For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ : ಮೂರು ಪ್ರೇಮಕಥೆಗಳಲ್ಲಿ ಯಾವುದು ಉಂಟು, ಯಾವುದು ಇಲ್ಲ ?

  By ಸಂಪಿಗೆ ಶ್ರೀನಿವಾಸ
  |

  ಮಲೆನಾಡಿನ ಒಂದು ಸುಂದರ ತಾಣದಲ್ಲಿರುವ ಆರೋಗ್ಯಧಾಮದಲ್ಲಿನ ವಾರ್ಡ್ ಬಾಯ್ ನ ಮೂರು ಪ್ರೇಮ ಪ್ರಕರಣಗಳ ಕಥಾವಸ್ತುವಿನ, ಕಿರಣ್ ಗೋವಿ ನಿರ್ದೇಶನದ 'ಯಾರಿಗೆ ಯಾರುಂಟು ' ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಸುಂದರ ಮನರಂಜಿಸುವ ಚಿತ್ರ. ಕಥೆಯಲ್ಲಿ ಕುತೂಹಲಕಾರಿಯಿಯಾದ ತಿರುವುಗಳನ್ನು, ಹದವಾದ ಹಾಸ್ಯ ಸನ್ನಿವೇಶಗಳೊಂದಿಗೆ ಬೆರೆಸಿ ತಮ್ಮ ನಿರ್ದೇಶಕ ಪ್ರತಿಭೆಯನ್ನು ಮತೊಮ್ಮೆ ತೋರಿಸಿದ್ದಾರೆ.

  {rating}

  ದೇವರು ಕಳುಹಿಸಿದ ಪ್ರಿಯತಮೆ

  ದೇವರು ಕಳುಹಿಸಿದ ಪ್ರಿಯತಮೆ

  ಆರೋಗ್ಯಧಾಮದಲ್ಲಿ ಚಿರು ಎಂಬ ವಾರ್ಡ್ ಬಾಯ್ ವೈದ್ಯರ, ನರ್ಸ್ ಗಳ ಪ್ರೀತಿ ಪಾತ್ರನಾಗಿ ಅಲ್ಲಿ ಬರುವ ರೋಗಿಗಳ ಒಡನಾಡಿಯಾಗಿ ಅವರ ಸುಶ್ರೂಷೆಯನ್ನು ಮಾಡುತ್ತಾ ಕಾಲ ಕಳೆಯುತ್ತಿರುತ್ತಾನೆ. ಪ್ರಿಯ ಎಂಬ ಪ್ರಸಿದ್ಧ ಚಿತ್ರನಟಿ ತನ್ನನ್ನು ಪ್ರೀತಿಸುತ್ತಾಳೆ ಎಂದು ಕನಸು ಕಾಣುತ್ತ ಅವಳೊಂದಿಗೆ ಒಂದು ಡುಯೆಟ್ ಕೂಡ ಹಾಡುತ್ತಾನೆ. ಇದನ್ನು ಗೆಳೆಯರು ಕೇಳಿ ನಕ್ಕು, ಅವಳೆಲ್ಲಿ ನೀನೆಲ್ಲಿ ಅಂಥಾ ಅವನ ಆಸೆಗೆ ತಣ್ಣೀರೆರಚುತ್ತಾರೆ. ತನ್ನ ಸ್ನೇಹಿತನೊಂದಿಗೆ ರಾತ್ರಿ ಕುಡಿದು ಮಾತನಾಡುತ್ತ ಸದ್ಯದಲ್ಲೇ ಒಬ್ಬಳು ಸುಂದರಿ ತನಗೆ ಸಿಗುವಂತೆ ದೇವರಿಗೆ ಬೇಡುತ್ತಾನೆ. ಒಳ್ಳೆಯ ಶಕುನದಂತೆ ಆಗಸದಲ್ಲಿ ನಕ್ಷತ್ರವೊಂದು ಬೀಳುತ್ತದೆ. ಮರುದಿವಸ ಆರೋಗ್ಯ ಧಾಮಕ್ಕೆ ಒಂದು ಸುಂದರ ಹುಡುಗಿ ತನ್ನ ತಂದೆಯ ಆರೋಗ್ಯ ಪರೀಕ್ಷೆಗೆ ಬರುತ್ತಾಳೆ. ಅವಳನ್ನು ನೋಡಿ ಚಿರು ಇವಳೇ ದೇವರು ಕಳುಹಿಸಿದ ತನ್ನ ಪ್ರಿಯತಮೆ ಎಂದು ಎಲ್ಲರ ಮುಂದೆ ಬೀಗುತ್ತಾನೆ. ಅವರ ಸುಶ್ರೂಷೆಯ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡು ಆ ಹುಡುಗಿಯ ತಂದೆಯ ಸೇವೆ ಮಾಡುತ್ತಾ ಆ ಹುಡುಗಿಯ ಸನಿಹದಲ್ಲೇ ಇರುತ್ತಾ ಅವಳ ಪ್ರೀತಿಗಾಗಿ ನಾನಾ ವಿಧದ ಚೇಷ್ಟೆಗಳನ್ನು ಮಾಡುತ್ತಿರುತ್ತಾನೆ.

