Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿಕ್ಕಮಗಳೂರು ರೀಲ್ ಸೆಟ್‌ನಲ್ಲಿ ರಿಯಲ್ ಮದುವೆ
ಟಿ.ವಿ ಧಾರಾವಾಹಿಗಳೆಂದರೆ ಟೈಮ್ ವೇಸ್ಟ್, ಮೂರು ಹೊತ್ತೂ ಹೆಂಗಸರನ್ನು ಟಿ.ವಿ ಮುಂದೆ ಕೂರುವಂತೆ ಮಾಡುತ್ತವೆ, ಬೇಡವಾದದ್ದನ್ನೆಲ್ಲಾ ತೋರಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತವೆ ಎನ್ನುವ ಗುರುತರ ಆರೋಪವಿದೆ; ಆದರೆ ಧಾರಾವಾಹಿ ತಂಡವೊಂದು ಬಡಕುಟುಂಬವೊಂದರ ಮದುವೆಯನ್ನು ಅದ್ದೂರಿ ಸೆಟ್‌ನಲ್ಲಿ ಮಾಡಿಸಿ ಮಾದರಿಯಾಗುವಂತಹ ಕೆಲಸ ಮಾಡಿದೆ. ಇದು ಸಾಧ್ಯವಾಗಿದ್ದು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೆಜ್ಜೆಪೂಜೆ ಧಾರಾವಾಹಿ ತಂಡದಿಂದ.
'ಗೆಜ್ಜೆಪೂಜೆ' ಧಾರಾವಾಹಿಯಲ್ಲಿ ಸದ್ಯ ಪ್ರಸಾರವಾಗುತ್ತಿರುವ ಸಂಚಿಕೆಗಳಲ್ಲಿ ದೊಡ್ಡ ಮದುವೆಯೊಂದು ನಡೆಯುತ್ತಿದ್ದು ಅದಕ್ಕೆ ಹಾಕಿದ ಚಪ್ಪರ, ತೋರಣ, ಬಣ್ಣ ಬಣ್ಣದ ಲೈಟುಗಳು ಮತ್ತಿತ್ತರ ಅದ್ದೂರಿ ಸೆಟ್‌ನಲ್ಲಿ ಸನಿಹದಲ್ಲೇ ನೆಲೆಸಿದ್ದ ಬಡಕುಟುಂಬವೊಂದರ ಹುಡುಗ ಹುಡುಗಿಯ ಮದುವೆ ಮಾಡಿಸಿ ಅವರ ಮುಂದಿನ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ.
'ಗೆಜ್ಜೆಪೂಜೆ' ಧಾರಾವಾಹಿ ಗ್ರಾಮೀಣ ಕಥಾನಕದ ಹಿನ್ನೆಲೆಹೊಂದಿದ್ದು ಸದ್ಯ ಇದರ ಚಿತ್ರೀಕರಣ ದಟ್ಟ ಮಲೆನಾಡಾಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿದೆ. ಧಾರಾವಾಹಿಯ ಕಥಾಹಂದರಕ್ಕೆ ತಕ್ಕಂತೆ ಮದುವೆಯೊಂದರ ಚಿತ್ರೀಕರಣಕ್ಕಾಗಿ ಅದ್ದೂರಿ ಸೆಟ್ ಹಾಕಲಾಗಿತ್ತು. ಇದೇ ವೇಳೆ ಇಲ್ಲಿನ ಸ್ಥಳೀಯರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಧಾರಾವಾಹಿಯ ತಂಡ ಅಲ್ಲಿ ಮದುವೆ ನಿಶ್ಚಯವಾಗಿದ್ದ ಬಡ ಕುಟುಂಬವನ್ನು ಗುರುತಿಸಿತ್ತು. ಅವರ ಮದುವೆಯ ದಿನಾಂಕ ಹಾಗೂ ಚಿತ್ರೀಕರಣದಲ್ಲಿ ಬರುವ ಮದುವೆಯ ಸಂದರ್ಭ ಎರಡೂ ಒಂದಕ್ಕೊಂದು ಹೊಂದಿಕೆಯಾದ ಹಿನ್ನೆಲೆಯಲ್ಲಿ ಬಡಕುಟುಂಬದ ಯುವ ಜೋಡಿಗಳ ಮದುವೆ ಕೂಡಅದ್ದೂರಿಯಾಗಿಯೇ ಮಾಡಿ ನೆರವೇರಿಸಿದೆ.
ಗೆಜ್ಜೆಪೂಜೆಯಲ್ಲಿ ಬರುವ ದೊಡ್ಡ ದೊಡ್ಡ ಕಪ್ಪು ಕಂಬಗಳ ಸುಂದರವಾದ ಮನೆ, ಅದರ ಹಿನ್ನೆಲೆಯಲ್ಲಿನ ಮಂಜು ಮುಸುಕಿರುವ ಬೆಟ್ಟಗಳು, ಮುಂದೆ ವಿಶಾಲವಾದ ಆವರಣ, ಮನೆ ಒಳ ಹೊಕ್ಕರೆ ಸಿಗುವ ಪ್ರಾಂಗಣ, ಅಲ್ಲಿ ಜೋಡಿಸಿಟ್ಟಿರುವ ಗಿಡಗಳು ಒಟ್ಟಾರೆ ಆ ಮನೆಯ ಅಂದ ಚೆಂದಕ್ಕೆ ಮಾರುಹೋದವರ ಮನಸ್ಸಿನಲ್ಲಿ ಅದು ಯಾವ ಊರು? ಎನ್ನುವ ಪ್ರಶ್ನೆ ಹುಟ್ಟದೇ ಇರದು. ಅದು ಚಿಕ್ಕಮಂಗಳೂರು ಜಿಲ್ಲೆಯ ಕೊಟ್ಟಿಗೆಹಾರ ಸಮೀಪದ ಬಾಳೂರು ಎಸ್ಟೇಟ್ ಮನೆ. ವಾಸ್ತವವಾಗಿ ಅದು ಮನು ಎಂಬುವವರಿಗೆ ಸೇರಿದ್ದಾದರೆ, ಧಾರಾವಾಹಿಯಲ್ಲಿ ಅದು ಕಾಡುಮಲ್ಲಿಗೆ ಎಸ್ಟೇಟ್ ನಲ್ಲಿರುವ ಧರ್ಮಯ್ಯನ ಮನೆ.
ರೀಲ್ ಮದುವೆ ರಿಯಲ್ ಆಗಿದ್ದು ಹೀಗೆ: ಹೇಗೂ ಧಾರಾವಾಹಿಯಲ್ಲಿ ಬರುವ ಮದುವೆಗಾಗಿ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಮದುವೆಗಾಗಿ ಖರ್ಚು ಮಾಡಲು ಸಾಧ್ಯವಿಲ್ಲದ ಬಡವರು ಯಾರಾದರೂ ಇದ್ದರೆ ಅವರ ಮದುವೆಯನ್ನು ಮಾಡಿಸಬಹುದಲ್ಲ ಎಂಬ ಯೋಚನೆ ಬಂದಿದ್ದು ನಿರ್ದೇಶಕ ವಿನು ಬಳಂಜ ಅವರಿಗೆ. ಅದರಂತೆ ವಿಚಾರಿಸಿದಾಗ ಸಿಕ್ಕಿದ್ದು ಆ ಎಸ್ಟೇಟಿನ ಮನೆಯಲ್ಲಿ ಸುಮಾರು ಮೂವತ್ತು ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದ ನಿಂಗಮ್ಮ.
ನಿಂಗಮ್ಮ ಮಗಳು ಶಾಲಿನಿಯ ಮದುವೆ ರವಿ ಜೊತೆಗೆ ನಿಷ್ಕರ್ಷೆಯಾಗಿತ್ತು. ಆದರೆ ಎಲ್ಲರಂತೆ ಮದುವೆ ಮಾಡಲು ಹಣಕಾಸಿನ ಅಡಚಣೆ. ಈ ವಿಷಯ ತಿಳಿದು ವಧು-ವರರಿಗಾಗಿ ತಾಳಿ,ಸೀರೆ, ಬಟ್ಟೆಗಳನ್ನು ಕೊಂಡುಕೊಳ್ಳಲಾಯಿತು. ಇಡೀ ಧಾರಾವಾಹಿ ತಂಡ ವಧುವಿಗೆ ಮೆಹಂದಿ ಹಾಕುವುದು, ತೋರಣ ಕಟ್ಟುವುದು, ಮಂಟಪವನ್ನು ಅಲಂಕರಿಸುವುದು ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಂಡು ಸಂಭ್ರಮಿಸಿತು.
ಮರುದಿನ ಎಲ್ಲಾ ಕಲಾವಿದರು, ತಾಂತ್ರಿಕ ವರ್ಗದವರೂ ಸೇರಿದಂತೆ ತಂಡದ ಪ್ರತಿಯೊಬ್ಬರೂ ತಮ್ಮದೇ ಕುಟುಂಬದ ಮದುವೆ ಎನ್ನುವಂತೆ ಡೋಲು ಬಾರಿಸಿ ಕುಣಿದು ಕುಪ್ಪಳಿಸಿ ಮದುವೆಗೆ ಹೊಸ ರೀತಿಯ ಮೆರುಗನ್ನು ತಂದುಕೊಟ್ಟರಲ್ಲದೆ ಶಾಸ್ತ್ರೋಕ್ತವಾಗಿ ವಿವಾಹವನ್ನು ಮಾಡಿಸಿ ನೂತನ ದಂಪತಿಗಳಿಗೆ ಶುಭ ಹಾರೈಸಿ, ಸಂತಸಪಟ್ಟರು. ಕೊನೆಗೆ ಎಲ್ಲರಿಗೂ ಹೋಳಿಗೆ ಊಟವೂ ಸರಬರಾಜಾಯಿತು.
ಈ ರೀತಿ ಧಾರಾವಾಹಿಯ ರೀಲ್ ಮದುವೆ ಸೆಟ್‌ಲ್ಲಿ ರಿಯಲ್ ಮದುವೆ ನಡೆದಿದ್ದು, ಧಾರಾವಾಹಿ ತಂಡವೊಂದು ಬಡಕುಟುಂದ ಮದುವೆ ಮಾಡಿಸಿದ್ದು ವಿಶೇಷ, ಅಪರೂಪದ ಸಂಗತಿಯೇ ಸರಿ. ಇಂತಹ ಒಳ್ಳೆಯ ಕಾರ್ಯಕ್ಕೆ ಮನಸ್ಸು ಮಾಡಿದ ನಿರ್ದೇಶಕ ವಿನು ಬಳಂಜ ಹಾಗೂ ಗೆಜ್ಜೆಪೂಜೆ ಧಾರಾವಾಹಿ ತಂಡದ ಸಾಮಾಜಿಕ ಕಳಕಳಿ-ಕಾಳಜಿಗಾಗಿ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ರಿಯಲ್ ಮದುವೆಯ ವಿಶೇಷ ಸಂಚಿಕೆ ಜೀ ಕನ್ನಡದಲ್ಲಿ ಜನವರಿ 7 ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. [ಮದುವೆ]