For Quick Alerts
  ALLOW NOTIFICATIONS  
  For Daily Alerts

  Vedha Movie Review: 'ವೇದ'ನ ಸುತ್ತ ಮಹಿಳೆಯರ ಅಬ್ಬರ

  |

  ಹೆಣ್ಣು ಮಕ್ಕಳ ಮೇಲಾದ ದೌರ್ಜನ್ಯಕ್ಕೆ ನಾಯಕ ಸೇಡು ತೀರಿಸಿಕೊಳ್ಳುವ ಕತೆ ಕನ್ನಡದ ಹಲವು ಸಿನಿಮಾಗಳಲ್ಲಿ ಬಂದು ಹೋಗಿದೆ. 'ವೇದ'ದಲ್ಲಿಯೂ ಅದೇ ರಿವೇಂಜ್ ಕತೆಯೇ ಇದೆಯಾದರೂ ಇಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ಕಾಪಾಡಲು ಬರುತ್ತಾನೆಂದು 'ನಾಯಕನ' ದಾರಿ ಕಾಯುವುದಿಲ್ಲ, ತಮಗೆ ಅನ್ಯಾಯ ಮಾಡಿದವರ ವಿರುದ್ಧ ಕತ್ತಿ ಬೀಸುತ್ತಾರೆ. ಅತ್ಯಾಚಾರಿಗಳ ರಕ್ತದಲ್ಲಿ ಸ್ನಾನ ಮಾಡುತ್ತಾರೆ.

  ಇದು ಶಿವಣ್ಣನ ಸಿನಿಮಾ ಆದರೂ ಶಿವಣ್ಣ ಜೊತೆಗೆ ಹಲವು ಮಹಿಳಾ ಪಾತ್ರಗಳು ಪ್ರಧಾನ ಭೂಮಿಕೆಯಲ್ಲಿವೆ. ನಾಯಕನಂತೆಯೇ ಮಹಿಳಾ ಪಾತ್ರಗಳು ಕತ್ತಿ ಹಿಡಿದು ದುಷ್ಟರ ರುಂಡ ಕತ್ತರಿಸುತ್ತವೆ, ಸ್ಲೋ ಮೋಷನ್‌ನಲ್ಲಿ ಹಾರಿ ದುಷ್ಟರ ಎದೆಗೆ ಕತ್ತಿ ಬೀಸುತ್ತವೆ. ನಾಯಕ ಪ್ರಧಾನ ಸಿನಿಮಾವೊಂದರಲ್ಲಿ ಶಕ್ತಿಯುತ ಮಹಿಳಾ ಪಾತ್ರಗಳಿಗೆ ಅವಕಾಶ ನೀಡಿರುವುದಕ್ಕೆ ಹಾಗೂ ಪಿಡುಗಾಗಿ ಕಾಡುತ್ತಿರುವ ಅಪ್ರಾಪ್ತರ ಮೇಲಿನ ಅತ್ಯಾಚಾರಗಳ ಬಗ್ಗೆ ತೀವ್ರ ಕ್ರೋಧ ವ್ಯಕ್ತಪಡಿಸಿರುವುದಕ್ಕೆ 'ವೇದ' ಸಿನಿಮಾ ನಿರ್ದೇಶಕ ಹರ್ಷ ಅಭಿನಂದನಾರ್ಹರು.

   BBK9: ರಾಜಣ್ಣನ ನಡವಳಿಕೆ ಮನೆಯ ಹೆಣ್ಣು ಮಕ್ಕಳಿಗೆ ಕಿರಿಕಿರಿ ಆಗ್ತಾ ಇರೋದ್ಯಾಕೆ? BBK9: ರಾಜಣ್ಣನ ನಡವಳಿಕೆ ಮನೆಯ ಹೆಣ್ಣು ಮಕ್ಕಳಿಗೆ ಕಿರಿಕಿರಿ ಆಗ್ತಾ ಇರೋದ್ಯಾಕೆ?