  ಎರಡನೇ ಪ್ರೇಮ ಪ್ರಕರಣವೂ ಠುಸ್

  ಎರಡನೇ ಪ್ರೇಮ ಪ್ರಕರಣವೂ ಠುಸ್

  ಹೀಗಿರುವಾಗ, ಒಮ್ಮೆ ಆ ಹುಡುಗಿಯ ತಂದೆ ತನ್ನ ಮಗಳಿಗೆ ತಾನು ನೋಡಿರುವ ಒಬ್ಬ ಶ್ರೀಮಂತ ಹುಡುಗನನ್ನೇ ಮದುವೆಯಾಗುವಂತೆ ಒತ್ತಾಯಿಸಿ, ಮಗಳನ್ನು ಮದುವೆಗೆ ಒಪ್ಪಿಸುವುದನ್ನು ಚಿರು ಕೇಳಿಸಿಕೊಳ್ಳುತ್ತಾನೆ. ಆ ಹುಡುಗಿಯನ್ನು ಪ್ರೀತಿಸುವ ಚಿರು ಆಸೆ ನೀರ್ಗುಳ್ಳೆಯಂತೆ ಒಡೆದುಹೋಗುತ್ತದೆ. ದೇವರು ಖಂಡಿತ ಮತ್ತೊಬ್ಬ ಸುಂದರ ಹುಡುಗಿಯನ್ನು ಕಳುಹಿಸತ್ತಾನೆ ನೋಡುತ್ತಿರು ಎಂದು ಹೇಳಿ ಆಗಸ ನೋಡುತ್ತಾನೆ. ಮರುದಿವಸ ಹೂಮಾರುವ ಜಯಮ್ಮನ ಅಂಗಡಿಯಲ್ಲಿ ಒಬ್ಬ ಸುಂದರ ಹುಡುಗಿಯನ್ನು ಚಿರು ನೋಡುತ್ತಾನೆ. ಅವಳಿಗೆ ತನ್ನ ತಾಯಿಯೊಂದಿಗೆ ಆಸ್ಪತ್ರೆಗೆ ಬಂದು ಅವಳಿಗೆ ಚಿಕಿತ್ಸೆ ಕೊಡಿಸು ಎಂದು ಸಲಹೆ ನೀಡಿ ಹೊರಡುತ್ತಾನೆ. ಆ ಹುಡುಗಿ ತನ್ನ ತಾಯಿಯನ್ನು ಕರೆದುಕೊಂಡು ಅರೋಗ್ಯ ಧಾಮಕ್ಕೆ ಬಂದಾಗ ಅವನ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಆದರೆ ಆ ಸುಂದರ ಹುಡುಗಿ ಕಣ್ಣು ಕಾಣದ ಕುರುಡಿ ಎಂದು ಅರಿವಾದಾಗ ದುಃಖವಾದರೂ ತನಗೆ ತಾನೇ ಸಮಾಧಾನಿಸುತ್ತ, ಕುರುಡಿಯಾದರು ಅವಳನ್ನು ಪ್ರೀತಿಸ್ತೀನಿ ಎಂದು ಅಲ್ಲಿನ ಸ್ನೇಹಿತರಿಗೆಲ್ಲ ಹೇಳಿ ಅವಳ ತಾಯಿಯ ಶುಶ್ರೂಷೆ ಮಾಡುತ್ತ ಅವಳ ಸ್ನೇಹವನ್ನು ಗಳಿಸುತ್ತಾನೆ.

