»   » ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!

ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!

By: ಮಧುಸೂದನ ಹೆಗಡೆ
Subscribe to Filmibeat Kannada

ಮೂರು ವರ್ಷ ಕಾಲ ಕೂತು ರೆಡಿ ಮಾಡಿದ 'ಉಪ್ಪಿಟ್ಟ'ನ್ನು ಉಪೇಂದ್ರ ಜನರಿಗೆ ಬಡಿಸಿದ್ದಾರೆ. ಟೇಸ್ಟ್ ನೋಡೋಕೆ ಅಂತ ಥಿಯೇಟರ್ ಒಳಗೆ ಕಾಲಿಟ್ಟರೆ ಖಾರ, ಹುಳಿ, ಸಿಹಿ, ಒಗರು ಎಲ್ಲ ಬೆರೆತಿರುವ ಉಪ್ಪಿಟ್ಟು ಕೊಟ್ಟ ಕಾಸಿಗೆ ಹೊಟ್ಟೆ ತುಂಬಿಸುತ್ತೆ ಆದರೆ ಉಪ್ಪಿಟ್ಟು ಜೀರ್ಣ ಆಗೋದು ಸ್ವಲ್ಪ ಕಷ್ಟನೇ


ಜನರ ತಲೆಗೆ ಹುಳ ಬಿಡುವುದು ಉಪೇಂದ್ರ ಅವರಿಗೆ ಹೊಸದೇನಲ್ಲ. ಉಪೇಂದ್ರದ 'ನಾನು' ಇಲ್ಲಿ 'ನೀನು' ಆಗಿದೆ. ಆದರೆ ಆ ನೀನು ನಲ್ಲೂ ನಾನಿದ್ದಾನೆ. 'ನಾನು' ಅನ್ನೋ ಕಾಮ, ಕ್ರೋಧ, ಮದ, ಮತ್ಸರ, ಅಹಂ ಬಿಟ್ಟರೆ 'ನೀನು' ಅನ್ನೋ ನೆಮ್ಮದಿ, ಖುಷಿ, ಪ್ರೀತಿ, ಸಂಪತ್ತು(ಲಕ್ಮೀ) ಎಲ್ಲವೂ ನಿನ್ನನ್ನೇ ಹುಡುಕಿಕೊಂಡು ಬರುತ್ತದೆ ಅನ್ನೋದನ್ನ ಉಪ್ಪಿ 'ಯೋಚನೆ ಮಾಡ್ಬೇಡ' ಎಂದು ಎರಡೇ ಶಬ್ದದಲ್ಲಿ ಚಿತ್ರದ ಉದ್ದಕ್ಕೂ ಹೇಳಿಕೊಂಡು ಬರುತ್ತಾರೆ.

ಉಪೇಂದ್ರದ ನಾನು ಆಗಿ ಬೈಕ್ ಏರಿ ಬರುವ ರಿಯಲ್ ಸ್ಟಾರ್, ಭವಿಷ್ಯದ ಬಾಬಾನಾಗಿ ಕಾಣಿಸಿಕೊಳ್ಳುವ ತಲೆಕೆಳಗಾದ ಉಪ್ಪಿ, ಬಿಳಿ ಪಂಚೆ ಶರ್ಟ್ ನಲ್ಲಿ ಮಿಂಚುವ ವರ್ತಮಾನದ ಉಪೇಂದ್ರ ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ.[ಥಿಯೇಟರ್ ನಲ್ಲಿ ಬಿಸಿ ಬಿಸಿ 'ಉಪ್ಪಿಟ್ಟು' ತಿಂದ ಪ್ರೇಕ್ಷಕರು]


ಕಳೆದು ಹೋದ ಭೂತಕಾಲದ ಬಗ್ಗೆ ಚಿಂತೆ ಮಾಡ್ಬೇಡ, ಮುಂದೆ ಬರುವ ಭವಿಷ್ಯತ್ ಬಗ್ಗೆ ಯೋಚನೆ ಮಾಡ್ಬೇಡ, ವರ್ತಮಾನಲ್ಲೇ ಜೀವಿಸು, ಅದರಲ್ಲೇ ಸುಖ ಕಾಣು ಎಂಬ ಭಗವದ್ಗೀತೆಯ ಸ್ಥಿತಪ್ರಜ್ಞನ ಸ್ಥಿತಿಯನ್ನು ಉಪ್ಪಿ ಮತ್ತೆ ಉಪ್ಪಿಟ್ಟಾಗಿಸಿದ್ದಾರೆ. ಸಂಪೂರ್ಣ ವಿಮರ್ಶೆಗೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....[ಉಪೇಂದ್ರ ಮಾಡಿರೋ ಉಪ್ಪಿ 2 ತಿನ್ನೋ ಮುನ್ನ ಓದಿ!]


