುಕ ಜರ್ನಿಗೆ ಕರೆದುಕೊಂಡು ಹೋಗಿ ನಗಿಸಿ, ಅಳಿಸಿ, ಭಾವುಕಗೊಳಿಸಿ, ಅಂತಿಮವಾಗಿ ಹೃದಯ ಭಾರಗೊಳಿಸಿ ಮನಸ್ಸಿನ ಮೇಲೆ ಅಚ್ಚೊತ್ತಿದ್ದಾರೆ. ಸಿನಿಮಾ ಮುಗಿದ ಮೇಲೆ ಅಡಿಗರ 'ಇರುವುದೆಲ್ಲವ ಬಿಟ್ಟು ಇಲ್ಲದುದರೆಡೆಗೆ ತುಡಿವುದು ಜೀವನ' ಸಾಲುಗಳು ಪದೇ ಪದೇ ನೆನಪಾಗುತ್ತವೆ.

  ಡಾಲಿ ಧನಂಜಯ್ ಸೇರಿ ಹಲವು ಪ್ರಮುಖ ನಟ-ನಟಿಯರು ನಟಿಸಿರುವ 'ರತ್ನನ್ ಪ್ರಪಂಚ' ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದದ್ದು, ಕನ್ನಡದಲ್ಲಿ 'ಕಂಟೆಂಟ್ ಓರಿಯಂಟೆಡ್' ಸಿನಿಮಾಗಳು ಬರುತ್ತಿಲ್ಲ ಎಂದು ದೂರುವವರಿಗೆ ಉತ್ತರದಂತಿದೆ ಈ ಸಿನಿಮಾ.

  ಗಾಂಧಿನಗರದ ಎಲ್ಲ ಕಮರ್ಷಿಯಲ್ ಸೂತ್ರಗಳಿಗೆ ಬೆನ್ನು ತಿರುಗಿಸಿರುವ ನಿರ್ದೇಶಕ ರೋಹಿತ್ ಪದಕಿ, ಸ್ವಚ್ಛ ಕತೆಯೊಂದನ್ನು ಇಟ್ಟುಕೊಂಡು ಅದರ ಸುತ್ತಲೂ ಪಾತ್ರ ಪೋಷಣೆ ಮಾಡುತ್ತಾ ಅಂತಿಮವಾಗಿ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗುವಂಥಹಾ ಸಿನಿಮಾ ಒಂದನ್ನು 'ರತ್ನನ್ ಪ್ರಪಂಚ' ಮೂಲಕ ಕಟ್ಟಿಕೊಟ್ಟಿದ್ದಾರೆ.

  ತನ್ನ ತಾಯಿಯ ಅತಿ ಪ್ರೀತಿ, ಒರಟುತನ, ಪೆದ್ದುತನ ಎಲ್ಲಕ್ಕೂ ಸಿಡಿಮಿಡಿಗೊಳ್ಳುವ ಮಿಡ್ಲ್‌ಕ್ಲಾಸ್ ಯುವಕ ರತ್ನಾಕರ. ತಾಯಿಯಿಂದ ಬಿಡಿಸಿಕೊಂಡು ದೂರ ಹೋಗುವ ಬಯಕೆ ಅವನದ್ದು, ಆದರೆ ಅಚಾನಕ್ಕಾಗಿ ಒಂದು ದಿನ ತನ್ನ ತಾಯಿ ತನ್ನವಳಲ್ಲವೆಂದು ತನಗೊಬ್ಬ ಬೇರೆ ತಾಯಿ ಇದ್ದಾಳೆಂದು ಅರಿವಾಗುತ್ತದೆ. ಆಕೆಯನ್ನು ಹುಡುಕಲು ಹೊರಡುತ್ತಾನೆ ರತ್ನಾಕಾರ. ಆ ಜರ್ನಿಯಲ್ಲಿ ಆತ ಕಂಡುಕೊಳ್ಳುವ ಸತ್ಯಗಳು, ಜರ್ನಿಯಲ್ಲಿ ಎದುರಿಸುವ ಸಮಸ್ಯೆಗಳು, ಸುಖಗಳು, ಭೇಟಿಯಾಗುವ ಜನ, ಎದುರಿಸುವ ಭಾವ ತೀವ್ರತೆಯ ಸನ್ನಿವೇಶಗಳು ಇವೆಲ್ಲದರ ಅನುಭವ ಪಡೆಯಬೇಕೆಂದರೆ ನೀವು ಸಿನಿಮಾ ನೋಡಬೇಕು.

