»   » ಮಾತಿನಿಂದಲೇ ಗೆದ್ದಿತು, ಮಾತಿಲ್ಲದೇನೇ ನೀತಿಹೇಳಿತು!

ಮಾತಿನಿಂದಲೇ ಗೆದ್ದಿತು, ಮಾತಿಲ್ಲದೇನೇ ನೀತಿಹೇಳಿತು!

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸರಳ ಮತ್ತು ಸುಂದರವಾಗಿರುವ ಕನ್ನಡದ 'ಒಂದು ಮೊಟ್ಟೆಯ ಕಥೆ' ಸಿನಿಮಾ ಬರೀ ಕರ್ನಾಟಕದಲ್ಲಿ ಮಾತ್ರ ಅಲ್ಲ, ದೂರದ ಅಮೇರಿಕಾದಲ್ಲಿಯೂ ಹವಾ ಎಬ್ಬಿಸಿದೆ. ಕಳೆದ ವೀಕೆಂಡ್ ನಲ್ಲಿ ವಾಷಿಂಗ್ಟನ್.ಡಿ.ಸಿ ಸೇರಿದಂತೆ ಅಮೇರಿಕಾದ ಹಲವು ಕಡೆ 'ಒಂದು ಮೊಟ್ಟೆಯ ಕಥೆ' ಚಿತ್ರದ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ನೀವು ನಂಬ್ತೀರೋ, ಬಿಡ್ತೀರೋ... ಅಮೇರಿಕನ್ನಡಿಗರಿಗೆ 'ಒಂದು ಮೊಟ್ಟೆಯ ಕಥೆ' ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ. ಅದಕ್ಕೆ ಸಾಕ್ಷಿ ಅಮೇರಿಕಾದಲ್ಲೇ ನೆಲೆಸಿರುವ ಕನ್ನಡಿಗ, ಅಂಕಣಗಾರ ಶ್ರೀವತ್ಸ ಜೋಶಿ ಅವರು 'ಒಂದು ಮೊಟ್ಟೆಯ ಕಥೆ' ಚಿತ್ರದ ಬಗ್ಗೆ ಬರೆದಿರುವ ಸಾಲುಗಳು...

  'ಒಂದು ಮೊಟ್ಟೆಯ ಕಥೆ' ಚಿತ್ರದ ಬಗ್ಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಶ್ರೀವತ್ಸ ಜೋಶಿ ಹಂಚಿಕೊಂಡಿರುವ ಅನಿಸಿಕೆಯ ಯಥಾವತ್ ಸಾಲುಗಳು ಇಲ್ಲಿವೆ ಓದಿರಿ....

  Srivathsa Joshi appreciates Kannada Movie 'Ondu Motteya Kathe'

  'ಒಂದು ಮೊಟ್ಟೆ...' ನಾನು ಸಿಕ್ಕಾಪಟ್ಟೆ ಇಷ್ಟಪಟ್ಟೆ. ನಮ್ಮ ವಾಷಿಂಗ್ಟನ್ ಡಿ.ಸಿ. ಸೇರಿದಂತೆ ಅಮೆರಿಕದ ಸುಮಾರು ಕಡೆಗಳಲ್ಲಿ ಮೊನ್ನೆಯ ವಾರಾಂತ್ಯ 'ಒಂದು ಮೊಟ್ಟೆಯ ಕಥೆ' ಚಿತ್ರಪ್ರದರ್ಶನ ಇತ್ತು. ಒಂದು ಸಿನಿಮಾವನ್ನು ಹೀಗೆ ಇಷ್ಟು simple yet great ಎನ್ನುವ ರೀತಿಯಲ್ಲಿ ಮಾಡಿ ತೋರಿಸಿದ ರಾಜ್ ಬಿ ಶೆಟ್ಟಿ ತಂಡಕ್ಕೆ ಅಮೆರಿಕನ್ನಡಿಗರೆಲ್ಲರೂ, "OMG what a nice movie OMK!" ಎಂದವರೂ ಸೇರಿ, ಒಕ್ಕೊರಲಿಂದ ಜೈಕಾರ ಹಾಕಿದ್ದಾರೆ. ಸ್ವಚ್ಛ ಹಾಸ್ಯದಿಂದ ನಕ್ಕುನಗಿಸಿದ್ದಕ್ಕೆ ಮನದಾಳದಿಂದ ಮೆಚ್ಚುಗೆ ಸಲ್ಲಿಸಿದ್ದಾರೆ.

