For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಸುದ್ದಿಯಾಗುತ್ತಿಲ್ಲ; ಪ್ರಕಾಶಿಸುತ್ತಿದ್ದಾರೆ

  |

  ಕನ್ನಡದ ಕಿಚ್ಚ ಸುದೀಪ್ ಈಗ ಇಡೀ ಭಾರತವನ್ನೇ ಆವರಿಸಿರುವ ನಟ. ಇತ್ತೀಚಿಗೆ ಕನ್ನಡದ ಹೊರತಾಗಿಯೂ ನೀವು ಯಾರನ್ನೇ ಕೇಳಿ ನೋಡಿ, ಕನ್ನಡದಲ್ಲಿ ಸುದೀಪ್ ಅವರು ಗೊತ್ತು ಅಂತಾರೆ, ರಾಮ್ ಗೋಪಾಲ್ ವರ್ಮಾ ಜತೆ ಸೇರಿ ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಾಗಲೇ ಅವರಿಗೆ 'ಆಲ್ ಇಂಡಿಯಾ' ಪ್ರಸಿದ್ಧಿ ದಕ್ಕಿತ್ತು.

  ಈಗಿನ ಮಾತಂತೂ ಬೇರೆಯದೇ ಲೋಕದಲ್ಲಿದೆ. ಈ ಮೊದಲು ಕನ್ನಡ ಬಿಟ್ಟು ದಕ್ಷಿಣ ಭಾರತದಲ್ಲಿ ಅಷ್ಟೇನೂ ಗುರುತಿಸಿಕೊಂಡಿರದಿದ್ದ ಸುದೀಪ್, ಎಸ್ ಎಸ್ ರಾಜಮೌಳಿ ನಿರ್ದೇಶನದ 'ಈಗ' ಚಿತ್ರಕ್ಕೆ ಖಳನಾಯಕನಾದಾಗ ಸಹಜವಾಗಿಯೇ ಇಡೀ ದಕ್ಷಿಣ ಭಾರತ ಬೆಚ್ಚಿಬಿದ್ದಿತ್ತು.

  ರಾಜಮೌಳಿ ಅಸಾಮಾನ್ಯರು. ಈವರೆಗೆ ಮಾಡಿರುವ ಒಂದೇ ಒಂದು ಚಿತ್ರವೂ ಸೋತಿಲ್ಲ. ಅವರು ತಮ್ಮ ಚಿತ್ರಕ್ಕೆ ಕಲಾವಿದರನ್ನು ಸಾಕಷ್ಟು ಅಳೆದು-ತೂಗಿಯೇ ಆಯ್ಕೆ ಮಾಡಿಕೊಳ್ಳುವುದು. ಆ ಭಾಗ್ಯ ಕನ್ನಡದ ನಟ ಸುದೀಪ್ ಅವರಿಗೆ ಒಲೊದಿದೆ ಎಂದರೆ ಸಾಮಾನ್ಯದ ಮಾತೇ? ಇಡೀ ಸೌತ್ ಇಂಡಿಯಾ ಬೆರಗು ಗೊಂಡಿತ್ತು. ಆದರೆ ಅವರಲ್ಲೇ ಕೆಲವರು ನಾಯಕ ಅಲ್ಲವಲ್ಲ, ಖಳನಾಯಕ ತಾನೇ ಎಂದು ಮೂಗು ಮುರಿದಿದ್ದರು.

  ಆದರೆ ಚಿತ್ರ ಸೆಟ್ಟೇರಿ ಚಿತ್ರೀಕರಣ ಪ್ರಾರಂಭವಾಗುತ್ತಿದ್ದಂತೆ 'ಈಗ' ಚಿತ್ರದಲ್ಲಿ ನಾಯಕನಿಂತ ಖಳನಾಯಕನ ಪಾತ್ರಕ್ಕೇ ಹೆಚ್ಚು ಪ್ರಾಮುಖ್ಯತೆ ಇದೆ ಎಂಬುದು ಬಹಿರಂಗವಾಯ್ತು. ರಾಜಮೌಳಿ ಬಾಯಿಂದ ಅಲ್ಲಲ್ಲಿ ಹೊರಬಿದ್ದ ಮಾತುಗಳು ಅದಕ್ಕೆ ಪುಷ್ಟಿಕೊಡುವಂತಿದ್ದವು. ಆಗಲೇ ಸುದೀಪ್ ದಕ್ಷಿಣ ಭಾರತದಲ್ಲಿ ಪ್ರಕಾಶಿಸಲು ಪ್ರಾರಂಭಿಸಿದ್ದರು.

