»   » ನಾ ನೋಡಿದ ರಣವಿಕ್ರಮ ಚಿತ್ರ: ಏನೋ ಮಿಸ್ಸಿಂಗ್

ನಾ ನೋಡಿದ ರಣವಿಕ್ರಮ ಚಿತ್ರ: ಏನೋ ಮಿಸ್ಸಿಂಗ್

By: ಜಯಂತ್ ಪೂಜಾರಿ
Subscribe to Filmibeat Kannada

ಕ್ಲಾಸಿರಲಿ, ಮಾಸ್ ಇರಲಿ ಎಲ್ಲಾ ಕ್ಲಾಸಿನ ಪ್ರೇಕ್ಷಕರನ್ನು ಜೊತೆಗೆ ಮಕ್ಕಳನ್ನೂ ಚಿತ್ರಮಂದಿರದತ್ತ ಸೆಳೆಯುವ ತಾಕತ್ ಇರುವುದು ಪುನೀತ್ ರಾಜಕುಮಾರ್ ಚಿತ್ರಕ್ಕೆ ಎನ್ನುವುದು ಬಹಳಷ್ಟು ಬಾರಿ ಸಾಬೀತಾಗಿದೆ.

ಅದಕ್ಕೆ ಕೊಡಬಹುದಾದ ಲೇಟೆಸ್ಟ್ ಉದಾಹರಣೆ, ರಣವಿಕ್ರಮ ಚಿತ್ರ. ಬೇಸಿಗೆ ರಜೆಯ ಮಜಾವನ್ನು ಸವಿಯಲು ಪೋಷಕರು, ಮಕ್ಕಳು ಕುಟುಂಬದ ಜೊತೆ ರಣವಿಕ್ರಮ ಚಿತ್ರ ವೀಕ್ಷಿಸಲು ಬರುತ್ತಿದ್ದಾರೆ.

ಪುನೀತ್ ಅಭಿಮಾನಿಯಾಗಿ ಅಭಿಮಾನದಿಂದ ಚಿತ್ರ ನಿರ್ದೇಶಿಸಿದ್ದೇನೆಂದು ಹೇಳಿರುವ ಪವನ್ ಒಡೆಯರ್, ಪವರ್ ಸ್ಟಾರ್ ಅಭಿಮಾನಿಗಳಿಗೆ 'ಔಟ್ ಎಂಡ್ ಔಟ್ ಮಾಸ್' ಚಿತ್ರ ಉಣಬಡಿಸಿದ್ದಾರೆ ಎನ್ನುವುದಕ್ಕೆ ದೂಸ್ರಾ ಮಾತೇ ಬೇಡ. (ರಣವಿಕ್ರಮ ಚಿತ್ರವಿಮರ್ಶೆ)

ಆದರೆ, ಒಟ್ಟಾರೆ ಚಿತ್ರ ನೋಡಿ ಹೊರಬಂದ ಪ್ರೇಕ್ಷಕನಿಗೆ ಚಿತ್ರದಲ್ಲಿ ಏನೋ ಮಿಸ್ ಆಗಿದೆ ಎಂದನಿಸದೆ ಇರದು. ಅದು ನಿರೂಪಣೆಯ ವಿಚಾರದಲ್ಲಾಗಿರಬಹುದು, ವಾಸ್ತವಕ್ಕೆ ದೂರವೆನಿಸುವ ಕೆಲವೊಂದು ದೃಶ್ಯಗಳಿರಬಹುದು, ಸಂಗೀತದ ವಿಚಾರದಲ್ಲಾಗಿರಬಹುದು.

ಅಂದ ಹಾಗೆ, ಬೆಂಗಳೂರಿನ ಈಶ್ವರಿ ಚಿತ್ರಮಂದಿರದಲ್ಲಿ ಚಿತ್ರ ಆರಂಭಕ್ಕೆ ಮುನ್ನ ವಜ್ರಕಾಯ ಮತ್ತು ಇಂಟರ್ವಲ್ ನಲ್ಲಿ ಬಾಕ್ಸರ್ ಚಿತ್ರದ ಟ್ರೈಲರ್ ತೋರಿಸಲಾಗಿತ್ತು.

ಆಧಾರ್ ಕಾರ್ಡಿನ ಜಾಹೀರಾತಿನಲ್ಲಿ ಸುದೀಪ್ ಕಾಣಿಸಿಕೊಂಡಿದ್ದರು ಎನ್ನುವುದು ರಾಜ್ಯದ ಎಲ್ಲಾ ನಾಯಕರ ಅಭಿಮಾನಿ ಬಳಗದ ಗಮನಕ್ಕೆ.