  Rating:
  3.0/5

  ಸಿನಿಮಾದ ಕತೆ ಸರಳ. ಮಗಳ ಮೇಲೆ ನಡೆದ ದೌರ್ಜನ್ಯಕ್ಕೆ ಅಪ್ಪ ಸೇಡು ತೀರಿಸಿಕೊಳ್ಳುವ ಕತೆ 'ವೇದ'ನದ್ದು. ಆದರೆ ಈ ಸೇಡು ತೀರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಮಗಳನ್ನು ತೊಡಗಿಸಿಕೊಳ್ಳುತ್ತಾನೆ ವೇದ. 'ಅನುಮತಿ ಇಲ್ಲದೆ ಮೈಮುಟ್ಟಿದವನ ಮೈ-ಕೈ ಮುರಿಯಲು ಮಹಿಳೆಯರಿಗೆ ಯಾರ ಅನುಮತಿಯೂ ಬೇಕಿಲ್ಲ' ಎಂಬುದು ವೇದನ ನಂಬಿಕೆ, ಅದೇ ನಂಬಿಕೆಯನ್ನು ಮಗಳಲ್ಲಿಯೂ ಬಿತ್ತಿದ್ದಾನೆ ವೇದ.

  ಶಿವಣ್ಣನಿಗೆ ಶಿವಣ್ಣನೇ ಸಾಠಿ

  ಶಿವಣ್ಣನಿಗೆ ಶಿವಣ್ಣನೇ ಸಾಠಿ

  'ವೇದ' ಸಿನಿಮಾದಲ್ಲಿ ಗಮನ ಸೆಳೆಯುವುದು ಮುಖ್ಯ ಪಾತ್ರಗಳ ನಟನೆ ಮತ್ತು ಆಕ್ಷನ್ ದೃಶ್ಯಗಳು. ತೆರೆ ಮೇಲೆ ತಾವು ಕಾಣಿಸುವ ಪ್ರತಿಯೊಂದು ದೃಶ್ಯದಲ್ಲೂ ಮಿಂಚಿದ್ದಾರೆ ಶಿವರಾಜ್ ಕುಮಾರ್. ಆಕ್ಷನ್ ದೃಶ್ಯಗಳಲ್ಲಿ ಕಾಣುವ ಗಾಂಭೀರ್ಯ, ಫ್ಲಾಶ್‌ ಬ್ಯಾಕ್ ದೃಶ್ಯಗಳಲ್ಲಿ ಕಾಣುವ ತುಂಟತನ, ಅಮಾಯಕತೆ, ಹಾಡು, ಡ್ಯಾನ್ಸ್ ಫೈಟ್ಸ್ ಎಲ್ಲದರಲ್ಲೂ ಶಿವಣ್ಣ ಸೂಪರ್. ಅದರಲ್ಲಿಯೂ ಶಿವಣ್ಣನನ್ನು ಹಳ್ಳಿ ಉಡುಗೆ-ತೊಡುಗೆಗಳಲ್ಲಿ ನೋಡುವುದು ಇನ್ನೂ ಖುಷಿ. ಸಿನಿಮಾದಲ್ಲಿ ಒಂದು ಹಾಡು ಹಾಡಿರುವ ಶಿವಣ್ಣನ ಎನರ್ಜಿಗೆ ಸರಿಸಮರಾದವರು ಯಾರೂ ಇಲ್ಲ.

