»   » ಪುನೀತ್ ಅಭಿನಯದ ಪವರ್ ಸ್ಟಾರ್ : ಓದುಗರ ವಿಮರ್ಶೆ

ಪುನೀತ್ ಅಭಿನಯದ ಪವರ್ ಸ್ಟಾರ್ : ಓದುಗರ ವಿಮರ್ಶೆ

By: ರಾಜೇಶ್ ಕಾಮತ್
Subscribe to Filmibeat Kannada
Rating:
3.0/5
ಪವರ್ ಸ್ಟಾರ್ ಚಿತ್ರ ನೋಡಿ ಚಿತ್ರಮಂದಿರದಿಂದ ಹೊರಬರುತ್ತಿದ್ದ ಸುಮಾರು ಎಂಬತ್ತರ ಹರೆಯದ ಪವರ್ ಫುಲ್ ಅಜ್ಜಿ ಹೇಳಿದ್ದು, ' ನಮ್ ಕಾಲದಲ್ಲಿ ಅವ್ರಪ್ಪನ ಚಿತ್ರವನ್ನು ನೋಡ್ತಾ ಇದ್ವಿ, ಈಗ ಮಕ್ಳ ಒತ್ತಾಯದ ಮೇರೆಗೆ ಈ ಚಿತ್ರ ನೋಡೋಕೆ ಬಂದೆ, ಇವ್ನಿಗೂ ನಟನೆಯಲ್ಲಿ ರಾಜಕುಮಾರ್ ಗಿರುವಷ್ಟೇ ಹಿಡಿತವಿದೆ'

ರಿಮೇಕ್ ಚಿತ್ರವೊಂದು ತೆರೆಗೆ ಬಂದಾಗ ಅದನ್ನು ಮೂಲ ಚಿತ್ರಕ್ಕೆ ಹೋಲಿಸುವುದು ಸಾಮಾನ್ಯ. ಪವರ್ ಚಿತ್ರದ ಮೂಲ 'ದೂಕುಡು' ಚಿತ್ರದ ಮೇಕಿಂಗ್ ಭಾರೀ ಪ್ರಶಂಸೆಗೆ ಒಳಗಾಗಿತ್ತು. ಇನ್ನು ಪವರ್ ಚಿತ್ರದ ಮೇಕಿಂಗ್ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದ್ದರೂ, ಪುನೀತ್ ನಟನೆ, ಸ್ಟಂಟ್ ಮತ್ತು ಡ್ಯಾನ್ಸ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರಗಳು ಸುದ್ದಿಯ ಜೊತೆಗೆ ಸದ್ದೂ ಮಾಡುತ್ತಿರುವುದು ಗೊತ್ತಿರುವ ವಿಚಾರ. ಕನ್ನಡ ಚಿತ್ರಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದೆಯೆಂದರೆ ಆ ಚಿತ್ರ ಗೆದ್ದ ಹಾಗೆಯೇ. ಅದು ರಿಮೇಕಾಗಲಿ, ಸ್ವಮೇಕಾಗಲಿ. (ಚಿತ್ರ ವಿಮರ್ಶೆ: ಪವರ್)

ಪವರ್ ಚಿತ್ರದಲ್ಲಿ ಪ್ಲಸ್ ಪಾಯಿಂಟ್ ಜೊತೆ ಮೈನಸ್ ಪಾಯಿಂಟ್ ಗಳಿಗೂ ಕೊರತೆಯಿಲ್ಲ. ಚಿತ್ರಕಥೆ ಮೊದಲಾರ್ಧದಲ್ಲಿ ಕೊಂಚ ಬೋರ್ ಹೊಡೆಸುವುದರ ಜೊತೆಗೆ ಚಿತ್ರದ ಹಾಡುಗಳಲ್ಲಿ ಅಂತಹ ಧಮ್ ಇಲ್ಲದೇ ಇರುವುದು. ಚಿತ್ರ ವೇಗ ಮತ್ತು ಕುತೂಹಲ ಹುಟ್ಟಿಸುವುದೇ ಇಂಟರ್ವಲ್ ನಂತರ.