ಚಿತ್ರದಲ್ಲಿ ಮಿಸ್ ಆಗಿರೋದು ಏನು, ಮುಂದೆ ಓದಿ..

ಅದ್ದೂರಿಯಾಗಿ ಮೂಡಿಬಂದ ಚಿತ್ರ

ಜಯಣ್ಣ ಕಂಬೈನ್ಸ್ ಚಿತ್ರ ಎಂದರೆ ಕೇಳಬೇಕಾ. ನಿರ್ದೇಶಕ ಮತ್ತು ಕಥೆ ಕೇಳಿದ್ದನ್ನೆಲ್ಲಾ ಕೊಟ್ಟು ನಿರ್ಮಾಪಕರು ಅದ್ದೂರಿತನ ಮೆರೆದಿದ್ದಾರೆ, ಚಿತ್ರ ಶ್ರೀಮಂತವಾಗಿ ತೆರೆಗೆ ಬಂದಿದೆ. ವಿಕ್ರಮತೀರ್ಥ ಊರಿನಲ್ಲಿ ನಡೆಯುವ ಕೆಲವೊಂದು ಘಟನೆಗಳು, ಕ್ಲೈಮ್ಯಾಕ್ಸ್ ಸನ್ನಿವೇಶಗಳಿಗಂತೂ ನಿರ್ಮಾಪಕರು ಆದ್ದೂರಿಯಾಗಿ ದುಡ್ಡು ಸುರಿದಿದ್ದಾರೆ.

ಪುನೀತ್ ಡ್ಯಾನ್ಸ್

ಕನ್ನಡ ಚಿತ್ರರಂಗದ ಅತ್ಯುತ್ತಮ ನೃತ್ಯಪಟು ಪುನೀತ್ ರಾಜಕುಮಾರ್ ಅವರಿಂದ ಚೆನ್ನಾಗಿ ಕುಣಿಸುವ ಸದಾವಕಾಶವನ್ನು ಚಿತ್ರದಲ್ಲಿ ನಿರ್ದೇಶಕರು ಮಿಸ್ ಮಾಡಿಕೊಂಡಿದ್ದಾರೆ. ಹಿಂದಿನ 'ಪವರ್ ಸ್ಟಾರ್' ಚಿತ್ರದಲ್ಲಿ ಪುನೀತ್ ಡಾನ್ಸ್ ನಲ್ಲೇ ಚಿಂದಿ ಮಾಡಿದ್ದರು. ಪುನೀತ್ ಚಿತ್ರದ ಪ್ರಮುಖ ಪ್ಲಸ್ ಪಾಯಿಂಟ್ ಅವರ ಡಾನ್ಸ್, ಚಿತ್ರದಲ್ಲಿ ಅದು ಮಿಸ್ ಆಗಿದೆ.

ಹ್ಯಾಟ್ಸಾಫ್ ಟು ರವಿವರ್ಮ

ಇಡೀ ಚಿತ್ರದ ಪ್ರಮುಖ ಹೈಲೆಟ್ಸ್ ಸಾಹಸ ಸನ್ನಿವೇಶಗಳು. ಸಾಹಸ ನಿರ್ದೇಶಕ ರವಿವರ್ಮಾಗೆ ಇದಕ್ಕೆ ಸ್ಪೆಷಲ್ ಕ್ರೆಡಿಟ್ ಸಲ್ಲಲೇಬೇಕು. ಅದರಲ್ಲೂ ಕ್ಲೈಮ್ಯಾಕ್ಸ್ ಚಿತ್ರದಲ್ಲಿ ಚಲಿಸುವ ರೈಲಿನ ಮೇಲೆ ನಡೆಯುವ ಮೈನವಿರೇಳಿಸುವ ಫೈಟ್ ಮೈಜುಮ್ ಅನಿಸುತ್ತದೆ.