  Rating:
  3.5/5

  'ಗಾಂಧಿನಗರ ಮಾದರಿ ಸಿನಿಮಾ' ಇದಲ್ಲ

  'ಗಾಂಧಿನಗರ ಮಾದರಿ ಸಿನಿಮಾ' ಇದಲ್ಲ

  ರೋಹಿತ್ ಪದಕಿ, ತಾವೊಬ್ಬ ಶಕ್ತ ನಿರ್ದೇಶಕ ಎಂಬುದನ್ನು ಈ ಸಿನಿಮಾ ಮೂಲಕ ಖಾತ್ರಿಪಡಿಸಿದ್ದಾರೆ. ಕತೆಯ ಶಕ್ತಿಯನ್ನಷ್ಟೆ ನಂಬಿಕೊಂಡು ರೋಹಿತ್ ಸಿನಿಮಾ ಮಾಡಿದ್ದಾರೆ. ಸಿನಿಮಾದಲ್ಲಿ 'ಗಾಂಧಿನಗರ ಮಾದರಿ' ಸಿನಿಮಾದ ಯಾವ ಅಂಶವೂ ಕಾಣುವುದಿಲ್ಲ. ಸಿನಿಮಾದ ನಾಯಕ ರತ್ನಾಕರ ಫೈಟ್ ಮಾಡುವುದಿಲ್ಲ, ಡ್ಯಾನ್ಸ್ ಮಾಡುವುದಿಲ್ಲ, ಉದ್ದುದ್ದ ಡೈಲಾಗ್ ಹೊಡೆಯುವುದಿಲ್ಲ, ಸಿನಿಮಾದಲ್ಲಿ ಸ್ಪಷ್ಟ ಪ್ರೇಮಕತೆಯೂ ಇಲ್ಲ. ಒಟ್ಟಾರೆ ಕಮರ್ಷಿಯಲ್ ಸಿನಿಮಾದ ನಾಯಕರ ಯಾವ ಗುಣವೂ ರತ್ನಾಕರನ ಪಾತ್ರಕ್ಕೆ 'ರತ್ನನ್ ಪ್ರಪಂಚ'ದಲ್ಲಿ ಇಲ್ಲ. ಈ ಮಾಸ್ ಸಿನಿಮಾಗಳ ಕಾಲಘಟ್ಟದಲ್ಲಿ ಡಾಲಿ ಧನಂಜಯ್ ಅಂತಹ ಮಾಸ್ ಇಮೇಜಿನ ನಟ ಈ ಸಿನಿಮಾ ಒಪ್ಪಿ, ಅಪ್ಪಿಕೊಂಡಿದ್ದಕ್ಕೆ ಅವರಿಗೆ ಅಭಿನಂದನೆ ಹೇಳಲೇ ಬೇಕು.

  ಅದ್ಭುತವಾಗಿ ನಟಿಸಿದ್ದಾರೆ ನಟಿ ಉಮಾಶ್ರೀ

  ಅದ್ಭುತವಾಗಿ ನಟಿಸಿದ್ದಾರೆ ನಟಿ ಉಮಾಶ್ರೀ

  ಸಿನಿಮಾದಲ್ಲಿ ಬರುವ ಪಾತ್ರಗಳು ಒಂದಕ್ಕಿಂತಲೂ ಒಂದು ಭಿನ್ನ ಮತ್ತು ಮಹತ್ವಪೂರ್ಣ. ಉಮಾಶ್ರೀ ಪಾತ್ರವಂತೂ ಎಲ್ಲಕ್ಕೂ ಕಳಶವಿಟ್ಟಂತಿದೆ. ಆರಂಭದ ಕೆಲವು ದೃಶ್ಯಗಳಲ್ಲಿಯಷ್ಟೆ ಉಮಾಶ್ರೀ ಕಾಣಿಸಿಕೊಳ್ಳುತ್ತಾರೆ. ಆದರೆ, ಅವರ ಪಾತ್ರದ ರೆಫರೆನ್ಸು ಸಿನಿಮಾ ಉದ್ದಕ್ಕೂ ಇದೆ. ಇರಿಟೇಟ್ ಮಾಡುವ ಅಮ್ಮನಾಗಿ ಆರಂಭದ ಕೆಲ ದೃಶ್ಯಗಳಲ್ಲಿ ಹ್ಯಾವರಿಕೆ ಹುಟ್ಟಿಸುವ ಉಮಾಶ್ರೀ ಆ ನಂತರ ಎದೆಗೆ ಅಪ್ಪಿಕೊಳ್ಳುವಂತೆ ಮಾಡಿಬಿಡುತ್ತಾರೆ. ಸಿನಿಮಾದ ಕೊನೆಯವರೆಗೆ ಉಮಾಶ್ರೀಯ ಪಾತ್ರದ ಗುಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಆದರೆ ಕತೆಯ ಮೂಲಕ, ಸನ್ನಿವೇಶಗಳ ಮೂಲಕ ಪ್ರೇಕ್ಷಕನಲ್ಲಿಯೇ ಭಾವ ಬದಲಾವಣೆ ತಂದು ಆರಂಭದಲ್ಲಿ ಮುಜುಗರ ಮೂಡಿಸಿದ್ದ ಉಮಾಶ್ರೀಯ ಪಾತ್ರದ ಮೇಲೆ ಪ್ರೇಮ ಉಕ್ಕುವಂತೆ ನಿರ್ದೇಶಕ ಮಾಡಿದ್ದಾರೆ.