  ಈಗ ಚಿತ್ರದ ಚಿತ್ರೀಕರಣ ಮುಗಿದು ಇದೀಗ ಅದು ಬಿಡುಗಡೆ ಹೊಸ್ತಿಲಲ್ಲಿದೆ. ಈ ಮೊದಲು ಎರಡ್ಮೂರು ಬಾರಿ ಬಿಡುಗಡೆ ದಿನಾಂಕ ಘೋಷಿಸಿದ್ದರೂ ಬಿಡುಗಡೆ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಚಿತ್ರವನ್ನು ತೀರಾ ಚೆನ್ನಾಗಿ ಮಾಡುವ ನಿರ್ದೇಶಕರ ಒಲವು. ಕಳೆದ ಮೇ 31, 2012 ಕ್ಕೆ ಬಿಡುಗಡೆ ಆಗಬೇಕಾಗಿದ್ದ ಈಗ ಚಿತ್ರ, ಗ್ರಾಫಿಕ್ಸ್ ಅಳವಡಿಕೆ ತಡವಾದ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಡಿದೆ. ಆದರೆ ಯಾವಾಗ ಬಿಡುಗಡೆ ಎಂಬುದು ಇನ್ನು ನಿರ್ಧಾರವೇ ಆಗಿಲ್ಲ.

  ಆಶ್ಚರ್ಯವೆಂಬಂತೆ, ಈಗ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುತ್ತಿದ್ದಂತೆ ಸುದೀಪ್ ಅವರಿಗೆ ಎಲ್ಲಾ ಕಡೆ ಬೇಡಿಕೆ ಜಾಸ್ತಿಯಾಗಿದೆ. ಈಗ ಚಿತ್ರವು ಗೆಲ್ಲುವುದು ಮಾತ್ರವಲ್ಲ, ಅದು ಸೂಪರ್ ಹಿಟ್ ಗ್ಯಾರಂಟಿ ಎಂಬ ಮಾತು ತೆಲುಗಿನಲ್ಲಿ ಸದ್ಯದ ಮನೆಮಾತು. ಹೀಗಾಗಿ, ಸುದೀಪ್ ಹುಡುಕಿಕೊಂಡು ಬರುವ ನಿರ್ಮಾಪಕರು ನಿರ್ದೇಶಕರ ಸಂಖ್ಯೆ ಮಿತಿಮೀರಿದೆ.

  ಆದರೆ ಸ್ವತಃ ನಿರ್ದೇಶಕರೂ ಆಗಿರುವ ಸುದೀಪ್ ಸದ್ಯಕ್ಕೆ ಯಾವುದೇ ಆಫರನ್ನು ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ, ತಾವು ಈ ಮೊದಲು ಮಾಡಿಕೊಂಡಿದ್ದ ಕಮಿಟ್ ಮೆಂಟಿಗೆ ಕಟ್ಟುಬಿದ್ದು ಅದನ್ನು ಮುಗಿಸಿಕೊಡುತ್ತಿದ್ದಾರೆ. ವರದನಾಯಕ ಚಿತ್ರೀಕರಣವನ್ನು ಒಪ್ಪಿಕೊಂಡಂತೆ ಮುಗಿಸಿಕೊಟ್ಟು ಸದ್ಯಕ್ಕೆ ಶಶಾಂಕ್ ನಿರ್ದೇಶನದ ಬಚ್ಚನ್ ಚಿತ್ರದಲ್ಲಿ ಬಿಜಿಯಾಗಿದ್ದಾರೆ.

  ನಡುನಡುವೆ, ರಾಜಮೌಳಿಯವರಿಂದ ಫೋನಿಗೆ ಕರೆಬಂದರೆ ಮಾತನಾಡುವುದು ಹಾಗೂ ಹೈದ್ರಾಬಾದಿಗೇ ಬುಲಾವ್ ಬಂದರೆ ಹೋಗಿಬರುವುದು ಇದ್ದೇ ಇದೆ. ಮಧ್ಯೆ ಮಧ್ಯೆ ತಮಗಿಷ್ಟವಾದ ಕೆಲಸದಲ್ಲಿ ತೊಡಗಿಕೊಳ್ಳುವ ಸುದೀಪ್ ಅದರಲ್ಲಿ ಸಂಪೂರ್ಣ ತಲ್ಲೀನರಾಗುವ ಪರಿಯನ್ನು ಅವರ ಆಪ್ತರು ಹೇಳುವುದನ್ನು ಕೇಳಿದರೇ ಸುದೀಪ್ ಏನೆಂಬುದು ಅರ್ಥವಾಗುತ್ತದೆ.

