ನಟ ನಾಗಾರ್ಜುನ ಕೆನ್ನೆಗೆ ಹೊಡೆದು ತಪ್ಪು ಮಾಡಿದೆ: ನಟ ಸುಮಂತ್
ನಟ ಸುಮಂತ್ ತೆಲುಗು ಚಿತ್ರರಂಗದಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಇದ್ದಾರೆ. ಆದರೆ ಆರಕ್ಕೇರಿಲ್ಲ, ಮೂರಕ್ಕೆ ಇಳಿದಿಲ್ಲ.
Recommended Video
ಅಕ್ಕಿನೇನಿ ಸ್ಟಾರ್ ಕುಟುಂಬದ ನಂಟಿದ್ದರೂ ಸಹ ಅವರು ಸ್ಟಾರ್ ಗಿರಿ ಪಡೆಯಲಾಗಲಿಲ್ಲ, ಸ್ಟಾರ್ ನಟ ನಾಗಾರ್ಜುನ ಅವರ ಸೋದರಳಿಯ ಆಗಿದ್ದರೂ ಸಹ ಪ್ರತ್ಯೇಕ ಅಭಿಮಾನಿ ಬಳಗವನ್ನು ಪಡೆಯಲಾಗಲಿಲ್ಲ. ನಿರ್ಮಾಪಕರ-ನಿರ್ದೇಶಕರ ಮೆಚ್ಚಿನ ನಟ ಎನಿಸಿಕೊಳ್ಳಲಾಗಲಿಲ್ಲ.
ಇಂಥಹಾ ಸುಮಂತ್ ತಮ್ಮ ಸಿನಿ ಜೀವನದ ಬಗ್ಗೆ ಇತ್ತೀಚೆಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ. ಈ ಸಮಯದಲ್ಲಿ ತಾವು ಮಾಡಿದ ದೊಡ್ಡ ತಪ್ಪೊಂದರ ಬಗ್ಗೆ ಹೇಳಿಕೊಂಡಿದ್ದಾರೆ. ಅದುವೇ ನಾಗಾರ್ಜುನ ಕೆನ್ನೆಗೆ ಹೊಡೆದಿದ್ದು!

ಮಾವ ನಾಗಾರ್ಜುನ್ ಕೆನ್ನೆಗೆ ಹೊಡೆದಿದ್ದ ಸುಮಂತ್
ಹೌದು, ನಟ ಸುಮಂತ್ ತಮ್ಮ ಮಾವ ನಾಗಾರ್ಜುನ ಕೆನ್ನೆಗೆ ಹೊಡೆದಿದ್ದರು. ಅದರೆ ಅದು ಸಿನಿಮಾಕ್ಕಾಗಿ. ಸ್ನೇಹಮಂಟೆ ಇದೇರಾ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಇಬ್ಬರದ್ದೂ ಆಪ್ತ ಮಿತ್ರರ ಪಾತ್ರ. ಸಿನಿಮಾದಲ್ಲಿ ಸುಮಂತ್, ನಾಗಾರ್ಜುನ ಅವರ ಕೆನ್ನೆಗೆ ಹೊಡೆದಿದ್ದರು.

ಕೆನ್ನೆಗೆ ಹೊಡೆಯಲು ಒಪ್ಪಬಾರದಿತ್ತು: ಸುಮಂತ್
19 ವರ್ಷ ಹಿಂದೆ ಬಿಡುಗಡೆ ಆಗಿದ್ದ ಈ ಸಿನಿಮಾದ ಬಗ್ಗೆ ಈಗ ಮಾತನಾಡಿರುವ ಸುಮಂತ್, ನಾನು ನಾಗಾರ್ಜುನ ಕೆನ್ನೆಗೆ ಹೊಡೆಯಲು ಒಪ್ಪಬಾರದಿತ್ತು, ನಾಗಾರ್ಜುನ ಅವರ ಕೆನ್ನೆಗೆ ನಾನು ಹೊಡೆದಿದ್ದು, ಅವರ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಆ ದೃಶ್ಯ ನನ್ನ ಬಗ್ಗೆ ಋಣಾತ್ಮಕ ಅಭಿಪ್ರಾಯವನ್ನು ಮೂಡಿಸಿತು, ಹಾಗಾಗಿ ನನಗೆ ಅವಕಾಶಗಳು ಕಡಿಮೆ ಆಗಿಬಿಟ್ಟವು'' ಎಂದು ಹೇಳಿದ್ದಾರೆ.

ನಾಗಾರ್ಜುನ ಸಹಾಯ ನೆನಪಿಸಿಕೊಂಡ ಸುಮಂತ್
ಆದರೆ ನಾಗಾರ್ಜುನ ಅವರು ತಮಗೆ ಮಾಡಿದ ಸಹಾಯದ ಬಗ್ಗೆಯೂ ನೆನಪಿಸಿಕೊಂಡಿರುವ ಸುಮಂತ್, ನಾಗಾರ್ಜುನ ಮತ್ತು ತಾತ ನಾಗೇಶ್ವರ ರಾವ್ ಅವರು ನನಗೆ ಸದಾ ಬೆನ್ನೆಲುಬಾಗಿದ್ದರು, ನನಗೆ ಒಂದು ಹಿಟ್ ಸಿನಿಮಾ ಕೊಡಿಸಲು ಪ್ರಯತ್ನಪಟ್ಟರು ಎಂದು ಮುಜುರವಿಲ್ಲದೆ ಹೇಳಿಕೊಂಡಿದ್ದಾರೆ.

ಸರಾಸರಿ ಯಶಸ್ಸನ್ನಷ್ಟೆ ಗಳಿಸಿದ್ದಾರೆ
ಸುಮಂತ್ ಒಳ್ಳೆಯ ನಟರೆಂಬ ಹೆಸರು ಪಡೆದಿದ್ದರೂ ಸಹ ಒಂದೂ ದೊಡ್ಡ ಹಿಟ್ ನೀಡಲು ಅವರಿಗೆ ಸಾಧ್ಯವಾಗಿಲ್ಲ. ಗೋಧಾವರಿ, ಗೌರಿ ಇನ್ನೂ ಕೆಲವು ಸಿನಿಮಾಗಳು ಸರಾಸರಿ ಯಶಸ್ಸನ್ನಷ್ಟೆ ಗಳಿಸಿದವು. ಪ್ರಸ್ತುತ ಕಪಟಾದ್ರಿ ಎಂಬ ಕ್ರೈಂ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