  ಎಲ್ಲರ ಪಾತ್ರಕ್ಕೂ ಪ್ರಾಮುಖ್ಯತೆ, ಎಲ್ಲರ ನಟನೆಯೂ ಅದ್ಭುತ

  ಎಲ್ಲರ ಪಾತ್ರಕ್ಕೂ ಪ್ರಾಮುಖ್ಯತೆ, ಎಲ್ಲರ ನಟನೆಯೂ ಅದ್ಭುತ

  ಸಿನಿಮಾದಲ್ಲಿ ಬರುವ ಶ್ರುತಿ, ಅನು ಪ್ರಭಾಕರ್, ರವಿಶಂಕರ್, ಪ್ರಮೋದ್, ಅಚ್ಯುತ್ ಕುಮಾರ್, ರಾಜೇಶ್ ನಟರಂಗ, ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ ಎಲ್ಲರ ಪಾತ್ರಗಳಿಗೂ ಅದರದ್ದೇ ಆದ ತೂಕವಿದೆ. ಹಾಗೂ ಮೇಲಿನ ಎಲ್ಲರೂ ತಮ್ಮ-ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ. ನಾಯಕಿ ರೆಬಾ ಮೊನಿಕಾ ಜಾನ್‌ ಪಾತ್ರಕ್ಕೂ ಪ್ರಾಧಾನ್ಯತೆ ಇದೆ ಹಾಗೂ ಅದನ್ನು ಸರಳವಾಗಿ, ಸುಂದರವಾಗಿ ನಿಭಾಯಿಸಿದ್ದಾರೆ ಈ ನಟಿ. ಅವರಿಂದ ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು, ಪಾತ್ರಗಳನ್ನು ನಿರೀಕ್ಷಿಸಬಹುದು. ಸಿನಿಮಾದ ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳುವ ಪ್ರಮೋದ್ ನಟನೆ ಚೇತೋಹಾರಿಯಾಗಿದೆ. ಕಾಮಿಕ್ ರಿಲೀಫ್ ನೀಡುವ ಜೊತೆಗೆ ಭಾವುಕ ಸನ್ನಿವೇಶಗಳಲ್ಲಿಯೂ ಬಹಳ ಚೆನ್ನಾಗಿ ನಟಿಸಿದ್ದಾರೆ. ಎರಡನೇ ಭಾಗದ ಹಲವು ದೃಶ್ಯಗಳಲ್ಲಿ ಪ್ರಮೋದ್ ಪಾತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.

