ಪುನೀತ್ ತಮಿಳಿನಲ್ಲಿ ನಟಿಸಲು ಸಿದ್ಧವಂತೆ; ಆದರೆ!
ಪುನೀತ್ ವಿಧಿಸಿರುವ ಷರತ್ತು ಇಷ್ಟೇ. ಅವರು ತಮಿಳು ಚಿತ್ರದಲ್ಲಿ ನಟಿಸಲು ಸಿದ್ಧ. ಆದರೆ, ಆ ಚಿತ್ರ ತಮಿಳಿನಲ್ಲಿ ಮಾತ್ರ ಬಿಡುಗಡೆ ಆಗಬಾರದು. ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಬೇಕು. ನಾನು ಯಾವುದೇ ಬಹುಭಾಷಾ ಚಿತ್ರದಲ್ಲಿ ನಟಿಸಿದರೂ ಅದು ಏಕಕಾಲಕ್ಕೆ ಕನ್ನಡದಲ್ಲೂ ಬಿಡುಗಡೆ ಆಗಬೇಕು" ಎಂದು ಟೈಮ್ಸ್ ಆಫ್ ಇಂಡಿಯಾ ಬಹಿರಂಗ ಸಂದರ್ಶನದಲ್ಲಿ ಪುನೀತ್ ತಿಳಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ' ಸಂದರ್ಶನದಲ್ಲಿ "ನೀವು ತಮಿಳು ಸಿನಿಮಾದಲ್ಲಿ ನಟಿಸಲು ಸಿದ್ಧರಿದ್ದೀರಾ" ಎಂಬುದು ಸಂದರ್ಶಕರ ಪ್ರಶ್ನೆಯಾಗಿತ್ತು. ಇದಕ್ಕೆ ಪುನೀತ್ ಉತ್ತರ, "ಕನ್ನಡ-ತಮಿಳು ಎರಡೂ ಭಾಷೆಯಲ್ಲಿ ಬರುವ ಚಿತ್ರದಲ್ಲಿ ನಟಿಸಬಲ್ಲೆ. ಯಾವುದೇ ಒಂದು ಭಾಷೆಯ ಪ್ರೇಕ್ಷಕರನ್ನು ಯಾಕೆ ಕಳೆದುಕೊಳ್ಳಬೇಕು?" ಎಂಬುದಾಗಿದೆ.
ಚಿತ್ರರಂಗದಲ್ಲಿ ಇತ್ತೀಚಿಗೆ ಹೊಸದೊಂದು ಟ್ರೆಂಡ್ ಬೆಳೆಯುತ್ತಿದೆ. ಅದು ಬಹುಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ. ರೂಪಾ ಅಯ್ಯರ್ ನಿರ್ದೇಶನದ ಚಂದ್ರ, ನಾಗಶೇಖರ್ ನಿರ್ದೇಶನದ ಮೈನಾ ಹಾಗೂ ಕುಮಾರ್ ನಿರ್ದೇಶನ, ದ್ವಾರಕೀಶ್ ನಿರ್ಮಾಣದ ಚಾರುಲತಾ ಹೀಗೆ ಸಾಲು ಸಾಲು ಚಿತ್ರಗಳು ಎರಡು ಅಥವಾ ಎರಡಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಸಿಧ್ಧವಾಗುತ್ತಿವೆ.
ಪುನೀತ್ ಅರ್ಥವನ್ನು ಹೀಗೆ ಹೇಳಬಹುದು. 'ಪವರ್ ಸ್ಟಾರ್ ಪುನೀತ್ ನೇರವಾಗಿ ಯಾವುದೇ ತಮಿಳು ಚಿತ್ರದಲ್ಲಿ ನಟಿಸುವುದಿಲ್ಲ. ಆದರೆ, ಯಾರಾದರೂ ಬಹುಭಾಷೆಗಳಲ್ಲಿ ಚಿತ್ರವೊಂದನ್ನು ನಿರ್ಮಿಸಲು ಮುಂದಾದರೆ ಪುನೀತ್ ನಟಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸಬಹುದು.' ಒಟ್ಟಾರೆ, ಕನ್ನಡದ ಕಿಚ್ಚ ಸುದೀಪ್ ತೆಲುಗಿನ 'ಈಗ' ಚಿತ್ರದಲ್ಲಿ ನಟಿಸಿ ಯಶಸ್ವಿಯಾದ ನಂತರ ಮಿಕ್ಕವರಿಗೂ ಆ ಬಗ್ಗೆ ಪ್ರಶ್ನೆಗಳು ಬರತೊಡಗಿವೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












