For Quick Alerts
  ALLOW NOTIFICATIONS  
  For Daily Alerts

  ಬುಡಕಟ್ಟು ಸಮುದಾಯದ ಶಿಕ್ಷಣಕ್ಕೆ ಒಂದು ಕೋಟಿ ದೇಣಿಗೆ ನೀಡಿದ ನಟ ಸೂರ್ಯ

  |

  ಕೆಲವು ಸಿನಿಮಾ ನಟರು ಕೇವಲ ತೆರೆಯ ಮೇಲೆ ಅಷ್ಟೇ ಅಲ್ಲದೆ ನಿಜಜೀವನದಲ್ಲಿ ಹೀರೋ ಗಳಾಗಿರುತ್ತಾರೆ. ಅವರ ಸಾಮಾಜಿಕ ಕಾಳಜಿ ಎಲ್ಲರಿಗೂ ಮಾದರಿಯಾಗುವಂತಹುದು. ನಮ್ಮ ನಡುವೆ ಅಂತಹ ಒಂದು ಜೀವಂತ ಉದಾಹರಣೆ ಪುನೀತ್ ರಾಜಕುಮಾರ್ ಅವರು. ಭೌತಿಕವಾಗಿ ಪುನೀತ್ ಅವರು ಇತ್ತೀಚಿಗೆ ನಮ್ಮಿಂದ ದೂರವಾದರು ಸಹ ಅವರ ಸೇವಾಕಾರ್ಯಗಳ ಮೂಲಕ ಸದಾ ನಮ್ಮ ನಡುವೆ ಜೀವಂತವಾಗಿರುತ್ತಾರೆ. 26 ಅನಾಥಾಶ್ರಮಗಳು, 17 ಗೋಶಾಲೆಗಳು,45 ಉಚಿತ ಶಾಲೆ, 16 ವೃದ್ಧಾಶ್ರಮ, ಮೈಸೂರಿನಲ್ಲಿ ಹೆಣ್ಣುಮಕ್ಕಳಿಗಾಗಿ ಶಕ್ತಿಧಾಮ ಜೊತೆಗೆ 1,800 ಮಕ್ಕಳ ಶಿಕ್ಷಣ ವ್ಯವಸ್ಥೆ ಈ ಎಲ್ಲಾ ಸೇವಾ ಕಾರ್ಯಗಳಿಂದ ಅಪ್ಪು ಕನ್ನಡಿಗರ ಮನದಲ್ಲಿ ಸದಾ ಶಾಶ್ವತ.

  ಒಂದೆರಡು ದಿನಗಳ ಹಿಂದೆ ತಮಿಳು ನಟ ವಿಶಾಲ್ ಅವರು ಈ 1,800 ಮಕ್ಕಳ ಮುಂದಿನ ವಿದ್ಯಾಭ್ಯಾಸದ ಹೊಣೆ ಹೊತ್ತು ಕೊಳ್ಳುವುದಾಗಿ ಕೂಡ ಹೇಳಿದ್ದಾರೆ. ಅಲ್ಲದೆ ನಾವು ಇತ್ತೀಚಿನ ದಿನಗಳಲ್ಲಿ ನಾವು ಗಮನಿಸಿದಂತೆ ನಾಯಕ ನಟ ಯಶ್ ಅವರು ಕೂಡ ಸಾಕಷ್ಟು ಜನಪರವಾದ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಯೋಜನೆಗಳಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಇಂತಹ ನಾಯಕ ನಟರು ಕೇವಲ ರೀಲ್ ಮೇಲೆ ಅಲ್ಲದೆ ರಿಯಲ್ ಲೈಫಿನಲ್ಲಿ ಕೂಡ ಹೀರೋಗಳು. ಇಂತಹದೇ ಸಾಲಿಗೆ ಸೇರಿದ ಮತ್ತೊಬ್ಬ ನಟ ಕಾಲಿವುಡ್‌ನ ಸೂಪರ್ ಸ್ಟಾರ್ ಸೂರ್ಯ.