  ಡಾಲಿ ಧನಂಜಯ್ ಮೆಚ್ಚುಗೆಗೆ ಅರ್ಹರು

  ಡಾಲಿ ಧನಂಜಯ್ ಮೆಚ್ಚುಗೆಗೆ ಅರ್ಹರು

  ಕಮರ್ಶಿಯಲ್ ನಾಯಕನ ಎಲಿಮೆಂಟ್‌ಗಳು ತುಸುವೂ ಇಲ್ಲದೇ ಇದ್ದರೂ ಕತೆಯ ಕಾರಣಕ್ಕೆ ಸಿನಿಮಾವನ್ನು ಒಪ್ಪಿಕೊಂಡಿರುವ ಡಾಲಿ ಧನಂಜಯ್ ಅದ್ಭುತವಾಗಿ ನಟಿಸಿದ್ದಾರೆ. 'ಟಗರು'ನಲ್ಲಿ ಡಾಲಿಯಾಗಿ ಕ್ರೂರತೆ ಮೆರೆಸಿದ್ದ ಧನಂಜಯ್, 'ರತ್ನನ್ ಪ್ರಪಂಚ'ದಲ್ಲಿ ತಾಯಿ ಪ್ರೀತಿಗೆ ಅಲೆಯುವ ಅಲೆಮಾರಿಯಾಗಿ ಕಣ್ಣಂಚಲಿ ನೀರು ತರಿಸಿದ್ದಾರೆ. ಡಾಲಿ ಧನಂಜಯ್ ಒಬ್ಬ ಪರಿಪೂರ್ಣ ನಟನಾಗುವತ್ತ ಸಾಗುತ್ತಿದ್ದಾರೆ ಎಂಬುದು ಅವರ ನಟನೆ ಹಾಗೂ ಸಿನಿಮಾಗಳ ಆಯ್ಕೆಯಿಂದ ವೇದ್ಯವಾಗುತ್ತದೆ.

  ಸಂಗೀತ ಸಿನಿಮಾದ ಧನಾತ್ಮಕ ಅಂಶ

  ಸಂಗೀತ ಸಿನಿಮಾದ ಧನಾತ್ಮಕ ಅಂಶ

  ಸಿನಿಮಾದ ಸಂಗೀತ ಬಹಳ ಚೆನ್ನಾಗಿದೆ. ಇರುವುದು ಕೆಲವೇ ಹಾಡುಗಳಾದರೂ ನೆನಪಿನಲ್ಲಿ ಉಳಿಯುತ್ತವೆ. ಭಾವುಕ ರೀತಿಯಲ್ಲಿ ತಾಯಿಯ ಉಲ್ಲೇಖ ತೆರೆಯ ಮೇಲೆ ಬಂದಾಗೆಲ್ಲ ಹಿನ್ನೆಲೆಯ ಸಂಗೀತ ಆರ್ದ್ರಗೊಳಿಸುತ್ತದೆ. ಅದರಲ್ಲಿಯೂ ಕೊನೆಯ ದೃಶ್ಯದಲ್ಲಿ ರತ್ನಾಕರ ತನ್ನ ತಾಯಿಯ ಬಳಿ ಹೋಗುವ ಸನ್ನಿವೇಶದಲ್ಲಿ ಬರುವ ಹಿನ್ನೆಲೆ ಸಂಗೀತ ಇಡೀಯ ದೃಶ್ಯದ ಭಾವ ತೀರ್ವತೆಯನ್ನು ದುಪ್ಪಟ್ಟುಗೊಳಿಸಿದೆ. ತಾವೊಬ್ಬ ಅತ್ಯುತ್ತಮ ಸಂಗೀತ ನಿರ್ದೇಶಕ ಎಂಬುದನ್ನು ಅಜನೀಶ್ ಲೋಕನಾಥ್ ಈ ಸಿನಿಮಾದ ಮೂಲಕ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

  ಕುಟುಂಬ ಸಮೇತ ನೋಡಬೇಕಾದ ಸಿನಿಮಾ

  ಕುಟುಂಬ ಸಮೇತ ನೋಡಬೇಕಾದ ಸಿನಿಮಾ

  ಸಿನಿಮಾದ ಕ್ಯಾಮೆರಾ ಕೆಲಸವೂ ಚೆನ್ನಾಗಿದೆ. ಯಾವುದೇ ದೊಡ್ಡ ಸೆಟ್‌ಗಳಿಲ್ಲದೆ ಮಧ್ಯಮ ವರ್ಗದವರ ಕತೆಯನ್ನು ಸರಳವಾಗಿಯೇ ಆದರೆ ಸುಂದರವಾಗಿಯೂ ತೋರಿಸಿದ್ದಾರೆ. ಸುಂದರ ಕಾಶ್ಮೀರವನ್ನು ಇನ್ನಷ್ಟು ಸುಂದರವಾಗಿ ತೋರಿಸುವ ಅವಕಾಶ ಇತ್ತಾದರೂ ಯಾಕೋ ನಿರ್ದೇಶಕರು ಆ ಬಗ್ಗೆ ಮನಸ್ಸು ಮಾಡಿಲ್ಲ. 'ರತ್ನನ್ ಪ್ರಪಂಚ' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದ್ದು, ಕುಟುಂಬ ಸಮೇತರಾಗಿ ನೋಡಬೇಕಾದ ಸಿನಿಮಾ.

  English summary
  Dali Dhananjay's Rathnan Prapancha Kannada movie review. The Movie is a must watch for Kannada audiance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X