For Quick Alerts
  ALLOW NOTIFICATIONS  
  For Daily Alerts

  ಹಳ್ಳಿ ಹೈದರ ಮೇಲೆ ಮಾನಸಿಕ ಅತ್ಯಾಚಾರ!

  By * ಯಶ್
  |

  ಕನ್ನಡದ ಎಲ್ಲಾ ಟಿವಿ ಚಾನಲ್ಲುಗಳಲ್ಲಿ ಈಗ ರಿಯಾಲಿಟಿ ಶೋಗಳದ್ದೇ ಭರಾಟೆ. ಹಾಡು, ಕುಣಿತ, ಸಂಬಂಧ ಬೆಸೆಯುವಿಕೆ... ತಮಾಷೆ ಮೋಜು ಮಸ್ತಿಗಳಿಗೆ ಕೊರತೆಯೇ ಇಲ್ಲ. ಹೊಸ ಹೊಸ ಪ್ರತಿಭೆಗಳನ್ನು ಹುಡುಕುತ್ತಿರುವುದು, ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ. ಆದರೆ...

  ಆದರೆ, ಕೆಲ ರಿಯಾಲಿಟಿ ಶೋಗಳು ಎಂಥ ಸಂಸ್ಕೃತಿಯನ್ನು ಇಂದಿನ ಯುವ ಜನತೆಯಲ್ಲಿ ಬಿತ್ತುತ್ತಿವೆ? ಟಿಆರ್ ಪಿ ಒಂದನ್ನೇ ಗಮನದಲ್ಲಿಟ್ಟುಕೊಂಡು ಸಾಮಾಜಿಕ ಬದ್ಧತೆಯನ್ನು, ಕಳಕಳಿಯನ್ನು ಗಾಳಿಗೆ ತೂರುತ್ತಿರುವುದನ್ನು ನೋಡಿದರೆ ಇಂಥ ರಿಯಾಲಿಟಿ ಶೋಗಳ ಅಗತ್ಯವಿದೆಯೇ ಎಂಬ ಸಂದೇಹ ಬರದೆ ಇರದು.

  ಹೀಗೆಯೇ ಒಂದು ಚಾನಲ್ಲಿನಲ್ಲಿ ಬರುತ್ತಿರುವ ರಿಯಾಲಿಟಿ ಶೋನಲ್ಲಿ ಗುಡ್ಡಗಾಡು ಹುಡುಗರನ್ನು ಬಿಂಬಿಸುತ್ತಿರುವ ಬಗೆ, ಮಾಡುತ್ತಿರುವ ಅವಮಾನವನ್ನು ಸಹಿಸಲು ಯಾವುದೇ ಪ್ರಜ್ಞಾವಂತನಿಗೆ ಸಾಧ್ಯವಿಲ್ಲ. ಹೆಚ್ಚು ಕಲಿಯದ, ಅನಕ್ಷರಸ್ಥ ಹಳ್ಳಿ ಹುಡುಗರು ಈ ಶೋನಲ್ಲಿ ತಮಾಷೆಯ ವಸ್ತುವಾಗಿರುವುದು ನಿಜಕ್ಕೂ ಖೇದನೀಯ ಸಂಗತಿ. ಅವರಿಗೆ ನಗರದ ಸಂಸ್ಕೃತಿಯನ್ನು, ಇಲ್ಲಿನ ಥಳಕು ಬಳುಕಿನ ಜೀವನವನ್ನು ಪರಿಚಯಿಸುವ ನೆಪದಲ್ಲಿ ಹಳ್ಳಿ ಯುವಕರನ್ನು ಅವಮಾನ ಮಾಡಲಾಗಿದೆ ಎಂಬುದರಲ್ಲಿ ಎರಡನೇ ಮಾತೇ ಇಲ್ಲ.

  ಅವರಿಂದ ಅಸಹ್ಯಕರವಾಗಿ ನರ್ತನ ಮಾಡಿಸುವುದು, ಕಾಲೇಜಿಗೆ ಕಳಿಸಿ ಹುಡುಗಿಯರ ಪಕ್ಕದಲ್ಲಿ ಕೂಡಿಸಿ ಮುಜುಗರ ಉಂಟುಮಾಡುವುದು, ಕೋತಿಚೇಷ್ಟೆ ಮಾಡುವ ಹುಡುಗರ ಗುಂಪಿನಿಂದ ಕೀಟಲೆಗೊಳಗಾಗುವುದು... ಅವರ ಮೇಲೆ ಮಾಡಿದ ಮಾನಸಿಕ ಅತ್ಯಾಚಾರವಲ್ಲದೇ ಮತ್ತೇನೂ ಅಲ್ಲ. ಇದೊಂದು ರೀತಿಯಲ್ಲಿ ಹಳ್ಳಿ ಹುಡುಗರ ಒಪ್ಪಿಗೆ ತೆಗೆದುಕೊಂಡು ಮಾಡಿದ ರ್ಯಾಗಿಂಗ್!

  ಇಂದು ಹಳ್ಳಿಗಳಲ್ಲಿ ಯುವಕರು ಉಳಿಯುತ್ತಿಲ್ಲ. ಪ್ಯಾಟೆ ಕಡೆ ಮುಖ ಮಾಡಿದ್ದರಿಂದ ಹಳ್ಳಿಗಳು ಬರಿದಾಗುತ್ತಿವೆ, ಸಾಗುವಳಿ ಸಾಗುತ್ತಲೇ ಇಲ್ಲ. ಅಂದುಕೊಂಡಂತೆ ಬೆಳೆ ಬರುತ್ತಿಲ್ಲ. ಅಗತ್ಯಗಳಿಗೆ ತಕ್ಕಂತೆ ಉತ್ಪಾದನೆಯಾಗುತ್ತಿಲ್ಲ. ಹೆಚ್ಚಿನ ಉತ್ಪಾದನೆಯಿಲ್ಲದೆ ಆಹಾರ ಧಾನ್ಯಗಳ ಬೆಲೆಗಳು ಆಕಾಶಕ್ಕೇರಿ ಕುಳಿತಿವೆ. ಇಲ್ಲಿ ಹಳ್ಳಿ ಯುವಜನತೆ ಪ್ಯಾಟೆಗೆ ಬಂದು ಕುಳಿತಿದ್ದಾರೆ.

  ಹಳ್ಳಿಗಳು ನಮ್ಮ ಭಾರತದ ಜೀವಾಳವೆಂಬುದನ್ನು ಮರೆಯಬಾರದು. ನಗರ ಜೀವನ ದುಡಿಮೆಗೆ ಅನೇಕ ದಾರಿಗಳನ್ನು ತೋರಿಸುತ್ತದೆಯೇನೋ ಸರಿ. ಆದರೆ, ದುಡಿದು ಹಸಿದ ಹೊಟ್ಟೆಗೆ ಹಿಟ್ಟಿಲ್ಲದಿದ್ದರೆ ಜುಟ್ಟಿಗೆ ಮಲ್ಲಿಗೆ ಕಟ್ಟಿಕೊಂಡರೇನು ಸುಖ. ಥಳಕು ಬಳುಕಿಗೆ, ಚಾನಲ್ಲಿನವರು ನೀಡುವ ಬಿಡಿಕಾಸಿಗೆ ಮನಸೋತ ಹಳ್ಳಿ ಹೈದರು ಹಳ್ಳಿಗೆ ಬೆನ್ನು ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕೆಟ್ಟ ಸಂಸ್ಕೃತಿಯನ್ನು ಅವರಿಗೆ ತೋರುತ್ತಿರುವುದು ಅಕ್ಷಮ್ಯ ಅಪರಾಧ. ನರ್ತನ ಪ್ರತಿಭೆ ಹೊರಹೊಮ್ಮಿಸುವ ರಿಯಾಲಿಟಿ ಶೋಗಳು ಕೂಡ ಟಿ ಆರ್ ಪಿ ಹೆಚ್ಚಿಸುವ ಉಮೇದಿನಲ್ಲಿ ಶಿಷ್ಟ ಸಂಸ್ಕೃತಿಯನ್ನು ಮರೆಯುತ್ತಿವೆ.

  ಒಂದು ಅಂಶವನ್ನು ಇಲ್ಲಿ ಗಮನಿಸಬೇಕು. ಕನ್ನಡದ ರಿಯಾಲಿಟಿ ಶೋಗಳು ನೇರವಾಗಿ ಹಿಂದಿ ಕಾರ್ಯಕ್ರಮಗಳಿಂದ ಐಡಿಯಾಗಳನ್ನು ಎರವಲು ಪಡೆಯುತ್ತಿವೆ. ಹಿಂದಿ ಆಂಗ್ಲ ಕಾರ್ಯಕ್ರಮಗಳಿಂದ. ಆದ್ದರಿಂದ ಕನ್ನಡದ ಕಾರ್ಯಕ್ರಮಗಳಲ್ಲಿ ಸ್ವಂತಿಕೆಯನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಅಲ್ಲಿ ಮಾಡಿದ್ದನ್ನು ಯಥಾವತ್ತಾಗಿ ಇಲ್ಲಿ ಭಟ್ಟಿ ಇಳಿಸುತ್ತಿದ್ದಾರೆ. ಧಾರಾವಾಹಿಗಳ ಕಥೆಯೂ ಅದೇ. ಮುಂದೊಂದು ದಿನ ಎಮೋಶನಲ್ ಅತ್ಯಾಚಾರ್ ಕನ್ನಡಕ್ಕೆ ಬಂದರೂ ಅಚ್ಚರಿಯಿಲ್ಲ. ಅದಕ್ಕೂ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕು.

  ಈ ರಿಯಾಲಿಟಿ ಶೋಗಳಿಂದ ಪ್ರಯೋಜನವಾದರೂ ಏನು? ಬರೀ ಮನರಂಜನೆಯೇ ಗುರಿಯಾದರೆ ಟಿವಿ ಚಾನಲ್ಲುಗಳಿಗೆ ಸಾಮಾಜಿಕ ಜವಾಬ್ದಾರಿ ಇರಬಾರದೆಂದೇ? ಇಂಥ ದಿಕ್ಕು ತಪ್ಪಿಸುತ್ತಿರುವ ರಿಯಾಲಿಟಿ ಶೋಗಳ ಅಗತ್ಯವಾದರೂ ಏನಿದೆ? ಇಂಥ ಶೋಗಳನ್ನು ನೋಡಿಯೂ ಸುಮ್ಮನಿದ್ದರೆ ಸಾಮಾಜಿಕ ಜವಾಬ್ದಾರಿಯಿಂದ ವೀಕ್ಷಕನೂ ಜಾರಿಕೊಂಡತೆಯೇ ಅಲ್ಲವೆ? ಸತ್ವಯುತವಾದ, ಮನಸ್ಸಿಗೆ ತಾಕುವ, ಬೌದ್ಧಿಕತೆಯನ್ನು ಬೆಳೆಸುವ ರಿಯಾಲಿಟಿ ಶೋಗಳು ಬರುವಂತೆ ಮಾಡುವುದು ಕೂಡ ವೀಕ್ಷಕನ ಕರ್ತವ್ಯ. ಅದು ನಮ್ಮ ಹಕ್ಕು ಕೂಡ. ವಿಚಾರ ಮಾಡಿ.

  ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X