  ವೈಯಕ್ತಿಕವಾಗಿ ನನಗೆ ಈ ಸಿನಿಮಾ ತುಂಬಾನೇ ಇಷ್ಟವಾಗಲಿಕ್ಕೆ ಕೆಲವು ಕಾರಣಗಳಿವೆ. ದುಡ್ದು ಕೊಟ್ಟು ಪರದೆಯ ಮೇಲೆ ಹಿಂಸೆ/ವೇದನೆ/ಕ್ರೌರ್ಯ/ದುಸ್ಸಾಹಸ ನೋಡೋದ್ರಲ್ಲಿ ನನಗೆ ಥ್ರಿಲ್ ಇಲ್ಲ, ಆಸಕ್ತಿ ಇಲ್ಲ. ಅದಕ್ಕಿಂತ ಇಂತಹ ಲೈಟ್ ವೈಟ್ ಕಾಮಿಡಿಗಳನ್ನಾದರೆ ಒಂದಕ್ಕಿಂತ ಹೆಚ್ಚು ಸಲವೂ ನೋಡಬಲ್ಲೆ.

  ಎರಡನೆಯದಾಗಿ ನಾನು ಸಿನಿಮಾಗಳಲ್ಲಿ ದೃಶ್ಯಾವಳಿ, ನಟನೆ, ಸಂಗೀತದಷ್ಟೇ ಅಥವಾ ಅದಕ್ಕಿಂತ ಒಂಚೂರು ಹೆಚ್ಚೇ ಎನ್ನುವಷ್ಟು ಸಂಭಾಷಣೆಗೆ (ಮಾತು-ಅದು ಸ್ವಗತವಿರಲಿ, ಡೈಲಾಗ್ಸ್ ಇರಲಿ, ಮಾತಿನ ನಡುವಿನ ಮೌನವಿರಲಿ) ಮಹತ್ವ ಕೊಡುವವನು. 'ಒಂದು ಮೊಟ್ಟೆ...'ಯಲ್ಲಿ ಮಾತೇ ಬಂಡವಾಳ! ಉಳಿದದ್ದೆಲ್ಲ ಗೌಣ. ಚೇಂಜ್ ಇಲ್ಲ ಅಂತ ಇನ್ನೊಮ್ಮೆ ಮಾತಾಡಿಸಿದ್ದನ್ನೂ ಒಂದು ಅಪ್ಪಟ ಹಾಸ್ಯ ಸನ್ನಿವೇಶವಾಗಿಸಿದ್ದಾರೆ! (ಯಾವ ದೃಶ್ಯದ ಬಗ್ಗೆ ಹೇಳ್ತಿದ್ದೇನೆ ಅಂತ ಈ ಸಿನಿಮಾ ನೋಡಿದವರಿಗೆ ಗೊತ್ತಾಗಿರಲೂಬಹುದು).