  ತಂದೆಗೆ ತಕ್ಕ ಮಗ ಸೂರ್ಯ

  ತಂದೆಗೆ ತಕ್ಕ ಮಗ ಸೂರ್ಯ

  ಕಾಲಿವುಡ್‌ನಲ್ಲಿ ಪ್ರಮುಖವಾಗಿ ಮೂರು ಹೆಸರುಗಳನ್ನು ಸೂಪರ್ ಸ್ಟಾರ್ ಗಳಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮೊದಲನೇ ಸ್ಥಾನದಲ್ಲಿ ವಿಜಯ್ ಇದ್ದರೆ, ಎರಡನೇ ಸ್ಥಾನದಲ್ಲಿ ಅಜಿತ್ ಕಾಣುತ್ತಾರೆ. ಇನ್ನು ಮೂರನೇ ಸ್ಥಾನದಲ್ಲಿರುವ ಸೂಪರ್ ಸ್ಟಾರ್ ಸೂರ್ಯ. ಯಾವುದೇ ಹೀರೋಯಿಸಂಗೆ ಅಂಟಿಕೊಳ್ಳದೆ ಎಲ್ಲ ತರದ ಪಾತ್ರಗಳನ್ನು ಮಾಡುವುದರಲ್ಲಿ ಸೂರ್ಯ ಎತ್ತಿದ ಕೈ. ಹೀಗಾಗಿಯೇ 'ಗಜನಿ' ಅಂತಹ ಕಮರ್ಷಿಯಲ್ ಚಿತ್ರ ವಿರಬಹುದು 'ಸೂರರೈ ಪೊಟ್ರು' ಅಂತಹ ಬಯೋಪಿಕ್ ಇರಬಹುದು ಲೀಲಾಜಾಲವಾಗಿ ಸೂರ್ಯ ನಟಿಸಿದ್ದಾರೆ. ನಟ ಸೂರ್ಯ ವೈಯಕ್ತಿಕ ಜೀವನದಲ್ಲೇ ಇರಬಹುದು ಅಥವಾ ಸಿನಿಮಾರಂಗದಲ್ಲಿ ಆಗಬಹುದು ಅತ್ಯಂತ ಶಿಸ್ತು ಮತ್ತು ಸಂಯಮವನ್ನು ಒಳಗೊಂಡಿರುವ ನಟ. ಸೂರ್ಯ ಮಾತ್ರ ಅಲ್ಲ ಸೂರ್ಯನ ಅವರ ತಮ್ಮ ಮತ್ತು ತಮಿಳಿನ ಮತ್ತೊಬ್ಬ ಸ್ಟಾರ್ ನಟ ಕಾರ್ತಿ ಕೂಡ ಇದೆ ಗುಣವಿಶೇಷಗಳನ್ನು ಹೊಂದಿದ್ದಾರೆ. ಇಬ್ಬರು ಹೀಗೆ ಘನತೆ ಮತ್ತು ಗೌರವದಿಂದ ಸಿನಿಮಾ ಮತ್ತು ವೈಯಕ್ತಿಕ ಜೀವನದಲ್ಲಿ ಬದುಕುತ್ತಿರುವುದರ ಹಿಂದೆ ಇರುವುದು ಅವರ ತಂದೆ, ತಮಿಳಿನ ಹಿರಿಯ ನಟ ಶಿವಕುಮಾರ್. ಶಿವಕುಮಾರ್, ರಜನಿಕಾಂತ್ ಮತ್ತು ಕಮಲಹಾಸನ್ ಅವರ ಸಮಕಾಲೀನರು. ಸಿನಿಮಾ ರಂಗದ ಜೊತೆಗೆ ತಮ್ಮ ವೈಯಕ್ತಿಕ ಜೀವನವನ್ನು ಕೂಡ ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಿಕೊಂಡು ಬಂದವರು.

