For Quick Alerts
  ALLOW NOTIFICATIONS  
  For Daily Alerts

  ಗೊಂದಲಕ್ಕೆ ನೂಕಿದ 'ರಾಧೆ-ಶ್ಯಾಮ್' ಟೀಸರ್: ಪ್ರಭಾಸ್ ಪಾತ್ರವೇನು?

  |

  ಪ್ರಭಾಸ್ ಹುಟ್ಟುಹಬ್ಬದ ಅಂಗವಾಗಿ ಇಂದು 'ರಾಧೆ-ಶ್ಯಾಮ್' ಸಿನಿಮಾದ ಟೀಸರ್ ಬಿಡುಗಡೆ ಮಾಡಿದೆ. ಸಿನಿಮಾದ ಬಗ್ಗೆ ಇಷ್ಟು ದಿನ ಹರಿದಾಡುತ್ತಿದ್ದ ಎಲ್ಲ ಸುದ್ದಿಗಳನ್ನೂ ಸುಳ್ಳು ಮಾಡಿರುವ ಟೀಸರ್ ಬೇರೊಂದು ಹೊಸ ಕತೆಯನ್ನು ಹೇಳುತ್ತಿದೆ.

  'ರಾಧೆ-ಶ್ಯಾಮ್' ಸಿನಿಮಾ ಅಪ್ಪಟ ಪ್ರೇಮಕತೆ ಎನ್ನಲಾಗಿತ್ತು. ಚಿತ್ರತಂಡ ಈವರೆಗೆ ಬಿಡುಗಡೆ ಮಾಡಿದ್ದ ಪೋಸ್ಟರ್‌ಗಳು, ಕಿರು ಟೀಸರ್‌ಗಳು ಹಾಗೆಯೇ ಇದ್ದವು. ಆದರೆ ಈಗ ಬಿಡುಗಡೆ ಮಾಡಿರುವ ಟೀಸರ್ ಸಿನಿಪ್ರೇಮಿಗಳನ್ನು ಗೊಂದಲಕ್ಕೆ ನೂಕಿದೆ. ಏಕೆಂದರೆ ಟೀಸರ್‌ನಲ್ಲಿ ಪ್ರಭಾಸ್ ಬೇರೆಯದ್ದೇ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

  ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾ ಪ್ರೇಮಕತೆಯಲ್ಲ ಬದಲಿಗೆ ಅತಿಮಾನುಷ ಫ್ಯಾಂಟಸಿ ಕತೆಯುಳ್ಳ ಸಿನಿಮಾ ಆಗಿದೆಯೆಂಬ ಸುಳಿವನ್ನು ಟೀಸರ್ ಬಿಟ್ಟುಕೊಟ್ಟಿದೆ. ಸಿನಿಮಾದಲ್ಲಿ ಅತೀಂದ್ರಿಯ ಶಕ್ತಿಗಳು, ವಿಜ್ಞಾನ, ಜ್ಯೋತಿಷ್ಯ ಇನ್ನೂ ಏನೇನೋ ಇರಲಿವೆ.

  ''ನಾನು ಎಲ್ಲವನ್ನೂ ನೋಡಬಲ್ಲೆ. ನಿನ್ನ ಹೃದಯ ಮುರಿಯುವುದನ್ನು ನಾನು ಅನುಭವಿಸಬಲ್ಲೆ ಆದರೆ ನಾನು ನಿನಗೆ ಅದನ್ನು ಹೇಳುವುದಿಲ್ಲ. ನಿನ್ನ ವಿಫಲತೆಗಳನ್ನು ನಾನು ನೋಡಬಲ್ಲೆ. ಆದರೆ ನಾನು ಅದನ್ನು ನಿನಗೆ ಹೇಳುವುದಿಲ್ಲ, ನಿನ್ನ ಸಾವನ್ನೂ ನಾನು ಊಹಿಸಬಲ್ಲೆ. ಆದರೆ ನಾನು ನಿನಗೆ ಅದನ್ನು ಹೇಳಲಾರೆ. ನನಗೆ ಎಲ್ಲವೂ ಗೊತ್ತು ಆದರೆ ನಿನಗೆ ಅದನ್ನು ಹೇಳುವುದಿಲ್ಲ. ಏಕೆಂದರೆ ಅದು ನಿನಗೆ ಅರ್ಥವಾಗುವುದಿಲ್ಲ'' ಎಂದು ಟೀಸರ್‌ನಲ್ಲಿ ಡೈಲಾಗ್ ಹೇಳಿದ್ದಾರೆ ಪ್ರಭಾಸ್. ಡೈಲಾಗ್ ಹೇಳುವ ಸಮಯದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಬಳಸುವ ವಸ್ತುಗಳನ್ನು ತೋರಿಸಲಾಗಿದೆ. 'ರಾಧೆ-ಶ್ಯಾಮ್' ಸಿನಿಮಾದಲ್ಲಿ ಪ್ರಭಾಸ್ ಭವಿಷ್ಯ ನೋಡಬಲ್ಲ ವ್ಯಕ್ತಿಯೇ ಎಂಬ ಅನುಮಾನ ಈ ಸಂಭಾಷಣೆಯಿಂದ, ದೃಶ್ಯಗಳಿಂದ ಉದ್ಭವವಾಗುತ್ತಿದೆ.

  ಟೀಸರ್‌ನ ಕೊನೆಯಲ್ಲಿ, ''ನನ್ನ ಹೆಸರು ವಿಕ್ರಮಾಧಿತ್ಯ, ನಾನು ದೇವರಲ್ಲ, ಹಾಗೆಂದು ನಿಮ್ಮಂತೆ ಮನುಷ್ಯನೂ ಅಲ್ಲ'' ಎಂದಿದ್ದಾರೆ. ಹಾಗಿದ್ದಮೇಲೆ ವಿಕ್ರಮಾಧಿತ್ಯ ಯಾರು? ದೆವ್ವವೆ? ಅತಿಮಾನುಷ ಶಕ್ತಿಯುಳ್ಳ ವ್ಯಕ್ತಿಯೇ? ಹಲವು ಅನುಮಾನಗಳು ಟೀಸರ್‌ ನೋಡಿದ ಮೇಲೆ ಮೂಡುತ್ತವೆ.

  ಟೀಸರ್‌ನಲ್ಲಿ ಹಲವು ಅದ್ಭುತವಾದ ದೃಶ್ಯಗಳಿವೆ. ಅದ್ಭುತವಾದ ಮನೆಯ ಸೆಟ್‌ ಒಂದು ಗಮನ ಸೆಳೆಯುತ್ತಿದೆ. ಕೈ ರಕ್ತ ಮಾಡಿಕೊಂಡ ಪ್ರಭಾಸ್ ಸ್ಟೈಲ್ ಆಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯವೊಂದಿದೆ. ದೊಡ್ಡ ಲೈಟ್‌ ಹೌಸ್‌ ಒಂದು ಮುರಿದು ಧರೆಗೆ ಉರುಳುತ್ತಿರುವ ದೃಶ್ಯವೂ ಇದೆ. ಇವೆಲ್ಲವೂ ಕತೆಯ ಬಗ್ಗೆ ಕುತೂಹಲ ಮೂಡಿಸುತ್ತಿವೆಯಾದರೂ ಈ ಬಿಡಿ-ಬಿಡಿ ದೃಶ್ಯಗಳು ಯಾವ ಕತೆಯನ್ನು ಹೇಳಲು ಹೊರಟಿವೆ ಎಂಬ ಗೊಂದಲವನ್ನೂ ಉಂಟು ಮಾಡಿವೆ.

  'ರಾಧೆ-ಶ್ಯಾಮ್' ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಕತೆ 60-70 ರ ದಶಕದಲ್ಲಿ ನಡೆಯುವ ಕತೆಯಾಗಿದೆ. ಸಿನಿಮಾದ ಬಹುಭಾಗವನ್ನು ಯೂರೋಪ್ ದೇಶಗಳಲ್ಲಿ, ಅದೂ ಕೊರೊನಾ ಮೊದಲ ಅಲೆಯ ಸಂಕಷ್ಟದ ಸಮಯದಲ್ಲಿ ಚಿತ್ರೀಕರಿಸುವುದು ವಿಶೇಷ. ಸಿನಿಮಾದ ಚಿತ್ರೀಕರಣದ ವಿಷಯವಾಗಿ ಹಲವು ಅಡೆ-ತಡೆಗಳು, ಗೊಂದಲಗಳು ಚಿತ್ರತಂಡಕ್ಕೆ ಆಯಿತಾದರೂ ಕೊನೆಗೂ ಸಿನಿಮಾದ ಚಿತ್ರೀಕರಣವನ್ನು ಮುಗಿಸಲಾಗಿದೆ. ಸಿನಿಮಾ ಜನವರಿ 14 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

  'ರಾಧೆ-ಶ್ಯಾಮ್' ಸಿನಿಮಾವನ್ನು ರಾಧಾಕೃಷ್ಣ ಕುಮಾರ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಯುವಿ ಕ್ರಿಯೇಶನ್ಸ್ ಮತ್ತು ಟಿ ಸೀರೀಸ್. ಸಿನಿಮಾದಲ್ಲಿ ಪ್ರಭಾಸ್, ಪೂಜಾ ಹೆಗ್ಡೆ ಹೊರತಾಗಿ, ಸಚಿನ್ ಖೇಡೆಕರ್, ಪ್ರಿಯದರ್ಶಿ ಪುಲಿಕೊಂಡ, ಭಾಗ್ಯಶ್ರೀ, ಜಗಪತಿ ಬಾಬು, ಮುರಳಿ ಶರ್ಮಾ, ರಿಧಿ ಕುಮಾರ್, ಕುನಾಲ್ ರಾಯ್ ಕಪೂರ್, ಸಾಶಾ ಚೆಟ್ರಿ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಜಸ್ಟಿನ್ ಪ್ರಭಾಕರನ್.

  English summary
  Prbhas's new movie 'Radhe-Shyam' teaser released today on the occasion of Prabhas's birthday. Movie will release on January 14.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X