ಪುನೀತ್ ನಟನೆ

ಇಡೀ ಚಿತ್ರದ ಪ್ರಮುಖ ಅಂಶವೆಂದರೆ ಪುನೀತ್ ಅವರ ಪವರ್ ಫುಲ್ ನಟನೆ. ಅದರಲ್ಲೂ ಪೊಲೀಸ್ ಪಾತ್ರದಲ್ಲಿ, ಸಾಹಸ ಸನ್ನಿವೇಶಗಳಲ್ಲಿ, ತನ್ನ ಅಜ್ಜಿ ಜೊತೆಗಿನ ಭಾವುಕ ಸನ್ನಿವೇಶಗಳಲ್ಲಿ ಅಪ್ಪು ನಟನೆ ಬಿಂದಾಸ್. ಚಿತ್ರದಲ್ಲಿ ಹಾಸ್ಯ ಸನ್ನಿವೇಶಗಳಿಗೆ ಹೆಚ್ಚಿನ ಪ್ರಾಮುಖ್ಯತೆಯಿಲ್ಲದಿರುವುದು ಒಂದು ಮೈನಸ್ ಪಾಯಿಂಟ್. ಇರುವ ಕೆಲವೇ ಹಾಸ್ಯ ಸನ್ನಿವೇಶಗಳಲ್ಲಿ ಪುನೀತ್ ಕಾಮಿಡಿ ಟೈಮಿಂಗ್ಸ್ ಸೂಪರ್ಬ್.

ವಾಸ್ತವತೆಗೆ ದೂರವೆನಿಸುವ ಸನ್ನಿವೇಶಗಳು

ರೆಹಮಾನ್ ಜೊತೆ ಚಕ್ರವ್ಯೂಹ ಟಿವಿ ಕಾರ್ಯಕ್ರಮದಲ್ಲಿ ಸಿಎಂ ಪಾತ್ರಧಾರಿ ಮುಖ್ಯಮಂತ್ರಿ ಚಂದ್ರು ಅರ್ಧದಲ್ಲೇ ಎದ್ದು ಹೋಗುವುದು, ಆಕಾಶದೆತ್ತರದಿಂದ ಹಾರುವ ಬಸ್, ಮಧ್ಯರಾತ್ರಿ ಗೃಹ ಸಚಿವರ ಖಾಸಗಿ ಕೊಠಡಿಯಲ್ಲಿ ನಾಯಕ ಕಾಣಿಸಿಕೊಳ್ಳುವುದು ಹೀಗೆ... ಕೆಲವು ವಾಸ್ತವತೆಗೆ ದೂರವಿರುವ ಸನ್ನಿವೇಶಗಳು ಚಿತ್ರದಲ್ಲಿವೆ.

ವಿಕ್ರಮತೀರ್ಥ ವಿವಾದ

ವಿಕ್ರಮತೀರ್ಥ ಎನ್ನುವ ಊರು ಭೂಪಟದಲ್ಲಿತ್ತು, ಅದು ಕರ್ನಾಟಕಕ್ಕೆ ಸೇರಿದ್ದು, ಅದರ ಹಿಂದಿರುವ ಬ್ರಿಟಿಷರ ಕಥೆಯನ್ನು ನಿರೂಪಣೆಯಲ್ಲಿ ಪವನ್ ಒಡೆಯರ್ ಇನ್ನಷ್ಟು ಬಿಗಿಯಾಗಿಸಬಹುದಾಗಿತ್ತು. ಯಾಕೆಂದರೆ ಆ ಕಥೆಯೇ ಇಡೀ ಚಿತ್ರದ ಜೀವಾಳ.

ಕೊನೆಯದಾಗಿ ಚಿತ್ರದ ಬಗ್ಗೆ

ಪುನೀತ್ ಅಭಿಮಾನಿಗಳಿಗಾಗಿ ನಿರ್ಮಿಸಲಾಗಿರುವ ಅದ್ದೂರಿ ಚಿತ್ರ. ಕೆಲವೊಂದು ಕಡೆ ನಿರೂಪಣೆಯಲ್ಲಿ ಇನ್ನೂ ಬಿಗಿಯಾಗಿರಬಹುದಿತ್ತು, ಪುನೀತ್ ಡಾನ್ಸ್ ಮಿಸ್ಸಿಂಗ್, ಕಾಮಿಡಿ ಸೀನ್ಸ್, ಏನೋ ಸಂಥಿಂಗ್ ಮಿಸ್ಸಿಂಗ್ ಎಂದನಿಸಿದರೂ ಚಿತ್ರ ನೋಡಲಡ್ಡಿಯಿಲ್ಲ.

English summary
Readers review : Puneeth Rajkumar starer, Pawan Wadeyar directed Rana Vikrama movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada