twitter
    For Quick Alerts
    ALLOW NOTIFICATIONS  
    For Daily Alerts

    Bhajarangi 2 Review : ದುಷ್ಟ ಸಂಹಾರಕ್ಕೆ ಸತ್ತು ಹುಟ್ಟುವ ಭಜರಂಗಿ!

    |

    ಭಜರಂಗಿ ಸಿನಿಮಾ ಏನು ಅನ್ನೋದನ್ನ ಸರಳವಾಗಿ ಹೇಳಬೇಕು ಅಂದರೆ 'ದುಷ್ಟ ಸಂಹಾರಕ್ಕಾಗಿ ಸತ್ತು ಹುಟ್ಟುವ ನಾಯಕನ ಕಥೆ ಇದು'. ಹೌದು ಭಜರಂಗಿ ಭಾಗ ಒಂದು ನೋಡಿದವರು ಅದೇ ಗುಂಗಲ್ಲಿ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟರೆ, ಈ ಚಿತ್ರದಲ್ಲಿ ಬೇರೆಯದ್ದೇ ಲೋಕ ಅನಾವರಣ ಆಗುತ್ತದೆ. ಹಳ್ಳಿಯೊಂದರಲ್ಲಿ ಬಡ್ಡಿ ವಸೂಲಿ ಮಾಡಿಕೊಂಡು ಊರಿಗೆ ಮಾರಿ ಎನ್ನುವಂತೆ ಬದುಕುತ್ತಿರುವ ಅಕ್ಕನ ಮುದ್ದಿನ ತಮ್ಮ ದೂರದ ದೇಶದಿಂದ, ಮದುವೆ ಮಾಡಿಕೊಳ್ಳಲು ಬರುತ್ತಾನೆ. ಅವನೇ ಆಂಜಿ. ಈ ಆಂಜಿ ಕಟುಕ ಆಚರಣೆಗಳನ್ನು ತಡೆದು ಮಾನವೀಯತೆಯೇ ಶ್ರೇಷ್ಠ ಎಂಬ ಸಂದೇಶ ಸಾರುತ್ತಾನೆ. ಈ ನಡುವೆ ಅಲ್ಲೊಂದು ಪ್ರೇಮ ಕಥೆಯೂ ನಡೆದು ಹೋಗತ್ತದೆ. ಆದರೆ, ಸಾಮಾನ್ಯ ಆಂಜಿಯನ್ನು ಹೊಡೆದುರುಳಿಸಲು ಕಾಡಿನಿಂದ ರಾಕ್ಷಸ ಎಂಟ್ರಿ ಕೊಡುತ್ತಾನೆ. ರಾಕ್ಷಸನ ಕ್ರೌರ್ಯದ ಮುಂದೆ ಸೋತು ಆಂಜಿ ಪ್ರಾಣ ಕಳೆದು ಕೊಳ್ಳುತ್ತಾನೆ.

    Rating:
    4.0/5

    ಅರೆ..! ಇದೇನಿದು ಕಥೆಯ ನಾಯಕನೇ ಸತ್ತು ಹೋದನಲ್ಲ ಎಂದು ಕೊಳ್ಳುವಷ್ಟರಲ್ಲಿ, ಸೆಕೆಂಡ್‌ ಆಫ್‌ ಆರಂಭ ಆಗುತ್ತೆ. ಚಿತ್ರ ಇರೋದೇ ಎರಡನೇ ಅರ್ಧದಲ್ಲಿ. ಇನ್ನು ಚಿತ್ರದ ಮೊದಲಾರ್ಧವನ್ನು ಮರೆಸುವಷ್ಟು ಸೆಕೆಂಡ್‌ ಆಫ್‌ನಲ್ಲಿ ಭಜರಂಗಿಯ ಅಬ್ಬರ ಶುರುವಾಗುತ್ತದೆ. ಎರಡನೇ ಭಾಗದಲ್ಲಿ ಭಜರಂಗಿ ಯಾರು, ಭಜರಂಗಿಯ ಧ್ಯೇಯವೇನು ಎಂಬುದನ್ನು ಕಟ್ಟಿಕೊಡಲಾಗಿದೆ. ಭಜರಂಗಿಗೂ, ಆಂಜಿಗೂ ಏನೋ ನಂಟು ಮಿಸ್‌ ಆಗಿದೆ ಅಂತ ಅನ್ನಿಸುತ್ತದೆ. ಇದೇ ಗೊಂದಲದಲ್ಲೇ ಇಡೀ ಸಿನಿಮಾ ನೋಡ ಬೇಕಾಗುತ್ತದೆ. ಈ ಗೊಂದಲಕ್ಕೆ ಉತ್ತರ ಸಿಗುವುದೇ ಕ್ಲೈಮ್ಯಾಕ್ಸ್‌ನಲ್ಲಿ. ಅಲ್ಲಿ ತನಕ ಭಜರಂಗಿ ತನ್ನ ಧ್ಯೇಯವನ್ನು ಪೂರ್ಣ ಮಾಡಲು ಪದೇ.. ಪದೇ.. ಫೈಟ್‌ ಮಾಡೋದನ್ನ ಅರಗಿಸಿಕೊಳ್ಳಲೇ ಬೇಕಾಗುತ್ತದೆ.

    ಇದರ ನಡುವೆ ಚಿತ್ರದ ಮುಖ್ಯ ತಿರುಳಾಗಿ ಕಾಣೋದು ಆನಾದಿ ಕಾಲದ ಆಯುರ್ವೇದ ಪದ್ದತಿಯ ಪ್ರಮುಖ್ಯತೆ. ಇದು ಕೂಡ ಚಿತ್ರದ ಪ್ರಮುಖ ಭಾಗ. ಇಲ್ಲಿ ಭಜರಂಗಿ ಉದ್ದೇಶ ಪ್ರೇಕ್ಷಕನಿಗೆ ಇಷ್ಟವಾಗುತ್ತೆ. ಆದರೆ ಮೋಸ, ವಂಚನೆ, ಮನವರಿಕೆ, ತ್ಯಾಗ ಈ ಪದದ ಅರ್ಥವನ್ನ ತಿರುಗಿಸಿ, ತಿರುಗಿಸಿ ಎರಡು, ಮೂರು ಬಾರಿ ಸನ್ನಿವೇಶಗಳ ಹೇಳಲಾಗಿದೆ. ಅದು ಕೂಡ ಪ್ರೇಕ್ಷಕನಿಗೆ ಇದು ಮತ್ತೆ ಹೀಗಾಯಿತೇ ಎಂದು ಅನಿಸದೇ ಇರದು. ಈ ಆಂಜಿಗೂ- ಭಜರಂಗಿಗೂ ಏನು ಸಂಬಂಧ? ಭಜರಂಗಿ ಹುಟ್ಟಿ ಸಾಯುವುದು ಯಾಕೆ ಅನ್ನೋವುದನ್ನು ನೀವು ಸಿನಿಮಾದಲ್ಲೇ ನೋಡ ಬೇಕು.

    Shivarajkumar Starrer Bhajarangi 2 Movie Review and Rating

    ಪಾತ್ರವರ್ಗ ಚಿತ್ರದ ಪ್ಲಸ್‌ ಪಾಯಿಂಟ್!

