For Quick Alerts
  ALLOW NOTIFICATIONS  
  For Daily Alerts

  ನಮ್ಮನ್ನಗಲಿದ ನಕ್ಷತ್ರ ಸೌಂದರ್ಯಾ ಆಪ್ತ ನೆನಪುಗಳು

  |

  ದಕ್ಷಿಣ ಭಾರತದಲ್ಲಿ ದೇವತೆಯಂತೆ ಮರೆದ ಅಚ್ಚ ಕನ್ನಡತಿ ನಟಿ ಸೌಂದರ್ಯಾ, ಈಗಲೂ ನಮ್ಮೊಂದಿಗೆ ಇರಬೇಕಿತ್ತು. ಇಂದು (ಜುಲೈ 8) ಈ ಚಿರಸ್ಮರಣೀಯ ತಾರೆಯ ಜನುಮದಿನ. ಕೋಲಾರ ಜಿಲ್ಲೆ ಮುಳುಬಾಗಿಲಿನಲ್ಲಿ 1972, ಜುಲೈ 18 ರಂದು ಜನಿಸಿದ ಸೌಂದರ್ಯಾ, ಕನ್ನಡ ಚಿತ್ರ ನಿರ್ಮಾಪಕ ಸತ್ಯನಾರಾಯಣರ ಮಗಳು. ಕೇವಲ ಮೂವತ್ತೊಂದೇ ವರ್ಷದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ತೊಂಬತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಮರೆಯಾದ ತಾರೆ.

  90ರ ದಶಕದಲ್ಲಿ ತೆಲುಗು ಚಿತ್ರರಂಗದಲ್ಲಿ ಅನಭಿಷಕ್ತ ರಾಣಿಯಾಗಿ ಮೆರೆದ ನಟಿ ಸೌಂದರ್ಯಾ, ತೆಲುಗಿನ ಅಂದಿನ ಖ್ಯಾತನಾಮರೆಲ್ಲರ ಜೊತೆ ನಟಿಸಿ ಶಹಬ್ಬಾಸ್ ಎನಿಸಿಕೊಂಡವರು. ಕನ್ನಡದಲ್ಲಿ ಕೂಡ 10 ಚಿತ್ರಗಳಲ್ಲಿ ನಟಿಸಿದ ಸೌಂದರ್ಯಾ, ಕೊನೆಯ ಚಿತ್ರ ಆಪ್ತಮಿತ್ರದ ಮೂಲಕ ಚಿತ್ರರಸಿಕರಿಗೆ ಆಪ್ತ ನೆನಪುಗಳನ್ನು ಬಿಟ್ಟು ಹೋದವರು. ಸೌಂದರ್ಯಾ ಮರೆಯಾಗಿರಬಹುದು, ಆದರೆ ಅವರ ನೆನಪು ಎಂದಿಗೂ ಮರೆಯಾಗದು.

  ಸೌಮ್ಯ ಎಂಬ ಮೂಲ ಹೆಸರಿನ ಇವರು ಸೌಂದರ್ಯಾ ಎಂದು ಸಿನಿಮಾಗೆ ಹೆಸರು ಬದಲಾಯಿಸಿಕೊಂಡವರು. ಹೆಸರಿಗೆ ತಕ್ಕಂತೆ ಸೌಂದರ್ಯದ ಗಣಿಯೇ ಆಗಿದ್ದ ಇವರು, ಕೇವಲ ನಟಿಯಾಗಿ ಮಾತ್ರವಲ್ಲದೇ ಉತ್ತಮ ನಡತೆಯ ಹುಡುಗಿ ಹಾಗೂ ಗೃಹಿಣಿಯಾಗಿ ಕೂಡ ಎಲ್ಲರ ಮೆಚ್ಚುಗೆ ಗಳಿಸಿದವರು. ಆಂಧ್ರದಲ್ಲಂತೂ ಇವರ ಜನಪ್ರಿಯತೆ ಅದ್ಯಾವ ಪರಿ ಇದೆಯೆಂದರೆ ಇಂದಿಗೂ ಎಲ್ಲರ ಮನೆಗಳಲ್ಲಿ ಸೌಂದರ್ಯಾ ಫೋಟೋ ರಾರಾಜಿಸುತ್ತಿದೆ.

  ಕನ್ನಡದಲ್ಲಿ ಗಂಧರ್ವ, ನನ್ನ ತಂಗಿ, ದೋಣಿ ಸಾಗಲಿ, ತೂಗುವೆ ಕೃಷ್ಣನಾ, ಸಿಪಾಯಿ, ನಾನು ನನ್ನ ಹೆಂಡ್ತೀರು, ಬಾ ನನ್ನ ಪ್ರೀತಿಸು, ದ್ವೀಪ, ನಾಗದೇವತೆ, ಶ್ರೀ ಮಂಜುನಾಥ ಚಿತ್ರಗಳಲ್ಲಿ ನಟಿಸಿ ಕನ್ನಡತನವನ್ನೂ ಮೆರೆದಿದ್ದಾರೆ. ದ್ವೀಪ ಚಿತ್ರವನ್ನು ಅವರೇ ನಿರ್ಮಿಸಿ ಅದಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅವರು ನಟಿಸಿರುವ ತೆಲುಗು ಚಿತ್ರಗಳ ಪಟ್ಟಿ ಸುಲಭವಾಗಿ ಬರೆಯಲಾಗದಷ್ಟು ದೊಡ್ಡದು.