Rating:
3.5/5

ಚಿತ್ರ - ಉಪ್ಪಿ-2
ನಿರ್ಮಾಣ-ಪ್ರಿಯಾಂಕಾ ಉಪೇಂದ್ರ
ಕಥೆ, ಚಿತ್ರಕತೆ, ಸಂಭಾಷಣೆ ನಿರ್ದೇಶನ- ಉಪೇಂದ್ರ
ಛಾಯಾಗ್ರಹಣ - ಅಶೋಕ್ ಕಶ್ಯಪ್
ಸಂಗೀತ-ಗುರುಕಿರಣ್
ತಾರಾಗಣ-ಉಪೇಂದ್ರ, ಕ್ರಿಸ್ಟೀನಾ, ಪಾರೂಲ್ ಯಾದವ್, ಬ್ಯಾಂಕ್ ಜನಾರ್ದನ್, ಟೆನ್ನಿಸ್ ಕೃಷ್ಣ, ಶೋಭರಾಜ್


ಎಲ್ಲಾ ಖಾಲಿ ಖಾಲಿ

ಖಾಲಿ ಪರದೆಯ ಮೇಲೆ ಏನು ಚಿತ್ರ ಬರದೆ ಇದ್ದರೆ ಅವರವರ ಭಾವಕ್ಕೆ ತಕ್ಕಂತೆ ಯೋಚನೆ ಮಾಡ್ತಾರೆ ಅನ್ನೋದೇ ಆರಂಭದ ಅಡಿಪಾಯ. ಮನುಷ್ಯನ ಮೆದುಳು ಹೇಗೆ ಕೆಲಸ ಮಾಡುತ್ತೆ ಅನ್ನೋದನ್ನ ಪರದೆಮೇಲೆ ಹಾಕಿ ತೋರಿಸುವುದು ಚಿತ್ರ ವಿಜ್ಞಾನಕ್ಕೆ ಸಂಬಂಧಿಸಿದ್ದೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.


ಪ್ರಶ್ನೆ ಮಾಡುವ ನಾಯಕಿ

ವರ್ತಮಾನದಲ್ಲಿ ಬದುಕುವವರು ಯಾರಾದರೂ ಇದ್ದಾರಾ? ಅದು ಯೋಚನೆನೇ ಮಾಡದೆ ಎಂಬ ಪ್ರಶ್ನೆ ಹುಟ್ಟಿಕೊಂಡಾಗಲೇ ಚಿತ್ರದ ನಿಜವಾದ ಆರಂಭ. ಉಪೇಂದ್ರದ 'ನಾನು' ಕೊನೆಯಲ್ಲಿ ಎಲ್ಲವನ್ನು ಕಿತ್ತುಹಾಕಿ ನೀನು ಆಗಿದ್ದಾನೆ. ಆತನೇ ವರ್ತಮಾನದಲ್ಲಿ ಬದುಕುತ್ತಿರುವ ವ್ಯಕ್ತಿ ಎಂದಾಗ ಹುಡುಕಾಟ ಆರಂಭ.


ನೀನು ಗಾಗಿ ಎಲ್ಲರ ಸರ್ಚ್

ನಾಯಕಿ, ಪೊಲೀಸ್(ಬ್ಯಾಂಕ್ ಜನಾರ್ದನ್, ಬೀರಾದಾರ್), ವಿಲನ್ ಗಳು, ಎಲ್ಲರೂ 'ನೀನು'ನ ಹುಡುಕಾಟಕ್ಕೆ ನಿಲ್ಲುತ್ತಾರೆ. ಹಾಗಾದರೆ ಆ ನೀನು ಎಲ್ಲಿದ್ದಾನೆ? ಆತ ಯಾರು? ನೀನು ಇವರಿಗೆಲ್ಲ ಯಾಕೆ ಬೇಕು? ಇದೇ ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆ.