  ಮೂರಕ್ಕೆ ಮುಕ್ತಾಯ

  ಮೂರಕ್ಕೆ ಮುಕ್ತಾಯ

  ಆದರೆ ಕೆಲವು ದಿನಗಳ ನಂತರ ಆ ಹುಡುಗಿಗೆ ಮತ್ತೊಬ್ಬ ಪ್ರಿಯಕರನಿರುವುದು ತಿಳಿದು ಅವನ ಎರಡನೇ ಪ್ರೇಮ ಪ್ರಕರಣವೂ ಠುಸ್ ಆಗುತ್ತದೆ. ಮತ್ತೆ ರಾತ್ರಿ ಗೆಳೆಯನೊಂದಿಗೆ ದೇವರಿಗೆ ಶಪಿಸುತ್ತಾ ಆಗಸ ನೋಡುತ್ತಿರಲು ಮತ್ತೊಂದು ನಕ್ಷತ್ರ ಕಣ್ಣ ಮುಂದೆ ಬೀಳುತ್ತದೆ. ಚಿರುಗೆ ಮತ್ತೊಮೆ ಆಸೆ ಚಿಗುರುತ್ತದೆ. ದೇವರು ಮೂರಕ್ಕೆ ಮುಕ್ತಾಯ ಮಾಡುತ್ತಾನೆ ನೋಡು ಎಂದು ಹೇಳಿ ಮರುದಿವಸ ಆರೋಗ್ಯ ಧಾಮಕ್ಕೆ ಬಂದಾಗ ತನ್ನ ಅಭಿಮಾನದ ನಟಿ ಪ್ರಿಯ ಅಲ್ಲಿಗೆ ತುರ್ತು ಚಿಕಿತ್ಸೆಗೆ ದಾಖಲಾಗಿರುವುದು ತಿಳಿಯುತ್ತದೆ. ತನ್ನ ಮೆಚ್ಚಿನ ನಟಿಯನ್ನು ಭೇಟಿ ಮಾಡಲು ಓಡೋಡಿ ಹೋಗುತ್ತಾನೆ. ಅವಳ ಶುಶ್ರೂಷೆಯನ್ನು ವಹಿಸಿಕೊಂಡು ಅವಳ ಪ್ರೀತಿಯನ್ನುಗಳಿಸಲು ಪ್ರಯತ್ನ ಪಡುತ್ತಾನೆ. ಮೂರನೇ ಪ್ರೇಮ ಪ್ರಕರಣದಲ್ಲಿ ನಮ್ಮ ಚಿರು ಯಶಸ್ವಿಯಾಗುತ್ತಾನಾ? ಯಾವ ಹುಡುಗಿ ಅವನಿಗೆ ಒಲಿಯುತ್ತಾಳೆ? ಚಿರುವಿಗೆ ಯಾವ ಹುಡುಗಿ "ಅಯ್ ಲವ್ ಯೂ" ಎಂದು ಹೇಳುತ್ತಾಳೆ? ಇದನ್ನು ನೀವು ತೆರೆಯ ಮೇಲೆ ನೋಡಿ ಆನಂದಿಸಿ.