ಚಿತ್ರದಲ್ಲಿ ಬಿಗ್ ಬಾಸ್ ಬಗ್ಗೆಯೂ ಮಾತು ಹೊರಳಾಡುತ್ತದೆ. ಪುನೀತ್ - ರಂಗಾಯಣ ರಘು - ಸಾಧು ಕೋಕಿಲ ಜೊತೆಗೆ ರಿಯಾಲಿಟಿ ಶೋ ಬಗ್ಗೆ ಮಾತುಕತೆಯ ವೇಳೆ 'ನೀನು ಬಿಗ್ ಬಾಸ್ ನೋಡಿದೆಯಾ, ಇದು ಬಿಗ್ ಬಾಸಿಗೇ ಬಾಸು' ಎನ್ನುವ ಡೈಲಾಗ್ ಬರುತ್ತದೆ. ಇದು ಕಾಲೆಳೆಯುವ ತಂತ್ರವೋ ಅಥವಾ ಚಿತ್ರಕಥೆಗೆ ಪೂರಕವೋ, ಅವರವರ ಅಭಿಮಾನಿಗಳಿಗೆ ಬಿಟ್ಟ ವಿಚಾರ.

ನಾಯಕಿ ಆಟಕ್ಕುಂಟು ಲೆಕ್ಕಕ್ಕಿಲ್ಲ

ಚಿತ್ರದ ನಾಯಕಿ ಮತ್ತು ತೆಲುಗು, ತಮಿಳಿನಲ್ಲಿ ಅಷ್ಟೇನೂ ಚಾಲ್ತಿಯಲ್ಲಿ ಇಲ್ಲದ ತ್ರಿಶಾ ಕೃಷ್ಣನ್ ನಟನೆ ಓಕೆ. ಚಿತ್ರದಲ್ಲಿ ನಾಯಕಿಯ ಪಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ. ಕೆಲವೊಂದು ಸನ್ನಿವೇಶ ಮತ್ತು ಹಾಡಿಗೆ ಮಾತ್ರ ನಾಯಕಿ ಸೀಮಿತ. ಚಿಕ್ಕ ಪಾತ್ರವಾದರೂ ಚೊಕ್ಕವಾಗಿ ಮಾಡಿದ್ದಾರೆ ತ್ರಿಶಾ, ಆದರೆ ನೆನಪಿನಲ್ಲಿ ಉಳಿಯುವಂತಹ ನಟನೆ ಎಂದರೆ ಅತಿಶಯೋಕ್ತಿಯಾಗದೇ ಇರದು.

ರಂಗಾಯಣ ರಘು

ಚಿತ್ರದಲ್ಲಿ ನಾಯಕನ ಹಾಗೆಯೇ ಆವರಿಸಿಕೊಂಡಿರುವ ಪಾತ್ರವೆಂದರೆ ರಂಗಾಯಣ ರಘು ಅವರದ್ದು. ಕೆಲವೊಮ್ಮೆ ಅವರು ಹಾಸ್ಯದ ಹೊನಲು ಹರಿಸಿದರೆ, ಕೆಲವೊಂದು ಕಡೆ ಅವರದ್ದು ಓವರ್ ಆಕ್ಟಿಂಗ್ ಅನಿಸದೇ ಇರದು.

ಸಾಧು ಕೋಕಿಲ

ಇತ್ತೀಚಿನ ಹೆಚ್ಚಿನ ಕನ್ನಡ ಚಿತ್ರಗಳಿಗೆ ಕಂಪಲ್ಸರಿ ಸದಸ್ಯನಂತಾಗಿರುವ ಸಾಧು ಕೋಕಿಲ ಅವರದ್ದು ಚಿತ್ರದಲ್ಲಿ ಪ್ರಬುದ್ದ ಅಭಿನಯ. ತನ್ನ ಕಾಮಿಡಿ ಟೈಮಿಂಗ್ಸ್ ನಿಂದ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುತ್ತಾರೆ, ನಟನೆಯಿಂದ ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ.

ಸ್ಟಂಟ್ ಸನ್ನಿವೇಶಗಳು

ಚಿತ್ರದ ಪ್ರಮುಖ ಹೈಲೆಟ್ಸ್ ರವಿವರ್ಮ ಅವರ ಸಾಹಸ ಸನ್ನಿವೇಶಗಳು. ಚಿತ್ರದ ಒಂದೊಂದು ಸಾಹಸ ದೃಶ್ಯಗಳೂ ಮೈನವೇರಿಳಿಸುವಂತಿದೆ. ಕ್ಲೈಮ್ಯಾಕ್ಸ್ ನಲ್ಲಿ ಬರುವ ಸ್ಟಂಟ್ ಸೀನುಗಳು ರೋಚಕವಾಗಿ ಮೂಡಿಬಂದಿದೆ.