ಡೈರೆಕ್ಟರ್ ಕ್ಯಾಪ್ ಹೊತ್ತು ಬರುವ ಉಪ್ಪಿ

ಉಪ್ಪಿ ಪ್ರವೇಶ ಹಾಗಿರಬಹುದು? ಹೀಗಿರಬಹುದು ಎಂಬ ಅಭಿಮಾನಿಗಳಿಗೆ ಉಪ್ಪಿ ಸಿಂಪಲ್ ಉತ್ತರ ನೀಡಿದ್ದಾರೆ. ನಿರ್ದೇಶಕನ ಕ್ಯಾಪ್ ಹಾಕಿಕೊಂಡೆ ಕಾಣಿಸಿಕೊಳ್ಳುವ ಉಪೇಂದ್ರನಿಗೆ ಅಭಿಮಾನಿಗಳ ಉದ್ಗಾರದ ಸ್ವಾಗತ ಸಿಗುತ್ತದೆ.


ಯಾರು ಏನೇ ಅಂದ್ರೂ ಮಾಡುವ 'ನೀನು"

ಯಾರು ಯಾವ ಕೆಲಸ ಹೇಳಿದ್ರೂ ಮಾಡಿಕೊಡುವ ನೀನು(ನಾಯಕ) ಅದಕ್ಕೆ ಕೊಟ್ಟ ಕೂಲಿಯನ್ನು ತೆಗೆದುಕೊಳ್ಳದಿರುವಷ್ಟು ಮಹಾನುಭಾವ. ಭವಿಷ್ಯದ ಬಗ್ಗೆ ಯೋಚನೆ ಮಾಡಲ್ವಾ? ಎಂದು ಕೇಳಿದ್ರೇ ಯೋಚನೆ ಮಾಡಿಯೇ ಯೋಚನೆ ಮಾಡ್ಬಾರ್ದು ಅಂಥ ತೀರ್ಮಾನಿಸಿದ್ದೇನೆ ಎಂಬುದು ನಾಯಕನ ಉತ್ತರ.


ಹಿಂದೆ ಮುಂದೆ ನೋಡದೆ ಮದುವೆ ?

ನಾಯಕಿ 'ನೀನು' ನನ್ನು ಮದುವೆಯಾಗಲು ತೀರ್ಮಾನ ಮಾಡುತ್ತಾಳೆ. ಹಳೆಯ ಸೋರುವ ಮನೆಯಿಂದ ಬಂಗಲೆಗೆ 'ನೀನು'ನ ಫ್ಯಾಮಿಲಿ ಶಿಫ್ಟ್. ಇನ್ನೇನು ನಿಶ್ಚಿತಾರ್ಥ ಮಾಡಿಕೊಳ್ಳಬೇಕು ಎಂದಿದ್ದಾಗ ಥಟ್ಟನೆ ಪ್ರತ್ಯಕ್ಷವಾಗಿ ಟ್ವಿಸ್ಟ್ ಕೊಡುವ ಪಾರೂಲ್ ಯಾದವ್.


ನೀನು ಮತ್ತೆ ನಾನಾದನೇ?

ಸೆಕೆಂಡ್ ಹಾಫ್ ನಲ್ಲಿ ಉಪ್ಪಿಯ 'ಬಾಬಾ' ಅವತಾರ ಅನಾವರಣ. ಟೀಸರ್ ನಲ್ಲಿ ತೋರಿಸಿದ ಉಲ್ಟಾ ಯೋಗಾಸನ. ಉದ್ದುದ್ದ ಡೈಲಾಗ್ ಗಳು, ಗಾಂಜಾ ಸೇದುವ ಬಾಬಾಗಳು. ಮಂಡ್ಯದ ಹಳ್ಳಿಯೊಂದರಲ್ಲಿದ್ದ ಕತೆ ನೇರವಾಗಿ ಹಿಮಾಲಯಕ್ಕೆ ಶಿಫ್ಟ್.


ನಾಯಕಿ ಒಳಗಿನ ಸಂಶಯದ ನಾನು

ಈಗಿರುವ ಬಿಳಿಪಂಚೆ 'ನೀನು' ಮೊದಲು ಹಿಮಾಲಯದಲ್ಲಿ ಬಾಬಾ ಆಗಿದ್ದ. ಮನಶಾಂತಿ ಅರಸಿ ನಾನು ಅವನ ಬಳಿ ತೆರಳಿ ಎಲ್ಲವನ್ನು ಅರ್ಪಿಸಿದೆ. ಈಗ ನಿನಗೂ ಮೋಸ ಮಾಡುತ್ತಾನೆ ಎಂದು ಪಾರೂಲ್ ಹೇಳುವ ಕತೆ ನಂಬಿದ ನಾಯಕಿ ಮನಸ್ಸಿನ್ನಲ್ಲಿ ಹುಟ್ಟಿಕೊಳ್ಳುವ ಸಂಶಯದ 'ನಾನು'.