    ನಟ ಶಿವರಾಜ್‌ಕುಮಾರ್‌ ಭಜರಂಗಿ ಮತ್ತು ಆಂಜಿಯಾಗಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಿವರಾಜ್‌ಕುಮಾರ್‌ ಎರಡೂ ಪಾತ್ರಗಳಲ್ಲಿ ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ. ಆಂಜಿಯಾಗಿ ಸ್ವೀಟ್‌ ಮತ್ತು ಕಿವ್ಟ್‌ ಅನಿಸಿದ್ರೆ, ಭಜರಂಗಿ ಆಗಿ ಬೃಹತ್‌ ವ್ಯಕ್ತಿತ್ವದೊಂದಿಗೆ ಮನಸಲ್ಲಿ ನಿಲ್ಲುತ್ತಾರೆ. ನಟಿ ಶೃತಿ ಅಲಮೇಲು ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಅಲಮೇಲು ಪಾತ್ರವನ್ನು ನುಂಗಿ ಹಾಕಿದ್ದಾರೆ ಅಂತ ಹೇಳಬಹುದು. ಇನ್ನು ದೊಡ್ಡ ಬದಲಾವಣೆ ಅನ್ನಿಸೋದು ಭಜರಂಗಿ ಲೋಕಿ ಪಾತ್ರ. ಭಜರಂಗಿ ಭಾಗ ಒಂದರಲ್ಲಿ ಲೋಕಿ ಮೆಚ್ಚಿಕೊಂಡವರಿಗೆ ಈ ಚಿತ್ರದಲ್ಲಿ ಲೋಕಿ ಶಾಕ್‌ ಕೊಡೊದು ಪಕ್ಕಾ. ಅಲ್ಲಿ ಭಜರಂಗಿ ಅಳಿವಿಗಾಗಿ ಹೋರಾಡಿದ್ರೆ, ಇಲ್ಲಿ ಭಜರಂಗಿ ಉಳಿವಿಗಾಗಿ ಪಣ ತೊಡುತ್ತಾನೆ. ಒಟ್ಟಾರೆ ಇಲ್ಲಿ ಭಜರಂಗಿ ಲೋಕಿ ಶಾಂತ ಮೂರ್ತಿ ಸ್ವರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಭಜರಂಗಿಯ ಜೊತೆಗೆ ಹೋರಾಡೋ ಚೆಲುವರಾಜ್ ಮತ್ತು ಪ್ರಸನ್ನ ಭಾಗಿನ್ ಇಬ್ಬರು ಖಳನಾಯಕರು ರಾಕ್ಷಸರ ಪಾತ್ರದಲ್ಲಿ ರಾಕ್ಷಸರಂತೆಯೇ ಅಬ್ಬರಿಸಿದ್ದಾರೆ. ಇನ್ನುಳಿದಂತಯೆ ನಟಿ ಭಾವನ ಮೆನನ್, ಶಿವರಾಜ್‌ ಕೆ.ಆರ್ ಪೇಟೆ, ಕುರಿ ಪ್ರತಾಪ್, ಶಾಲಿನಿ ಪಾತ್ರಗಳು ಸಿನಿಮಾದ ಸನ್ನಿವೇಷಕ್ಕೆ ತಕ್ಕಂತೆ ನ್ಯಾಯ ಒದಗಿಸಿವೆ.

    Shivarajkumar Starrer Bhajarangi 2 Movie Review and Rating

    ಭಜರಂಗಿಗೆ ಎ.ಹರ್ಷ ನಿರ್ದೇಶನವಿದೆ. ಸ್ವಾಮಿ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಭಜರಂಗಿಯ ಮೆರಗನ್ನು ಹೆಚ್ಚಿಸಿದೆ. ಒಟ್ಟಾರೆ ಭಜರಂಗಿ ಒಂದು ಮನರಂಜನಾತ್ಮಕ ಸಿನಿಮಾ ಅಂತ ಹೇಳ ಬಹುದು. ಪ್ರೇಕ್ಷಕ ಕೊಡುವ ದುಡ್ಡಿಗೆ ಮೋಸ ಅಂತೂ ಕಂಡಿತ ಆಗುವುದಿಲ್ಲ. ಒಮ್ಮೆ ಸಿನಿಮಾ ನೋಡಿ ನಿಮ್ಮ ಭಜರಂಗಿಯನ್ನು ನೀವೇ ಅರಿತುಕೊಳ್ಳಿ.

    English summary
    Shivarajkumar, Bhavana menon, shruti Starrer Bhajarangi 2 Movie Review and Rating in Kannada. Read on.
    Friday, October 29, 2021, 12:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X