  ಮಹಿಳಾ ಪಾತ್ರಗಳು ಪವರ್‌ಫುಲ್ ಆಗಿವೆ

  ಮಹಿಳಾ ಪಾತ್ರಗಳು ಪವರ್‌ಫುಲ್ ಆಗಿವೆ

  ಇನ್ನು ಸಿನಿಮಾದ ಮಹಿಳಾ ಪಾತ್ರಗಳು ಬಹಳ ಶಕ್ತಿಯುತವಾಗಿವೆ. ನಾಯಕಿ ಗಾನವಿ, ಶಿವಣ್ಣನ ಮಗಳ ಪಾತ್ರದಲ್ಲಿ ನಟಿಸಿರುವ ಅದಿತಿ ಸಾಗರ್, ವೇಶ್ಯೆಯ ಪಾತ್ರದಲ್ಲಿ ನಟಿಸಿರುವ ಶ್ವೇತಾ ಚಂಗಪ್ಪ, ಶಿವಣ್ಣನ ಗೆಳತಿಯ ಪಾತ್ರದಲ್ಲಿ ನಟಿಸಿರುವ ಉಮಾಶ್ರೀ, ಕೊನೆಯ ಕೆಲವು ದೃಶ್ಯಗಳಲ್ಲಿ ಕಾಣುವ ಲೇಡಿ ವಿಲನ್ ಎಲ್ಲರ ಪಾತ್ರಗಳು ಪವರ್‌ಫುಲ್ ಆಗಿವೆ. ಶಿವಣ್ಣನ ಚಾರ್ಮ್‌ ನಡುವೆಯೂ ಅದಿತಿ ಸಾಗರ್, ಗಾನವಿ ಪಾತ್ರಗಳು ಭರ್ಜರಿಯಾಗಿಯೇ ಮಿಂಚಿವೆ. ಮಿಂಚಲು ಸೂಕ್ತ ಸ್ಪೇಸ್ ಅನ್ನು ಒದಗಿಸಿದ್ದಾರೆ ನಿರ್ದೇಶಕರು. ಅದಿತಿ ಸಾಗರ್‌ಗೆ ಸಂಭಾಷಣೆ ಕಡಿಮೆಯಾದರೂ ತೆರೆಯ ಮೇಲೆ ಆಕೆಯ ಸಿಟ್ಟು, ನೋಡುನಲ್ಲೂ ರೋಷ ಹುಟ್ಟಿಸುವಂತಿದೆ. ಗಾನವಿ ಹಾಗೂ ಅದಿತಿ ಸಾಗರ್ ಯಾವ ನಟರಿಗೂ ಕಡಿಮೆ ಇಲ್ಲದಂತೆ ಆಕ್ಷನ್ ದೃಶ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

  ಕೆಲವು ಪೇಲವ ದೃಶ್ಯಗಳು ಸಿನಿಮಾದಲ್ಲಿವೆ

  ಕೆಲವು ಪೇಲವ ದೃಶ್ಯಗಳು ಸಿನಿಮಾದಲ್ಲಿವೆ

  ನಟರ ಬಗ್ಗೆ ಹೇಳಿದ ಪ್ರಶಂಸೆ ಮಾತುಗಳನ್ನು ಕತೆ, ಚಿತ್ರಕತೆಯ ಬಗ್ಗೆ ಹೇಳಲಾಗದು. ನಟರ ಅದ್ಭುತ ನಟನೆ, ಆಕ್ಷನ್ ದೃಶ್ಯಗಳು, ಸಿನಿಮಾಕ್ಕೆ ನೀಡಲಾಗಿರುವ ರಿಚ್‌ ಟ್ರೀಟ್‌ಮೆಂಟ್‌ ಸಡಿಲ ಚಿತ್ರಕತೆಯನ್ನು ಮರೆಯಾಗಿಸಿವೆಯಷ್ಟೆ. ಸಿನಿಮಾದಲ್ಲಿ ಹಲವು ಪೇಲವ ಸನ್ನಿವೇಶಗಳಿವೆ. ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಕಾನ್‌ಸ್ಟೇಬಲ್‌ ಸಂಭಾಷಣೆಗಳು ಬಹಳ ನಾಟಕೀಯವಾಗಿವೆ. ಪ್ರತಿ ಫೈಟ್‌ನ ಬಳಿಕವೂ ಹಿರೋಗೆ ಎಲಿವೇಶನ್ ನೀಡಲೆಂದೇ ಒಬ್ಬನನ್ನು ನಿರ್ದೇಶಕರು ಕಾಯ್ದಿರಿಸಿದ್ದಾರೆ. ಆ ಎಲಿವೇಶನ್‌ ದೃಶ್ಯಗಳೂ ಸಹ ಕೃತಕ ಎನಿಸುವಂತಿವೆ. ಅದ್ಭುತವಾದ ಆಕ್ಷನ್‌ ದೃಶ್ಯ ನೋಡಿದ ಪ್ರೇಕ್ಷಕನಿಗೆ ಆ ಪೋಷಕ ಪಾತ್ರಗಳು ನೀಡುವ ಎಲಿವೇಶನ್‌, ಬಿರಿಯಾನಿ ತಿನ್ನುತ್ತಿದ್ದವನ ದವಡೆಗೆ ಲವಂಗ ಸಿಕ್ಕಿದ ಅನುಭವ ನೀಡುತ್ತವೆ. ಸಿನಿಮಾದ ಕತೆಯನ್ನು ಬರುವ ಕೆಲವು ಟ್ವಿಸ್ಟ್‌ಗಳನ್ನು ಮುಂಚೆಯೇ ಊಹಿಸಿಬಿಡಬಹುದು. ಉಮಾಶ್ರೀ ಸಾವಿನ ದೃಶ್ಯ ಇದಕ್ಕೆ ಉದಾಹರಣೆ.