  ನಟನೆಯಲ್ಲಿ ನೈಜತೆ ಇಲ್ಲ

  ನಟನೆಯಲ್ಲಿ ನೈಜತೆ ಇಲ್ಲ

  ಚಿರುವಿನ ಪಾತ್ರಕ್ಕೆ ಪ್ರಶಾಂತ್ ಅವರು ನ್ಯಾಯ ಒದಗಿಸಿದ್ದಾರೆ. ಕೆಲವು ದೃಶ್ಯಗಳಲ್ಲಿ ಅವರ ನಟನೆಯಲ್ಲಿ ನೈಜತೆ ಇಲ್ಲವೆನಿಸಿದರೂ ಒಟ್ಟಾರೆಯಾಗಿ ಅವರು ನಟನೆಯಲ್ಲಿ ಮತ್ತಷ್ಟು ಪಳಗಿದ್ದಾರೆ ಎಂದು ಹೇಳಬಹುದು. ಚಿತ್ರದ ಮೂವರು ನಾಯಕಿಯರೂ ತಮ್ಮ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಕೃತ್ತಿಕಾ ರವೀಂದ್ರ ಅವರು ಬೆಳ್ಳಿತೆರೆಗೆ ಮತ್ತೆ ರೀ ಎಂಟ್ರಿ ಕೊಡುತ್ತಿರುವ ಚಿತ್ರ ಇದು. ಒಬ್ಬ ಅನುಭವಿ ನಟಿಯಂತೆ ಲೀಲಾಜಾಲವಾಗಿ ಮಾಡಿ ಎಲ್ಲರ ಮನಗೆಲ್ಲುತ್ತಾರೆ. ಹಾಡುಗಳ ನೃತ್ಯದಲ್ಲಿ ಮೋಹಕವಾಗಿ ನರ್ತಿಸಿದ್ದಾರೆ. ಕೃತ್ತಿಕಾ ಅವರು ಮುಂದೆ ಒಳ್ಳೆ ನಟಿಯಾಗುವ ಎಲ್ಲಾ ಲಕ್ಷಣಗಳನ್ನು ತೋರಿಸಿದ್ದಾರೆ. ಮೋಹಕ ಸುಂದರಿಯಾಗಿ ಲೇಖಾ ಚಂದ್ರ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಮುಗ್ಧ ಕುರುಡು ಹುಡುಗಿಯ ಪಾತ್ರದಲ್ಲಿ ಅಧಿತಿ ರಾವ್ ಕೂಡ ಮನೋಜ್ನ್ಯವಾಗಿ ಅಭಿನಯಿಸಿದ್ದಾರೆ.

  ರಾಕೇಶ್ ತಿಲಕ್ ಸೊಗಸಾದ ಕ್ಯಾಮರಾ ಕೈಚಳಕ

  ರಾಕೇಶ್ ತಿಲಕ್ ಸೊಗಸಾದ ಕ್ಯಾಮರಾ ಕೈಚಳಕ

  ಪೋಷಕ ಪಾತ್ರದಲ್ಲಿ ಸುಂದರ್, ಅಚ್ಯುತ್ ಕುಮಾರ್, ಶ್ರೀಕಾಂತ್ ಹೆಬ್ಳಿಕರ್, ನರ್ಸ್ ಜಯ ಹಾಗೂ ಇತರರು ತಮ್ಮ ನೈಜ ಅಭಿನಯದಿಂದ ಮನತಣಿಸುತ್ತಾರೆ. ಹಾಸ್ಯ ಸನ್ನಿವೇಶಗಳಲ್ಲಿ ಇವರ ಕೊಡುಗೆ ಗಣನೀಯ. ಈ ಎಲ್ಲಾ ಕಲಾವಿದರಿಗೂ ಹ್ಯಾಟ್ಸ್ ಆಫ್.ರಾಕೇಶ್ ತಿಲಕ್ ಅವರ ಸೊಗಸಾದ ಕ್ಯಾಮರಾ ಕೈಚಳಕ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ಅದರಲ್ಲೂ ರಾಜಸ್ಥಾನದ ಅರಮನೆಗಳು, ಮರಳುಗಾಡು, ಚಿಕ್ಕಮಗಳೂರಿನ ಮಲೆನಾಡಿನ ಕಳಸ ಮತ್ತು ಸುತ್ತಮುತ್ತಲಿನ ಸುಂದರ ಸ್ಥಳಗಳನ್ನು ಮೋಹಕವಾಗಿ ಸೆರೆಹಿಡಿದಿದ್ದರೆ. ಚಿತ್ರದ ಎಡಿಟಿಂಗ್ ಇನ್ನೂ ಹೆಚ್ಚು ಪರಿಣಾಮಕಾಯಾಗಿ ಮಾಡಬಹುದಿತ್ತು ಎಂದು ನನ್ನ ಅನಿಸಿಕೆ. ಚಿತ್ರದ ಓಟಕ್ಕೆ ಪೂರಕವಲ್ಲದ ಕೆಲವು ಅನವಶ್ಯಕ ಹಾಸ್ಯ ಸನ್ನಿವೇಶಗಳಿಗೆ ಕತ್ತರಿ ಹಾಕಿ ಚಿತ್ರದ ಸಮಯವನ್ನು ಸ್ವಲ್ಪ ಕಡಿಮೆ ಮಾಡಬಹುದಿತ್ತೇನೋ.