  ಸದ್ಯಕ್ಕೆ ಸುದೀಪ್ ಅದೆಷ್ಟು ಬಿಜಿಯಾಗಿದ್ದಾರಂದರೆ ಕಿರುಚಿತ್ರದ ನಿರ್ದೇಶನ, ಬಚ್ಚನ್ ಹಾಗೂ ಈಗ ಚಿತ್ರದ ಪ್ರಚಾರಕ್ಕೆ ತಮ್ಮ ಸಮಯವನ್ನು ಸಂಪೂರ್ಣವಾಗಿ ಮೀಸಲಿಟ್ಟಿದ್ದಾರೆ. ತಮ್ಮನ್ನು ಹುಡುಕಿಕೊಂಡು ಬರುತ್ತಿರುವ ನಿರ್ಮಾಪಕರಿಂದ ಅಡ್ವಾನ್ಸ್ ಪಡೆದುಕೊಂಡು ಅವರಿಗೆ ಕಾಲದ ಶೀಟ್ ನೀಡಿ ಜೇಬು ತುಂಬಿಸಿಕೊಂಡು ಅವರ ಶೂ ಸವೆಸುವ ಯಾವ ಉದ್ದೇಶವೂ ಸುದೀಪ್ ಅವರಿಗಿಲ್ಲ.

  ಬದಲಿಗೆ, ತಮ್ಮ ಸದ್ಯದ ಕೆಲಸದಲ್ಲಿ ಆತ್ಮವಿಶ್ವಾಸದಲ್ಲಿ ತೊಡಗಿಕೊಂಡು ಈಗಾಗಲೇ ಒಪ್ಪಿಕೊಂಡಿರುವ ಕೆಲಸದಲ್ಲಿ ಸದಾ ಮಗ್ನರಾಗಿರುವ ಸುದೀಪ್ ಅವರಿಗೆ ಕರೆ ಮಾಡಿದರೆ, ಎಷ್ಟು ಬೇಕೋ ಅಷ್ಟು ಮಾತನಾಡಿ ಸುಮ್ಮನಾಗುತ್ತಾರೆ. 'ಗಾಳಿ ಬಂದಾಗ ತೂರಿಕೋ..' ಎಂಬ ಮಾತು ತಮಗೆ ಅನ್ವಯಿಸುವುದೇ ಇಲ್ಲ ಎಂಬಂತಿದ್ದಾರೆ ಸುದೀಪ್.

  ಶಶಾಂಕ್ ಹಾಗೂ ಸುದೀಪ್ ಇಬ್ಬರೂ ನಿರ್ದೇಶಕರು. ಸುದೀಪ್ ಉತ್ತಮ ನಟ ಎಂಬುದರಲ್ಲಿ ಸಂದೇಹವೇ ಇಲ್ಲ. ಬಚ್ಚನ್ ಚಿತ್ರದ ಕತೆಯ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲವಾದರೂ ಅಮಿತಾಬ್ ಬಚ್ಚನ್ ಈ ಚಿತ್ರಕ್ಕೆ ಸ್ಪೂರ್ತಿ ಎಂದಿದ್ದಾರೆ ನಿರ್ದೇಶಕ ಶಶಾಂಕ್. ಬಚ್ಚನ್ ಚಿತ್ರಕ್ಕೆ ನಾಯಕಿಯರಾಗಿ ದೀಪಾ ಸನ್ನಿಧಿ, ಪಾರೋಲ್ ಯಾದವ್ ಹಾಗೂ ಐಂದ್ರಿತಾ ರೇ ಆಯ್ಕೆಯಾಗಿದ್ದಾರೆ.

  ವಿಶೇಷ ಪಾತ್ರದಲ್ಲಿ ತೆಲುಗು ಸ್ಟಾರ್ ಜಗಪತಿಬಾಬು ಅಭಿನಯಿಸಲಿದ್ದಾರೆ. ಸದ್ಯಕ್ಕೆ ಸುದೀಪ್ ಅಭಿನಯದ ಬರಲಿರುವ ಕನ್ನಡ ಚಿತ್ರಗಳೆಂದರೆ ವರದನಾಯಕ ಹಾಗೂ ಬಚ್ಚನ್ ಮಾತ್ರ. ಈಗ ಚಿತ್ರವನ್ನು ತಮಿಳು ಅಥವಾ ತೆಲುಗಿನಲ್ಲಿ ಕನ್ನಡಿಗರು ನೋಡಬೇಕಾಗಿದೆ. ಒಟ್ಟಿನಲ್ಲಿ ಸುದೀಪ್ ಪ್ರಕಾಶಿಸುತ್ತಿದ್ದಾರೆ, ಆದರೂ ಸುದ್ದಿಯಾಗುತ್ತಿಲ್ಲ. (ಒನ್ ಇಂಡಿಯಾ ಕನ್ನಡ)

  English summary
  After shooting of Telugu movie Eega, Kannda actor Kichcha Sudeep is getting more and more offers. But he is accepting any offers and simply working for his old commitments. Now, he is busy with Kannada movie Bachchan. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X