ವೆರ್ ದೆರ್ ಇಸ್ ಎ ವಿಲ್, ದೆರ್ ಇಸ್ ಎ ವೇ

ಖುಷಿ ಎನ್ನುವ ಕಾಣದ ಪಾತ್ರದ ಸೃಷ್ಟಿ ಇಲ್ಲಾಗುತ್ತದೆ. ಶ್ರೀಮಂತೆಯಯೊಬ್ಬಳು ತನ್ನ ಮಗಳನ್ನು ನೀನು ಮದುವೆಯಾದರೆ ಅಪಾರ ಆಸ್ತಿ ನಿನಗೆ ಎಂದು ವಿಲ್ ಬರೆದು ಬಾಬಾ ಕೈಗೆ ನೀಡಿರುತ್ತಾಳೆ. ಅಲ್ಲಿಯೇ 'ಯೋಚನೆ ಮಾಡ್ಬೇಡ' ಶಬ್ದ ಹುಟ್ಟಿಕೊಳ್ಳುವುದು. ಆಸ್ತಿ ಆಸೆಗೆ ನೀನು ನಾಟಕ ಮಾಡುತ್ತಿದ್ದಾನೆ ಎಂಬ ಭಾವನೆ ಮೂಡುವ ಪ್ರಯತ್ನ ಮಾಡಲಾಗಿದ್ದರೂ ಅಭಿಮಾನಿಗಳು ಒಪ್ಪಿಕೊಳ್ಳಲ್ಲ.


ಕೊನೆವರೆಗೂ ಫುಲ್ ಕನ್ ಪ್ಯೂಶನ್

ಕೊನೆವರೆಗೂ ಫುಲ್ ಕನ್ ಪ್ಯೂಷನ್ ಕಾಪಾಡಿಕೊಂಡು ಹೋಗೋದೇ ಉಪೇಂದ್ರ ಅವರ ಸ್ಪೆಷಾಲಿಟಿ. ಇಲ್ಲಿಯೂ ಅದೇ ಪುನರಾವರ್ತನೆ. ನಾನು ಯಾರು? ನೀನು ಯಾರು? ಅನ್ನೋದಕ್ಕೆ ಒಂದಷ್ಟು ಫ್ಲಾಷ್ ಬ್ಯಾಕ್ ಗಳ ಲಿಂಕು. ಅದಕ್ಕೊಂದಿಷ್ಟು ಹಗಲುಗನಸುಗಳ ಸ್ಪರ್ಶ. ಆದರೂ ಪ್ರೇಕ್ಷಕ ಇದನ್ನೇ ಅನುಭವಿಸುತ್ತಾನೆ.


ಎಷ್ಟು ಬೇಕೋ ಅಷ್ಟು ತಾಂತ್ರಿಕತೆ

ಸಿನಿಮಾಕ್ಕೆ ಎಷ್ಟು ಬೇಕೋ ಅಷ್ಟು ಹಣವನ್ನು ಯಾವ ಮುಲಾಜಿಲ್ಲದೇ ಹಾಕಲಾಗಿದೆ. ಕೆಲವೊಂದು ದೃಶ್ಯದಲ್ಲಿ ಉಪೇಂದ್ರ ಮತ್ತು ಅವರ ಸಹಚರರು ಏರಿ ಬರುವ ಬೈಕ್ ಗಳು ಗಮನ ಸೆಳೆಯುತ್ತವೆ. ಜೇಡ, ಚೇಳಿನ ಆಕಾರದ ಬೈಕ್ ಗಳು ಅರಿಷಡ್ ವರ್ಗವನ್ನು ಪ್ರತಿನಿಧಿಸುತ್ತದೆ.


ಎಲ್ರ ಕಾಲ ಎಳೀತದೆ ಕಾಲ!