  ಕುತೂಹಲಕಾರಿಯಿಯಾದ ತಿರುವುಗಳು

  ಕುತೂಹಲಕಾರಿಯಿಯಾದ ತಿರುವುಗಳು

  ಬಿ.ಜೆ ಭರತ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿರುವ ಚಿತ್ರದ ಹಾಡುಗಳು ಮತ್ತೆ ಮತ್ತೆ ಕೇಳುವಂತೆ ಮನಸ್ಸಿಗೆ ಮುದ ನೀಡುತ್ತವೆ. ಹಾಡುಗಳು ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಚಿತ್ರದ ನಿರ್ದೇಶಕ ಕಿರಣ್ ಗೋವಿಯವರು ಚಿತ್ರಕಥೆಯನ್ನು ಪರಿಣಾಮಕಾರಿಯಿಯಾಗಿ ಹೇಳಲು ಪ್ರಯತ್ನಿಸಿದ್ದಾರೆ. ಕಥೆಯಲ್ಲಿ ಕುತೂಹಲಕಾರಿಯಿಯಾದ ತಿರುವುಗಳನ್ನು, ಹದವಾದ ಹಾಸ್ಯ ಸನ್ನಿವೇಶಗಳೊಂದಿಗೆ ಬೆರೆಸಿ ತಮ್ಮ ನಿರ್ದೇಶಕ ಪ್ರತಿಭೆಯನ್ನು ಮತೊಮ್ಮೆ ತೋರಿಸಿದ್ದಾರೆ.

  ಮಧುರವಾದ ಹಾಡುಗಳು

  ಮಧುರವಾದ ಹಾಡುಗಳು

  ಕಥೆಯ ಓಟಕ್ಕೆ ಬಂಗ ಬಾರದಂತೆ ಮಧುರವಾದ ಹಾಡುಗಳನ್ನ ರಾಜಸ್ಥಾನ ಹಾಗೂ ನಮ್ಮ ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರಿಸಿ ಮನರಂಜನೆಗೆ ಒತ್ತು ನೀಡಿದ್ದಾರೆ. ಜೊತೆಗೆ ಅನೀರೀಕ್ಷಿತ ತಿರುವುಗಳೊಂದಿಗೆ ಕೊನೆಯಲ್ಲಿ ದೃಷ್ಟಿ ದಾನ ಮಾಡುವುದಕ್ಕೆ ಪ್ರೇರಣೆ ನೀಡುವಂತೆ ಪ್ರೇಕ್ಷಕರಿಗೆ ಒಳ್ಳೆಯ ಸಂದೇಶವನ್ನು ನೀಡಿದ್ದಾರೆ. ಕನ್ನಡ ಚಿತ್ರ ಪ್ರೇಕ್ಷಕರು ಇಂಥ ಸದಭಿರುಚಿಯ ಮನರಂಜನೆ ಹಾಗೂ ಸಾಮಾಜಿಕ ಕಾಳಜಿಯಿರುವ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ಕಳಕಳಿಯ ಮನವಿ ಮಾಡುತ್ತೇನೆ.

  English summary
  'Orata' fame Prashanth's 'Yaarige Yaaruntu' kannada movie review. The movie have three love stories and it is a family entertainer with lot of twist and turns.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X