  ಅವರು ಸಾಮಾಜಿಕ ಮೌಲ್ಯಗಳು ಮತ್ತು ಕುಟುಂಬ ಆಧಾರಿತ ಚಿತ್ರಗಳನ್ನು ಹೆಚ್ಚಿಗೆ ಮಾಡಿದರು.ಅವರು ಎಂದು ಕೂಡ ದ್ವಂದ್ವಾರ್ಥ ಡೈಲಾಗುಗಳನ್ನು ಹೊಡೆಯಲಿಲ್ಲ. ಸಭ್ಯತೆ ಮೀರಿದ ಪಾತ್ರಗಳನ್ನು ಒಪ್ಪಿಕೊಳ್ಳಲಿಲ್ಲ. ಹೀಗಾಗಿಯೇ ಶಿವಕುಮಾರ್ ಎಂದರೆ ತಮಿಳು ಚಿತ್ರರಂಗದಲ್ಲಿ ಒಂದು ವಿಶಿಷ್ಟವಾದ ಸ್ಥಾನವಿದೆ ಇದನ್ನು ಅರಿತಿರುವ ಇಬ್ಬರು ಮಕ್ಕಳು ಕೂಡ ತಮ್ಮ ತಂದೆಯ ಗೌರವಕ್ಕೆ ಧಕ್ಕೆ ಬರದಂತೆ ಜೀವನ ರೂಪಿಸಿಕೊಂಡಿದ್ದಾರೆ.

  'ಅಗರಂ' ಪ್ರತಿಷ್ಠಾನದ ಮೂಲಕ ಸಾಮಾಜಿಕ ಕಾರ್ಯಗಳು

  'ಅಗರಂ' ಪ್ರತಿಷ್ಠಾನದ ಮೂಲಕ ಸಾಮಾಜಿಕ ಕಾರ್ಯಗಳು

  ಹೀರೋ ಸೂರ್ಯ ಬೆಳ್ಳಿತೆರೆಯಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಹೀರೋ. ಏಕೆಂದರೆ ಅವರು ತಮ್ಮ ಹೆಂಡತಿ, ನಟಿ ಜ್ಯೋತಿಕಾ ಹಾಗೂ ತಮ್ಮ ಕಾರ್ತಿ ಜೊತೆ 'ಅಗರಂ' ಎಂಬ ಪ್ರತಿಷ್ಠಾನ ಸ್ಥಾಪಿಸಿ ಅದರ ಮೂಲಕ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಮಹಿಳೆಯರಿಗೆ ಸ್ವಾವಲಂಬನೆಯ ಶಿಕ್ಷಣ ಮತ್ತು ಸ್ವಯಂ ಉದ್ಯೋಗ ನೀಡುವುದರಲ್ಲೂ ಕೂಡ ಈ ಪ್ರತಿಷ್ಠಾನ ಕೆಲಸ ಮಾಡುತ್ತಿದೆ. ಅನೇಕ ಬಾರಿ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ದೇಣಿಗೆಯನ್ನು ಘೋಷಿಸುತ್ತಿದ್ದ ಸೂರ್ಯ ಅಂಡ್ ಫ್ಯಾಮಿಲಿ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಸೂರ್ಯ ಇತ್ತೀಚೆಗೆ ಬುಡಕಟ್ಟು ವಿದ್ಯಾರ್ಥಿಗಳಿಗೆ 1 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಈ ಮೊತ್ತವನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಹಸ್ತಾಂತರಿಸಿದ್ದಾರೆ.

