ಆಗಸ್ಟ್ 21ಕ್ಕೆ ಮೆಗಾಸ್ಟಾರ್ 153ನೇ ಚಿತ್ರದ ಅಪ್‌ಡೇಟ್
ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ ಚಿತ್ರೀಕರಣ ಮುಗಿಸಿದೆ. ಸರಿಯಾದ ದಿನ ನೋಡಿ ಚಿತ್ರಮಂದಿರಕ್ಕೆ ಬರುವುದಷ್ಟೇ ಬಾಕಿ. ರಾಮ್ ಚರಣ್ ತೇಜ ನಿರ್ಮಾಣ ಮಾಡಿ, ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.
ಈ ಚಿತ್ರದ ನಂತರ ಚಿರಂಜೀವಿ ಮತ್ತಷ್ಟು ಚಿತ್ರಗಳನ್ನು ಲೈನ್‌ಅಪ್ ಮಾಡಿಕೊಂಡಿದ್ದಾರೆ. ಮೊದಲು ಮಲಯಾಳಂ ಹಿಟ್ ಸಿನಿಮಾ ಲೂಸಿಫರ್ ತೆಲುಗು ರಿಮೇಕ್‌ನಲ್ಲಿ ಚಿರಂಜೀವಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಅಧಿಕೃತವಾಗಿ ಇನ್ನು ಹೆಸರಿಟ್ಟಿಲ್ಲ. ಆದರೆ, 'ಗಾಡ್‌ಫಾದರ್' ಎಂದು ಹೇಳಲಾಗುತ್ತಿದೆ.
ಈ ಚಿತ್ರಕ್ಕೆ ಸಂಬಂಧಿಸಿದಂತೆ ಮೊದಲ ಅಪ್‌ಡೇಟ್ ಆಗಸ್ಟ್ 21 ರಂದು ಸಂಜೆ 5 ಗಂಟೆಗೆ ಹೊರಬೀಳುತ್ತಿದೆ. ಮೊದಲ ಹಂತವಾಗಿ ಯಾವ ವಿಷಯ ಹಂಚಿಕೊಳ್ಳಲಿದ್ದಾರೆ ಎನ್ನುವುದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ಮೋಹನ್ ರಾಜ್ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ಆರ್‌ಬಿ ಚೌಧರಿ, ಎನ್‌ವಿ ಪ್ರಸಾದ್ ಬಂಡವಾಳ ಹಾಕುತ್ತಿದ್ದಾರೆ. ತೆಲುಗಿಗೆ ಬೇಕಾದಂತೆ ಚಿತ್ರಕಥೆ ಬದಲಾಯಿಸಿಕೊಂಡು, ಮಾಸ್ ಎಂಟರ್‌ಟೈನರ್ ಆಗಿ ತೆರೆಗೆ ತರಲು ನಿರ್ದೇಶಕರು ಸಜ್ಜಾಗಿದ್ದಾರೆ.

ಇನ್ನು ಈ ಚಿತ್ರಕ್ಕೆ ಇಬ್ಬರು ನಾಯಕಿಯರು ಪ್ರವೇಶವಾಗಿದೆ ಎಂದು ವರದಿಯಾಗಿದೆ. ಹಿರಿಯ ನಟಿ ಸುಹಾಸಿನಿ ಮತ್ತು ನಯನತಾರಾ ಇಬ್ಬರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಮೂಲ ಚಿತ್ರದಲ್ಲಿ ಸಹೋದರಿ ಪಾತ್ರವಷ್ಟೇ ಇತ್ತು. ಮಂಜು ವಾರಿಯರ್ ಆ ಪಾತ್ರದಲ್ಲಿ ನಟಿಸಿದ್ದರು. ತೆಲುಗು ರಿಮೇಕ್‌ನಲ್ಲಿ ಚಿರಂಜೀವಿಗೆ ನಾಯಕಿ ಪಾತ್ರ ಸೃಷ್ಟಿಸಲಾಗಿದೆ ಎಂದು ಹೇಳಲಾಗಿದೆ.
ವಿಶೇಷ ಪಾತ್ರದಲ್ಲಿ ಸಲ್ಮಾನ್ ಖಾನ್ ಅವರನ್ನು ಕರೆತರುವ ಪ್ರಯತ್ನ ನಡೆದಿತ್ತು. ಆದರೆ ಸಲ್ಲು ಭಾಯ್ ಅಲಭ್ಯತೆಯಾದ ಕಾರಣ ತಮಿಳಿನ ಸ್ಟಾರ್ ನಟ ವಿಕ್ರಂ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಈ ಸಿನಿಮಾದ ಬಳಿಕ ಮತ್ತೆರಡು ಚಿತ್ರಗಳು ರೆಡಿಯಿದೆ. ತಮಿಳಿನ ವೇದಲಂ ಚಿತ್ರದ ತೆಲುಗು ರಿಮೇಕ್ ಹಾಗೂ ಇನ್ನೊಂದು ಚಿತ್ರಕ್ಕೆ ಮೆಗಾಸ್ಟಾರ್ ಕಾಲ್‌ಶೀಟ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.


Click it and Unblock the Notifications