ವಿವಾದಗಳನ್ನು ಹುಟ್ಟುಹಾಕಿದ್ದ 'ಎಲ್ರ ಕಾಲ್ ಎಳೀತದೆ ಕಾಲ' ಹಾಡಿನ ಬಗ್ಗೆ ಇದ್ದ ಊಹಾಪೋಹಗಳಿಗೂ ತೆರೆಬಿದ್ದಿದೆ. ಉಪೇಂದ್ರ ಇದನ್ನು ಯಾವ ಬಗೆಯಲ್ಲಿ ಚಿತ್ರಿಸಿದ್ದಾರೆ ಎಂದು ಗಾಂಧಿನಗರವೇ ತಲೆಕೆಡಿಸಿಕೊಂಡಿತ್ತು. 'ಓಂ' ನ ಶಿವಣ್ಣ, ಲೇಖಕ, ಬರಹಗಾರ ಸೇರಿದಂತೆ ಐದಾರು ಗೆಟಪ್ ಗಳಲ್ಲಿ ಉಪೇಂದ್ರ ಕಾಣಿಸಿಕೊಳ್ಳುತ್ತಾರೆ.


ಕ್ರಿಸ್ಟೀನಾ ಗ್ಲಾಮರ್ ಗೊಂಬೆ

ಆಸ್ಟ್ರೇಲಿಯಾದ ಹುಡುಗಿ ಕ್ರಿಸ್ಟೀನಾ ಅವರನ್ನು ಗ್ಲಾಮರ್ ಗೊಂಬೆಯಾಗಿ ತೋರಿಸಲಾಗಿದೆ. ಕಬ್ಬಿನ ಗದ್ದೆಯಲ್ಲಿ ಉಪ್ಪಿ ಮೇಲೆ ಎರಗುವ ನಾಯಕಿಯನ್ನು ಅಶೋಕ್ ಕಶ್ಯಪ್ ಚೆನ್ನಾಗಿಯೇ ಸೆರೆಹಿಡಿದಿದ್ದಾರೆ. ಹಿಂಬದಿ ಸಂಗೀತಕ್ಕಿಂತ ಗುರುಕಿರಣ್ ಟೋನ್ ಗಳೆ ಕಿವಿಗೆ ಹೆಚ್ಚು ಬೀಳುತ್ತದೆ.


ಉಪ್ಪಿಗೆ ಫುಲ್ ಮಾರ್ಕ್ಸ್

ಇಡೀ ಚಿತ್ರವನ್ನೇ ಆವರಿಸಿಕೊಂಡಿರುವ ಉಪ್ಪಿಗೆ ಫುಲ್ ಮಾರ್ಕ್ಸ್. ವಿಲನ್ ಆಗಿ ಶೋಭರಾಜ್ ಅಷ್ಟೇನು ಘರ್ಜನೆ ಮಾಡಲ್ಲ. ಪಾರೂಲ್ ಯಾದವ್ ಹೀಗೆ ಬಂದು ಹಾಗೆ ಹೋದ್ರೆ, ಟೆನ್ನಿಸ್ ಕೃಷ್ಣ ಮೊದಲ ಭಾಗದಲ್ಲಿ ನಗಿಸುವ ಪ್ರಯತ್ನ ಮಾಡುತ್ತಾರೆ.


ನೀನ್ನೊಳಗಿನ ನೀನು ಯಾರು?

ನಿನ್ನೊಳಗಿನ ನಾನು ಯಾರು ಎಂಬುದಕ್ಕೆ ಉತ್ತರ ಸಿಕ್ಕಿದ್ದರೆ, ನಿನ್ನೊಳಗಿನ ನೀನು ಯಾರು? ಎಂಬುವುದಕ್ಕೆ ಉತ್ತರ ಕಂಡುಕೊಳ್ಳಲು ಸಿನಿಮಾ ನೋಡಬಹುದು. ನೀನು ಯಾರು ಎಂಬುದನ್ನು ನೀನೇ ಕಂಡುಕೊಳ್ಳಬೇಕು ವಿನಃ ಅದನ್ನು ಯಾರೂ ತೋರಿಸಿಕೊಡಲು ಸಾಧ್ಯವಿಲ್ಲ. ನಿಮಗೆ ನಾನು-ನೀನುಗಳ ನಡುವೆ ಕನ್ ಫ್ಯೂಷನ್ ಇದ್ದರೆ ಚಿತ್ರಮಂದಿರಕ್ಕೆ ಧಾವಿಸಬಹುದು.


English summary
Uppi 2 mania has just begun all over Karnataka.The early morning first day, first show is just over and cine lovers say that, Uppi 2 keeps the viewers occupied and at the same time, the whole movie is confusing till the climax!.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada