For Quick Alerts
  ALLOW NOTIFICATIONS  
  For Daily Alerts

  'ಲೈಗರ್' ಸೋಲಿನಿಂದ ನಂಬಿದವರು ದೂರಾದರು: ಚಿರಂಜೀವಿ ಎದುರು ಪುರಿ ಜಗನ್ನಾಥ್ ಭಾವುಕ

  |

  ಬಹು ನಿರೀಕ್ಷೆ ಹುಟ್ಟಿಸಿದ್ದ ಆದರೆ ಚಿತ್ರಮಂದಿರದಲ್ಲಿ ಅಟ್ಟರ್ ಫ್ಲಾಫ್ ಸಿನಿಮಾಗಳಲ್ಲಿ ಒಂದು ವಿಜಯ್ ದೇವರಕೊಂಡ ನಟನೆಯ 'ಲೈಗರ್'.

  ಪುರಿ ಜಗನ್ನಾಥ್ ನಿರ್ದೇಶಿಸಿ, ವಿಜಯ್ ದೇವರಕೊಂಡ, ರಮ್ಯಾ ಕೃಷ್ಣ, ಅನನ್ಯಾ ಪಾಂಡೆ ನಟಿಸಿದ್ದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಧಾರುಣ ಸೋಲು ಕಂಡಿತು. ಸಿನಿಮಾಕ್ಕೆ ಪುರಿ ಜಗನ್ನಾಥ್ ಬಂಡವಾಳವನ್ನೂ ಹಾಕಿದ್ದರು.

  ಸಿನಿಮಾದ ಸೋಲಿನ ಬಳಿಕ ಪುರಿ ಜಗನ್ನಾಥ್ ಮೇಲೆ ವಿತರಕರಿಂದ ಹಣ ವಾಪಸ್ಸಾತಿಗೆ ಒತ್ತಡವೂ ಬಂದಿತ್ತು. ಈ ವರೆಗೆ 'ಲೈಗರ್' ಸಿನಿಮಾದ ಸೋಲಿನ ಬಗ್ಗೆ ಹೊರಗೆಲ್ಲೂ ಮಾತನಾಡದಿದ್ದ ಪುರಿ ಜಗನ್ನಾಥ್, ಇದೀಗ ಮೆಗಾಸ್ಟಾರ್ ಚಿರಂಜೀವಿ ಎದುರು 'ಲೈಗರ್' ಬಗ್ಗೆ ಮಾತನಾಡಿದ್ದಾರೆ.

  ವಿಡಿಯೋ ಕಾಲ್ ಮೂಲಕ ಪುರಿ ಜಗನ್ನಾಥ್ ಹಾಗೂ ಚಿರಂಜೀವಿ ಸಂವಾದ ನಡೆಸಿದ್ದು, ಸಂವಾದದ ನಡುವೆ, 'ನೀವು ಎಲ್ಲಿದ್ದೀರಿ? ಸ್ಕ್ರಿಪ್ಟ್‌ಗಳನ್ನು ನೋಡುತ್ತಿದ್ದೀರ? ಒಂದೊಮ್ಮೆ ಅಂದುಕೊಂಡ ರಿಸಲ್ಟ್‌ ಸಿನಿಮಾಗಳಿಂದ ಬರದಾಗ ಅದನ್ನು ಹೇಗೆ ಸ್ವೀಕಾರ ಮಾಡುತ್ತೀರಿ?'' ಎಂದು ಚಿರಂಜೀವಿ, ಪುರಿ ಜಗನ್ನಾಥ್ ಅನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪುರಿ ಜಗನ್ನಾಥ್, ನಾನೀಗ ಮುಂಬೈನಲ್ಲಿದ್ದೇನೆ. ಚಿತ್ರಕತೆಗಳನ್ನು ನೋಡುತ್ತಿದ್ದೇನೆ. ಅದನ್ನು ಬಿಡಲು ಆಗುವುದಿಲ್ಲ'' ಎಂದಿದ್ದಾರೆ. ಮುಂದುವರೆದು 'ಲೈಗರ್' ಬಗ್ಗೆಯೂ ಮಾತನಾಡಿದ್ದಾರೆ.

  'ಲೈಗರ್' ಸೋಲಿನ ಬಗ್ಗೆ ಪುರಿ ಮಾತು

  'ಲೈಗರ್' ಸೋಲಿನ ಬಗ್ಗೆ ಪುರಿ ಮಾತು

  ''ಯಶಸ್ಸು ಬಂದರೆ ಬಹಳ ಎನರ್ಜಿ ಬರುತ್ತದೆ. ಸಿನಿಮಾ ಫೇಲ್ ಆದರೆ ಇದ್ದ ಎನರ್ಜಿಯೂ ಹೊರಟು ಹೋಗುತ್ತದೆ. ಯಶಸ್ಸು ಬಂದಾಗ, ನಾವೇ ಬುದ್ಧಿವಂತರು ಎನಿಸುತ್ತದೆ. ಸಿನಿಮಾ ಸೋತರೆ ನಮಗಿಂತ ಯಾರೂ ದಡ್ಡರಿಲ್ಲ ಎನಿಸುತ್ತದೆ. ಸಿನಿಮಾ ಸೋತಾಗ ನಂಬಿದವರು ಸಹ ಕೈಬಿಟ್ಟು ಹೋಗುತ್ತಾರೆ. ಎಲ್ಲವೂ ತಲೆಕೆಳಗಾಗುತ್ತದೆ. ಬೇರೆ-ಬೇರೆ ರೀತಿಯ ಸಮಸ್ಯೆಗಳು ಬರುತ್ತವೆ. ಆ ಸಮಯದಲ್ಲಿ ಧೈರ್ಯವಾಗಿ ಇರಬೇಕೆಂದರೆ ಖಂಡಿತ ಶಕ್ತಿ ಬೇಕು'' ಎಂದಿದ್ದಾರೆ ಪುರಿ ಜಗನ್ನಾಥ್.

  ಗಾಯ ಮಾಯುವ ಸಮಯ ಹೆಚ್ಚಿರಬಾರದು: ಪುರಿ

  ಗಾಯ ಮಾಯುವ ಸಮಯ ಹೆಚ್ಚಿರಬಾರದು: ಪುರಿ

  ''ಯಾವುದಾದರೂ ಗಾಯ ಆದಾಗ ಅದು ವಾಸಿಯಾಗುವ ಸಮಯ ಇರುತ್ತದಲ್ಲ. ಅದು ಕಡಿಮೆ ಇರಬೇಕು. ಏನಾದರೂ ಆಗಬಹುದು, ನಷ್ಟ ಆಗಬಹುದು, ಯುದ್ಧಗಳೇ ನಡೆಯಬಹುದು ಏನೇ ಆದರೂ ಅದರ ನೋವು ವಾಸಿಯಾಗುವ ಸಮಯ ಒಂದು ತಿಂಗಳಿಗಿಂತಲೂ ಹೆಚ್ಚಿಗೆ ಇರಬಾರದು. ನಾನು ಇದನ್ನು ನಂಬುತ್ತೇನೆ. ನಾನು ಈಗ ಅದೇ ಪ್ರಯತ್ನದಲ್ಲಿದ್ದೇನೆ'' ಎಂದಿದ್ದಾರೆ ಪುರಿ ಜಗನ್ನಾಥ್.

  'ಮೂರು ವರ್ಷ ಎಂಜಾಯ್ ಮಾಡಿದೆ, ಮೂರು ವರ್ಷ ಅಳಲಾಗದು'

  'ಮೂರು ವರ್ಷ ಎಂಜಾಯ್ ಮಾಡಿದೆ, ಮೂರು ವರ್ಷ ಅಳಲಾಗದು'

  ''ಮೂರು ವರ್ಷಗಳ ಕಾಲ 'ಲೈಗರ್' ಸಿನಿಮಾದ ಮೇಲೆ ಕೆಲಸ ಮಾಡಿದೆ. ಈ ಸಮಯದಲ್ಲಿ ನಾನು ಸಾಕಷ್ಟು ಎಂಜಾಯ್ ಮಾಡಿದೆ. ಒಳ್ಳೆಯ ಕಲಾವಿದರೊಟ್ಟಿಗೆ ಕೆಲಸ ಮಾಡಿದೆ. ಮೈಕ್ ಟೈಸನ್ ಜೊತೆ ಕೆಲಸ ಮಾಡಿದೆ. ಒಳ್ಳೆಯ ಸೆಟ್‌ಗಳನ್ನು ಹಾಕಿದೆವು, ಚಿತ್ರೀಕರಿಸಿದೆವು ಮೂರು ವರ್ಷ ಅದನ್ನು ಎಂಜಾಯ್ ಮಾಡಿದೆವು. ಆದರೆ ಸಿನಿಮಾ ಓಡಲಿಲ್ಲ. ಅದು ನಮ್ಮ ಕೈಯಲ್ಲಿಲ್ಲ. ಹಾಗೆಂದು ಮೂರು ವರ್ಷ ಅಳಲು ಸಾಧ್ಯವಿಲ್ಲ. ಬೇಗ ಅದರಿಂದ ಹೊರಗೆ ಬರಬೇಕು ಅಷ್ಟೆ'' ಎಂದಿದ್ದಾರೆ.

  ಪುರಿಗೆ ಬುದ್ಧಿವಾದ ಹೇಳಿದ ಚಿರಂಜೀವಿ

  ಪುರಿಗೆ ಬುದ್ಧಿವಾದ ಹೇಳಿದ ಚಿರಂಜೀವಿ

  ಚಿರಂಜೀವಿ ಸಹ ಪುರಿ ಜಗನ್ನಾಥ್‌ಗೆ ಬುದ್ಧಿವಾದ ಹೇಳಿದ್ದು, ''ನೀನೊಬ್ಬ ಅದ್ಭುತವಾದ ತಂತ್ರಜ್ಞ, ನಿನಗೆ ಒಳ್ಳೆಯ ಸಿನಿಮಾ ಮಾಡಲು ಗೊತ್ತು. ಸೋಲಿಗೆ ಹೆದರಬೇಡ. ನಾನು 'ಆಚಾರ್ಯ' ಸಿನಿಮಾ ಸೋತಾಗ ಕುಗ್ಗಲಿಲ್ಲ. ಏಪ್ರಿಲ್‌ನಲ್ಲಿ ಸಿನಿಮಾ ಬಿಡುಗಡೆ ಆಯ್ತು, ಮೇ ತಿಂಗಳಲ್ಲಿ ನಾನು ಪತ್ನಿಯೊಟ್ಟಿಗೆ ಪ್ರವಾಸಕ್ಕೆ ಹೋದೆ. ಮರಳಿ ಬಂದೆ, ಹೊಸ ಸಿನಿಮಾದ ಮೇಲೆ ಇನ್ನೂ ಹೆಚ್ಚು ಕೆಲಸ ಮಾಡಿದೆ. ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನುಗ್ಗಿ 'ಗಾಡ್ ಫಾದರ್' ಮಾಡಿದೆ ಹಿಟ್ ಆಗಿದೆ. ನೀನೂ ಸಹ ನಿಲ್ಲಬೇಡ, ಯಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳಬೇಡ'' ಎಂದಿದ್ದಾರೆ ಚಿರಂಜೀವಿ.

  English summary
  Puri Jagannath talks about his last movie Liger's failure with Megastar Chiranjeevi. He said due to failure closest people turn back.
  Thursday, October 13, 2022, 23:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X