  'ಜೈ ಭೀಮ್' ಚಿತ್ರದಲ್ಲಿ ಬುಡಕಟ್ಟು ಸಮುದಾಯದ ಬಗ್ಗೆ ಧ್ವನಿಯೆತ್ತಿದ ಸೂರ್ಯ

  'ಜೈ ಭೀಮ್' ಚಿತ್ರದಲ್ಲಿ ಬುಡಕಟ್ಟು ಸಮುದಾಯದ ಬಗ್ಗೆ ಧ್ವನಿಯೆತ್ತಿದ ಸೂರ್ಯ

  ಸೂರ್ಯ ಇಂದು ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಒಂದು ಕೋಟಿ ನೀಡುವುದರ ಹಿಂದೆ ಕೂಡ ಒಂದು ಹಿನ್ನೆಲೆ ಇದೆ. ಅದೇನೆಂದರೆ, ಹೀರೋ ಸೂರ್ಯ ಅಭಿನಯದ 'ಜೈ ಭೀಮ್' ಸಿನಿಮಾ ನವೆಂಬರ್ 2 ಮಂಗಳವಾರ ಬಿಡುಗಡೆಯಾಗಲಿದೆ. ಆ ಸಿನಿಮಾದಲ್ಲಿ ಸೂರ್ಯ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲೂ ಆದಿವಾಸಿಗಳ ಪರವಾಗಿ ಹೋರಾಡುವ ವಕೀಲನ ಪಾತ್ರದಲ್ಲಿ ಸೂರ್ಯ ಇಂಪ್ರೆಸ್ ಮಾಡಲಿದ್ದಾರೆ. ಟಿ.ಜಿ. ಜ್ಞಾನವೇಲ್ ನಿರ್ದೇಶಿಸಿರುವ ಈ ಚಿತ್ರವು ಥಿಯೇಟರ್‌ಗಳ ಮೂಲಕ ಬಿಡುಗಡೆಯಾಗುವುದಕ್ಕಿಂತ ಹೆಚ್ಚಾಗಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಇದು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲೂ ಲಭ್ಯವಿದೆ. ಒಬ್ಬ ವಕೀಲರು ಹೇಗೆ ಕಾನೂನು, ಸಮಾನತೆ ಮತ್ತು ಮಾನವ ಹಕ್ಕುಗಳ ಪರವಾಗಿ ನಿಂತು ಆದಿವಾಸಿಗಳ ಪರ ಹೋರಾಡಿದರು ಎಂಬುದು ಕಥೆ.

  ಸೂರ್ಯ ಅವರ ಮುಂದಿನ ಚಿತ್ರಗಳು

  ಸೂರ್ಯ ಅವರ ಮುಂದಿನ ಚಿತ್ರಗಳು

  'ಜೈ ಭೀಮ್' ನಂತರ ಸೂರ್ಯ ನಿರ್ದೇಶಕ ಪಾಂಡಿರಾಜ್, ನಿರ್ದೇಶನದಲ್ಲಿ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ 'ಎಡುಕ್ಕುಂ ತುನಿಂಜಾವಿನ್' ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಅದರ ನಂತರ ವೆಟ್ರಿಮರಿನ್ ನಿರ್ದೇಶನದಲ್ಲಿ 'ವಡಿವಸೈಲ್' ಎಂಬ ಸಿನಿಮಾ ನಟಿಸಲಿದ್ದಾರೆ. ಇದರ ಜೊತೆಗೆ 'ಸೂರರೈ ಪೊಟ್ರು'ಅಂತಹ ವಿಭಿನ್ನ ಆಯಾಮದ ಚಿತ್ರ ನೀಡಿದ ನಿರ್ದೇಶಕ ಸುಧಾ ಕೊಂಗರ ಜೊತೆ ಮತ್ತೆ ಕೈಜೋಡಿಸಲಿದ್ದಾರೆ. ಕೋವಿಡ್ ಎಫೆಕ್ಟ್ ನಂತರ ಸೂರ್ಯ ತಮ್ಮ ಬ್ಯಾನರ್‌ನಡಿಯಲ್ಲಿ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕಿಂತ ಡೈರೆಕ್ಟ್ ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.'ಸೂರರೈ ಪೋಟ್ರು' ಚಿತ್ರ ಅಮೆಜಾನ್‌ನಲ್ಲಿ ಬಿಡುಗಡೆಯಾದಾಗಲೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಸೂರ್ಯ ಕೂಡ 'ಜೈ ಭೀಮ್' ಸಿನಿಮಾವನ್ನು ನೇರವಾಗಿ ಅಮೆಜಾನ್ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. 'ಜೈ ಭೀಮ್' ಚಿತ್ರಕ್ಕೆ ಯಾವ ತರದ ಪ್ರತಿಕ್ರಿಯೆ ಪ್ರೇಕ್ಷಕರಿಂದ ವ್ಯಕ್ತವಾಗುತ್ತದೆ ಅಂತ ಕಾದು ನೋಡಬೇಕಿದೆ.

  English summary
  Actor Surya donated 1 core for tribals education. Hand over cheque to CM Stalin.
  Tuesday, November 2, 2021, 14:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X