  ಇನ್ನು, ಸೌಂದರ್ಯಾರ ಈ ಅಪರೂಪದ ಫೋಟೋವನ್ನು 'ಒನ್ ಇಂಡಿಯಾ ಕನ್ನಡ'ಕ್ಕೆ ಒದಗಿಸಿದವರು ಸೌಂದರ್ಯಾ ಪತಿ ಜಿ ಎಸ್ ರಘು. ಏಪ್ರಿಲ್ 27, 2003 ರಂದು ತಮ್ಮ ಬಾಲ್ಯ ಸ್ನೇಹಿತ, ದೂರದ ಸಂಬಂಧಿ ಸಾಫ್ಟ್ ವೇರ್ ಇಂಜಿನಿಯರ್ ಜಿ ಎಸ್ ರಘು ಅವರನ್ನು ಮದುವೆಯಾಗಿದ್ದರು ಸೌಂದರ್ಯಾ. ರಘು ಅವರೀಗ ಅಗಲಿದ ತಮ್ಮ ಪ್ರೀತಿಯ ಪತ್ನಿ ಸೌಂದರ್ಯಾ ಹೆಸರಿನಲ್ಲಿ ಜೀ ಕನ್ನಡ ವಾಹಿನಿಗೆ 'ಸೊಸೆ' ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. "ಸೌಂದರ್ಯಾ ಹೆಸರು ತಮ್ಮ ಮನದಲ್ಲಿ ಎಂದೆಂದಿಗೂ ಜೀವಂತ" ಎಂಬುದು ಸೌಂದರ್ಯಾರ ಪತಿ ರಘು ಅವರ ಮನದಾಳದ ಮಾತು.

  ಅಷ್ಟೇ ಅಲ್ಲ, ಅದೇ ವಿಮಾನ ಅಪಘಾತದಲ್ಲಿ ಸೌಂದರ್ಯಾ ಜೊತೆಗೇ ಸಾವನ್ನಪ್ಪಿದ ಅವರಣ್ಣ 'ಅಮರ್' ಹೆಸರನ್ನೂ ಸೇರಿಸಿ 'ಅಮರ ಸೌಂದರ್ಯಾ ಸ್ಕೂಲ್' ಕೂಡ ನಡೆಸಲಾಗುತ್ತಿದೆ. ಸೌಂದರ್ಯಾ ಓದಿದ ಶಾಲೆ, ಹುಟ್ಟೂರು ಎಲ್ಲೆಲ್ಲೂ ಸೌಂದರ್ಯಾ ಹೆಸರು ಕೇಳಿದರೆ ಸಾಕು, ಜನರು ಈಗಲೂ ರೋಮಾಂಚನ ಅನುಭವಿಸುತ್ತಾರೆ. ಅಗಲಿದ ನೆನಪು ಕಾಡಿ ಕಂಬನಿ ತುಂಬಿಕೊಳ್ಳುತ್ತಾರೆ.

  ಸೌಂದರ್ಯಾ ಎಂಬ ಹೆಸರು ಯಾರೂ ಎಂದೂ ಮರೆಯಲಾಗದ್ದು. ಕೇವಲ ಮೂವತ್ತೊಂದು ವರ್ಷದಲ್ಲಿ ಯಾರೂ ಊಹಿಸದಷ್ಟು ಎತ್ತರಕ್ಕೆ ಬೆಳೆದು ಏಪ್ರಿಲ್ 17, 2004 ರಂದು ವಿಮಾನ ಅಪಘಾತದಲ್ಲಿ ಶಾಶ್ವತವಾಗಿ ನಮ್ಮಿಂದ ಮರೆಯಾದ ತಾರೆ ಸೌಂದರ್ಯಾರ ಸವಿಸವಿ ನೆನಪುಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂತ ದಿನವಿಂದು. ಈ ಚಿರಸ್ಮರಣೀಯ ತಾರೆಯ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ ಎಂಬ ಹಾರೈಕೆ ಎಲ್ಲಾ ಸಿನಿಪ್ರಿಯರದು. (ಒನ್ ಇಂಡಿಯಾ ಕನ್ನಡ)

  English summary
  Today, on 18 July Actress Soudarya's Birth Day. Soundarya was the daughter of Kannada film producer and writer K. S. Satyanarayan. She was born in Mulubagilu of Kolar District on 18 July 1972. Before her death on 17 April 2004, she acted more than 90 films including Kannada, Telugu, Hindi, Tamil and Malayalam. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X