  ನಟಿಯರ ಡೆಡಿಕೇಶನ್‌ಗೆ ಸಲಾಮ್

  ನಟಿಯರ ಡೆಡಿಕೇಶನ್‌ಗೆ ಸಲಾಮ್

  ಸಿನಿಮಾದ ಆಕ್ಷನ್ ದೃಶ್ಯಗಳು ಅದ್ಭುತವಾಗಿವೆ. ಶಿವಣ್ಣ ಅಂತೂ ಆಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ಅವರು ಮಾತ್ರವಲ್ಲ ಅದಿತಿ ಸಾಗರ್, ಗಾನವಿ ಸಹ ಅದ್ಭುತವಾಗಿ ಆಕ್ಷನ್ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ನಟಿಯರ ಡೆಡಿಕೇಶನ್‌ಗೆ ಸಲಾಮ್ ಹೇಳಲೇಬೇಕು. ಹಿನ್ನೆಲೆ ಸಂಗೀತವೂ ದೃಶ್ಯಗಳಿಗೆ ಪೂರಕವಾಗಿದೆ. ಸಿನಿಮಾದ ಯಾವ ಪ್ರೇಮ್‌ ಸಹ ಡಲ್‌ ಆಗಿ ಕಾಣದಂತೆ ಸಾಕಷ್ಟು ಶ್ರಮವಹಿಸಿರುವುದು ಕಾಣುತ್ತದೆ. ಸಂಭಾಷಣೆಗಳು ಸಹ ಚುರುಕಾಗಿವೆ. ಕೊನೆಯಲ್ಲಿ ಶಿವಣ್ಣ ಹೇಳುವ ಸಂಭಾಷಣೆಯೂ ತಟ್ಟುವಂತಿದೆ. ಆದರೆ ನಿರ್ದೇಶಕ ಹರ್ಷ, ಪ್ರತಿ ಐದು ನಿಮಿಷಕ್ಕೆ ಒಂದು ಎಲಿವೇಶನ್ ದೃಶ್ಯ ಬೇಕೆಂದು ಹಠಕ್ಕೆ ಬಿದ್ದಿರುವುದು ತುಸು ರೇಜಿಗೆ ಹುಟ್ಟಿಸುತ್ತದೆ. ತುಸು ಟೊಳ್ಳಾದ ಚಿತ್ರಕತೆಯನ್ನು ಸಹಿಸಿಕೊಂಡರೆ, ಶಿವಣ್ಣ ಹಾಗೂ ಇತರ ನಟಿಯರ ಅದ್ಭುತ ಅಭಿನಯ, ಒಳ್ಳೆಯ ಆಕ್ಷನ್ ದೃಶ್ಯಗಳು, ಹಿನ್ನೆಲೆ ಸಂಗೀ, ಒಳ್ಳೆಯ ಹಾಡುಗಳು, ಸಿನಿಮಾಟೊಗ್ರಫಿ, ಒಂದೊಳ್ಳೆ ಸಂದೇಶವನ್ನು ಎಂಜಾಯ್ ಮಾಡಬಹುದು.

  English summary
  Shiva Rajkumar starrer Vedha Kannada movie review. Ghanvi, Aditi Sagar, Umashree many others acted in the movie, Harsha is the director.
  Friday, December 23, 2022, 16:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X