  ಬೇರೆ ಚಿತ್ರಗಳಲ್ಲಿ ಯಾವುದೋ ಒಂದು ಪಾತ್ರದಿಂದ 'ಮಂಗಳೂರು ಕನ್ನಡ'ವನ್ನಾಡಿಸಿ ಹಾಸ್ಯ ಮಾಡಿದ ಉದಾಹರಣೆಗಳು ಹಲವಾರು ಇರುವಾಗ ಚಿತ್ರವಿಡೀ ಪೂರ್ಣಪ್ರಮಾಣದಲ್ಲಿ ಎಲ್ಲ ಪಾತ್ರಗಳೂ 'ಮಂಗಳೂರು ಕನ್ನಡ'ವನ್ನೇ ಆಡಿತೋರಿಸಿದ್ದು ದಿಟ್ಟತನವೇ ಎಂದು ನನ್ನ ಅಭಿಪ್ರಾಯ. ಹಾಗೆಯೇ, ಮಂಗಳೂರಿಗರಿಗೆ ನಗಲಿಕ್ಕೆ ಗೊತ್ತಿಲ್ಲ ಎಂದು ಗೊಣಗುವ/ಲೇವಡಿ ಮಾಡುವ ಸ್ಟಾಂಡಪ್ಪುಗಳನ್ನು ಕೂತ್ಕೋಳ್ರಯ್ಯಾ ಸುಮ್ನೆ ಎಂದು ಒಂದೇ ಏಟಿಗೆ ಬಾಯ್ಮುಚ್ಚಿಸಿ ಮಂಗಳೂರಿಗರೆಲ್ಲ ಸೇರಿ ಸಮಸ್ತ ಕನ್ನಡಿಗರಿಗೆ ನಗು ಉಣಿಸಿದ ಚಿತ್ರವಿದು ಎಂದು ಸಹ ನನಗನಿಸಿತು, ಅದರಿಂದಲೇ ಹೆಚ್ಚು ಖುಷಿಯೂ ಆಯ್ತು.

  ಹೊಸತನವುಳ್ಳ ಈ ಚಿತ್ರದ ನಿರ್ದೇಶನ ಮತ್ತು ನಾಯಕನಾಗಿ ನಟನೆಗೆ ರಾಜ್ ಶೆಟ್ಟಿಗೆ ಪ್ರಶಸ್ತಿ ಬಂದರೆ ಸಂತಸವೇ. ಅದಕ್ಕಿಂತಲೂ, ಕಾಲೇಜ್ ಪಿಯೋನ್ 'ಶ್ರೀನಿವಾಸ'ನ ಪಾತ್ರಕ್ಕೆ (ಪ್ರಕಾಶ್ ತುಮಿನಾಡು) ಅತ್ಯುತ್ತಮ ಪೋಷಕನಟ ಪ್ರಶಸ್ತಿ ಸಿಗಬೇಕೆಂದು ನನ್ನ ಆಶಯ. ಆ ಪಾತ್ರ ನನಗೆ ಬಹಳವೇ ಇಷ್ಟವಾಯಿತು.

  ಮಾತಿನಿಂದ ತುಂಬಿದ ಚಿತ್ರದಲ್ಲೊಂದು ಪರಿಣಾಮಕಾರಿ ನೀತಿಯನ್ನು ಮಾತೇ ಇಲ್ಲದವಳ ಮೂಲಕ ಶ್ರೀನಿವಾಸ ತಿಳಿಸಿದ್ದು ನನ್ನ ಮನಸ್ಸಿಗೆ ಬಹಳವಾಗಿ ತಟ್ಟಿತು.

  'ಒಂದು ಮೊಟ್ಟೆ...' ನೆನಪಲ್ಲುಳಿಯುವಂಥ ಚಿತ್ರ. ಇತ್ತೀಚಿನ ಬೇರೆ ಕೆಲವು ಕಚಡಾ ಕನ್ನಡ ಚಿತ್ರಗಳಿಂದ ಘಾಸಿಗೊಂಡಿದ್ದ ಮನಸ್ಸಿಗೆ ನಗುವಿನ ಮುಲಾಮು ಹಚ್ಚಿ ಗುಣಗೊಳಿಸಿದ ಚಿತ್ರ. ಇದಕ್ಕೆ ಐದು ನಕ್ಷತ್ರಗಳ ರೇಟಿಂಗ್ ಕೊಡುವ ಧಾರಾಳತನ ನನಗಿದೆ! - ಶ್ರೀವತ್ಸ ಜೋಶಿ

  English summary
  Columnist Srivathsa Joshi appreciates Kannada Movie 'Ondu Motteya Kathe'.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more