ಚಿತ್ರದ ಪ್ರಮುಖ ಅಂಶ - ಡ್ಯಾನ್ಸ್

ಚಿತ್ರದಲ್ಲಿ ಒಟ್ಟಾರೆ ಭಾರೀ ಪ್ರಶಂಸೆಗೆ ಒಳಗಾಗುವುದು ಪುನೀತ್ ಡ್ಯಾನ್ಸ್. ಧಮ್ ಪವರೇ, ಮೆಹಬೂಬ ಮೆಹಬೂಬ, ಜಗತ್ತೇ ನಮದು ಹಾಡಿನಲ್ಲಿ ಪುನೀತ್ ಹಾಕಿರುವ ವಿಶಿಷ್ಟ ಸ್ಟೆಪ್ ಇಷ್ಟವಾಗುತ್ತದೆ. ಕೊರಿಯೋಗ್ರಾಫರ್ ಹರ್ಷ ಮತ್ತು ಗಣೇಶ್ ಅಭಿನಂದನೆಗೆ ಅರ್ಹರು.

ಫೋಟೋಗ್ರಾಫಿ ಮತ್ತು ಸಂಭಾಷಣೆ

ಸ್ಪೈನ್ ಮತ್ತು ಮುಂಬೈನ ಸುಂದರ ತಾಣಗಳನ್ನು ಛಾಯಾಗ್ರಾಹಕ ಕೃಷ್ಣಕುಮಾರ್ ಇನ್ನೂ ಸುಂದರವಾಗಿಸಬಹುದಾಗಿತ್ತು. ಎಂ ಎಸ್ ರಮೇಶ್ ಅವರ ಸಂಭಾಷಣೆ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಗಳಲ್ಲೊಂದು.

ಸಹಕಲಾವಿದರ ನಟನೆ

ತಂದೆ ಪಾತ್ರದಲ್ಲಿ ನಟಿಸಿರುವ ಶಿವಾಜಿ ಪ್ರಭು, ಮಾವಂದಿರ ಪಾತ್ರದ ಜೈಜಗದೀಶ್, ಸುಂದರರಾಜ್, ನಾಯಕಿಯ ತಂದೆಯ ಪಾತ್ರದಲ್ಲಿನ ಅವಿನಾಶ್, ಚಿತ್ರಾ ಶೆಣೈ, ಶೋಭರಾಜ್, ದೊಡ್ಡಣ್ಣ, ಶರತ್ ಲೋಹಿತಾಶ್ವ, ಹರೀಶ್ ರಾಜ್, ತಿಲಕ್, ಆದಿ ಲೋಕೇಶ್ ಅವರದ್ದು ಮನೋಜ್ಞ ಅಭಿನಯ. ಇನ್ನು ಖಳನಾಯಕನ ಪಾತ್ರದಲ್ಲಿ ನಟಿಸಿದ ಕೆಲ್ಲಿ ಜಾರ್ಜ್ ಅವರದ್ದು ಅಬ್ಬರದ ಅಭಿನಯ.

ಚಿತ್ರದ ಬಗ್ಗೆ ಕೊನೆಯದಾಗಿ

ಪುನೀತ್ ಖದರ್ ಆವರಿಸಿರುವ ಈ ಚಿತ್ರ ಮೂಲ ಚಿತ್ರವನ್ನು ನೋಡಿದ್ದರೂ, ನೋಡದಿದ್ದರೂ ಕುಟುಂಬ ಸಮೇತ ಒಂದು ಬಾರಿ ನೋಡಲು ಏನೂ ಅಡ್ಡಿಯಿಲ್ಲದ ಚಿತ್ರ. ಇನ್ನು ರಿಮೇಕ್ ಚಿತ್ರವನ್ನು ನೋಡುವುದೇ ತಪ್ಪು ಎನ್ನುವವರಿಗೆ ಅದು ಅವರ ವಿವೇಚನೆಗೆ ಬಿಟ್ಟ ವಿಚಾರ.

English summary
Readers review - Puneeth Rajkumar, Trisha Krishnan starer Power ***. Movie directed by K Madesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada